ಸೋಮವಾರ, ಜನವರಿ 17, 2022
27 °C

ಒಳನೋಟ | ಸಿರಿಧಾನ್ಯ: ಸಂಸ್ಕರಣಾ ಘಟಕಗಳ ಸಂಕಟ

ಸಂತೋಷ ಈ.ಚಿನಗುಡಿ Updated:

ಅಕ್ಷರ ಗಾತ್ರ : | |

ಕಲಬುರಗಿ: ಸಿರಿಧಾನ್ಯಗಳಿಗೆ ನಿರಂತರವಾದ ಮಾರುಕಟ್ಟೆ ಇಲ್ಲ ಎಂಬುದೇ ಅವುಗಳ ಉತ್ಪಾದನೆ ಹಾಗೂ ಸಂಸ್ಕರಣಾ ಘಟಕಗಳ ಮುಂದಿರುವ ದೊಡ್ಡ ಸವಾಲು.

ಬೇಡಿಕೆ ಕಡಿಮೆ ಎಂಬ ಕಾರಣಕ್ಕೆ ಬೆಳೆಯುವವರ ಸಂಖ್ಯೆಯೂ ಕಡಿಮೆ. ಇದರಿಂದ ಸಂಸ್ಕರಣಾ ಘಟಕಗಳಿಗೆ ಬರುವ ಕಚ್ಚಾ ಸಾಮಗ್ರಿಯೂ ಅಷ್ಟಕ್ಕಷ್ಟೇ. ಈ ಯಂತ್ರವು ದುಡಿದು ಗಳಿಸಿದ್ದಕ್ಕಿಂತಲೂ ಅದರ ನಿರ್ವಹಣೆಗೇ ಹೆಚ್ಚು ವೆಚ್ಚವಾಗುತ್ತಿದೆ. ಲಕ್ಷಾಂತರ ರೂಪಾಯಿ ಹಾಕಿ ಸಂಸ್ಕರಣಾ ಘಟಕ ತೆರೆದಿರುವುದು ‘ಆನೆ ಸಾಕಿದಂತಾಗಿದೆ’ ಎಂಬುದು ಘಟಕಗಳ ಮಾಲೀಕರ ಅಭಿಮತ.

ಸಿರಿಧಾನ್ಯ ಸಂಸ್ಕರಿಸಿದ ಮೇಲೆ 15 ದಿನಗಳಲ್ಲೇ ಬಳಸಬೇಕು. ಇಲ್ಲದಿದ್ದರೆ ಹುಳ ಹಿಡಿಯುತ್ತದೆ. ಹೀಗಾಗಿ, ರೈತರು ತಿಂಗಳಿಗೊಮ್ಮೆ, ಎರಡು ತಿಂಗಳಿಗೊಮ್ಮೆ ಧಾನ್ಯಗಳನ್ನು ಸಂಸ್ಕರಣಾ ಘಟಕಗಳಿಗೆ ತರುತ್ತಾರೆ. ಒಂದು ಗಂಟೆಯಲ್ಲಿ ಒಂದು ಟನ್‌ ಧಾನ್ಯ ಸಂಸ್ಕರಿಸಬಲ್ಲ ಯಂತ್ರದಲ್ಲಿ ಒಂದು ತಿಂಗಳಿಗೆ ಕನಿಷ್ಠ 10 ಟನ್‌ ಕೂಡ ಆಗುವುದಿಲ್ಲ.

‘ಸಿರಿಧಾನ್ಯಗಳ ಉಪ ಉತ್ಪನ್ನ ಸಿದ್ಧಪಡಿಸುವ ತರಬೇತಿ ಅಗತ್ಯ. ಸಿರಿಧಾನ್ಯಗಳದ್ದೇ ಹೋಟೆಲ್‌, ಬೇಕರಿ, ಸ್ಯ್ನಾಕ್ಸ್‌ಗಳ ಮಳಿಗೆಗಳ ಆರಂಭಕ್ಕೆ ಸರ್ಕಾರ ಪ್ರೋತ್ಸಾಹ ನೀಡಬೇಕು’ ಎನ್ನುತ್ತಾರೆ ರೈತ ಶಿವಾನಂದ ಬೆಳ್ಳೆ.

‘2016–17ರಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಎಕರೆಗೆ ₹10 ಸಾವಿರ ನೆರವು ನೀಡುವ ಯೋಜನೆ ಇತ್ತು. ಅದು ನಿಂತ ಮೇಲೆ ರೈತರು ಬೆಳೆಯವುದು ಕಡಿಮೆಯಾಯಿತು’ ಎನ್ನುತ್ತಾರೆ ಕೃಷಿ ವಿಜ್ಞಾನಿ ರಾಜು ತೆಗ್ಗಳ್ಳಿ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ (ಹೈದರಾಬಾದ್‌)ಯು ರೈತ ಉತ್ಪಾದಕರ ಸಂಸ್ಥೆಗಳನ್ನು ಕಟ್ಟಿ, ಅದರ ಮೂಲಕ ಸಂಸ್ಕರಣಾ ಘಟಕ ಸ್ಥಾಪನೆ ಮಾಡುವ ಪ್ರಾಯೋಗಿಕ ಯೋಜನೆ ಆರಂಭಿಸಿದೆ. ಮೂರು ವರ್ಷಗಳ ನಂತರ ಘಟಕವು ರೈತರ ಗುಂಪಿಗೆ ಸೇರುತ್ತದೆ. ರಾಜ್ಯದಲ್ಲಿ ಈ ವರ್ಷ ಇಂಥ 21 ಸಿರಿಧಾನ್ಯ ಸಂಸ್ಥೆಗಳನ್ನು ಕಟ್ಟಲಾಗಿದೆ. ರೈತರಿಗೆ ₹ 100ಕ್ಕೆ ಕೆ.ಜಿ.ಯಂತೆ ಬಿತ್ತನೆಬೀಜಗಳನ್ನೂ ಇದು ಸರಬರಾಜು ಮಾಡುತ್ತಿದೆ. ಆಸಕ್ತರು 04024599382 ಸಂಪರ್ಕಿಸಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು