ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಚಿನ್ನದ ಪದಕಗಳೇ ಕಣ್ಮರೆಯಾಗಿದ್ದವು!

Last Updated 26 ಮಾರ್ಚ್ 2022, 20:13 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸದೇ ಇದ್ದವರ ಪಾಲಿನ ಚಿನ್ನದ ಪದಕಗಳನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಕಣ್ಮರೆ ಮಾಡಿರುವುದನ್ನು 2013ರಲ್ಲಿ ಲೋಕಾಯುಕ್ತ ಪೊಲೀಸರು ಪತ್ತೆಹಚ್ಚಿದ್ದರು. ಪುರಸ್ಕೃತರಿಗೆ ನೀಡುವ ಪದಕಗಳಲ್ಲಿ ಶೇಕಡ 28ರಷ್ಟು ಇತರ ಲೋಹ ಮಿಶ್ರಣ ಮಾಡಿ ವಂಚಿಸಿದ್ದೂ ತನಿಖೆಯಲ್ಲಿ ಬಯಲಾಗಿತ್ತು.

ಇಲಾಖೆಯಲ್ಲಿ ಅನುದಾನದ ವ್ಯಾಪಕ ದುರ್ಬಳಕೆ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ನೀಡಬೇಕಾದ ಚಿನ್ನದ ಪದಕಗಳನ್ನು ಲಪಟಾಯಿಸುತ್ತಿರುವ ದೂರುಗಳು ಲೋಕಾಯುಕ್ತ ಪೊಲೀಸರಿಗೆ ಬಂದಿದ್ದವು. 2013ರ ಜೂನ್‌ನಲ್ಲಿ ಇಲಾಖೆಯ ನಿರ್ದೇಶಕರ ಕಚೇರಿ ಸೇರಿದಂತೆ ಹಲವು ಕಚೇರಿಗಳ ಮೇಲೆ ದಾಳಿಮಾಡಿದ್ದ ತನಿಖಾ ತಂಡ, ಶೋಧ ನಡೆಸಿತ್ತು.

25 ಮಂದಿ ಪ್ರಶಸ್ತಿ ಪಡೆಯದೇ ಇದ್ದವರಿಗೆ ನೀಡಬೇಕಾದ ಚಿನ್ನದ ಪದಕಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಕಚೇರಿಯಿಂದಲೇ ನಾಪತ್ತೆಯಾಗಿದ್ದವು. ಲೋಕಾಯುಕ್ತ ಪೊಲೀಸರು ತನಿಖೆ ಚುರುಕುಗೊಳಿಸುತ್ತಿದ್ದಂತೆಯೇ 18 ಪದಕಗಳನ್ನು ತನಿಖಾ ತಂಡದ ಮುಂದೆ ಹಾಜರುಪಡಿಸಿದ್ದ ಇಲಾಖೆಯ ಅಧಿಕಾರಿಗಳು, ‘ಈ ಪದಕಗಳು ಬೇರೊಂದು ಕಚೇರಿಯಲ್ಲಿ ಇದ್ದವು’ ಎಂಬ ಸಬೂಬು ನೀಡಿದ್ದರು. ಐದು ಪದಕಗಳು ಕೊನೆಗೂ ಪತ್ತೆಯಾಗಲೇ ಇಲ್ಲ.

ಗುಣಮಟ್ಟದಲ್ಲೂ ವಂಚನೆ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ 22 ಕ್ಯಾರೆಟ್‌ ಗುಣಮಟ್ಟದ ಚಿನ್ನದಿಂದ ಮಾಡಿದ ಪದಕವನ್ನು ನೀಡಬೇಕು ಎಂಬುದು ನಿಯಮ. ಪದಕಗಳ ಖರೀದಿಗೂ ಅದೇ ದರ ವಿಧಿಸಲಾಗುತ್ತಿತ್ತು. ಆದರೆ, ಕಳಪೆ ಗುಣಮಟ್ಟದ ಚಿನ್ನ ಬಳಸಿ ಪದಕಗಳನ್ನು ತಯಾರಿಸಲಾಗಿತ್ತು ಎಂಬುದು ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು.

‘ರಾಜ್ಯೋತ್ಸವ ಪ್ರಶಸ್ತಿ ಜತೆ ನೀಡಲು ತರಿಸಿದ್ದ ಚಿನ್ನದ ಪದಕಗಳಲ್ಲಿ ಶೇಕಡ 72ರಷ್ಟು ಮಾತ್ರ ಚಿನ್ನವಿದೆ. ಬೇರೆ ಲೋಹವನ್ನು ಮಿಶ್ರಣ ಮಾಡಿರುವುದು ಪರೀಕ್ಷೆಯಲ್ಲಿ ಕಂಡುಬಂದಿದೆ’ ಎಂದು ಲೋಕಾಯುಕ್ತ ಪೊಲೀಸರು 2014ರ ಮಾರ್ಚ್‌ನಲ್ಲಿ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿದ್ದರು.

ಚಿನ್ನದ ಪದಕಗಳ ಕಣ್ಮರೆ ಮತ್ತು ಕಳಪೆ ಗುಣಮಟ್ಟದ ಚಿನ್ನ ಬಳಸಿ ವಂಚಿಸಿದ ಪ್ರಕರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ನಿರ್ದೇಶಕ ಮನು ಬಳಿಗಾರ, ನಿವೃತ್ತ ಜಂಟಿ ನಿರ್ದೇಶಕ ಕಾ.ತ. ಚಿಕ್ಕಣ್ಣ, ವ್ಯವಸ್ಥಾಪಕ ಎಸ್‌.ಐ. ಬಾವಿಕಟ್ಟಿ, ಪ್ರಥಮ ದರ್ಜೆ ಸಹಾಯಕ ಶಿವಪ್ರಕಾಶ್‌ ಕರ್ತವ್ಯಲೋಪ ಎಸಗಿರುವುದು ಸಾಬೀತಾಗಿದೆ ಎಂದು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಲಾಗಿತ್ತು.

ನಂತರ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಮನು ಬಳಿಗಾರ ಮತ್ತಿತರರನ್ನು ಆರೋಪ ಮುಕ್ತಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿತ್ತು.


‘ಮರ್ಜಿ ಹಿಡಿದು ವಿಧಾನಸೌಧಕ್ಕೆ ಹೋಗುವವರೂ ಇದ್ದಾರೆ’
‘ಸರ್ಕಾರ ನೀಡುವ ಅನುದಾನ ಸರಿಯಾದ ಸಂಸ್ಥೆಗೆ ಹೋಗಬೇಕು. ಅರ್ಜಿಯ ಜತೆಗೆ ಮರ್ಜಿಯನ್ನು ಹಿಡಿದುಕೊಂಡು ವಿಧಾನಸೌಧಕ್ಕೆ ಹೋಗುವ ಸಂಸ್ಥೆಗಳ ಮುಖ್ಯಸ್ಥರೂ ಇದ್ದಾರೆ. ಆಯ್ಕೆ ಸಮಿತಿಯಲ್ಲಿ ಇರುವವರಿಗೆ ವಾಸ್ತವ ಜ್ಞಾನ, ಅನುಭವ ಇರಬೇಕು. ಯಾರು ಅನುದಾನ ಪಡೆದುಕೊಳ್ಳುತ್ತಾರೋ ಅವರು ಸಮಿತಿಯಲ್ಲಿ ಇರಬಾರದು. ಪಾರದರ್ಶಕ ವ್ಯವಸ್ಥೆ ತರುವುದು ಕಠಿಣವಲ್ಲ. ಇಚ್ಛಾಶಕ್ತಿ ಹಾಗೂ ವಾಸ್ತವಿಕ ಜ್ಞಾನ ಇರಬೇಕು. ಆರ್ಥಿಕವಾಗಿ ಹಿಂದುಳಿದ, ಆಸಕ್ತಿಯಿಂದ ಕಾರ್ಯಕ್ರಮ ಮಾಡುತ್ತಿರುವವರಿಗೆ ಬೆಂಬಲ ನೀಡಬೇಕು.’
-ಮಹೇಶ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ

**
‘ಪ್ರಭಾವಿಗಳ ಶಿಫಾರಸುಗಳಿಗೆ ಮಣಿಯಬಾರದು’
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು. ಧನಸಹಾಯ ನೀಡುವಾಗ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ನಕಲಿ ಸಂಸ್ಥೆಗಳನ್ನು ಪತ್ತೆ ಮಾಡಿ, ಅಂತಹವುಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಪ್ರಭಾವಿಗಳ ಶಿಫಾರಸುಗಳಿಗೆ ಮಣಿಯಬಾರದು. ಶಿಫಾರಸುಗಳ ಅನುಸಾರ ಅನುದಾನ ನೀಡುತ್ತಾ ಹೋದರೆ ನಮ್ಮ ಸಂಸ್ಕೃತಿ ಉಳಿಯುವುದಿಲ್ಲ.
-ದೊಡ್ಡರಂಗೇಗೌಡ, ಕವಿ

**
‘ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಬೇಕು’
ಆಳ್ವಾಸ್‌ ನುಡಿಸಿರಿಯಂತಹ ಸಮ್ಮೇಳನಕ್ಕೆ ಪ್ರತಿವರ್ಷ ಅನುದಾನ ನೀಡಲಾಗುತ್ತಿದೆ. ಸರ್ಕಾರ ತನಗೆ ಬೇಕಾದ ಸಂಘ–ಸಂಸ್ಥೆಗಳಿಗೆ ಮಾತ್ರ ಅನುದಾನ ಒದಗಿಸುತ್ತಿದೆ. ಆಯ್ಕೆಗೆ ಸಂಬಂಧಿಸಿದಂತೆ ಪಾರದರ್ಶಕತೆ ತರಲು ವ್ಯವಸ್ಥೆಯ ಲೋಪದೋಷಗಳನ್ನು ಗುರುತಿಸಿ, ಸರಿಪಡಿಸುವ ಕೆಲಸ ಆಗುತ್ತಿಲ್ಲ. ಕೆಲಸ ಮಾಡದ ಸಂಘ–ಸಂಸ್ಥೆಗಳಿಗೆ ಪ್ರಭಾವಿಗಳು ಅನುದಾನ ಒದಗಿಸುವುದಕ್ಕೆ ಕಡಿವಾಣ ಹಾಕಬೇಕು. ಸಂಘ–ಸಂಸ್ಥೆಗಳು ಈ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಬೇಕು.
-ಕೆ. ಷರೀಫಾ, ಲೇಖಕಿ

*
‘ಪ್ರಾಮಾಣಿಕ ಕಾರ್ಯಕ್ಕೆ ಪ್ರೋತ್ಸಾಹ ಅಗತ್ಯ’
ಕೋವಿಡ್‌ ನಡುವೆಯೂ ಹಲವಾರು ಸಂಘ–ಸಂಸ್ಥೆಗಳು ಆನ್‌ಲೈನ್ ಮೂಲಕ ಕಾರ್ಯಕ್ರಮಗಳನ್ನು ನಡೆಸಿವೆ. ಈಗ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದರಿಂದ ಭೌತಿಕ ಕಾರ್ಯಕ್ರಮಗಳು ನಡೆಯಲಾರಂಭಿಸಿವೆ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘ–ಸಂಸ್ಥೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವಾಗಬೇಕು. ನಾಲ್ಕೈದು ದಶಕಗಳ ಇತಿಹಾಸ ಇರುವ ಸಂಸ್ಥೆಗಳನ್ನು ಸಂಶಯದಿಂದ ನೋಡುವುದನ್ನು ಬಿಡಬೇಕು.
-ವನಮಾಲಾ ಸಂಪನ್ನಕುಮಾರ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT