ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಇನ್ನೂ ಕೈ ಸೇರಿಲ್ಲ ಪರಿಹಾರದ ಹಣ

Last Updated 3 ಜುಲೈ 2021, 21:06 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ವರ್ಷ (2019 ಮತ್ತು 2020) ಸುರಿದ ಮಹಾಮಳೆಗೆ, ರಾಜ್ಯದ ಕೆಲವು ಜಿಲ್ಲೆಗಳು ತತ್ತರಿಸಿಹೋಗಿದ್ದವು. ಸೂರು ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿತ್ತು. ಆದರೆ, ಬಹುತೇಕ ಫಲಾನುಭವಿಗಳಿಗೆ ಪರಿಹಾರ ಮೊತ್ತದ ಮೊದಲ ಕಂತಷ್ಟೇ ತಲುಪಿದೆ. ಎರಡು, ಮೂರನೇ ಕಂತು ಇನ್ನೂ ಕೈ ಸೇರಿಲ್ಲ.

ಪ್ರವಾಹದಿಂದ ಸಂಪೂರ್ಣ ಹಾನಿಗೊಳಗಾದ ಮನೆ (ಎ ವರ್ಗ) ಮಾಲೀಕರಿಗೆ ₹ 5 ಲಕ್ಷ, ಭಾಗಶಃ ಹಾನಿಗೊಳಗಾದ ಮನೆ‌ (ಬಿ ವರ್ಗ) ಮಾಲೀಕರಿಗೆ ₹ 3 ಲಕ್ಷ ಪರಿಹಾರವನ್ನು ಸರ್ಕಾರ ಘೋಷಿಸಿತ್ತು. ಅಲ್ಪಸ್ವಲ್ಪ ಹಾನಿಗೊಳಗಾದ ಮನೆಯ (ಸಿ ವರ್ಗ) ಮಾಲೀಕರಿಗೆ ₹ 50 ಸಾವಿರ ಪರಿಹಾರ ನೀಡುವುದಾಗಿ ಪ್ರಕಟಿಸಿತ್ತು.

ಸಂಪೂರ್ಣ ಹಾನಿಯಾದ ಮನೆಗಳ ಮಾಲೀಕರಿಗೆ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸಿಕೊಳ್ಳಲು ಬಾಡಿಗೆ ಮೊತ್ತವಾಗಿ ₹ 5 ಸಾವಿರದಂತೆ ಗರಿಷ್ಠ 10 ತಿಂಗಳು ಹಣ ಪಾವತಿಸುವುದಾಗಿಯೂ ಸರ್ಕಾರ ಪ್ರಕಟಿಸಿತ್ತು.

‘ಎ’ ವರ್ಗದ ಫಲಾನುಭವಿಗಳಿಗೆ₹ 5 ಲಕ್ಷ ಪರಿಹಾರ ಮೊತ್ತವನ್ನು, ಮನೆ ನಿರ್ಮಾಣದ ಪ್ರಗತಿಯ ಆಧಾರದಲ್ಲಿ ನಾಲ್ಕು ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ‘ಬಿ’ ವರ್ಗದ ಫಲಾನುಭವಿಗಳಿಗೆ ₹ 3 ಲಕ್ಷವನ್ನು ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆದರೆ, ಬಹುತೇಕ ಮನೆಗಳಿಗೆ ಇದುವರೆಗೆ ಮೊದಲ ಕಂತು ಆಗಿ ₹ 1 ಲಕ್ಷ ಮಾತ್ರ ಬಿಡುಗಡೆ ಆಗಿದೆ.

ಲಭ್ಯ ಅಂಕಿ–ಅಂಶಗಳ ಪ್ರಕಾರ ಸಂಪೂರ್ಣ ಹಾನಿಗೊಳಗಾದ 1,101 ಮನೆಗಳ ಪೈಕಿ, ಇದುವರೆಗೆ 970 ಮನೆಗಳಿಗೆ ಮೊದಲ ಕಂತಿನ ಪರಿಹಾರ ಹಣ ನೀಡಲಾಗಿದೆ. ಉಳಿದ 131 ಮನೆಗಳಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ. ಭಾಗಶಃ ಹಾನಿಗೊಳಗಾದ 7,694 ಮನೆಗಳ ಪೈಕಿ ಇದುವರೆಗೆ 4,545 ಮನೆಗಳಿಗೆ ಮೊದಲ ಕಂತು ಬಿಡುಗಡೆ ಮಾಡಲಾಗಿದೆ. ಅಲ್ಪಸ್ವಲ್ಪ ಹಾನಿಗೊಳಗಾದ 30,219 ಮನೆಗಳ ಪೈಕಿ 25,357 ಮನೆಗಳಿಗೆ ಮಾತ್ರ ಮೊದಲ ಕಂತಿನ ಪರಿಹಾರ ನೀಡಲಾಗಿದೆ. ಹಾನಿಗೊಳಗಾದ ಎಲ್ಲ ವರ್ಗದ ಮನೆಗಳಿಗೆ ಸೇರಿ ಇದುವರೆಗೆ ಒಟ್ಟು ₹ 130.57 ಕೋಟಿಯನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ.

ವಿಳಂಬಕ್ಕೆ ಕೋವಿಡ್‌ ಕಾರಣ: ‘ಸೂರು ಕಳೆದುಕೊಂಡ ಶೇ 90ರಷ್ಟು ಫಲಾನುಭವಿಗಳಿಗೆ ಮನೆಗಳ ಮರು ನಿರ್ಮಾಣಕ್ಕೆ ಮೊದಲ ಕಂತಿನ ಪರಿಹಾರ ಹಣ ಮಾತ್ರ ಬಿಡುಗಡೆ ಆಗಿದೆ.‌ ಶೇ 30ರಷ್ಟು ಫಲಾನುಭವಿಗಳಿಗಷ್ಟೇ ಎರಡನೇ ಕಂತಿನ ಪರಿಹಾರ ಸಿಕ್ಕಿದೆ. ರಾಜ್ಯದಲ್ಲಿ ಕೋವಿಡ್‌ ವ್ಯಾಪಕವಾಗಿ ಹರಡಿದ ಕಾರಣ, ಪರಿಹಾರ ಹಣ ಪಾವತಿಗೂ ಅಡ್ಡಿಯಾಗಿದೆ. ಮತ್ತೊಂದೆಡೆ ಕಟ್ಟಡ ಕಾರ್ಮಿಕರು ಸಿಗದೇ ಮನೆ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ. ನಿರ್ಮಾಣ ಹಂತದ ಪ್ರಗತಿಯನ್ನು ಆಧರಿಸಿ ಪರಿಹಾರದ ಕಂತು ಬಿಡುಗಡೆ ಮಾಡಲಾಗುತ್ತದೆ. ಪ್ರಗತಿಯ ಮಾಹಿತಿಯನ್ನು ಫಲಾನುಭವಿಗಳು ನೀಡಿದ ಬಳಿಕ, ಪರಿಶೀಲಿಸಿ ಹಣ ಬಿಡುಗಡೆ ಮಾಡಲಾಗುತ್ತದೆ’ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಇನ್ನೂ ಬೇಕು ₹ 1,222.34 ಕೋಟಿ
2019 ಮತ್ತು 2020ನೇ ಸಾಲಿನಲ್ಲಿ ಹಾನಿಗೊಳಗಾದ ಮನೆಗಳಿಗೆ ಒಟ್ಟು₹ 2,865.80 ಕೋಟಿ (‘ಸಿ’ವರ್ಗವನ್ನು ಹೊರತುಪಡಿಸಿ) ಅನುದಾನ ಅಗತ್ಯವಿದೆ ಎಂದು ರಾಜ್ಯ ಸರ್ಕಾರ ಲೆಕ್ಕಹಾಕಿದೆ. ಈವರೆಗೆ ಸರ್ಕಾರ₹ 1,643.46 ಕೋಟಿ ಬಿಡುಗಡೆ ಮಾಡಲಾಗಿದ್ದು, ಇನ್ನೂ ₹ 1,222.34 ಕೋಟಿ ಬಿಡುಗಡೆ ಮಾಡಬೇಕಿದೆ.

2019ರ ಸಾಲಿನಲ್ಲಿ ಹಾನಿಗೊಳಗಾದ (ಒಟ್ಟು 1,34,936) ಮನೆಗಳ ನಿರ್ಮಾಣ ಪ್ರಗತಿಗೆ ಅನುಗುಣವಾಗಿ, ಫಲಾನುಭವಿಗಳಿಗೆ ಪರಿಹಾರ ವಿತರಿಸಲಾಗಿದೆ. 2020ರ ಸಾಲಿನಲ್ಲಿ ಹಾನಿಗೊಳಗಾದ ಮನೆಗಳ ಮರು ನಿರ್ಮಾಣ ಪ್ರಗತಿಗೆ ಅನುಗುಣವಾಗಿ ಈವರೆಗೆ ₹ 121.87 ಕೋಟಿ ಬಿಡುಗಡೆ ಆಗಿದೆ. ಪ್ರಸ್ತುತ ಪ್ರಗತಿಗೆ ಅನುಗುಣವಾಗಿ ಮತ್ತೆ ₹ 62.12 ಕೋಟಿ ಬಿಡುಗಡೆ ಮಾಡುವಂತೆ ಏ. 19 ಮತ್ತು ಜೂನ್‌ 1ರಂದು ಹಣಕಾಸು ಇಲಾಖೆಗೆ ಕಂದಾಯ ಇಲಾಖೆ ಪ್ರಸ್ತಾವ ಸಲ್ಲಿಸಿದೆ. ಅನುದಾನ ಬಿಡುಗಡೆಯಾದ ಬಳಿಕ ರಾಜೀವ್‌ ಗಾಂಧಿ ವಸತಿ ನಿಗಮದಿಂದ ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗಲಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

***

ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲು ತಕ್ಷಣ ₹ 60 ಕೋಟಿ ಬಿಡುಗಡೆ ಮಾಡುವಂತೆ ಕಂದಾಯ ಇಲಾಖೆಯ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
-ಬಸವರಾಜು ಎಸ್‌., ವ್ಯವಸ್ಥಾಪಕ ನಿರ್ದೇಶಕ, ರಾಜೀವ್ ಗಾಂಧಿ ವಸತಿ ನಿಗಮ

***

ಹಾನಿಗೀಡಾದ ಮನೆಗಳ ಮರು ನಿರ್ಮಾಣದ ಹಂತ ಆಧರಿಸಿ ಕಂತುಗಳಲ್ಲಿ ಅರ್ಹ ಫಲಾನುಭವಿಗಳಿಗೆ ರಾಜೀವ್‌ ಗಾಂಧಿ ವಸತಿ ನಿಗಮ ಹಣ ಬಿಡುಗಡೆ ಮಾಡುತ್ತದೆ.
-ಎನ್‌. ಮಂಜುನಾಥ ಪ್ರಸಾದ್‌, ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT