ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಬಡವರ ಹಣ: ಬಲಾಢ್ಯರ ಕಲ್ಯಾಣ!

ಜಾತಿವಾರು ನಿಗಮಗಳಲ್ಲಿ ಹೆಚ್ಚಿದ ಭ್ರಷ್ಟಾಚಾರ l ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ಲೂಟಿ
Last Updated 7 ಆಗಸ್ಟ್ 2022, 3:27 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ತಳ ಸಮುದಾಯಗಳ ಜನರಿಗೆ ನೆರವು ಕೊಟ್ಟು, ಅವರನ್ನು ಸ್ವಾವಲಂಬಿಗಳಾಗಿಸುವ ಆಶಯದಡಿ ರಾಜ್ಯ ಸರ್ಕಾರ ರಚಿಸಿರುವ ಜಾತಿವಾರು ನಿಗಮಗಳ ಅನುದಾನ–ಯೋಜನೆಗಳಿಗೆ ಬಲಾಢ್ಯರು ಕನ್ನ ಹಾಕುತ್ತಿದ್ದಾರೆ. ದುರ್ಬಲರ ಏಳ್ಗೆಗೆ ಸರ್ಕಾರ ನೀಡುವ ಹಣವನ್ನು ಲಪಟಾಯಿಸುತ್ತಿರುವ ಕೆಲವೇ ‘ಧನಿಕ’ರು ಮತ್ತಷ್ಟು ದುಂಡಗಾಗುತ್ತಿದ್ದಾರೆ.

ಹೆಚ್ಚು ಅನುದಾನವಿರುವ ನಿಗಮಗ ಳಲ್ಲಿ ಅಧಿಕಾರಿಗಳು ಮತ್ತು ದಲ್ಲಾಳಿಗಳ ಕೂಟ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ಜಮೀನು ವಿತರಣೆ, ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ, ವಾಹನ ಖರೀದಿಗೆ ನೆರವು ನೀಡುವ ನೆಪದಲ್ಲಿ ತೀಜೋರಿಗೆ ಕನ್ನ ಹಾಕುತ್ತಿರುವ ಪ್ರಕರಣಗಳು ಸರಣಿಯೋಪಾದಿಯಲ್ಲಿ ಹೊರಬರುತ್ತಿದೆ.

ರಾಜ್ಯದಲ್ಲಿ 25ಕ್ಕೂ ಹೆಚ್ಚು ಜಾತಿವಾರು ನಿಗಮಗಳಿವೆ. ಪ್ರತಿ ವರ್ಷವೂ ₹ 2,000 ಕೋಟಿಯಿಂದ ₹ 2,500 ಕೋಟಿಯಷ್ಟು ಅನುದಾನ ಈ ನಿಗಮಗಳ ಮೂಲಕ ನೇರವಾಗಿ ಖರ್ಚಾಗು ತ್ತಿದೆ. ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಲ್ಲಿ ಹಿಂದೆ ಇಂತಹ ಹಗರಣಗಳು ಬಯಲಾಗಿದ್ದವು. ಈಗ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಸರದಿ.

ರಾಜ್ಯದಲ್ಲಿ 1975ರಿಂದ ಈಚೆಗೆ ಸಮುದಾಯ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ನಿಗಮಗಳು ಅಸ್ತಿತ್ವಕ್ಕೆ ಬಂದವು. ಆರಂಭದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮ (ಹಿಂದಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ) ಮಾತ್ರ ಇತ್ತು. 1986ರಲ್ಲಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಸ್ತಿತ್ವಕ್ಕೆ ಬಂತು. 2006ರಿಂದ ಈಚೆಗೆ ರಾಜಕೀಯ ಉದ್ದೇಶಗಳಿಗಾಗಿ ಜಾತಿವಾರು ನಿಗಮಗಳನ್ನು ರಚಿಸುವ ಪರಿಪಾಠ ಆರಂಭವಾಯಿತು.

ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ಕೆಲವು ನಿಗಮಗಳ ವಾರ್ಷಿಕ ಅನುದಾನದ ಮೊತ್ತದಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕೆಲವು ನಿಗಮಗಳು ನೂರಾರು ಕೋಟಿ ರೂಪಾಯಿಯನ್ನು ವರ್ಷವೊಂದರಲ್ಲಿ ವೆಚ್ಚ ಮಾಡುತ್ತಿವೆ.

ಅನುದಾನ ಹೆಚ್ಚಿದಂತೆ ಈ ನಿಗಮಗಳಲ್ಲಿ ಭ್ರಷ್ಟಾಚಾರ, ದಲ್ಲಾಳಿಗಳ ಕಾಟವೂ ಹೆಚ್ಚಿದೆ. ಈ ನಿಗಮಗಳ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುವ ತಾಲ್ಲೂಕು ಮಟ್ಟದಿಂದ ಹಿಡಿದು ಕೇಂದ್ರ ಕಚೇರಿಯವರೆಗೂ ಭ್ರಷ್ಟಾಚಾರ ವ್ಯಾಪಿಸಿಕೊಂಡಿದೆ. ಹಿಂದಿನ ವರ್ಷಗಳಲ್ಲಿ ಯೋಜನೆಗಳ ಲಾಭ ಪಡೆಯಲು ‘ಕೈ ಬಿಸಿ’ ಮಾಡುವುದು ಕಡ್ಡಾಯ ಎಂಬ ವಾತಾವರಣ ಇತ್ತು. ಈಗ ಜಾತಿವಾರು ನಿಗಮಗಳಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಒದಗಿಸಿದ ಅನುದಾನ ಯಾರ ಕಣ್ಣಿಗೂಬೀಳದಂತೆ ಖಾಲಿಯಾಗುತ್ತಿದೆ. ಆಯಕಟ್ಟಿನ ಹುದ್ದೆಗಳಲ್ಲಿರುವ ಅಧಿಕಾರಿಗಳು ಸೃಷ್ಟಿಸುವ ನಕಲಿ ಫಲಾನುಭವಿಗಳ ಪಟ್ಟಿಯ ಹೆಸರಿನಲ್ಲಿ ನಿಗಮಗಳ ತಿಜೋರಿಗಳು ಬರಿದಾಗುತ್ತಿವೆ.

ಸಾಲು ಸಾಲು ಹಗರಣ:ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ 2016 ಮತ್ತು 2017ರ ಅವಧಿಯಲ್ಲಿ ಸ್ವಯಂ ಉದ್ಯೋಗಕ್ಕೆ ನೆರವು ನೀಡುವ ಯೋಜನೆಯಲ್ಲಿ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ಹತ್ತಾರು ಕೋಟಿ ರೂಪಾಯಿ ಲೂಟಿ ಮಾಡಲಾಗಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭೂ ಒಡೆತನ ಯೋಜನೆಯಲ್ಲಿ 2018 ಮತ್ತು 2019ರ ಅವಧಿಯಲ್ಲಿ ₹ 50 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿರುವುದನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಯಲಿಗೆಳೆದಿತ್ತು.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ದಶಕಗಳ ಹಿಂದೆ ಆಟೊ ರಿಕ್ಷಾ ಖರೀದಿಗೆ ಸಾಲ ಮತ್ತು ಸಹಾಯಧನ ನೀಡುವ ಯೋಜನೆಯ ದುರ್ಬಳಕೆಗೆ ಕುಖ್ಯಾತಿ ಪಡೆದಿತ್ತು. ಈಗ ವಿವಿಧ ನಿಗಮಗಳಲ್ಲಿರುವ ಭೂ ಒಡೆತನ, ಸ್ವಯಂ ಉದ್ಯೋಗ, ಐರಾವತ ಯೋಜನೆಗಳಲ್ಲಿ ಬೃಹತ್‌ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿರುವುದನ್ನು ಎಸಿಬಿ, ಲೋಕಾಯುಕ್ತದಲ್ಲಿ ದಾಖಲಾಗುತ್ತಿರುವ ದೂರುಗಳೇ ಜಾಹೀರು ಮಾಡುತ್ತಿವೆ.

‘ಕೆಲವು ನಿಗಮಗಳಲ್ಲಿ ನಿರಂತರ- ವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಭೂ ಒಡೆತನ, ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಯೋಜನೆಯಡಿ ಅರ್ಜಿ ಸಲ್ಲಿಕೆಯಿಂದ ಅನುದಾನ ಬಿಡುಗಡೆಯವರೆಗಿನ ಕೆಲಸಗಳನ್ನು ಮಾಡುವುದಕ್ಕಾಗಿಯೇ ಏಜೆಂಟರು- ಗಳಿದ್ದಾರೆ. ವ್ಯವಸ್ಥಿತವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ನಿಗಮಗಳ ಅನುದಾನವನ್ನು ಲೂಟಿ ಮಾಡುತ್ತಿದ್ದಾರೆ’ ಎನ್ನುತ್ತಾರೆ ಇಂತಹ ಕೆಲವು ಪ್ರಕರಣಗಳ ತನಿಖೆ ನಡೆಸಿರುವ ಎಸಿಬಿಯ ಹಿರಿಯ ಅಧಿಕಾರಿಗಳು.

‘ಪಾರದರ್ಶಕ ವ್ಯವಸ್ಥೆ ರೂಪಿಸಲು ಕ್ರಮ’

ಜಾತಿ, ಸಮುದಾಯ ಕೇಂದ್ರಿತ ನಿಗಮಗಳಲ್ಲಿ ಭ್ರಷ್ಟಾಚಾರ ಇರುವುದು ನಿಜ. ಆದರೆ, ಅದಕ್ಕೆ ಕಡಿವಾಣ ಹಾಕಲು ನಮ್ಮ ಸರ್ಕಾರ ಬಿಗಿಯಾದ ಕ್ರಮ ಗಳನ್ನು ಕೈಗೊಳ್ಳುತ್ತಿದೆ. ಎಲ್ಲ ನಿಗಮಗಳಲ್ಲೂ ವಿವಿಧ ಯೋಜನೆಗಳಿಗೆ ‘ಸುವಿಧಾ’ ತಂತ್ರಾಂಶದ ಮೂಲಕವೇ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಯಾವುದೇ ನಿಗಮಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಕುರಿತು ಆಧಾರಸಹಿತ ದೂರುಗಳು ಬಂದರೆ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು.
–ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ

*

ಲೆಕ್ಕಪರಿಶೀಲನೆ, ಪಾರದರ್ಶಕತೆಯ ಕೊರತೆ

‘ರಾಜ್ಯದಲ್ಲಿರುವ ಜಾತಿ, ಸಮುದಾಯ ಕೇಂದ್ರಿತ ನಿಗಮಗಳಲ್ಲಿ ಅನುದಾನದ ಬಳಕೆ, ಯೋಜನೆಗಳ ಅನುಷ್ಠಾನದ ಕುರಿತು ನಿಯಮಿತವಾಗಿ ಲೆಕ್ಕಪರಿಶೀಲನೆಯೇ ನಡೆಯುತ್ತಿಲ್ಲ. ಹೀಗಾಗಿ ಯಾವ ನಿಗಮದಲ್ಲಿ ಏನಾಗುತ್ತಿದೆ ಎಂಬುದು ಸರ್ಕಾರಕ್ಕೂ ತಿಳಿಯುತ್ತಿಲ್ಲ’ ಎನ್ನುತ್ತಾರೆ ಇಂತಹ ಕೆಲವು ಪ್ರಕರಣಗಳ ತನಿಖೆ ನಡೆಸಿರುವ ಎಸಿಬಿಯ ಹಿರಿಯ ಅಧಿಕಾರಿಗಳು.

ಬಹುತೇಕ ನಿಗಮಗಳ ಆಡಳಿತದಲ್ಲಿ ಪಾರದರ್ಶಕತೆಯೇ ಇಲ್ಲ. ಯೋಜನೆಗಳ ಫಲಾನುಭವಿಗಳ ಆಯ್ಕೆಯಿಂದ ಅನುದಾನ ಬಿಡುಗಡೆಯವರೆಗೆ ಎಲ್ಲವನ್ನೂ ಗೋಪ್ಯವಾಗಿ ನಡೆಸಲಾಗುತ್ತಿದೆ. ಕೆಲವು ನಿಗಮಗಳ ಕಚೇರಿಗಳಿಗೆ ಸಾರ್ವಜನಿಕರಿಗೆ ಪ್ರವೇಶವನ್ನೂ ನಿರ್ಬಂಧಿಸಿರುವುದು ತನಿಖೆ ವೇಳೆ ಕಂಡುಬಂದಿದೆ.

ತುಂಡು–ಪುಂಡನಾಯಕರಿಂದಲೇ ಭ್ರಷ್ಟಾಚಾರ

ಅಭಿವೃದ್ಧಿ ನಿಗಮಗಳನ್ನು ಆರಂಭಿಸಿದ್ದು ಉತ್ತಮ ಉದ್ದೇಶದಿಂದ. ಆದರೆ, ಅದನ್ನೀಗ ಪಕ್ಷಗಳು ದುರುಪಯೋಗ ಮಾಡಿ ಕೊಳ್ಳುತ್ತಿವೆ. ತಮ್ಮ ತುಂಡು–ಪುಂಡ ನಾಯಕರನ್ನು ಅಧ್ಯಕ್ಷ ಮತ್ತು ಸದಸ್ಯರನ್ನಾಗಿ ಮಾಡುತ್ತಾರೆ. ಇವರೆಲ್ಲರೂ ಸೇರಿ ಭ್ರಷ್ಟಾಚಾರ ಮಾಡಿಯೇ ತೀರುತ್ತಾರೆ. ನಾನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿದ್ದ ಏಳು ತಿಂಗಳ ಅವಧಿಯಲ್ಲಿ 63 ಸಾವಿರ ಫಲಾನುಭವಿಗಳಿಗೆ ಸ್ಪಂದಿಸಿದ್ದೆ. ಇಂಥ ನಿಗಮ ಇದೆ ಎಂಬುದು ರಾಜ್ಯದ ಜನರ ಅರಿವಿಗೆ ಬಂದಿದ್ದೆ ಆಗ. ಪುಡಿ ನಾಯಕರು ತಮಗೆ ಬೇಕಾದವರ ಹೆಸರು ನೋಂದಾಯಿಸಿಕೊಂಡು ಯೋಜನೆಗಳನ್ನು ಅನುಭವಿಸುತ್ತಿದ್ದಾರೆ. ಈ ರೀತಿ ಅಕ್ರಮಕ್ಕೆ ಅವಕಾಶ ನೀಡುವ ಬಹಳಷ್ಟು ಅಧಿಕಾರಿಗಳನ್ನು ನಾನು ಅಧ್ಯಕ್ಷನಾಗಿದ್ದಾಗ ಅಮಾನತು ಮಾಡಿದ್ದೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷನಾದ ಬಳಿಕವೂ ಎಲ್ಲಾ ಇಲಾಖೆಗಳ ಭ್ರಷ್ಟಾಚಾರದ ಬಗ್ಗೆ ಸರ್ಕಾರಕ್ಕೆ ವರದಿ ಒಪ್ಪಿಸಿದ್ದೆ. ಈ ವರದಿ ಲೋಕಾಯುಕ್ತ, ವಿಧಾನ ಪರಿಷತ್ ಮತ್ತು ಹೈಕೋರ್ಟ್‌ನಲ್ಲಿ ಮೇಲುಗೈ ಸಾಧಿಸಿತ್ತು. ಸುಪ್ರೀಂ ಕೋರ್ಟ್‌ ಕೂಡ ಈ ವರದಿಯನ್ನು ಸದನಗಳಲ್ಲಿ ಮಂಡಿಸಬೇಕೆಂದು ಆದೇಶ ನೀಡಿತ್ತು. ಆದರೆ, ಈವರೆಗೆ ಅನುಷ್ಠಾನ ಆಗಿಲ್ಲ.
-ಅನ್ವರ್‌ ಮಾಣಿಪ್ಪಾಡಿ,ಬಿಜೆಪಿ, ಜಂಟಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT