ಗುರುವಾರ , ಜನವರಿ 27, 2022
27 °C
ಕನಿಷ್ಠ ವೇತನ‌ ಇಲ್ಲ ಎಂಬ ಕೊರಗು

ಒಳನೋಟ – ಅಭದ್ರತೆಯಲ್ಲಿ ‘ಅತಿಥಿ’ಗಳು: ಸೇವಾ ಭದ್ರತೆಗೆ ಉಪನ್ಯಾಸಕರ ಕೂಗು

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ‘ಅತಿಥಿ’ಗಳಾಗಿ ಹೆಚ್ಚುವರಿ ಕಾರ್ಯಭಾರ ನಿಭಾಯಿಸುತ್ತಿರುವ ಉಪನ್ಯಾಸಕರು ಅಭದ್ರತೆಯ ಸುಳಿಯಲ್ಲಿದ್ದಾರೆ. ಗೌರವಯುತ–ಘನತೆಯ ಜೀವನ ಸಾಗಿಸಲು ಸಾಕಾಗುವಷ್ಟು ವೇತನ‌ ಇಲ್ಲ ಎಂಬ ಕೊರಗು ಅನೇಕರದ್ದು. ವಯೋಮಿತಿ ದಾಟಿದವರಿಗೆ, ದಾಟುತ್ತಿರುವವವರಿಗೆ ಸರ್ಕಾರಿ ‘ಸಹಾಯಕ ಪ್ರಾಧ್ಯಾಪಕ’ ಹುದ್ದೆಯ ಅವಕಾಶ ವಂಚಿತರಾಗಿ ಬದುಕು–ಭವಿಷ್ಯ ಕಳೆದುಕೊಳ್ಳುವ ಆತಂಕ.

ರಾಜ್ಯದಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲಿ 12,868 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ, 5,163 ಮಂದಿ 36 ವರ್ಷ ವಯೋಮಾನ ದಾಟಿದವರು. ಅದರಲ್ಲಿ, 2,648 ಮಂದಿ 36ರಿಂದ 40ರ ಮಧ್ಯದ ವಯಸ್ಸಿನವರು. 1,303 ಮಂದಿ 41ರಿಂದ 45ರ ಮಧ್ಯದವರು. 781 ಮಂದಿ 46ರಿಂದ 50ರ ನಡುವಿನವರು. ಇನ್ನು 51 ವರ್ಷ ವಯಸ್ಸು ದಾಟಿದವರು 431 ಮಂದಿ.

ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಸಕ್ರಮಾತಿಗೆ ಕಾನೂನು ತೊಡಕು: ಅಶ್ವತ್ಥನಾರಾಯಣ

ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸದ್ಯದ ಕಾರ್ಯನಿರತ ಹುದ್ದೆಗಳ ಜೊತೆಗೆ ಹೊಸ ಹುದ್ದೆಗಳನ್ನು ಸೃಜಿಸಬೇಕು ಅಥವಾ ಸೇರಿಸಬೇಕು. ಕಾನೂನು ತಿದ್ದುಪಡಿ ಮೂಲಕ ಆ ಹುದ್ದೆಗಳಿಗೆ ತಮ್ಮನ್ನು ಸೇರಿಸಿ ಸೇವೆ ಸಕ್ರಮಗೊಳಿಸಬೇಕು ಎಂಬುದು ಅತಿಥಿ ಉಪನ್ಯಾಸಕರ ಒಕ್ಕೊರಲ ಧ್ವನಿ.

ಹೀಗೆ ಸೇವೆ ಸಲ್ಲಿಸುತ್ತಿರುವವರಲ್ಲಿ ಅರ್ಹ, ಬೋಧನಾ ಕೌಶಲ ಹೊಂದಿದ ಪ್ರತಿಭಾವಂತರಿದ್ದಾರೆ. ಆದರೆ, ಅವರಿಗೆ ಸಾಮರ್ಥ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿಲ್ಲ. ಅತ್ಯಂತ ಕಡಿಮೆ ವೇತನ, ಸಮಯಕ್ಕೆ ಸರಿಯಾಗಿ ಸಿಗದ ಗೌರವಧನ, ವರ್ಷವಿಡೀ ಕೆಲಸ ಇಲ್ಲದಿರುವುದು ಈ ಸಮೂಹವನ್ನು ಸಾಮಾಜಿಕವಾಗಿ ಅತಂತ್ರಗೊಳಿಸಿದೆ. ಸೇವಾ ಭದ್ರತೆ ಇಲ್ಲದ ಇವರ ಬದುಕು ಅಭದ್ರವಾಗಿದೆ ಎನ್ನುವುದು ಕಟು ವಾಸ್ತವ.

‘ಯುಜಿಸಿ ನಿಯಮಾವಳಿ ಪ್ರಕಾರ, ಅರ್ಹ ವಿದ್ಯಾರ್ಹತೆ ಹೊಂದಿದವರಿಗೆ ಪ್ರತಿ ತಿಂಗಳು ₹ 50 ಸಾವಿರ ವೇತನ ನೀಡಬೇಕು. ಆದರೆ, ರಾಜ್ಯ ಸರ್ಕಾರ ಅದಕ್ಕೆ ಸಿದ್ಧವಿಲ್ಲ. ಕಾಯಂ ಉಪನ್ಯಾಸಕರಿಗೆ ತಿಂಗಳಿಗೆ ₹ 1.50 ಲಕ್ಷ ವೇತನವಿದೆ. ಅತಿಥಿ ಶಿಕ್ಷಕರಿಗೆ ಕೇವಲ ₹ 11 ಸಾವಿರದಿಂದ ₹ 13 ಸಾವಿರ ವೇತನ, ಅದೂ ವರ್ಷದಲ್ಲಿ ಎಂಟು ತಿಂಗಳು ಮಾತ್ರ ನೀಡಿ, ಬೇಕಾದಾಗ ಬಳಸಿ, ಬೇಡವಾದಾಗ ಕೈ ಬಿಟ್ಟರೆ ಸರ್ಕಾರಕ್ಕೆ ಲಾಭವಿದೆ. ಈ ಕಾರಣಕ್ಕೆ ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ’ ಎನ್ನುವುದು ಅವರ ಅಳಲು ಮತ್ತು ಆಕ್ರೋಶ.

ಇದನ್ನೂ ಓದಿ: 

‘ದೆಹಲಿ ಸರ್ಕಾರ ವಿಶೇಷ ನಿಯಮ ರೂಪಿಸಿ 16 ಸಾವಿರ ಅತಿಥಿ ಶಿಕ್ಷಕರನ್ನು ಕಾಯಂ ಮಾಡಿದೆ. ಹರಿಯಾಣ ಸರ್ಕಾರ ಕೂಡಾ ಇದೇ ರೀತಿ ಮಾಡಿದೆ. ರಾಜ್ಯದಲ್ಲೂ ಈ ಹಿಂದೆ ಅತಿಥಿ ಶಿಕ್ಷಕರನ್ನು, ಅರೆಕಾಲಿಕ ಉಪನ್ಯಾಸಕರನ್ನು ಜೆಒಸಿ ಸೇವೆ ಸಲ್ಲಿಸಿದ ಬೋಧಕ, ಬೋಧಕೇತರ ಸಿಬ್ಬಂದಿಯನ್ನು, ಮೊರಾರ್ಜಿ ‌ದೇಸಾಯಿ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿಯನ್ನು, ವಿವಿಧ ಇಲಾಖೆಗಳ ದಿನಗೂಲಿ ನೌಕರರನ್ನು, ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದ ವೈದ್ಯರನ್ನು ರಾಜ್ಯ ಸರ್ಕಾರ ಕಾಯಂ ಮಾಡಿದೆ. ಅದೇ ರೀತಿ ನಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ನಿಯಮ ರೂಪಿಸಬೇಕು’ ಎನ್ನುತ್ತಾರೆ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರೊ. ಹನುಮಂತಗೌಡ ಆರ್‌. ಕಲ್ಮನಿ.

‘ಯಾವುದೇ ಸೌಲಭ್ಯ ನೀಡದಿದ್ದರೂ 15–20 ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವವರನ್ನು ಸೇವೆಯಲ್ಲಿ ವಿಲೀನಗೊಳಿಸುವ ಮಾನವೀಯ ನಡೆಗೆ ಯಾವುದೇ ಕಾನೂನು ಅಡ್ಡಿ ಬರುವುದಿಲ್ಲ. 2015ರಿಂದ ಈವರೆಗೆ ನಮಗೆ ಸಂಬಳದಲ್ಲಿ ಒಂದು ರೂಪಾಯಿ ಹೆಚ್ಚು ಮಾಡಿಲ್ಲ. 12 ತಿಂಗಳು ವೇತನ ನೀಡಬೇಕೆಂಬ ಆದೇಶವಿದ್ದರೂ ಸರ್ಕಾರ ಪಾಲಿಸುತ್ತಿಲ್ಲ’ ಎಂದರು.

ಬೇರೆ ಕಡೆ ಕರ್ತವ್ಯ ನಿರ್ವಹಿಸಲು ನಿರ್ಬಂಧ ಇಲ್ಲ: ಅತಿಥಿ ಉಪನ್ಯಾಸಕರಿಗೆ ಕಡಿಮೆ ವೇತನ ನೀಡಲಾಗುತ್ತಿದ್ದರೂ, ತರಗತಿ ಇಲ್ಲದ ಅವಧಿಯಲ್ಲಿ ಬೇರೆ ಖಾಸಗಿ ಕಾಲೇಜುಗಳಲ್ಲಿ ಅಥವಾ ಬೇರೆ ಕಡೆ ಕರ್ತವ್ಯ ನಿರ್ವಹಿಸುವುದಕ್ಕೆ ಯಾವುದೇ ನಿರ್ಬಂಧ ಇಲ್ಲ. ಹೀಗಾಗಿ, ಹಲವಾರು ಅತಿಥಿ ಉಪನ್ಯಾಸಕರು ಖಾಸಗಿ ಕಾಲೇಜುಗಳಲ್ಲಿ ಮತ್ತು ಪಿಯು ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ಸರ್ಕಾರದ ವಾದ.

ಇದನ್ನೂ ಓದಿ: 

‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರಿಗೆ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ‘ಕಾರ್ಯಭಾರ’ ನಿರ್ವಹಿಸಲು ಹಿಂದೆ ಅರೆಕಾಲಿಕ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತಿತ್ತು. 2003ರ ನಂತರ ಅರೆಕಾಲಿಕ ಉಪನ್ಯಾಸಕರ ಬದಲಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. ಅಂದಿನಿಂದ ಹೆಚ್ಚುವರಿ ಕಾರ್ಯಭಾರಕ್ಕೆ ನೇಮಿಸಿಕೊಳ್ಳುವ ಉಪನ್ಯಾಸಕರನ್ನು ‘ಅತಿಥಿ ಉಪನ್ಯಾಸಕರು’ ಎಂದು ಕರೆಯಲಾಗುತ್ತಿದೆ. ಈ ಅತಿಥಿ ಉಪನ್ಯಾಸಕರು ಅವರಿಗೆ ಹಂಚಿಕೆ ಮಾಡುವ ಕಾರ್ಯಭಾರವನ್ನು ಆಯಾ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿಯ ಅನ್ವಯ ಅವರಿಗೆ ನಿಗದಿಪಡಿಸಿದ ಸಮಯದಲ್ಲಿ, ಗಂಟೆಗಳ ಅವಧಿಯಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ನಂತರ ಬೇರೆ ಕೆಲಸಕ್ಕೆ ಹೋಗುತ್ತಾರೆ’ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಸಮಿತಿಯ ವರದಿಯತ್ತ ಚಿತ್ತ :

ಅತಿಥಿ ಉಪನ್ಯಾಸಕರು ಅನಿರ್ದಿಷ್ಟ ಅವಧಿಗೆ ಮುಷ್ಕರ ನಡೆಸುತ್ತಿದ್ದಂತೆ, ರಾಜ್ಯ ಸರ್ಕಾರ (ಡಿ. 15ರಂದು) ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮತ್ತು ಇತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವಿಸ್ಕೃತ ವರದಿ ನೀಡಲು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯಕ ಅಧ್ಯಕ್ಷತೆಯಲ್ಲಿ ನಾಲ್ಕು ಮಂದಿಯ ಸಮಿತಿ ರಚಿಸಿದೆ.

ಈ ಸಮಿತಿಯಲ್ಲಿ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಪಿ.ಸಿ.ಜಾಫರ್‌, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ. ಪ್ರದೀಪ್‌ ಇದ್ದಾರೆ.

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವ ಕುರಿತು ಕಾನೂನಾತ್ಮಕ ಅಂಶಗಳು ಹಾಗೂ ಇತರ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಈ ಸಮಿತಿ ತಿಂಗಳ ಒಳಗೆ ಸ್ಪಷ್ಟ ಅಭಿಪ್ರಾಯ ನೀಡಬೇಕಿದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಮತ್ತು ಲಭ್ಯವಾಗುವ ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ ಪ್ರತಿ ವರ್ಷ ಕಾಯಂ ಉಪನ್ಯಾಸಕರನ್ನು ನೇಮಿಸಿಕೊಳ್ಳುವ ಸಲುವಾಗಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆಯೂ ವರದಿ ನೀಡಬೇಕಿದೆ.

ಕಾರ್ಯಭಾರ; ಗೌರವಧನ:

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳ ಕಾಯಂ ಉಪನ್ಯಾಸಕರಿಗೆ ವಾರಕ್ಕೆ 16 ಗಂಟೆಗಳ ಕಾರ್ಯಭಾರವನ್ನು ನಿಗದಿಪಡಿಸಲಾಗಿದೆ. ಅದರಲ್ಲಿ ಅತಿಥಿ ಉಪನ್ಯಾಸಕರಿಗೆ ಅರ್ಧದಷ್ಟು, ಅಂದರೆ 8 ಗಂಟೆಯ ಕಾರ್ಯಭಾರ ವಹಿಸಲಾಗಿದೆ.

ವಿಜ್ಞಾನ, ಪ್ರಾಯೋಗಿಕ ತರಗತಿ ನಿರ್ವಹಿಸುವ ಕಾಯಂ ಉಪನ್ಯಾಸಕರಿಗೆ ವಾರಕ್ಕೆ 20 ಗಂಟೆಗಳ ಕಾರ್ಯಭಾರ ನಿಗದಿಪಡಿಸಲಾಗಿದ್ದು, ಅದರಲ್ಲಿ ಅರ್ಧದಷ್ಟು, ಅಂದರೆ ಗರಿಷ್ಠ 10 ಗಂಟೆಗಳ ಕಾರ್ಯಭಾರವನ್ನು ಅತಿಥಿ ಉಪನ್ಯಾಸಕರಿಗೆ ಕೊಡಲಾಗಿದೆ.

ಇದನ್ನೂ ಓದಿ: 

ಅತಿಥಿ ಉಪನ್ಯಾಸಕರಿಗೆ 2017ರ ಏಪ್ರಿಲ್‌ಗಿಂತಲೂ ಮೊದಲು ಯುಜಿಸಿ ಅರ್ಹತೆ ಹೊಂದಿದವರಿಗೆ ₹ 11,500, ಹೊಂದಿಲ್ಲದವರಿಗೆ ₹9,500 ಗೌರವಧನ ನೀಡಲಾಗುತ್ತಿತ್ತು. 2017ರ ಏಪ್ರಿಲ್‌ 4ರಂದು ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದ್ದು, ಯುಜಿಸಿ ಅರ್ಹತೆ ಹೊಂದಿದವರಿಗೆ ₹ 13,000, ಹೊಂದಿಲ್ಲದವರಿಗೆ ₹ 11 ಸಾವಿರ ನಿಗದಿಗೊಳಿಸಲಾಗಿದೆ.

***

ಅತಿಥಿ ಉಪನ್ಯಾಸಕರ ಪೈಕಿ 50ಕ್ಕೂ ಹೆಚ್ಚು ಮಂದಿ ಭವಿಷ್ಯದ ಚಿಂತೆಯಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಅಂಥವರ ಕುಟುಂಬ ಬೀದಿಯಲ್ಲಿವೆ. ನಾವು ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದರಿಂದ ಸರ್ಕಾರ ಸಮಿತಿ ರಚಿಸಿದೆ.

- ಪ್ರೊ. ಹನುಮಂತಗೌಡ ಆರ್‌. ಕಲ್ಮನಿ, ಅಧ್ಯಕ್ಷ, ಅತಿಥಿ ಉಪನ್ಯಾಸಕರ ಸಂಘ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು