ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಬಡವರ ತುತ್ತು ಅನ್ನಕ್ಕೂ ಕುತ್ತು!

ಮುಚ್ಚುವ ಸ್ಥಿತಿಗೆ ತಲುಪಿದ ಇಂದಿರಾ ಕ್ಯಾಂಟೀನ್‌ಗಳು: ಹಲವು ತಾಲ್ಲೂಕುಗಳಲ್ಲಿ ಆರಂಭವೇ ಆಗಿಲ್ಲ
Last Updated 11 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ಹಸಿದವರ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ ಗಳು ಸರಿಯಾದ ನಿರ್ವಹಣೆ ಇಲ್ಲದೆ ಬಾಗಿಲು ಮುಚ್ಚುವ ಹಂತ ತಲುಪಿವೆ. ಈ ಕ್ಯಾಂಟೀನ್‌ಗಳ ಮೆನುವಿನಲ್ಲಿದ್ದ ಆಹಾರ ಪದಾರ್ಥಗಳು ಒಂದೊಂದಾಗಿ ಕಣ್ಮರೆಯಾಗುತ್ತಿವೆ. ಅನುದಾನದ ಹರಿವು ಕ್ಷೀಣಿಸಿದಂತೆ ಗುಣಮಟ್ಟವೂ ಕುಸಿಯುತ್ತಿದೆ.

ಬಡವರು, ಕೂಲಿಕಾರ್ಮಿಕರು, ಉದ್ಯೋಗ ಅರಸಿ ದೂರದೂರಿನಿಂದ ಬಂದವರು, ವಿದ್ಯಾರ್ಥಿಗಳು ಸೇರಿದಂತೆ ಶ್ರಮಿಕ ವರ್ಗಕ್ಕೆ ಅತಿ ಕಡಿಮೆ ದರದಲ್ಲಿ ಉತ್ತಮ ತಿಂಡಿ ಮತ್ತು ಊಟ ಕೊಡುವ ಯೋಜನೆ ಇದಾಗಿತ್ತು. ಆದರೆ, ಹಸಿದ ಹೊಟ್ಟೆಗಳನ್ನು ತಣಿಸಲು ರೂಪಿಸಿದ್ದ ಈ ಯೋಜನೆ ನಿಧಾನವಾಗಿ ನಿಂತುಹೋಗುವ ಸ್ಥಿತಿಯತ್ತ ಸಾಗುತ್ತಿದೆ.

ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆರಂಭಿಸಲಾಗಿದ್ದ ಇಂದಿರಾ ಕ್ಯಾಂಟೀನ್‌ ಗಳತ್ತ ಜನರು ಬರುವುದೇ ಕಡಿಮೆ ಮಾಡಿದ್ದಾರೆ. ರಾಜ್ಯದ ಹಲವೆಡೆ 50ಕ್ಕೂ ಹೆಚ್ಚು ಕ್ಯಾಂಟೀನ್‌ಗಳು ಈಗಾಗಲೇ ಸ್ಥಗಿತಗೊಂಡಿವೆ. ಇನ್ನೊಂದೆಡೆ, ಹಲವಾರು ತಾಲ್ಲೂಕುಗಳಲ್ಲಿ ಕ್ಯಾಂಟೀನ್‌ ಗಳಿಗೆ ಚಾಲನೆಯೇ ದೊರೆತಿಲ್ಲ.

ರಾಜ್ಯದಾದ್ಯಂತ 400ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿತ್ತು. ಇದಕ್ಕಾಗಿ 2017–18ನೇ ಸಾಲಿನ ಬಜೆಟ್‌ನಲ್ಲಿ₹145 ಕೋಟಿ ಅನು ದಾನ ಮೀಸಲಿಡಲಾಗಿತ್ತು. ನಂತರ, ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಮತ್ತು ನಿರ್ವಹಣೆಯ ಹೊಣೆ ವಹಿಸಲಾಯಿತು.

ಬಿಜೆಪಿ ಸರ್ಕಾರ ಈ ಕ್ಯಾಂಟೀನ್‌ಗಳ ನಿರ್ವಹಣೆಗೆ ಅಗತ್ಯವಿದ್ದಷ್ಟು ಅನುದಾನ ನೀಡಲು ಹಿಂದೇಟು ಹಾಕಿತು. ಇದರಿಂದ, ಕ್ಯಾಂಟೀನ್‌ಗಳು ದಿನೇದಿನೇ ಸೊರಗತೊಡಗಿ, ಆಹಾರದ ಗುಣಮಟ್ಟವೂ ಕಡಿಮೆಯಾಯಿತು. ಸ್ವಚ್ಛತೆಯೂ ಮಾಯವಾಗತೊಡಗಿತು. ಗುತ್ತಿಗೆದಾರರು ಬಾಕಿ ಬಿಲ್‌ಗಳಿಗಾಗಿ ಅಲೆದಾಡುವ ಪರಿಸ್ಥಿತಿ ಸೃಷ್ಟಿಸಲಾ ಯಿತು. ಕೆಲವೆಡೆ 2 ವರ್ಷಗಳಿಗೂ ಹೆಚ್ಚು ಅವಧಿಯ ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಇಂದಿರಾ ಕ್ಯಾಂಟೀನ್‌ಗಳಲ್ಲಿ ₹5ಕ್ಕೆ ತಿಂಡಿ ಮತ್ತು ತಲಾ ₹10ಕ್ಕೆ ಮಧ್ಯಾಹ್ನ ಮತ್ತು ರಾತ್ರಿಗೆ ಊಟ ವಿತರಿಸಲಾಗುತ್ತಿದೆ. ಈ ಅತ್ಯಲ್ಪ ಮೊತ್ತದಲ್ಲಿ 225 ಗ್ರಾಂ ತಿಂಡಿ ಮತ್ತು ಊಟಕ್ಕೆ 300 ಗ್ರಾಂ ಅನ್ನ, ತರಕಾರಿ ಸಾಂಬಾರು, ಮೊಸರು ನೀಡಲಾಗುತ್ತಿತ್ತು. ಇದಕ್ಕಾಗಿ ಒಟ್ಟು ₹57.50 ಮೊತ್ತ ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರದಿಂದ ₹32.50 ಹಾಗೂ ತಿಂಡಿ ಮತ್ತು ಊಟ ಮಾಡುವವರಿಂದ ₹25 ಪಡೆಯಲಾಗುತ್ತಿದೆ.

ಬೆಂಗಳೂರಿನ ಹೊರವರ್ತುಲ ರಸ್ತೆಯ ಪಿಇಎಸ್ ಕಾಲೇಜು ಬಳಿ ಇರುವ ಇಂದಿರಾ ಕ್ಯಾಂಟೀನ್‌ನ ಆವರಣದಲ್ಲಿ ಕೆಟ್ಟು ನಿಂತ ಸಂಚಾರಿ ಇಂದಿರಾ ಕ್ಯಾಂಟೀನ್‌ಗಳು
ಬೆಂಗಳೂರಿನ ಹೊರವರ್ತುಲ ರಸ್ತೆಯ ಪಿಇಎಸ್ ಕಾಲೇಜು ಬಳಿ ಇರುವ ಇಂದಿರಾ ಕ್ಯಾಂಟೀನ್‌ನ ಆವರಣದಲ್ಲಿ ಕೆಟ್ಟು ನಿಂತ ಸಂಚಾರಿ ಇಂದಿರಾ ಕ್ಯಾಂಟೀನ್‌ಗಳು

ಬಿಬಿಎಂಪಿ ವ್ಯಾಪ್ತಿಯಲ್ಲಿ 198 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿತ್ತು. 24 ಮೊಬೈಲ್‌ ಕ್ಯಾಂಟೀನ್‌ಗಳಿಗೆ ಚಾಲನೆ ನೀಡಲಾಗಿತ್ತು. ಮೊಬೈಲ್‌ ಕ್ಯಾಂಟೀನ್‌ಗಳ ಸೇವೆಯನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಮುಂದಿನ ಹೆಜ್ಜೆಯಾಗಿ, ಈಗ ನಗರದಲ್ಲಿನ 35 ಕ್ಯಾಂಟೀನ್‌ಗಳಲ್ಲಿ ರಾತ್ರಿ ವೇಳೆಯ ಊಟ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕೆಲವು ತಾಲ್ಲೂಕುಗಳಲ್ಲೂ ರಾತ್ರಿ ವೇಳೆ ಪ್ರತಿನಿತ್ಯವೂ ಊಟ ವಿತರಿಸುತ್ತಿಲ್ಲ.

‘ಆರಂಭದ ದಿನಗಳಲ್ಲಿ 300ರಿಂದ 400ಕ್ಕೂ ಹೆಚ್ಚು ಜನ ತಿಂಡಿ ಸೇವಿಸುತ್ತಿದ್ದರು. ಮಧ್ಯಾಹ್ನ ಊಟಕ್ಕೆ 350ಕ್ಕೂ ಹೆಚ್ಚು ಜನ ಬರುತ್ತಿದ್ದರು. ಈಗ ಒಟ್ಟಾರೆಯಾಗಿ ಶೇ 35ರಷ್ಟು ಕಡಿಮೆಯಾಗಿದೆ. ರಾತ್ರಿ ವೇಳೆ ಊಟಕ್ಕೆ 50 ಮಂದಿ ಸಹ ಬರುವುದಿಲ್ಲ. ಹೀಗಾಗಿ, ರಾತ್ರಿ ಊಟ ಸ್ಥಗಿತಗೊಳಿಸುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

ಪ್ರತಿ ಭಾನುವಾರ ನೀಡುತ್ತಿದ್ದ ಕೇಸರಿಬಾತ್‌ಗೆ ಕೊಕ್‌ ನೀಡಲಾಗಿದೆ. ಜತೆಗೆ, ಇಡ್ಲಿ, ಸಾಂಬಾರ್‌, ಉಪ್ಪಿನಕಾಯಿ, ಮೊಸರು ಅನ್ನು ನಿಯಮಿತವಾಗಿ ನೀಡುತ್ತಿಲ್ಲ. ಪಲಾವ್‌, ಪುಳಿಯೊಗರೆ ಸೇರಿದಂತೆ ವಿವಿಧ ತಿಂಡಿಗಳ ಬದಲಾಗಿ ಈಗ ಉಪ್ಪಿಟ್ಟು ಮಾತ್ರ ದಿನನಿತ್ಯದ ಉಪಾಹಾರವಾಗುತ್ತಿದೆ. ಮೊದಲು ಊಟ ಸರಿ ಇಲ್ಲದಿದ್ದರೆ ದಂಡ ಹಾಕುವ ವ್ಯವಸ್ಥೆಯೂ ಇತ್ತು. ಆದರೆ, ಸಕಾಲಕ್ಕೆ ಬಿಲ್‌ ಪಾವತಿಸದ ಕಾರಣ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಮೆನು ಸುಧಾರಿಸಿದರೆ ಹೆಚ್ಚು ಜನ ಬರುತ್ತಾರೆ. ಕ್ಯಾಂಟೀನ್‌ ಆರಂಭಿಸಿದ ದಿನಗಳಲ್ಲಿ ಸ್ಥಿತಿವಂತರು ಸಹ ಬರುತ್ತಿದ್ದರು. ಈಗ ಬಡವರಿಗೆ ಮಾತ್ರ ಸೀಮಿತವಾಗಿದೆ ಎಂದು ಕ್ಯಾಂಟೀನ್‌ ಸಿಬ್ಬಂದಿ ಹೇಳುತ್ತಾರೆ.

ಬೆಂಗಳೂರಿನ ಹಲವು ಇಂದಿರಾ ಕ್ಯಾಂಟೀನ್‌ಗಳ ನೀರಿನ ಸಂಪರ್ಕವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಕಡಿತಗೊಳಿಸಿದೆ. ಗುತ್ತಿಗೆದಾರರು ಟ್ಯಾಂಕರ್‌ ಮೂಲಕವೇ ನೀರು ಪಡೆಯುತ್ತಿದ್ದಾರೆ. ಎರಡು ವರ್ಷಗಳಿಗೂ ಹೆಚ್ಚು ಅವಧಿಯ ₹2 ಕೋಟಿಗೂ ಹೆಚ್ಚು ಮೊತ್ತವನ್ನು ಜಲಮಂಡಳಿಗೆ ಪಾವತಿಸಬೇಕಾಗಿದೆ.

‘ಬಿಬಿಎಂಪಿಯಿಂದ ಹಣ ಬಿಡುಗಡೆಯಾಗಿಲ್ಲ. ಇದು ಹಳೆಯ ಬಾಕಿ. ಏಕಾಏಕಿ ನೀರು ಸಂಪರ್ಕ ನಿಲ್ಲಿಸಿದರೆ ಹೇಗೆ’ ಎಂದು ಗುತ್ತಿಗೆದಾರರು ಪ್ರಶ್ನಿಸುತ್ತಾರೆ.

ರಾಜ್ಯದ ಉಳಿದೆಡೆಯೂ ಸಮರ್ಪಕ ನಿರ್ವಹಣೆ ಕೊರತೆಯಿಂದ ಕ್ಯಾಂಟೀನ್‌ಗಳು ಒಂದೊಂದಾಗಿ ಮುಚ್ಚುತ್ತಿವೆ. ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಏಳು ಇಂದಿರಾ ಕ್ಯಾಂಟೀನ್‌ಗಳು ಸ್ಥಗಿತಗೊಂಡಿವೆ.

‘30 ತಿಂಗಳಿಂದ ₹7 ಕೋಟಿ ಪಾವತಿಯಾಗಿರಲಿಲ್ಲ. ಹೀಗಾಗಿ, ಕ್ಯಾಂಟೀನ್ ನಡೆಸಲು ಸಾಧ್ಯವಾಗದೇ ಮುಚ್ಚಲಾಗಿದೆ’ ಎಂದು ಕಲಬುರಗಿ ನಗರದ ಇಂದಿರಾ ಕ್ಯಾಂಟೀನ್‌ಗಳ ಉಸ್ತುವಾರಿ ಶ್ರೀಶೈಲರಾವ್‌ ಕುಲಕರ್ಣಿ ಹೇಳುತ್ತಾರೆ.

‘ಬಾಕಿ ಬಿಲ್ ಪಾವತಿಯಾಗದ ಕಾರಣ 70 ರಿಂದ 80 ಕಾರ್ಮಿಕರಿಗೆ ಸಂಬಳ ಕೊಡಲು ಸಾಧ್ಯವಾಗಲಿಲ್ಲ. ಕೋವಿಡ್‌ ವೇಳೆ ಹಣ ತೆಗೆದುಕೊಳ್ಳದೇ ವಲಸೆ ಕಾರ್ಮಿಕರಿಗೆ ಉಚಿತವಾಗಿ ಊಟ–ಉಪಾಹಾರ ಒದಗಿಸಿದ್ದೇವೆ. ನಮ್ಮಲ್ಲಿ ಸದ್ಯಕ್ಕೆ ಹಣ ಇಲ್ಲ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದರಿಂದ ಮುಚ್ಚುವುದು ಅನಿವಾರ್ಯವಾಯಿತು’ ಎಂದು ಅವರು ಹೇಳುತ್ತಾರೆ.

ಸಚಿವ ಬಿ.ಶ್ರೀರಾಮುಲು ಪ್ರತಿನಿಧಿಸುವ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಎರಡು ಕ್ಯಾಂಟೀನ್‌ಗೆ ಇನ್ನೂ ಕಟ್ಟಡ ಕೂಡ ನಿರ್ಮಿಸಿಲ್ಲ.

ಸಮಸ್ಯೆಗಳ ಸರಮಾಲೆ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್‌ನ ಆಹಾರದ ಗುಣಮಟ್ಟ ಸ್ವಲ್ಪ ಕಡಿಮೆಯಾಗಿದೆ ಎಂದು ಹೇಳುತ್ತಿದ್ದರೂ, ಶುಚಿತ್ವ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ ಎಂದು ಗ್ರಾಹಕರು ಹೇಳುತ್ತಾರೆ. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಹಾರದ ಗುಣಮಟ್ಟ ಕಳಪೆಯಾಗಿದೆ ಮತ್ತು ಪ್ರಮಾಣ ಕಡಿಮೆ ಎಂದು ಗ್ರಾಹಕರು ದೂರುತ್ತಾರೆ.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲೂ ಊಟದ ವ್ಯವಸ್ಥೆ ಇರುವುದರಿಂದ ಕ್ಯಾಂಟೀನ್‌ಗೆ ಬರುವವರ ಸಂಖ್ಯೆ ಕಡಿಮೆ ಇರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಅನುದಾನ ಬಾಕಿ ಕಾರಣಕ್ಕೆ ಚಿಕ್ಕಮಗಳೂರಿನ ಕ್ಯಾಂಟೀನ್‌ ಅನ್ನು ಈಚೆಗೆ ಮೂರು ದಿನ ಮುಚ್ಚಲಾಗಿತ್ತು. ಗುತ್ತಿಗೆದಾರರಿಗೆ ಬಿಲ್‌ ಪಾವತಿ ಬಾಕಿ, ನೌಕರರಿಗೆ ಸಂಬಳ ಬಾಕಿ, ನಿರ್ವಹಣೆ ಸವಾಲು ಮುಂತಾದ ಸಮಸ್ಯೆಗಳ ಸರಮಾಲೆಗಳಿಂದ ಕ್ಯಾಂಟೀನ್‌ಗಳ ನಿರ್ವಹಣೆ ಕಷ್ಟಸಾಧ್ಯವಾಗಿದೆ.

‘ಕ್ಯಾಂಟೀನ್ ಆರಂಭದ ಕಾಲಘಟ್ಟದಲ್ಲಿ ಇದ್ದ ಆಹಾರ ಗುಣಮಟ್ಟ ಈಗ ಇಲ್ಲ. ಪ್ರಮಾಣವೂ ತೀರಾ ಕಡಿಮೆಯಾಗಿದೆ. ಎಲ್ಲ ಕಡೆಯೂ ಈ ಸಮಸ್ಯೆ ಇದೆ’ ಎಂದು ಕೆಎಸ್‌ಆರ್‌ಟಿಸಿ ನಿರ್ವಾಹಕರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

‘ಕ್ಯಾಂಟೀನ್‌ನಲ್ಲಿ ಅನ್ನ ಗಂಟುಗಂಟಾಗಿರುತ್ತದೆ. ಸಾಂಬಾರು ರುಚಿ ಇರುವುದಿಲ್ಲ. ಉಪಾಹಾರದ ರುಚಿ ಅಷ್ಟಕ್ಕಷ್ಟೇ’ ಎಂದು ಗ್ರಾಹಕ ರಾಜೇಶ್‌ ದೂರುತ್ತಾರೆ.

‘ಸರ್ಕಾರದಿಂದ ₹ 1 ಕೋಟಿ ಅನುದಾನ ಬಾಕಿ ಇದೆ. ಬಿಲ್‌ ಪಾವತಿಸದಿರುವುದರಿಂದ ನೌಕರರಿಗೆ ಆರು ತಿಂಗಳಿಂದ ಸಂಬಳ ನೀಡಿಲ್ಲ. ಕ್ಯಾಂಟೀನ್‌ಗಳ ನಿರ್ವಹಣೆ, ಆಹಾರ ಗುಣಮಟ್ಟ ಕಾಪಾಡಿಕೊಳ್ಳುವುದು ಸವಾಲಾಗಿದೆ’ ಎಂದು ಇಂದಿರಾ ಕ್ಯಾಂಟೀನ್‌ ಚಿಕ್ಕಮಗಳೂರು ಜಿಲ್ಲಾ ವ್ಯವಸ್ಥಾಪಕ ಕೃಷ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಮೈಸೂರು ಭಾಗದಲ್ಲಿ ಕ್ಯಾಂಟೀನ್‌ಗಳು ಸಕ್ರಿಯವಾಗಿವೆ. ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 11 ಹಾಗೂ ಜಿಲ್ಲೆಯಲ್ಲಿ 5 ಸೇರಿ ಒಟ್ಟು 16 ಇಂದಿರಾ ಕ್ಯಾಂಟೀನ್‌ಗಳಿವೆ. ಪಿರಿಯಾಪಟ್ಟಣದಲ್ಲಿ ಕ್ಯಾಂಟೀನ್‌ ಆರಂಭಗೊಳ್ಳಬೇಕಿದೆ.

ಆರಂಭವಾಗದ 35 ಕ್ಯಾಂಟೀನ್: ಕಿತ್ತೂರು ಕರ್ನಾಟಕದ ಏಳು ಜಿಲ್ಲೆಗಳು ಹಾಗೂ ಕಲ್ಯಾಣ ಕರ್ನಾಟಕದ ವಿಜಯನಗರ, ಬಳ್ಳಾರಿ ಜಿಲ್ಲೆಗಳಿಗೆ ಒಟ್ಟು 78 ಇಂದಿರಾ ಕ್ಯಾಂಟೀನ್‌ಗಳು ಮಂಜೂರಾಗಿವೆ. ಈ ಪೈಕಿ 35 ಕ್ಯಾಂಟೀನ್‌ಗಳು ಐದು ವರ್ಷಗಳಾದರೂ ಆರಂಭವಾಗಿಲ್ಲ. ಜಾಗದ ಸಮಸ್ಯೆಯಿಂದಾಗಿ ಹಲವೆಡೆ ಕ್ಯಾಂಟೀನ್‌ಗಳನ್ನು ರದ್ದುಪಡಿಸಲಾಗಿದೆ. ಕೆಲವೆಡೆ ಕ್ಯಾಂಟೀನ್ ನಿರ್ಮಾಣಗೊಂಡಿದ್ದರೂ ಇಂದಿಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಉಳಿದೆಡೆ ಅನುದಾನ ಮತ್ತು ನಿರ್ವಹಣೆ ಸಮಸ್ಯೆಯಿಂದಾಗಿ ಮುಚ್ಚಿವೆ. ಹೊಸಪೇಟೆ ಪಟ್ಟಣದ ಮೂರು ಕ್ಯಾಂಟೀನ್‌ಗಳು ಕೆಲವು ತಿಂಗಳು ಸ್ಥಗಿತಗೊಂಡಿದ್ದವು. ಮತ್ತೆ ಆರಂಭವಾಗಿದ್ದರೂ ಜನರಿಂದಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಜಾಗದ ನೆಪ ಹೇಳಿ ಮೂರು ಕ್ಯಾಂಟೀನ್‌ಗಳನ್ನು ರದ್ದುಪಡಿಸಿದ್ದು, ಅಧಿಕಾರಿಗಳ ಬಡವರ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಹುಬ್ಬಳ್ಳಿಯ ಸಂತೋಷ ಭಜಂತ್ರಿ ಬೇಸರ ವ್ಯಕ್ತಪಡಿಸಿದರು.

‘ಕ್ಯಾಂಟೀನ್‌ನಲ್ಲಿ ನೀಡುವ ಉಪಾಹಾರ, ಊಟ ರುಚಿಯಾಗಿದೆ. ಇದೇ ರೀತಿ, ಜಿಲ್ಲೆಯಾದ್ಯಂತ ಎಲ್ಲ ಕ್ಯಾಂಟೀನ್‌ಗಳನ್ನು ಆರಂಭಿಸಿ ನಿರ್ವಹಣೆ ಮಾಡಬೇಕು’ ಎಂದು ಹುಸೇನಸಾಬ್‌ ಮದ್ಲೂರ ಹೇಳುತ್ತಾರೆ.

‘ಗುತ್ತಿಗೆದಾರರು ಕ್ಯಾಂಟೀನ್‌ ನಡೆಸಲು ನಿರ್ಲಕ್ಷ್ಯ ವಹಿಸಿದರು. ಇದರಿಂದ ಕ್ಯಾಂಟೀನ್‌ಗೆ ಬೀಗ ಬಿದ್ದಿದೆ. ಕೆಲಸ ಮಾಡುತ್ತಿದ್ದ ಐವರು ಸಿಬ್ಬಂದಿಗೆ 6 ತಿಂಗಳ ಸಂಬಳವನ್ನೇ ಕೊಟ್ಟಿಲ್ಲ. ನಾವು ನಿರುದ್ಯೋಗಿಗಳಾಗಿದ್ದೇವೆ’ ಎಂದು ಹಿರೇಕೆರೂರಿನ ಕ್ಯಾಂಟೀನ್‌ ಸಿಬ್ಬಂದಿ ಸಮಸ್ಯೆ ತೋಡಿಕೊಂಡರು.

‘ಅನುದಾನ ಕೊರತೆಯಿಂದ ಕ್ಯಾಂಟೀನ್‌ಗಳು ಸ್ಥಗಿತಗೊಳ್ಳದಂತೆ ಸರ್ಕಾರ ಪ್ರತಿ ವರ್ಷ ಕ್ಯಾಂಟೀನ್‌ಗಳ ನಿರ್ವಹಣೆಗಾಗಿ ಅನುದಾನ ಮೀಸಲಿಡಬೇಕು. ಬಡವರ ಹಸಿವು ನೀಗಿಸುವ ಕ್ಯಾಂಟೀನ್‌ಗಳಿಗೆ ಬೀಗ ಹಾಕುವುದು ಸರಿಯಲ್ಲ’ ಎಂದು ವಿಜಯಪುರದ ಶಿಕ್ಷಕ ಬಸವರಾಜ ಹಿರೇಮಠ ಹೇಳುತ್ತಾರೆ.

ಅವ್ಯವಸ್ಥೆಯ ಆಗರ: ತುಮಕೂರು ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳು ಕೇವಲ ನಾಮಕಾವಸ್ತೆ ಎಂಬಂತೆ ನಡೆಯುತ್ತಿದ್ದು, ಅವ್ಯವಸ್ಥೆಯ ಆಗರವಾಗಿದ್ದು, ಬಹುತೇಕ ಕ್ಯಾಂಟೀನ್‌ಗಳು ಜನರಿಗೆ ಉತ್ತಮ ಆಹಾರ ಪೂರೈಸುತ್ತಿಲ್ಲ. ಅಡುಗೆ ಕೋಣೆಗಳಲ್ಲಿ ಸ್ವಚ್ಛತೆ ಮಾಯವಾಗಿದೆ. ಸಿಬ್ಬಂದಿಗೆ ವೇತನ ನೀಡುತ್ತಿಲ್ಲ ಎಂಬ ಕಾರಣಕ್ಕೆ ಕುಣಿಗಲ್‌ನಲ್ಲಿರುವ ಕ್ಯಾಂಟೀನ್‌ ಮುಚ್ಚಲಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಹಣ ಬಿಡುಗಡೆ ಮಾಡಿ ಮತ್ತೆ ಕ್ಯಾಂಟೀನ್‌ ಆರಂಭಿಸಲಾಯಿತು.

ಕೋಲಾರದ ಹಳೆ ಬಸ್‌ ನಿಲ್ದಾಣದ ಬಳಿ ಇರುವ ನಗರದ ಏಕೈಕ ಇಂದಿರಾ ಕ್ಯಾಂಟೀನ್‌ ಅನ್ನು ಸದ್ಯಕ್ಕೆ ಮುಚ್ಚಲಾಗಿದೆ. ನಗರಸಭೆಯು ಗುತ್ತಿಗೆದಾರರಿಗೆ ಬಿಲ್‌ ಪಾವತಿಸದ ಕಾರಣ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ‘ಇಂದಿರಾ ಕ್ಯಾಂಟೀನ್‌ ಮುಚ್ಚಿಲ್ಲ. ಊಟ–ಉಪಾಹಾರ ವಿತರಣೆ ಆಗದಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ನಗರಸಭೆ ಪೌರಾಯುಕ್ತ ಶಿವಾನಂದ ಪ್ರತಿಕ್ರಿಯಿಸಿದರು.

ರಾಮನಗರ ಜಿಲ್ಲೆಯ ಮಾಗಡಿ ಕ್ಯಾಂಟೀನ್‌ನಲ್ಲಿ ಗುತ್ತಿಗೆದಾರರಿಗೆ ಸ್ಥಳೀಯ ಪುರಸಭೆಯಿಂದ ಕಳೆದ ಎಂಟು ತಿಂಗಳ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ, 22 ದಿನದಿಂದ ಆಹಾರ ಪೂರೈಕೆ ಸ್ಥಗಿತವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಇಂದಿರಾ ಕ್ಯಾಂಟೀನ್‌ಗಳು ಬಾಗಿಲು ಮುಚ್ಚಿವೆ. ಚಿಕ್ಕಬಳ್ಳಾಪುರ ಕ್ಯಾಂಟೀನ್‌ಗೆ ಆಗೊಮ್ಮೆ ಈಗೊಮ್ಮೆ ಬೀಗ ಹಾಕಲಾಗುತ್ತದೆ. ಬಾಗೇಪಲ್ಲಿಯಲ್ಲಿ ಕ್ಯಾಂಟೀನ್ ಆರಂಭವಾಗಿಯೇ ಇಲ್ಲ. ಕೆಲಸ ಮಾಡುವ ಸಿಬ್ಬಂದಿಗೆ ಬಹುತೇಕ ಕಡೆಗಳಲ್ಲಿ ವೇತನವನ್ನೇ ನೀಡಿಲ್ಲ.

ಸದುದ್ದೇಶದಿಂದ ಆರಂಭಗೊಂಡ ಈ ಯೋಜನೆ ಸರ್ಕಾರದ ನಿರ್ಲಕ್ಷ್ಯ, ಪಕ್ಷ ರಾಜಕಾರಣದಿಂದಾಗಿ ನಿಧಾನಕ್ಕೆ ಸ್ಥಗಿತಗೊಳ್ಳುವ ಹಾದಿಯಲ್ಲಿದೆ. ಪಕ್ಕದ ತಮಿಳುನಾಡಿನಲ್ಲಿ ಜೆ. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರ ಆರಂಭಿಸಿದ ‘ಅಮ್ಮ’ ಕ್ಯಾಂಟೀನ್‌ ಅನ್ನು ಕಡು ವಿರೋಧಿಯಾದ ಡಿಎಂಕೆ ಸರ್ಕಾರ ಕೂಡ ನಿರ್ವಹಿಸಿಕೊಂಡು ಹೋಗುತ್ತಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಇಂತಹ ದೊಡ್ಡ ಮನಸ್ಸು ಆಳುವವರಲ್ಲಿ ಕಾಣಿಸುತ್ತಿಲ್ಲ.

‘ಬಡವರ ಶಾಪ ತಟ್ಟಲಿದೆ’
‘ಹಸಿವು ಮುಕ್ತ ಕರ್ನಾಟಕ ನನ್ನ ಸಂಕಲ್ಪ ಮತ್ತು ಬದ್ಧತೆ. ಶರಣರ ದಾಸೋಹ ಪರಂಪರೆಯನ್ನು ಸರ್ಕಾರದ ಕಾರ್ಯಕ್ರಮವನ್ನಾಗಿಸಿದೆ. ಬಡವರಿಗೆ ಕಡಿಮೆ ದರದಲ್ಲಿ ಊಟ, ಉಪಾಹಾರ ಸೌಲಭ್ಯ ಒದಗಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರ ಇಂದಿರಾ ಕ್ಯಾಂಟೀನ್ ಆರಂಭಿಸಿತ್ತು. ಇದರಿಂದ ಲಕ್ಷಾಂತರ ಮಂದಿಗೆ ಅನುಕೂಲವಾಗುತ್ತಿದೆ. ಇಂದಿರಾ ಕ್ಯಾಂಟೀನ್ ತೆರೆದದ್ದು ಒಂದು ಜಾತಿ, ಒಂದು ಧರ್ಮದವರಿಗಲ್ಲ. ಎಲ್ಲಾ ಜಾತಿ-ಧರ್ಮದಲ್ಲಿರುವ ಬಡವರ ಹಸಿವನ್ನು ನೀಗಿಸುವ ತಾಯ್ತನದಿಂದ ನಾವು ಆರಂಭಿಸಿದೆವು. ಬಡವರು ಎರಡು ಹೊತ್ತು ಹೊಟ್ಟೆ ತುಂಬ ಊಟ ಮಾಡುವುದನ್ನೂ ಸಹಿಸದ ಬಿಜೆಪಿ ಸರ್ಕಾರ ಈ ಕ್ಯಾಂಟೀನ್‌ಗಳ ಕುತ್ತಿಗೆ ಹಿಚುಕುತ್ತಿದೆ. ಈ ಮೂಲಕ ಬಡವರ ಹಸಿದ ಹೊಟ್ಟೆಗೆ ಒದೆಯುತ್ತಿದೆ. ಇದು ಪಾಪದ ಕೆಲಸ. ಈ ಪಾಪ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲೇ ಆಗುತ್ತಿರುವುದು ಬೇಸರದ ಸಂಗತಿ. ಬಿಜೆಪಿಗೆ ಹಸಿದ ಜೀವಗಳ, ಬಡವರ ಶಾಪ ತಟ್ಟುತ್ತದೆ.
–ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

**

‘ಅಮ್ಮ’ ಕ್ಯಾಂಟೀನ್‌ ಮುಂದುವರಿಸಿದ ಡಿಎಂಕೆ ಸರ್ಕಾರ
ಅದ್ದೂರಿ ಪ್ರಚಾರದೊಂದಿಗೆ ತಮಿಳುನಾಡಿನಲ್ಲಿ 2013ರಲ್ಲಿ ಎಐಎಡಿಎಂಕೆ ಸರ್ಕಾರ ಆರಂಭಿಸಿದ್ದ ‘ಅಮ್ಮ’ ಕ್ಯಾಂಟೀನ್‌ಗಳನ್ನು ಡಿಎಂಕೆ ಸರ್ಕಾರವೂ ಮುಂದುವರಿಸಿ, ಅಗತ್ಯವಿರುವಷ್ಟು ಅನುದಾನ ನೀಡುತ್ತಿದೆ.

ಅಂದು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಚೆನ್ನೈನಲ್ಲಿ ಈ ಕ್ಯಾಂಟೀನ್‌ಗಳಿಗೆ ಚಾಲನೆ ನೀಡಿದ್ದರು. ಆರಂಭದಲ್ಲಿ ಈ ಕ್ಯಾಂಟಿನ್‌ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ನಂತರ ಚೆನ್ನೈ ಮಹಾನಗರ ಪಾಲಿಕೆ ಉಸ್ತುವಾರಿ ವಹಿಸಿಕೊಂಡಿತು.

ಈಗ ಪಾಲಿಕೆಯು 400 ಕ್ಯಾಂಟೀನ್‌ಗಳ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಕೋವಿಡ್‌ ಸಂದರ್ಭದಲ್ಲಿ ಈ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಆಹಾರ ನೀಡಿದ್ದರಿಂದ ಬಡವರಿಗೆ ಅನುಕೂಲವಾಯಿತು.

ಜಯಲಲಿತಾ ಅವರ ನಿಧನದ ನಂತರ, ‘ಅಮ್ಮ’ ಕ್ಯಾಂಟೀನ್‌ಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಮತ್ತು ಆಹಾರದ ಗುಣಮಟ್ಟ ಕಳಪೆಯಾಗಿದೆ ಎಂದು ದೂರಲಾಗುತ್ತಿತ್ತು. ಎಐಎಡಿಎಂಕೆ ಸರ್ಕಾರ ಇಂತಹ ಆರೋಪಗಳನ್ನು ತಳ್ಳಿಹಾಕಿತ್ತು. ಬಜೆಟ್‌ನಲ್ಲಿ ಕ್ಯಾಂಟೀನ್‌ಗಳ ನಿರ್ವಹಣೆಗೆ ಅನುದಾನವನ್ನು ಹೆಚ್ಚಿಸಿತ್ತು. 2021ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದ ಬಂತರ ಕ್ಯಾಂಟೀನ್‌ಗಳನ್ನು ಮುಚ್ಚುತ್ತದೆ ಎಂದೇ ಹೇಳಲಾಗುತ್ತಿತ್ತು. ಆದರೆ, ಡಿಎಂಕೆ ಸರ್ಕಾರವೂ ಕ್ಯಾಂಟೀನ್‌ಗಳನ್ನು ನಿರ್ವಹಿಸುತ್ತಿದೆ.

ಚೆನ್ನೈನಲ್ಲಿ 31 ಕ್ಯಾಂಟೀನ್‌ಗಳಲ್ಲಿ ಕಡಿಮೆ ಜನರು ಆಹಾರ ಸೇವಿಸುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ಗುರುತಿಸಿದೆ. ಈ ಕ್ಯಾಂಟೀನ್‌ಗಳನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲು ಉದ್ದೇಶಿಸಿದೆ. ಮೆನುನಲ್ಲಿ ಕೆಲವು ಬದಲಾವಣೆಗಳನ್ನು ತರಲು ಮಹಾನಗರ ಪಾಲಿಕೆ ಉದ್ದೇಶಿಸಿದೆ.

ಈ ಕ್ಯಾಂಟೀನ್‌ಗಳಲ್ಲಿ ಕೇವಲ ₹1ಕ್ಕೆ ಇಡ್ಲಿ, ₹5ಕ್ಕೆ ಅನ್ನ ಸಾಂಬಾರ್‌, ₹5ಕ್ಕೆ ಪೊಂಗಲ್‌, ₹3ಕ್ಕೆ ಮೊಸರನ್ನ ಮತ್ತು ₹3ಕ್ಕೆ ಎರಡು ಚಪಾತಿ ನೀಡಲಾಗುತ್ತಿದೆ.

**

‘ಒಳ್ಳೆಯ ಆಹಾರ ಸಿಗುತ್ತಿಲ್ಲ’
ಆರಂಭದ ದಿನಗಳಲ್ಲಿ ಗುಣಮಟ್ಟದ ಆಹಾರ ಕೊಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಸ್ವಚ್ಛತೆ ಕಡಿಮೆಯಾಗಿದೆ. ಒಳ್ಳೆಯ ಆಹಾರ ಸಿಗುತ್ತಿಲ್ಲ. ಊಟ ಮತ್ತು ತಿಂಡಿಯ ಪಟ್ಟಿ ಕೇವಲ ತೋರಿಕೆಗಾಗಿ ಹಾಕಿದ್ದಾರೆ. ಅದರಂತೆ ಅಡುಗೆ ಮಾಡುತ್ತಿಲ್ಲ. ಪ್ರತಿ ನಿತ್ಯ ನೂರಾರು ಸಂಖ್ಯೆಯ ಬಡವರು ಬರುವ ಕ್ಯಾಂಟೀನ್‌ಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕಿದೆ.
–ಗಂಗಾಧರಪ್ಪ, ಗುಬ್ಬಿ

**

‘ದರ್ಶಿನಿಯತ್ತ ಹೋಗಬೇಕು’
ನಾನು ಬೆಳಿಗ್ಗೆ ಆರು ಗಂಟೆಗೆ ಹೂ ಮಾರಾಟಕ್ಕೆ ಬರುತ್ತೇನೆ. ಮನೆಗೆ ತೆರಳುವಷ್ಟರಲ್ಲಿ ರಾತ್ರಿಯಾಗಿರುತ್ತದೆ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ ಇಂದಿರಾ ಕ್ಯಾಂಟೀನ್‌ನಲ್ಲಿ ₹ 25ಕ್ಕೆ ಮುಗಿಯುತ್ತಿತ್ತು. ಈಗ ಕ್ಯಾಂಟೀನ್‌ ತೆರೆಯದಿರುವುದರಿಂದ ಎರಡು ಹೊತ್ತಿನ ಆಹಾರಕ್ಕೆ ಕನಿಷ್ಠ ₹ 60 ಖರ್ಚಾಗುತ್ತಿದೆ. ದರ್ಶಿನಿಗಳನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ.
–ಪ್ರೇಮಾ, ಹೂ ವ್ಯಾಪಾರಿ, ಕೋಲಾರ

**

‘ಶುಚಿ–ರುಚಿ ಎರಡೂ ಇಲ್ಲ’
ರಾಮನಗರದ ಸ್ಟೇಷನ್‌ ರಸ್ತೆಯಲ್ಲಿ ಇರುವ ಕ್ಯಾಂಟೀನ್‌ನಲ್ಲಿ ಕೆಲವೊಮ್ಮೆ ಬೆಳಿಗ್ಗೆಯೇ ಬೇಗ ಉಪಾಹಾರ ಖಾಲಿಯಾಗಿರುತ್ತದೆ. ಒಮ್ಮೆ ರುಚಿ ಚೆನ್ನಾಗಿದ್ದರೆ, ಇನ್ನೊಮ್ಮೆ ತಿನ್ನುವುದಕ್ಕೆ ಕಷ್ಟವಾಗುತ್ತದೆ. ಈ ಮೊದಲಿನಂತೆ ರುಚಿ–ಶುಚಿ ಇಲ್ಲ. ಈಗಲೂ ಕಾರ್ಮಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
–ಕುಮಾರ್‌, ರಾಮನಗರ

**
‘ಯಾವ ಕಾರಣಕ್ಕೂ ಮುಚ್ಚಬಾರದು’
ಹಸಿದವರಿಗೆ ಕಡಿಮೆ ದರದಲ್ಲಿ ಉಪಾಹಾರ ಮತ್ತು ಊಟ ಒದಗಿಸುವ ಇಂದಿರಾ ಕ್ಯಾಂಟೀನ್‌ಗಳಿಂದ ಎಷ್ಟೋ ಜನ ಹಸಿವಿನಿಂದ ಇರುವುದು ತಪ್ಪಿದೆ. ಅಂತಹ ಕ್ಯಾಂಟೀನ್‌ಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಇನ್ನೂ ಆರಂಭವಾಗದ ಕಡೆ ಕೂಡಲೇ ತೆರೆಯಲು ಕ್ರಮ ಕೈಗೊಳ್ಳಬೇಕು.
–ಮಂಜುನಾಥ ಕೊಂಡಪಲ್ಲಿ, ಸಾಮಾಜಿಕ ಕಾರ್ಯಕರ್ತ, ಹುಬ್ಬಳ್ಳಿ

**
‘ಹಸಿವು ನೀಗಿಸುವ ಕೇಂದ್ರ’
ವಾರದಲ್ಲಿ ಕನಿಷ್ಠ ನಾಲ್ಕು ದಿನ ಇಂದಿರಾ ಕ್ಯಾಂಟೀನ್‍ನಲ್ಲಿ ಊಟ ಮಾಡುತ್ತಿದ್ದೇನೆ. ಕಡಿಮೆ ದರದಲ್ಲಿ ಹೊಟ್ಟೆ ತುಂಬ ಆಹಾರ ಸಿಗುತ್ತಿದೆ. ಕ್ಯಾಂಟೀನ್‌ಗಳು ನಿಜಕ್ಕೂ ಬಡವರ ಹಸಿವು ನೀಗಿಸುವ ಕೇಂದ್ರಗಳಾಗಿವೆ.
–ಅಮರ ಬೇವಿನಮರದ, ಆಟೊ ಚಾಲಕ, ಕಾರವಾರ

**

‘ತರಹೇವಾರಿ ಆಹಾರ ಇರಲಿ’
ಇಂದಿರಾ ಕ್ಯಾಂಟೀನ್‌ನಲ್ಲಿ ಕಡಿಮೆ ಹಣಕ್ಕೆ ಊಟ ದೊರೆಯುತ್ತದೆ. ಆದರೆ, ನಿತ್ಯ ಬೆಳಿಗ್ಗೆ ಪಲಾವ್‌ ಇರುತ್ತದೆ. ಇದನ್ನು ದಿನವೂ ತಿನ್ನಲು ಆಗುವುದಿಲ್ಲ. ತರಹೇವಾರಿ ಆಹಾರ ತಯಾರಿಸಿದರೆ ಅನುಕೂಲವಾಗುತ್ತದೆ. ಸ್ವಚ್ಛತೆಗೆ ಆದ್ಯತೆ ಕೊಡಬೇಕು.
–ಪ್ರವೀಣ ಕುಮಾರ್, ವಿದ್ಯಾರ್ಥಿ, ಹುಣಸೇಹಾಳ, ಯಲಬುರ್ಗಾ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT