ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಅನುದಾನ: ಸ್ವಾಭಿಮಾನದ ಬದುಕಿಗೆ ವಿಘ್ನ

ಅಂಗವಿಕಲರ ಅನುದಾನ ಬಳಕೆಯ ಲೆಕ್ಕವೂ ಇಲ್ಲ, ಪರಿಶೀಲನೆಯೂ ಇಲ್ಲ
Last Updated 6 ಫೆಬ್ರುವರಿ 2021, 20:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅನುಕಂಪದ ನೋಟ, ದಯಾಭಿಕ್ಷೆಯ ಬದಲು, ಸ್ವಾವಲಂಬಿ– ಸ್ವಾಭಿಮಾನದ ಬದುಕು ಸಾಗಿಸಬೇಕು ಎಂಬ ಅಂಗವಿಕಲರ ಕನಸಿಗೆ ನೂರೆಂಟು ವಿಘ್ನಗಳಿವೆ. ಅಂಗವಿಕಲರ ರಕ್ಷಣೆಗೆ ಬೆಂಗಾವಲಾಗಿ ನಿಲ್ಲಬೇಕಿದ್ದ ಕುಟುಂಬದ ಸದಸ್ಯರಿಂದ ಹಿಡಿದು ವಿಧಾನಸೌಧದವರೆಗೂ ಒಂದಿಲ್ಲೊಂದು ಅಡೆ–ತಡೆ ಎದುರಾಗುತ್ತಲೇ ಇರುತ್ತದೆ.

ಅಂಗವಿಕಲ ಪ್ರಮಾಣಪತ್ರ ಪಡೆ ಯಲು, ಪಿಂಚಣಿ, ಗೌರವ ಧನದ ಮಂಜೂರಾತಿ, ಶಾಲೆಗಳಿಗೆ ಅನುದಾನ ಬಿಡುಗಡೆ, ಅಂಗವಿಕಲ ಕಲ್ಯಾಣಕ್ಕಾಗಿ ದುಡಿಯುವ ಸಂಸ್ಥೆಗಳು ಅನುದಾನ ಪಡೆಯಲು ಟೇಬಲ್‌ನಿಂದ ಟೇಬಲ್‌ಗೆ ಅಲೆದಾಡಬೇಕಾದ ಸ್ಥಿತಿ ಇದೆ. ಕಪ್ಪ ಕಾಣಿಕೆ ಸಲ್ಲಿಸುವವರೆಗೂ ಅನುದಾನ ದೊರೆಯುವುದಿಲ್ಲ ಎನ್ನುವ ಸ್ಥಿತಿ ಇದೆ.

ಪೋಷಕರು ಅನಕ್ಷರಸ್ಥರಾಗಿರುವುದು, ಮಾಹಿತಿ ಕೊರತೆ, ಅಧಿಕಾರಿಗಳು ಹುಟ್ಟುಹಾಕಿರುವ ತಡೆಗೋಡೆಯಿಂದಾಗಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ದೊರಕುತ್ತಿಲ್ಲ. ಉಳಿದ ಇಲಾಖೆಗಳಲ್ಲಿಯೂ ಅಂಗವಿಕಲರಿಗೆ ಶೇ5 ರಷ್ಟು ಕಲ್ಯಾಣ ನಿಧಿ ಇದೆ ಎಂಬ ಮಾಹಿತಿ ಅಂಗವಿಕಲರಿಗಷ್ಟೇ ಅಲ್ಲ, ಕೆಲ ಅಧಿಕಾರಿಗಳಿಗೂ ಗೊತ್ತಿಲ್ಲ ಎನ್ನುತ್ತಾರೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗಳು.

ಈ ಇಲಾಖೆಗೆ ವರ್ಷಕ್ಕೆ ₹121 ಕೋಟಿ ಬಿಡುಗಡೆಯಾಗುತ್ತದೆ, ಈ ಅನುದಾನ ಪರಿಶೀಲನೆಯಾಗುತ್ತದೆ. ಜಿಲ್ಲಾ ಪಂಚಾಯ್ತಿಯಡಿ ಬರುವ 33 ಇಲಾಖೆಗಳ ₹1,000 ದಿಂದ 1,500 ಕೋಟಿಗೂ ಹೆಚ್ಚು ಅನುದಾನ ಬಳಕೆಯ ಲೆಕ್ಕ ಕೇಳುವವರಿಲ್ಲದಂತಾಗಿದೆ.

ಅಂಗವಿಕಲರ ಭವಿಷ್ಯ ರೂಪಿಸುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು. ಆದರೆ, ಅಂಗವಿಕಲ ಮಕ್ಕಳಿಗೆ ಬೋಧಿಸಲು ಅವಶ್ಯವಿರುವ ವಿಶೇಷ ಶಿಕ್ಷಕರ ಕೊರತೆ ಇದೆ. ಬಹುತೇಕ ಶಾಲೆಗಳು ಜಿಲ್ಲಾ ಕೇಂದ್ರಗಳಿಗೆ ಸೀಮಿತವಾಗಿವೆ. ಹಾಗಾಗಿ, ಗ್ರಾಮೀಣ ಭಾಗದ ಬಹಳಷ್ಟು ಮಕ್ಕಳು ಸಾಮಾನ್ಯ ಶಾಲೆಗಳಿಗೆ ಹೋಗುತ್ತಾರೆ. ಅಲ್ಲಿ ವಿಶೇಷ ಶಿಕ್ಷಕರಿಲ್ಲ.

ಅಂಗವಿಕಲರ ಪುನರ್ವಸತಿಯೂ ಬಹಳ ಮುಖ್ಯ. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪುನರ್ವಸತಿ ಕೇಂದ್ರ ತೆರೆಯಬೇಕು ಎಂದು ಅಂಗವಿಕಲರ ಅಧಿನಿಯಮ ಆಯುಕ್ತ ಎಸ್‌.ವಿ. ಬಸವರಾಜು ಸಲಹೆ ಮಾಡಿದ್ದರು. ಇಲ್ಲಿಯವರೆಗೆ 16 ಜಿಲ್ಲೆಗಳಲ್ಲಿ ಮಾತ್ರ ಕೇಂದ್ರ ತೆರೆಯಲಾಗಿದೆ.

ನಿಲ್ಲದ ದೌರ್ಜನ್ಯ: ಪಿಂಚಣಿ ನೀಡುತ್ತಿಲ್ಲ, ಉದ್ಯೋಗದಲ್ಲಿ ಮೀಸಲಾತಿ ಪಾಲನೆ ಮಾಡುತ್ತಿಲ್ಲ, ಆಸ್ತಿಯಲ್ಲಿ ಪಾಲು ನೀಡಲು ಮನೆಯವರು ನಿರಾಕರಿಸುತ್ತಿದ್ದಾರೆ. ಕುಟುಂಬದವರೇ ದೌರ್ಜನ್ಯ ಮಾಡುತ್ತಿ ದ್ದಾರೆ. ಕಚೇರಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಂಗವಿಕಲ ಅಧಿನಿಯಮ ಆಯುಕ್ತರ ಮುಂದೆ ಪ್ರತಿವರ್ಷ ಸಾವಿರಾರು ದೂರುಗಳು ದಾಖಲಾಗುತ್ತಿವೆ.

ಅನರ್ಹರ ಕಾಟ: ಉದ್ಯೋಗ, ವಿವಿಧ ಸೌಲಭ್ಯ ಪಡೆಯಲು ಅನರ್ಹರೂ ಅಂಗವಿಕಲ ಪ್ರಮಾಣಪತ್ರ ಪಡೆದಿರುವ ದೂರುಗಳು ಅಂಗವಿಕಲರ ಅಧಿನಿ ಯಮ ಆಯುಕ್ತರಿಗೆ ಬರುತ್ತಿವೆ. ಇದ ರಲ್ಲಿ ವ್ಯವಸ್ಥಿತ ದೊಡ್ಡ ಜಾಲವೇ ಇದೆ ಎನ್ನುವುದು ಅಂಗವಿಕಲರ ದೂರು.

ದೂರು ನೀಡಲು ಕಚೇರಿಗಳಿಗೆ ಅಲೆದಾಡಲು ಆಗದಿರುವುದು, ಕುಟುಂಬ ಸದಸ್ಯರನ್ನು ಎದುರು ಹಾಕಿ
ಕೊಂಡು ಜೀವನದಲ್ಲಿ ಎದುರಿಸಬೇಕಾದ ಸಂಕಷ್ಟ ತಪ್ಪಿಸಿಕೊಳ್ಳುವುದು, ಕಾನೂ ನಿನ ಜ್ಞಾನದ ಕೊರತೆ ಸೇರಿದಂತೆ ಹಲವು ಕಾರಣಗಳಿಗಾಗಿ ದೂರು ದಾಖಲಿಸದೇ ದೌರ್ಜನ್ಯ ಸಹಿಸಿಕೊಂಡು ಜೀವನ ಮುನ್ನಡೆಸುವವರ ಸಂಖ್ಯೆ ದೊಡ್ಡದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT