ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ಯಾನಿಂಗ್ ‘ವಧಾ’ ಕೇಂದ್ರಗಳು | ಲಿಂಗ ಪತ್ತೆ, ಹೆಣ್ಣುಭ್ರೂಣ ಹತ್ಯೆ ಅವ್ಯಾಹತ

ಜಾಗೃತದಳ ವಿಫಲ l ರಾಜಧಾನಿಗೆ ಮೊದಲ ಸ್ಥಾನ
Last Updated 13 ಜುಲೈ 2019, 20:00 IST
ಅಕ್ಷರ ಗಾತ್ರ

ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ರಾಜ್ಯಾದ್ಯಂತ ಅವ್ಯಾಹತವಾಗಿ ನಡೆಯುತ್ತಿದೆ. ಧನದಾಹಿಗಳು ಸ್ಕ್ಯಾನಿಂಗ್ ಸೆಂಟರ್ ಗಳನ್ನು ‘ಎಟಿಎಂ’ಗಳಂತೆ ಮಾರ್ಪಾಡು ಮಾಡಿಕೊಂಡಿದ್ದಾರೆ. ರಾಜಾರೋಷವಾಗಿ, ಕಾನೂನು ಉಲ್ಲಂಘನೆ ಆಗುತ್ತಿದ್ದರೂ ಸಂಬಂಧಿಸಿದವರು ತಮಗೂ ಅದಕ್ಕೂ ಸಂಬಂಧ ವಿಲ್ಲದಂತಿದ್ದಾರೆ. ಇಂತಹ ಅಮಾನವೀಯ ವರ್ತನೆ ಸುತ್ತ ಈ ವಾರದ ಒಳನೋಟ...

ಬೆಂಗಳೂರು: ‘ಈ ಬೆಲ್ಲ ತಿನ್ನು, ಸ್ವರ್ಗಕ್ಕೆ ಹೋಗು, ವಾಪಸ್ ಬರಬೇಡ... ಅಲ್ಲಿಂದ ನಿನ್ನ ತಮ್ಮನನ್ನು ಕಳಿಸು..’

ಹಿಂದೆ ಹೆಣ್ಣುಶಿಶುಗಳನ್ನು ಹತ್ಯೆ ಮಾಡಲು ಹಾಡುತ್ತಿದ್ದ ಜೋಗುಳವಿದು. ಆಗ ತಾನೇ ಹುಟ್ಟಿದ ಮಗು ಪುಟ್ಟಕಂಗಳಿಂದ ಜಗತ್ತನ್ನು ನೋಡುವ ಮುನ್ನ ಬೆಲ್ಲದ ಚೂರು ತಿನ್ನಿಸಿ, ಸಿಹಿಯಾಗಿ ಕೊಲ್ಲುತ್ತಿದ್ದ ಬಗೆಯಿದು. ಅದಾಗಿ ದಶಕಗಳೇ ಉರುಳಿ, ಗಂಡಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣು ಸಾಧನೆ ಮಾಡಿ ಸೈ ಅನ್ನಿಸಿಕೊಂಡಿದ್ದರೂ ಹೆಣ್ಣುಶಿಶು ಹತ್ಯೆ ನಿಂತಿಲ್ಲ. ಕೊಲ್ಲುವ ವಿಧಾನ ಮಾತ್ರ ಬದಲಾಗಿದೆಯಷ್ಟೇ...!

ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಕುಸಿಯು ತ್ತಿರುವ ಲಿಂಗಾನುಪಾತ ಗಮನಿಸಿದರೆ, ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣುಭ್ರೂಣ ಹತ್ಯೆ ಕಾಯ್ದೆ (ಪಿಸಿಪಿಎನ್‌ಡಿಟಿ)ಕಟ್ಟುನಿಟ್ಟಾಗಿ ಜಾರಿಗೊಂಡಿಲ್ಲ ಎಂಬುದು ಸ್ಪಷ್ಟ. ಹಿಂದೆ, ಹೆಣ್ಣುಶಿಶು ಹುಟ್ಟಿದ ಮೇಲೆ ಹತ್ಯೆ ಆಗುತ್ತಿದ್ದವು. ಸ್ಕ್ಯಾನಿಂಗ್ ತಂತ್ರಜ್ಞಾನ ಬಂದ ನಂತರ ಹೆಣ್ಣುಭ್ರೂಣಗಳು ಗರ್ಭದಲ್ಲೇ ಹತ್ಯೆಗೊಳಗಾಗುತ್ತಿವೆ. ತಾಯ ಗರ್ಭವೂ ಹೆಣ್ಣುಮಗುವಿಗೆ ಈಗ ಸುರಕ್ಷಿತವಾಗಿ ಉಳಿದಿಲ್ಲ.

ಈ ಕೃತ್ಯದಲ್ಲಿ ಭಾಗಿಯಾದವರು, ಪ್ರಚೋದನೆ ನೀಡಿದವರು ಶಿಕ್ಷೆ ಅನುಭವಿಸದೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಕಾನೂನುಬಾಹಿರವಾಗಿ ಲಿಂಗಪತ್ತೆ, ಭ್ರೂಣಹತ್ಯೆಯನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಆರು ವರ್ಷದೊಳಗಿನ ಮಕ್ಕಳ ಲಿಂಗಾನುಪಾತ ಅಂಕಿ ಅಂಶಗಳೇ ಇದಕ್ಕೆ ಸಾಕ್ಷಿಯಾಗಿದೆ. 1971ರಲ್ಲಿ ದೇಶದಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತ (ಸಿಎಸ್‌ಆರ್) 964 ಇದ್ದದ್ದು, 2011ರಲ್ಲಿ 918ಕ್ಕೆ ಇಳಿದಿದೆ. ಇತ್ತೀಚಿನ ರಾಷ್ಟ್ರೀಯ ಕುಟುಂಬ ಸಮೀಕ್ಷಾ ವರದಿ ಪ್ರಕಾರ, ದೇಶದಲ್ಲಿ ಪ್ರತಿ ಸಾವಿರ ಪುರುಷರಿಗೆ 910 ಹೆಣ್ಣುಮಕ್ಕಳಿದ್ದಾರೆ. 2001ರಲ್ಲಿ 946ರಷ್ಟಿದ್ದ ಈ ಅಂತರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ.

‘ಪ್ರಸವಪೂರ್ವ ಲಿಂಗಪತ್ತೆ ತಂತ್ರಜ್ಞಾನ ನಿಯಂತ್ರಣ ಹಾಗೂ ದುರ್ಬಳಕೆ ತಡೆಕಾಯ್ದೆ’ 1996ರಲ್ಲೇ ಜಾರಿಗೆ ಬಂದಿದೆ. 2003ರಲ್ಲಿ ಅದಕ್ಕೆ ತಿದ್ದುಪಡಿ ತಂದು ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣುಭ್ರೂಣ ಹತ್ಯೆಯನ್ನು ನಿಷೇಧಿಸಲಾಗಿದೆ. ಇದಕ್ಕಾಗಿಯೇ ಜಿಲ್ಲಾಮಟ್ಟದಲ್ಲಿ ಜಾಗೃತದಳ ರಚಿಸಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಸ್ಕ್ಯಾನಿಂಗ್ ಸೆಂಟರ್‌ ಮಾಲೀಕರು, ಕೆಲ ವೈದ್ಯರ ಧನದಾಹಿ ಧೋರಣೆ ಮತ್ತು ಪೋಷಕರ ಗಂಡುಮಗುವಿನ ಮೋಹದಿಂದ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಲೇ ಇವೆ. ಅಕಸ್ಮಾತ್ ಜಾಗೃತ ದಳದ ಕಣ್ಣಿಗೆ ಬಿದ್ದರೂ ಸಾಕ್ಷ್ಯಾಧಾರ ಕೊರತೆಯಿಂದ ನ್ಯಾಯಾಲಯದಲ್ಲಿ ಶಿಕ್ಷೆಯಿಂದ ಪಾರಾಗುತ್ತಿದ್ದಾರೆ.

ಮಂಡ್ಯ, ಹೈದರಾಬಾದ್ ಕರ್ನಾಟಕ ಭಾಗದ ಕೆಲ ಜಿಲ್ಲೆಗಳು ಮತ್ತು ಲಾತೂರ್ ಗಡಿ ಪ್ರದೇಶಗಳಲ್ಲಿ ಲಿಂಗಪತ್ತೆ ಮತ್ತು ಹೆಣ್ಣುಭ್ರೂಣ ಹತ್ಯೆ ವ್ಯಾಪಕವಾಗಿ ನಡೆಯುತ್ತಿದೆ. ಬುದ್ಧಿವಂತರ ಜಿಲ್ಲೆ ಖ್ಯಾತಿಯ ದಕ್ಷಿಣ ಕನ್ನಡವನ್ನೂ ಈ ಪಿಡುಗು ಬಿಟ್ಟಿಲ್ಲ. ರಾಜಧಾನಿ ಬೆಂಗಳೂರು ಈ ವಿಷಯದಲ್ಲಿ ಮುಂಚೂಣಿಯಲ್ಲಿರುವುದು ಆತಂಕಕಾರಿ ಸಂಗತಿ. ನಗರಗಳ ಹೊರವಲಯದಲ್ಲಿ ತಲೆ ಎತ್ತಿರುವ ನರ್ಸಿಂಗ್ ಹೋಂ, ಕ್ಲಿನಿಕ್ ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಈ ದುಷ್ಕೃತ್ಯದಲ್ಲಿ ನಕಲಿ ವೈದ್ಯರು, ಕೆಲ ಪ್ಯಾರಾ ಮೆಡಿಕಲ್ ಸಿಬ್ಬಂದಿ ಹೆಚ್ಚು ಸಕ್ರಿಯರಾಗಿದ್ದಾರೆ. ಜಾಗೃತದಳಕ್ಕೂ ಇವರಿಗೂ ಕೆಲ ಏಜೆಂಟರು ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು ಸಂಶಯಿಸಿದ್ದಾರೆ.

ಕಡಿಮೆ ದಂಡ, ಅಲ್ಪ ಅವಧಿ ಜೈಲುಶಿಕ್ಷೆ ಕಾಯ್ದೆಯ ಮುಖ್ಯಲೋಪ. ಸಾಕ್ಷ್ಯಾಧಾರ ಕೊರತೆ ಯಿಂದಲೇ ಬಹುತೇಕ ಪ್ರಕರಣ ಆರಂಭದಲ್ಲೇ ಬಿದ್ದುಹೋಗುತ್ತವೆ. ಕೆಲ ಆರೋಗ್ಯ ಇಲಾಖೆ ಅಧಿಕಾರಿಗಳೂ ಕೈಜೋಡಿಸಿ ಪರ್ಸಂಟೇಜ್ ಲೆಕ್ಕದಲ್ಲಿ ದಂಧೆಕೋರರಿಂದ ಕಮಿಷನ್ ಪಡೆಯುತ್ತಿದ್ದಾರೆ. ಪೋಷಕರು ಮತ್ತು ಗರ್ಭಿಣಿಯರೇ ವೈದ್ಯರ ಮೇಲೆ ಒತ್ತಡ ಹೇರುವುದರಿಂದ ನಿಜವಾದ ಆರೋಪಿಗಳು ಯಾರು ಎಂಬುದೇ ನಿರ್ಧರಿಸುವಲ್ಲಿ ಕಾನೂನು ಕೂಡ ಸೋಲುತ್ತಿದೆ.

ಜಿಲ್ಲಾ ವೈದ್ಯಾಧಿಕಾರಿ ಜಾಗೃತದಳದ ಅಧ್ಯಕ್ಷರಾಗಿರುತ್ತಾರೆ. ತಮ್ಮದೇ ಕ್ಷೇತ್ರದ ಸಹೋದ್ಯೋಗಿಗಳ ವಿರುದ್ಧ ಅವರು ಹೇಗೆ ಕ್ರಮ ಕೈಗೊಳ್ಳಲು ಸಾಧ್ಯ? ಎಚ್ಚರಿಕೆ ನೀಡಿಯೋ, ಗೊತ್ತಿದ್ದರೂ ಗೊತ್ತಿಲ್ಲದಂತೆ ಸುಮ್ಮನಿರುವ ಇಲ್ಲವೇ, ಪರೋಕ್ಷವಾಗಿ ಅವರೊಂದಿಗೆ ಕೈಜೋಡಿಸಿರುವ ಸಾಧ್ಯತೆಗಳಿರುತ್ತವೆ. ಇಲ್ಲವಾದಲ್ಲಿ ಇಷ್ಟೊಂದು ರಾಜಾರೋಷವಾಗಿ ಈ ದಂಧೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಪಿಸಿಪಿಎನ್‌ಡಿಟಿ ಪರಹೋರಾಟ ನಡೆಸುತ್ತಿರುವ ಕಾರ್ಯಕರ್ತೆಯೊಬ್ಬರು ಆರೋಪಿಸುತ್ತಾರೆ.

ಗಂಡುಮಕ್ಕಳೇ ಕುಟುಂಬದ ವಾರಸುದಾರರು, ಹೆಣ್ಮಕ್ಕಳು ಎಷ್ಟಿದ್ದರೂ ಕೊಟ್ಟ ಮನೆಗೆ ಹೋಗು ವವರು, ಹೆಣ್ಣು ಕುಟುಂಬಕ್ಕೆ ಹೊರೆ ಎಂಬ ಭಾವನೆ ಗಳು ಸಮಾಜದಲ್ಲಿ ಬೇರೂರಿರುವುದು ಕಾಯ್ದೆಯ ವಿಫಲತೆಗೆ ಬಹುದೊಡ್ಡ ಕಾರಣ. ಸರ್ಕಾರ, ವೈದ್ಯರು ಮತ್ತು ನಮ್ಮ ಸಾಮಾಜಿಕ ವ್ಯವಸ್ಥೆ ತಾಯ್ತನದ ಅಂತಃಕರಣದಿಂದ ನಡೆದುಕೊಂಡಾಗ ಮಾತ್ರ ಈ ಮುದ್ದು ಕಂದಮ್ಮಗಳ ಮೇಲಿನ ದೌರ್ಜನ್ಯ ನಿಂತೀತು. ಆಗ ಹೆಣ್ಣಿಗೂ ನೆಮ್ಮದಿಯ ನಾಳೆಗಳು ಬಂದಾವು!

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT