ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಆರ್ಥಿಕ ಸಮಿತಿಯಿಂದ ಶೀಘ್ರ ಸಿಗಲಿದೆ ಅನುಮತಿ –ಸುರೇಶ್‌ ಅಂಗಡಿ

Last Updated 16 ಫೆಬ್ರುವರಿ 2020, 1:03 IST
ಅಕ್ಷರ ಗಾತ್ರ

‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ ಹಂಚಿಕೊಂಡ ವಿಚಾರಗಳಿವು. ತ್ವರಿತ ಅನುಷ್ಠಾನಕ್ಕೆ ಗಮನ ಕೊಡುತ್ತಿದ್ದೇನೆ ಎನ್ನುತ್ತಾರೆ ಅವರು.

*ಸಿಸಿಇಎ (ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಕೇಂದ್ರ ಸಂಪುಟ ಸಮಿತಿ) ಅನುಮತಿ ಇಲ್ಲದೇ ಉಪನಗರ ರೈಲು ಯೋಜನೆ ಜಾರಿಯಾಗದು. ಈ ಅನುಮೋದನೆಗೆ ಏಕೆ ವಿಳಂಬ?
ಸಿಸಿಇಎಯಲ್ಲಿ ಒಬ್ಬರೇ ಇರುವುದಿಲ್ಲ. ಹಲವು ಸಚಿವರು, ಕಾರ್ಯದರ್ಶಿಗಳು ಇರುತ್ತಾರೆ. ಅವರು ವಿನ್ಯಾಸ, ಯೋಜನೆ ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಬೇಕಾಗುತ್ತದೆ; ಹಲವು ಬಾರಿ ಚರ್ಚಿಸಬೇಕಾಗುತ್ತದೆ. ಬಳಿಕವಷ್ಟೇ ಅನುಮೋದನೆ ದೊರೆಯುತ್ತದೆ. ನಾನೊಬ್ಬನೇ ನಿರ್ಧರಿಸುವುದಕ್ಕೆ ಆಗುವುದಿಲ್ಲ. ಆದರೆ, ಎಲ್ಲ ಪ್ರಕ್ರಿಯೆಗಳೂ ತ್ವರಿತವಾಗಿ ಆಗುವಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದೇನೆ.

*ಕನಿಷ್ಠ ₹ 1,000 ಕೋಟಿ ಬಿಡುಗಡೆಯಾಗದೆ ಈ ಯೋಜನೆ ಜಾರಿ ಕಷ್ಟ. ಅನುದಾನ ಯಾವಾಗ ಬಿಡುಗಡೆಯಾಗಲಿದೆ?
ಯೋಜನೆಗೆ ಅಗತ್ಯವಾದ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರದಿಂದಲೂ ಪಾಲು ಬರಬೇಕಾಗುತ್ತದೆ. ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಹಣ ಮೀಸಲಿಡುವ ವಿಶ್ವಾಸವಿದೆ. ಅದನ್ನು ಆಧರಿಸಿ ರೈಲ್ವೆಯ ಪಾಲನ್ನೂ ಕೊಡಿಸುತ್ತೇನೆ. ಪೂರಕವಾಗಿ ಡ್ರಾಯಿಂಗ್ ಸಿದ್ಧವಾಗಬೇಕು. ಅನುಷ್ಠಾನಕ್ಕಾಗಿ ನೌಕರರು, ಎಂಜಿನಿಯರ್‌ಗಳು ಹಾಗೂ ಪರಿಣಿತರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಹಲವು ಪ್ರಕ್ರಿಯೆಗಳು ನಡೆಯಬೇಕಾಗುತ್ತದೆ.

*ಪದೇ ಪದೇ ವಿನ್ಯಾಸ ಬದಲಿಸಲು ಕಾರಣವೇನು?
ಸಮನ್ವಯದ ಕೊರತೆಯೇ ಇದಕ್ಕೆ ಕಾರಣ. ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವೆ ಸಮನ್ವಯ ಇದ್ದರೆ ಇಂತಹ ಯೋಜನೆಗಳು ತ್ವರಿತವಾಗಿ ಅನುಷ್ಠಾನಕ್ಕೆ ಬರುತ್ತವೆ. ರಾಜ್ಯ ಸರ್ಕಾರ ಬೇಗ ಜಮೀನು ಕೊಡಬೇಕು. ಭೂಸ್ವಾಧೀನ ಸಂದರ್ಭದಲ್ಲಿ ವ್ಯಾಜ್ಯ ಎದುರಾಗಬಾರದು. ಜಾಗ ಕೊಟ್ಟವರು ನ್ಯಾಯಾಲಯಕ್ಕೆ ಹೋಗಬಾರದು. ಹಾಗೊಂದು ವೇಳೆ, ಇಂತಹ ಸಮಸ್ಯೆಗಳು ಎದುರಾದಾಗ ಮಾರ್ಗದಲ್ಲಿ ಬದಲಾವಣೆ ಅನಿವಾರ್ಯ. ಆಗ ಸಹಜವಾಗಿಯೇ ವಿನ್ಯಾಸ ಬದಲಾಗುತ್ತದೆ. ರಾಜ್ಯ ಹಾಗೂ ಕೇಂದ್ರ ಎರಡೂ ಕಡೆ ಒಂದೇ ಸರ್ಕಾರ ಇರುವುದರಿಂದ ಸಮನ್ವಯದಲ್ಲಿ ಲೋಪ ಉಂಟಾಗುವುದಿಲ್ಲ ಎಂಬ ವಿಶ್ವಾಸವಿದೆ.

*ಈಗಿರುವ ರೈಲು ಹಳಿಗಳಲ್ಲೇ ಹೆಚ್ಚು ರೈಲು ಒದಗಿಸುವಂತೆ ಬೆಂಗಳೂರಿನ ರೈಲ್ವೆ ಹೋರಾಟಗಾರರು ಒತ್ತಾಯಿಸುತ್ತಲೇ ಬಂದಿದ್ದಾರೆ. ಅದನ್ನಾದರೂ ಜಾರಿಗೆ ತರಬಹುದಲ್ಲದವೇ?
ಈ ಕೆಲಸವನ್ನೂ ಮಾಡುತ್ತಿದ್ದೇವೆ. ರೈಲುಗಳ ವೇಗ, ಕ್ಷಮತೆ ಹೆಚ್ಚಿಸುವ ಕಾರ್ಯವೂ ನಡೆಯುತ್ತಿದೆ. ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದಾದ್ಯಂತ ಹಲವು ಕಡೆಗಳಿಗೆ ಹೆಚ್ಚುವರಿ ರೈಲು ಸಂಚಾರದ ಸೇವೆ ಒದಗಿಸಲಾಗಿದೆ. ಹೊಸ ರೈಲುಗಳನ್ನು ಆರಂಭಿಸುತ್ತಿದ್ದೇವೆ. ಬೆಂಗಳೂರಿನಲ್ಲಿ, ರಾಜ್ಯ ಸರ್ಕಾರ ಹೆಚ್ಚುವರಿ ಮೆಟ್ರೊ ರೈಲುಗಳನ್ನು ಓಡಿಸಲು ಕ್ರಮ ವಹಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT