ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ರಾಜ್ಯ ರೈಲ್ವೆಗೆ 'ರೆಡ್‌ ಸಿಗ್ನಲ್‌' ನಿಂತಲ್ಲಿಯೇ ನಿಂತಿರುವ ಕಾಮಗಾರಿಗಳು

ಯೋಜನೆಗಳಿಗೆ ಭೂಸ್ವಾಧೀನ ವಿಳಂಬವೇ ಕಂಟಕ
Last Updated 16 ಫೆಬ್ರುವರಿ 2020, 0:47 IST
ಅಕ್ಷರ ಗಾತ್ರ
ADVERTISEMENT
""

ರಾಜ್ಯ ರೈಲು ಯೋಜನೆಗಳ ಪ್ರಗತಿಯ ಕಾರ್ಡ್‌ ಮೇಲೆ ಒಮ್ಮೆ ಕಣ್ಣು ಹಾಯಿಸಿದರೆ ಹನ್ನೊಂದರಲ್ಲಿ ಏಳು ಯೋಜನೆಗಳ ಪ್ರಗತಿ ಶೂನ್ಯವಾಗಿರುವುದು ಎದ್ದು ಕಾಣುತ್ತದೆ. ಭೂಸ್ವಾಧೀನ ಪ್ರಕ್ರಿಯೆ ಎಂಬ ಹೆಬ್ಬಂಡೆ ಅಡ್ಡ ನಿಂತಿರುವುದು ಕಣ್ಣು ಕುಕ್ಕುತ್ತಿದೆ. ಈ ಮಧ್ಯೆ ಬೆಂಗಳೂರು ಉಪನಗರ ರೈಲು ಯೋಜನೆಯೂ ಹಲವು ವರ್ಷಗಳಿಂದ ತೆವಳುತ್ತಲೇ ಇದೆ.

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯದ ಕೊರತೆ, ಭೂಸ್ವಾಧೀನದಲ್ಲಿ ವಿಳಂಬ ಹಾಗೂ ಅನುದಾನ ಬಿಡುಗಡೆಯಲ್ಲಿ ತಾರತಮ್ಯದ ಕಾರಣಗಳಿಂದ ರಾಜ್ಯದ ಹೊಸ ರೈಲ್ವೆ ಮಾರ್ಗದ ಯೋಜನೆಗಳು, ಗ್ರೀನ್‌ ಸಿಗ್ನಲ್ ಸಿಗದೆ ಗಂಟೆಗಟ್ಟಲೆ ನಿಲ್ಲುವ ರೈಲಿನಂತೆ, ವರ್ಷಗಟ್ಟಲೆ ನಿಂತ‌ಲ್ಲೇ ನಿಂತಿವೆ.

ತುಮಕೂರು-ಚಿತ್ರದುರ್ಗ-ದಾವಣಗೆರೆ, ತುಮಕೂರು–ರಾಯದುರ್ಗ, ಹೆಜ್ಜಾಲ–ಚಾಮರಾಜನಗರ, ಹುಬ್ಬಳ್ಳಿ- ಅಂಕೋಲಾ ಮಾರ್ಗ ನಿರ್ಮಾಣದಂತಹ ಪ್ರಮುಖ ಯೋಜನೆಗಳಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿ ಹತ್ತಾರು ವರ್ಷಗಳೇ ಕಳೆದಿವೆ. ಯೋಜನೆ ಪ್ರಗತಿಯ ಗಾಲಿ ದಿನಕ್ಕೆ ಒಂದೇ ಸುತ್ತು ಉರುಳಿದ್ದರೂ ಈ ವೇಳೆಗೆ ಅಂತಿಮ ಹಂತಕ್ಕೆ ತಲುಪುತ್ತಿದ್ದವು. ಆದರೆ, ಭೂಸ್ವಾಧೀನ ಪ್ರಕ್ರಿಯೆ ಬಸವನ ಹುಳುವನ್ನೂ ಹಿಂದಿಕ್ಕಲಾಗದಷ್ಟು ಆಮೆಗತಿಯಲ್ಲಿ ತೆವಳುತ್ತಿದೆ.

1997-98ರಲ್ಲಿ ಮಂಜೂರಾದ ಹುಬ್ಬಳ್ಳಿ–ಅಂಕೋಲಾ ಮಾರ್ಗ ಉತ್ತರ ಕರ್ನಾಟಕದ ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬಲ್ಲದು. ಎರಡು ರಾಷ್ಟ್ರೀಯ ಹೆದ್ದಾರಿಗಳ ಜತೆಗೆ ಕಾರವಾರ- ಬೇಲೇಕೇರಿ ಬಂದರನ್ನು ಜೋಡಿಸುವ ಹಾಗೂ ಮಂಗಳೂರು, ಗೋವಾ ಬಂದರಿನ ತನಕ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಆದರೆ, ವನ್ಯಜೀವಿ ಮಂಡಳಿ ಒಪ್ಪಿಗೆ ಬಾಕಿ ಇದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಯೋಜನೆಯ ಜಾರಿಗೆ ಇರುವ ಅಡ್ಡಿ ನಿವಾರಿಸಬೇಕು ಎನ್ನುವುದು ರೈಲ್ವೆ ಹೋರಾಟಗಾರರ ಒತ್ತಾಯ.

2011–12ರಲ್ಲಿ ಮಂಜೂರಾದ ತುಮಕೂರು-ಚಿತ್ರದುರ್ಗ-ದಾವಣಗೆರೆ ನಡುವೆ ನೇರ ರೈಲು ಮಾರ್ಗ(199.7 ಕಿ.ಮೀ) ಮೂರೂ ಜಿಲ್ಲೆಗಳ ಜನರ ದಶಕಗಳ ಕನಸು. ಯೋಜನೆ ಸಾಕಾರಗೊಂಡರೆ ಬೆಂಗಳೂರು-ವಿಜಯಪುರ ನಡುವಿನ ರೈಲು ಮಾರ್ಗದ ಅಂತರ 65 ಕಿ.ಮೀ. ಮತ್ತು ಬೆಂಗಳೂರು-ಚಿತ್ರದುರ್ಗ ನಡುವಿನ ಅಂತರ 110 ಕಿ.ಮೀ. ಕಡಿಮೆಯಾಗಲಿದೆ. ಅಲ್ಲದೇ, ಬೆಂಗಳೂರು- ಅರಸಿಕೆರೆ-ಶಿವಮೊಗ್ಗ ಮಾರ್ಗದ ಮೇಲೆ ಈಗಿರುವ ಒತ್ತಡ ಶೇ‌ 50ರಷ್ಟು ಕಡಿಮೆಯಾಗಲಿದೆ. ಈ ಯೋಜನೆಗೆ ‌‌ದಾವಣಗೆರೆ ಜಿಲ್ಲೆಯಲ್ಲಿ 237 ಎಕರೆ, ಚಿತ್ರದುರ್ಗದಲ್ಲಿ 1,028 ಎಕರೆ ಭೂಮಿ ಸ್ವಾಧೀನವಾಗಬೇಕಿದೆ.

ಹೆಜ್ಜಾಲ-ಚಾಮರಾಜನಗರ ನಡುವಿನ 142 ಕಿ.ಮೀ. ರೈಲು ಮಾರ್ಗಕ್ಕೆ 1996–97ರಲ್ಲಿ ಮಂಜೂರಾತಿ ದೊರೆತಿದೆ. ಪ್ರತಿವರ್ಷ ಪಿಂಕ್‌ ಬುಕ್‌ನಲ್ಲಿ ಪ್ರಸ್ತಾಪವಾಗುತ್ತದೆ. ಆದರೆ, ಪ್ರಗತಿ ಒಂದೇ ಒಂದು ಹೆಜ್ಜೆಯಷ್ಟೂ ಮುಂದೆ ಹೋಗಿಲ್ಲ. ₹1,382.78 ಕೋಟಿ ಮೊತ್ತದ ಈ ಯೋಜನೆಗೆ ಉಚಿತವಾಗಿ ಭೂಮಿ ಒದಗಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಭೂಮಿ ಹಸ್ತಾಂತರವಾಗದ ಹಿನ್ನೆಲೆಯಲ್ಲಿ ಯೋಜನೆ ಪ್ರಗತಿ ಶೂನ್ಯ ಎಂದು ನೈರುತ್ಯ ರೈಲ್ವೆ ಹೇಳುತ್ತಿದೆ.

ತುಮಕೂರು–ರಾಯದುರ್ಗ ನಡುವಿನ 207 ಕಿ.ಮೀ. ಮಾರ್ಗದ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. 2007–08ನೇ ಸಾಲಿನಲ್ಲಿ ಮಂಜೂರಾತಿ ದೊರೆತ ಈ ಯೋಜನೆಗೆ ಕರ್ನಾಟಕ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ವೇಗವಾಗಿ ನಡೆಯುತ್ತಿಲ್ಲ. ಒಂದು ಎಕರೆ ಭೂಮಿಯನ್ನೂ ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಿಲ್ಲ. ಆಂಧ್ರಪ್ರದೇಶದ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಶೇ 76ರಷ್ಟು ಪೂರ್ಣಗೊಂಡು ಕಾಮಗಾರಿಯೂ ಆರಂಭಗೊಂಡಿದೆ. ಯೋಜನೆ ಶೇ 25ರಷ್ಟು ಪ್ರಗತಿಯಾಗಿದೆ. 2011–12ರಲ್ಲಿ ಮಂಜೂರಾ‌ತಿ ದೊರೆತ ವೈಟ್‌ಫೀಲ್ಡ್‌–ಕೋಲಾರ (52.9 ಕಿ.ಮೀ), 2013–14ರಲ್ಲಿ ಮಂಜೂರಾತಿ ನೀಡಲಾಗಿರುವ ಗದಗ–ವಾಡಿ (252 ಕಿ.ಮೀ) ಮಾರ್ಗಗಳ ಕೆಲಸವೂ ಆರಂಭವಾಗಿಲ್ಲ.

‘ಕಾರ್ಯಾರಂಭಕ್ಕೆ ಬೇಕು ಸಾವಿರ ಕೋಟಿ’
ಬೆಂಗಳೂರಿನ ಜನರಿಗೆ ಸಾರಿಗೆ ಸೌಲಭ್ಯ ಒದಗಿಸಲು ಉಪನಗರ ರೈಲು ಸಾರಿಗೆ ಬೇಕೆನ್ನುವುದು ದಶಕಗಳ ಬೇಡಿಕೆ. ₹ 18,621 ಕೋಟಿ ಯೋಜನಾ ಗಾತ್ರದ ಯೋಜನೆಗೆ ಕೇಂದ್ರ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ಕೊಟ್ಟಿದ್ದು ₹ 1 ಕೋಟಿ.

‘ಕಾಮಗಾರಿ ಶುರು ಮಾಡಲು ಪ್ರಾಥಮಿಕವಾಗಿ ಕನಿಷ್ಠ ₹1 ಸಾವಿರ ಕೋಟಿಯಾದರೂ ಬೇಕಿದೆ. ಇಷ್ಟು ಅನುದಾನ ದೊರೆತರೆ ಶೇ 50ರಷ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿಯಲಿದೆ. ಅಲ್ಲದೇ ಶೇ 5ರಷ್ಟು ಕಾಮಗಾರಿ ಆರಂಭವೂ ಆಗಲಿದೆ’ ಎಂದು ಕೆ–ರೈಡ್‌ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಗರ್ಗ್ ಮಾಹಿತಿ ನೀಡಿದರು. ‘ಸಾಲ ಪಡೆಯುವ ಸಲುವಾಗಿ ಜಾಗತಿಕ ಮಟ್ಟದ ಹಣಕಾಸು ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗುತ್ತಿದೆ. ವಿಶ್ವಬ್ಯಾಂಕ್ ಕೂಡಾ ಈ ನಿಟ್ಟಿನಲ್ಲಿ ಆಸಕ್ತಿ ತೋರಿದೆ. ಆದರೆ ಈ ಕುರಿತ ಮಾತುಕತೆ ಅಂತಿಮವಾಗಿಲ್ಲ’ ಎಂದು ಗರ್ಗ್ ತಿಳಿಸಿದರು. ‘ಜೈಕಾ, ಕೊರಿಯಾ ಎಕ್ಸಿಮ್ ಬ್ಯಾಂಕ್, ಏಷ್ಯನ್ ಇನ್‍ಫ್ರಾಸ್ಟ್ರಕ್ಚರ್ ಇನ್‍ವೆಸ್ಟ್‌ಮೆಂಟ್ ಬ್ಯಾಂಕ್, ಏಷ್ಯನ್ ಡೆವಲಪ್‍ಮೆಂಟ್ ಬ್ಯಾಂಕ್ ಜತೆಗೂ ಮಾತುಕತೆ ನಡೆಸಲಾಗಿದೆ. ಒಮ್ಮೆ ಯೋಜನೆಗೆ ಚಾಲನೆ ದೊರೆತರೆ ಮತ್ತಷ್ಟು ಸಂಸ್ಥೆಗಳು ಆಸಕ್ತಿ ತೋರಿಸಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನುಮೋದನೆಗೆ ಕಾಯುತ್ತಲೇ ಇವೆ
‌ಚಿಕ್ಕಬಳ್ಳಾಪುರ–ಪುಟ್ಟಪರ್ತಿ– ಶ್ರೀ ಸತ್ಯಸಾಯಿ ನಿಲಯಂ (103 ಕಿ.ಮೀ), ಶ್ರೀನಿವಾಸಪುರ–ಮದನಪಲ್ಲಿ (75 ಕಿ.ಮೀ), ಚಿಕ್ಕಬಳ್ಳಾಪುರ–ಗೌರಿಬಿದನೂರು (44 ಕಿ.ಮೀ) ಹೊಸ ಮಾರ್ಗಗಳಿಗೆ 2013–14ರಲ್ಲಿ ಮಂಜೂರಾತಿ ದೊರೆತಿದೆ.‌ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ (ಸಿಸಿಇಎ) ಅನುಮೋದನೆಗೆ ಈ ಮೂರು ಯೋಜನೆಗಳು ಕಾದು ಕುಳಿತಿವೆ.

2017–18ರಲ್ಲಿ ಮಂಜೂರಾತಿ ನೀಡಿರುವ ಗದಗ–ಯಲವಗಿ (56 ಕಿ.ಮೀ) ಮಾರ್ಗದ ಡಿಪಿಆರ್‌ ರೈಲ್ವೆ ಮಂಡಳಿ ಮುಂದಿದೆ.

2018–19ರಲ್ಲಿ ಮಂಜೂರಾದ ಶಿವಮೊಗ್ಗ–ಶಿಕಾರಿಪುರ (89 ಕಿ.ಮೀ), ಮೈಸೂರು (ಬೆಳಗೊಳ)–ಕುಶಾಲನಗರ (87 ಕಿ.ಮೀ), ಹಾಸನ–ಬೇಲೂರು (32 ಕಿ.ಮೀ) ಯೋಜನೆಗಳಿಗೆ 2019ರಲ್ಲಿ ರೈಲ್ವೆ ಮಂಡಳಿ ಮಂಜೂರಾತಿ ನೀಡಿದೆ. ರಾಜ್ಯ ಸರ್ಕಾರ ಭೂಮಿ ಕೊಡಬೇಕಿದೆ. ಹೀಗಾಗಿ ಈ ಯೋಜನೆಗಳು ಕಾಗದದಲ್ಲೇ ಇವೆ.

*
ಈಗಾಗಲೇ ಮಂಜೂರಾಗಿರುವ ಎಲ್ಲ ರೈಲ್ವೆ ಯೋಜನೆಗಳನ್ನು 2022ರೊಳಗೆ ಮುಗಿಸಲು ಪ್ರಧಾನ ಮಂತ್ರಿಯವರು ಸೂಚಿಸಿದ್ದಾರೆ. ರಾಜ್ಯದ ರೈಲ್ವೆ ಯೋಜನೆಗಳಿಗೆ ಉಂಟಾಗಿರುವ ಅಡ್ಡಿಗಳನ್ನು ಕರ್ನಾಟಕ ಸರ್ಕಾರದ ಸಹಕಾರದಿಂದ ನಿವಾರಿಸುತ್ತೇವೆ.
-ಸುರೇಶ ಅಂಗಡಿ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT