ಗುರುವಾರ , ಮೇ 13, 2021
16 °C
ಹೊರ ರಾಜ್ಯಗಳ ವ್ಯಾಪಾರಿಗಳಿಂದ ಪೈಪೋಟಿ

ಒಳನೋಟ: ಚೇತರಿಕೆ ಕಾಣದ ಅಕ್ಕಿ ಗಿರಣಿಗಳು, ಸರ್ಕಾರದಿಂದ ಸಿಗದ ಉತ್ತೇಜನ

ಚಂದ್ರಶೇಖರ ಆರ್. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದ ಅಕ್ಕಿ ಗಿರಣಿಗಳು ಇದೀಗ ಒಂದೊಂದಾಗಿ ಬಾಗಿಲು ಮುಚ್ಚುತ್ತಿವೆ. ಶೇ 80ಕ್ಕೂ ಹೆಚ್ಚು ಅಕ್ಕಿ ಗಿರಣಿಗಳು ಬಂದ್‌ ಆಗಿವೆ. ಜಿಲ್ಲೆಯಲ್ಲಿದ್ದ 140 ಗಿರಣಿಗಳಲ್ಲಿ ಈಗ ಉಳಿದಿರುವುದು 40 ಮಾತ್ರ. 

ಜಿಲ್ಲೆಯ ಮಲೇಬೆನ್ನೂರಿನ ಅಕ್ಕಿ ರಾಜ್ಯದಲ್ಲೇ ಪ್ರಸಿದ್ಧ. ಒಂದು ಕಾಲದಲ್ಲಿ ಇಲ್ಲಿ 15ಕ್ಕೂ ಹೆಚ್ಚು ಅಕ್ಕಿ ಗಿರಣಿಗಳು ಇದ್ದವು. ಈಗ 5 ಗಿರಣಿಗಳಷ್ಟೇ ಉಳಿದಿವೆ.

ಅಕ್ಕಿ ಗಿರಣಿಗಳು ಬಂದ್‌ ಆಗಲು ಹಲವು ಕಾರಣಗಳಿವೆ. ಅವುಗಳ ಪೈಕಿ ಸರ್ಕಾರದಿಂದ ಸಿಗದ ಉತ್ತೇಜನ, ಆಂಧ್ರಪ್ರದೇಶ, ತಮಿಳುನಾಡು ಭತ್ತದ ವ್ಯಾಪಾರಿಗಳ ಪೈಪೋಟಿ, ಪರಿಸರ ಕಾಯ್ದೆ, ಇಲ್ಲಿ ಬಂದ ಲಾಭವನ್ನು ಬೇರೆಡೆ ತೊಡಗಿಸಿಕೊಂಡ ಮಾಲೀಕರ ನೀತಿ ಪ್ರಮುಖವಾದವು. ಈಗ ಕೊರೊನಾ ಆವರಿಸಿಕೊಂಡಿದ್ದು, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

ಕೊರೊನಾ ಸಂದರ್ಭದಲ್ಲಿ ಹೇರಿದ ಲಾಕ್‌ಡೌನ್‌ನಿಂದ ಹಲವು ಉದ್ಯಮಗಳಂತೆ ಅಕ್ಕಿ ಗಿರಣಿಗಳು ಸಂಕಷ್ಟ ಅನುಭವಿಸಿದವು. ಲಾಕ್‌ಡೌನ್‌ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಲವು ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ಪ್ಯಾಕೇಜ್‌ ಘೋಷಿಸಿತು. ಆದರೆ, ಅಕ್ಕಿ ಗಿರಣಿಗಳಿಗೆ ಯಾವುದೇ ರಿಯಾಯಿತಿ ಘೋಷಿಸಲಿಲ್ಲ. ಇದರಿಂದ ಉದ್ಯಮಕ್ಕೆ ಇನ್ನಷ್ಟು ಸಮಸ್ಯೆಗಳು ಎದುರಾದವು.

1969ರಿಂದ ಈಚೆಗೆ ಆರಂಭವಾದ ಅಕ್ಕಿ ಗಿರಣಿಗಳು ಈ ಭಾಗದಲ್ಲಿ ಉತ್ತುಂಗದಲ್ಲಿದ್ದವು. ಆದರೆ ಈಗ ನಿಧಾನವಾಗಿ ಮರೆಯಾಗುತ್ತಿವೆ. ಪ್ರಸಿದ್ಧಿ ಪಡೆದಿದ್ದ ದಾಂಡೇಕರ್‌ ಮಿಲ್‌, ಬಿನ್ನಿ ಮಾರ್ಟ್‌ನ ರೈಸ್‌ಮಿಲ್‌ನಂತಹ ದೊಡ್ಡ ಗಿರಣಿಗಳು ಮುಚ್ಚಿವೆ. ಒಂದೊಂದು ಗಿರಣಿಯಲ್ಲಿ 100ಕ್ಕೂ ಅಧಿಕ ಮಂದಿ ಕಾರ್ಮಿಕರಿದ್ದರು. ಆದರೆ ಈಗ 20 ಜನರಿಗೂ ಕೆಲಸ ಕೊಡದ ಸ್ಥಿತಿ ಇದೆ. 

ಸರ್ಕಾರದಿಂದ ಸಿಗದ ಉತ್ತೇಜನ: ‘ಶೇ 70ರಷ್ಟು ಅಕ್ಕಿ ಉದ್ಯಮ ಅವನತಿಯ ಅಂಚಿಗೆ ತಲುಪಿದೆ. ಕಾರ್ಪೊರೇಟ್‌ ಕಂಪನಿಗಳಿಗೆ ಅನ್ವಯಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ಸಣ್ಣ ಕೈಗಾರಿಕೆಗಳ ಮೇಲೆ ಹೇರಿದೆ. 10 ಲಾರಿಯಷ್ಟು ಅಕ್ಕಿ ಮಾರುತ್ತಿದ್ದವರು ಈಗ ಒಂದು ಲಾರಿಯಷ್ಟು ಮಾರಲು ಪರದಾಡುವಂತಾಗಿದೆ. ಕೊರೊನಾದಲ್ಲಿ ಸರ್ಕಾರವು ಎರಡು ತಿಂಗಳು ವಿದ್ಯುತ್‌ ಬಿಲ್‌ನಿಂದ ರಿಯಾಯಿತಿ ನೀಡಿತ್ತು. ಮತ್ತೆ ಎಲ್ಲ ಬಿಲ್‌ ಕಟ್ಟಿಸಿಕೊಂಡಿದ್ದಾರೆ. ಸರ್ಕಾರ ಯಾವುದೇ ಉತ್ತೇಜನ ನೀಡಿಲ್ಲ’ ಎನ್ನುತ್ತಾರೆ ಮಲೇಬೆನ್ನೂರಿನ ಅಕ್ಕಿ ಗಿರಣಿ ಮಾಲೀಕ ವಾಗೀಶಸ್ವಾಮಿ.

‘ಅಕ್ಕಿ ಗಿರಣಿಗಳು ಸ್ಥಳೀಯ ರೈತರಿಂದ ಭತ್ತ ಖರೀದಿಸುವ ಕಾರಣ ರೈತರಿಗೆ ಉಪಯುಕ್ತವಾಗಿದೆ. ಅಲ್ಲದೇ, ಹಲವು ಕಾರ್ಮಿಕರ ಬದುಕು ನಡೆಯುತ್ತಿತ್ತು. ಈಗ ಎಲ್ಲವೂ ಬಂದ್‌ ಆಗಿವೆ’ ಎಂದು ಅವರು ಬೇಸರಪಡುತ್ತಾರೆ.

ಹೊರರಾಜ್ಯದವರ ಪೈಪೋಟಿ ಹೆಚ್ಚು: ‘ನಾವು ಇಲ್ಲಿನ ರೈತರಿಂದ ಭತ್ತ ಖರೀದಿಸುತ್ತಿದ್ದೆವು. ಆದರೆ ಈಗ ಆಂಧ್ರಪ್ರದೇಶ, ತಮಿಳುನಾಡಿನ ಭತ್ತ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಭತ್ತ ಖರೀದಿಸುತ್ತಿದ್ದಾರೆ. ಅವರ ಜತೆ ಪೈಪೋಟಿ ಎದುರಿಸುವುದೇ ಕಷ್ಟವಾಗಿದೆ’ ಎನ್ನುತ್ತಾರೆ ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬಿ. ಚಿದಾನಂದಪ್ಪ.

‘ಅಲ್ಲಿ ಕುಚಲಕ್ಕಿ (ಬಾಯ್ಲಡ್‌)‌ ಹಾಗೂ ಹಾಫ್‌ ಬಾಯ್ಲಡ್‌ ಅ‌ಕ್ಕಿ ಮಾಡುತ್ತಾರೆ. ಇದರಿಂದ ಅವರಿಗೆ ಹೆಚ್ಚು ನುಚ್ಚು ಬರುವುದಿಲ್ಲ. ಹೆಚ್ಚೆಂದರೆ ಮೂರು ಚೀಲ ನುಚ್ಚು ಬರಬಹುದು. ಆದರೆ ನಮ್ಮಲ್ಲಿ ಬಾಯ್ಲಡ್‌ ಅಕ್ಕಿ ಬಳಸುವುದಿಲ್ಲ. ಅದಕ್ಕಾಗಿ ಸ್ಟೀಮ್‌ ಅಕ್ಕಿ ಮಾಡುತ್ತೇವೆ. ಇದರಲ್ಲಿ 100 ಚೀಲ ನುಚ್ಚೇ ಬರುತ್ತದೆ. ಅದರಿಂದ ನಷ್ಟ ಹೆಚ್ಚು. ನುಚ್ಚು ಹೆಚ್ಚು ಬರುವ ಕಾರಣ ಹೆಚ್ಚಿನ ಬೆಲೆಗೆ ಭತ್ತ ಖರೀದಿಸುವುದು ನಮ್ಮಿಂದ ಸಾಧ್ಯವಿಲ್ಲ. ಬೇರೆ ರಾಜ್ಯದವರು ಹೆಚ್ಚಿನ ಬೆಲೆಗೆ ಖರೀದಿಸುತ್ತಾರೆ. ಹೀಗಾಗಿ ಗಿರಣಿ ನಡೆಸುವುದು ಕಷ್ಟಕರವಾಗಿದೆ’ ಎನ್ನುವ ವಿವರಣೆ ಅವರದು.

‘ಗುಣಮಟ್ಟದ ಅಕ್ಕಿ ತಯಾರಿಸದೆ, ಖರೀದಿಸಿ ಮಾರಾಟ ಮಾಡಿದ್ದರಿಂದ ಕೆಲ ಮಾಲೀಕರು ನಷ್ಟ ಅನುಭವಿಸಿದರು. ಅಲ್ಲದೇ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದೂ ಅಕ್ಕಿ ಗಿರಣಿಗಳು ನಷ್ಟ ಅನುಭವಿಸಲು ಕಾರಣ ಎನ್ನುತ್ತಾರೆ’ ರೈತ ಮುಖಂಡ, ಮಲೆಬೆನ್ನೂರು ಬಳಿಯ ಜಿ. ಮಂಜುನಾಥ ಪಟೇಲ್‌.

‘ಭತ್ತ ಬೆಳೆಯಲು ಹೆಚ್ಚು ಖರ್ಚು, ಶ್ರಮ ಬೇಕಿರುವ ಕಾರಣ ಹೆಚ್ಚಿನ ರೈತರು ಈಗ ಅಡಿಕೆಯತ್ತ ಮುಖ ಮಾಡಿದ್ದಾರೆ. ಭತ್ತಕ್ಕೆ ಉತ್ತಮ ಬೆಲೆಯೂ ಇಲ್ಲ. ಕೂಲಿ ಕಾರ್ಮಿಕರ ಕೊರತೆ, ಯಾಂತ್ರೀಕೃತ ಬೇಸಾಯ ಹೆಚ್ಚು ಖರ್ಚು ಬೇಡುವ ಕಾರಣ ಭತ್ತ ಬೇಸಾಯದಿಂದ ರೈತರು ವಿಮುಖರಾಗುತ್ತಿದ್ದಾರೆ. ಇದೂ ಅಕ್ಕಿ ಗಿರಣಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ’ ಎನ್ನುತ್ತಾರೆ ಚೀಲೂರಿನ ರೈತ ಗೋವಿಂದರಾಜು.


ಮಲೇಬೆನ್ನೂರಿನ ವೀರಭದ್ರೇಶ್ವರ ರೈಸ್‌ ಆ್ಯಂಡ್ ಫ್ಲೋರ್‌ ಮಿಲ್‌ನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವುದು (ಸಂಗ್ರಹ ಚಿತ್ರ)

*
ನಮ್ಮೂರಿನ ಅಕ್ಕಿಗೆ ಬೇಡಿಕೆ ಇದೆ. ಆದರೆ ಸರ್ಕಾರದ ಅಸಮರ್ಪಕ ನೀತಿ, ಆರ್ಥಿಕ ಉತ್ತೇಜನಕ್ಕೆ ಕ್ರಮ ಕೈಗೊಳ್ಳದಿರುವುದೇ ಗಿರಣಿಗಳು ಮುಚ್ಚಲು ಕಾರಣ.
-ಬಿ. ಚಿದಾನಂದಪ್ಪ, ಉಪಾಧ್ಯಕ್ಷ, ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಘಟಕ

*
ಬೇರೆ ವಲಯಕ್ಕೆ, ರೈತರಿಗೆ ಹಲವು ಯೋಜನೆಗಳನ್ನು ಘೋಷಿಸುವ ಸರ್ಕಾರ ಗಿರಣಿಗಳ ಉತ್ತೇಜನಕ್ಕೂ ನೆರವು ನೀಡಬೇಕು.
-ವಾಗೀಶಸ್ವಾಮಿ, ಅಕ್ಕಿ ಗಿರಣಿ ಮಾಲೀಕ, ಮಲೇಬೆನ್ನೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು