ಸೋಮವಾರ, ಸೆಪ್ಟೆಂಬರ್ 20, 2021
22 °C
ಆದಾಯ ಅಲ್ಪ, ನಿರ್ವಹಣೆಯೇ ಹೊರೆ!

ಒಳನೋಟ: ಸಿಂಥೆಟಿಕ್‌ ಟ್ರ್ಯಾಕ್‌ ಇಲ್ಲಿ ವಾಕಿಂಗ್‌ ಪಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಕ್ರೀಡಾಪಟುಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಹೊಸದುರ್ಗ, ಚಿತ್ರದುರ್ಗದ ಕ್ರೀಡಾಂಗಣಗಳಲ್ಲಿ ನಿರ್ಮಿಸಿದ ಸಿಂಥೆಟಿಕ್‌ ಟ್ರ್ಯಾಕ್‌, ವಾಯುವಿಹಾರಿಗಳ ಪಥವಾಗಿ ಪರಿವರ್ತನೆಯಾಗಿದೆ.

ಯುವಜನ ಮತ್ತು ಕ್ರೀಡಾ ಇಲಾಖೆಯ ನಿರ್ಲಕ್ಷ್ಯದಿಂದ ಸಿಂಥೆಟಿಕ್‌ ಟ್ರ್ಯಾಕ್‌ ಕ್ರೀಡಾಪಟುಗಳ ಬದಲಿಗೆ ವಾಯುವಿಹಾರಿಗಳಿಗೆ ಬಳಕೆಯಾಗುತ್ತಿದೆ. ಕ್ರೀಡಾ ಬದುಕಿನ ಉತ್ತುಂಗಕ್ಕೆ ಏರುವ ಕನಸು ಕಟ್ಟಿಕೊಂಡಿದ್ದ ಬಹುತೇಕ ಅಥ್ಲಿಟ್‌ಗಳು ಟ್ರ್ಯಾಕ್‌ನಿಂದ ‘ದೂರ ಸರಿದಿದ್ದಾರೆ’.

ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರು ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾಗಿದ್ದ ಅವಧಿಯಲ್ಲಿ ಸ್ವಕ್ಷೇತ್ರ ಹೊಸದುರ್ಗ ಹಾಗೂ ಚಿತ್ರದುರ್ಗದಲ್ಲಿ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸದ್ದರು. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಹಾಗೂ ಈಜುಕೊಳ ನಿರ್ಮಿಸಿದ್ದರು. ಕ್ರೀಡಾಪಟುಗಳನ್ನು ರೂಪಿಸಲು ಇವು ನೆರವಾಗಿದ್ದು ಅಷ್ಟರಲ್ಲೇ ಇದೆ.

ಹೊಸದುರ್ಗ ಪಟ್ಟಣದ ಕ್ರೀಡಾಂಗಣ ನಿರ್ವಹಣೆಗೆ ಸಿಬ್ಬಂದಿಯೇ ಇಲ್ಲ. ಕಾವಲುಗಾರರೇ ಇದರ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಸಿಬ್ಬಂದಿಯನ್ನು ನಿಯೋಜಿಸುವಂತೆ ಕ್ರೀಡಾಪ್ರೇಮಿಗಳು ಮಾಡಿದ ಮನವಿಗಳು ಯುವಜನ ಮತ್ತು ಕ್ರೀಡಾ ಇಲಾಖೆಯ ಕಸದ ಬುಟ್ಟಿ ಸೇರಿವೆ. ಪದವಿ ಕಾಲೇಜು ವಿದ್ಯಾರ್ಥಿಗಳ ತರಬೇತಿಗೆ ಹಾಗೂ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಮಾತ್ರ ಇದು ಸೀಮಿತವಾಗಿದೆ.

ಚಿತ್ರದುರ್ಗದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕ್ರೀಡಾ ಹಾಸ್ಟೆಲ್‌ ವಿದ್ಯಾರ್ಥಿಗಳು ತರಬೇತಿಗೆ ಕ್ರೀಡಾಂಗಣಕ್ಕೆ ಇಳಿಯುವ ಮುನ್ನವೇ ವಾಯುವಿಹಾರಿಗಳು ಟ್ರ್ಯಾಕ್‌ ಮೇಲಿರುತ್ತಾರೆ. ಇದರಿಂದ ಟ್ರ್ಯಾಕ್‌ ಬಹುತೇಕ ಹಾಳಾಗಿದ್ದು, ಅಥ್ಲೀಟ್‌ಗಳ ಉತ್ಸಾಹ ಕರಗಿಹೋಗಿದೆ.

ಸಿಂಥೆಟಿಕ್ ಟ್ರ್ಯಾಕ್‌ಗೆ ಪ್ರಸ್ತಾವ
ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಇನ್ನೂ ಮಣ್ಣಿನ ಟ್ರ್ಯಾಕ್‌ ಇರುವುದರಿಂದ ಅಭ್ಯಾಸ ಮಾಡಲು ಅಥ್ಲೀಟ್‌ಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಇಲ್ಲಿ ಅಂದಾಜು ₹ 7 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣ ಮತ್ತು ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಕ್ರಿಯಾಯೋಜನೆಯನ್ನು ತಯಾರಿಸಿರುವ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಮುಂದಾಗಿದೆ.

ಇಲ್ಲಿನ ಕ್ರೀಡಾ ವಸತಿನಿಲಯದಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಕುಸ್ತಿ, ಕಬಡ್ಡಿ, ಕೊಕ್ಕೊ ಹಾಗೂ ಅಥ್ಲೆಟಿಕ್ಸ್‌ ವಿಭಾಗಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕುಸ್ತಿ, ಕಬಡ್ಡಿ ಹಾಗೂ ಕೊಕ್ಕೊ ವಿಭಾಗದಲ್ಲಿ ಇಲ್ಲಿನ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸುತ್ತಿದ್ದಾರೆ. ಕಳೆದ ವರ್ಷವಷ್ಟೇ ಅಥ್ಲೆಟಿಕ್ಸ್‌ ವಿಭಾಗ ಆರಂಭಿಸಲಾಗಿದೆ.

ನಿರ್ವಹಣಾ ವೆಚ್ಚವೇ ಹೆಚ್ಚು
ಶಿವಮೊಗ್ಗದ ಅತ್ಯಂತ ಹಳೆಯ ನೆಹರೂ ಕ್ರೀಡಾಂಗಣವು ಒಳಾಂಗಣ ಕ್ರೀಡಾಂಗಣ. ಗೋಪಾಳದ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ಗಳಲ್ಲಿ ಸಂಗ್ರಹವಾಗುವ ಮೊತ್ತಕ್ಕಿಂತ ನಿರ್ವಹಣೆಗೆ ಮಾಡುತ್ತಿರುವ ಖರ್ಚು ಅಧಿಕವಾಗಿದೆ.

ದಶಕದ ಹಿಂದೆಯೇ ಸಿಂಥೆಟಿಕ್‌ ಟ್ರ್ಯಾಕ್ ಹೊಂದಿದ್ದ ನೆಹರೂ ಕ್ರೀಡಾಂಗಣ ನಿರ್ವಹಣೆಯ ಕೊರತೆಯಿಂದ ಬಳಲುತ್ತಿದೆ. ಯಾವುದಾದರೂ ಶಾಲೆ ಕ್ರೀಡಾಕೂಟ ಹಮ್ಮಿಕೊಂಡರೆ ₹ 1 ಸಾವಿರ, ಸಂಘ-ಸಂಸ್ಥೆಗಳ ಕ್ರೀಡಾ ಚಟುವಟಿಕೆಗೆ ₹ 2 ಸಾವಿರ ಶುಲ್ಕ ಕೇಳಲಾಗುತ್ತದೆ. ವರ್ಷಕ್ಕೆ ಸರಾಸರಿ ₹ 4 ಲಕ್ಷ ಸಂಗ್ರಹವಾದರೆ, ಮಾಡುವ ಖರ್ಚು ₹ 20 ಲಕ್ಷ ದಾಟುತ್ತದೆ. ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಸ್ತುತ ಸದಸ್ಯರ ಸಂಖ್ಯೆ 100 ದಾಟಿಲ್ಲ. ಪ್ರತಿಯೊಬ್ಬರಿಂದ ಸರಾಸರಿ ₹ 5,500 ಸಂಗ್ರಹಿಸಲಾಗುತ್ತದೆ. ವರ್ಷಕ್ಕೆ ನಿರ್ವಹಣೆಯ ವೆಚ್ಚ ₹ 25 ಲಕ್ಷ ದಾಟುತ್ತದೆ. ವಿದ್ಯುತ್‌ ಶುಲ್ಕವೇ ₹ 4 ಲಕ್ಷವಿದೆ.

ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ಬೇಸಿಗೆ ಶಿಬಿರಗಳು ನಡೆದರೆ ಸರಾಸರಿ ₹ 20 ಲಕ್ಷ ಸಂಗ್ರಹವಾಗುತ್ತದೆ. ಖರ್ಚು ₹ 15 ಲಕ್ಷದಷ್ಟಿದೆ. ಈ ವರ್ಷ ಕೊರೊನಾ ಕಾರಣಕ್ಕೆ ಅಲ್ಲೂ ನಷ್ಟವಾಗಿದೆ. ಸಾಗರ, ಶಿಕಾರಿಪುರ ಸೇರಿ ತಾಲ್ಲೂಕು ಕೇಂದ್ರಗಳ ಕ್ರೀಡಾಂಗಣಗಳಿಂದ ನಯಾ ಪೈಸೆ ಆದಾಯವಿಲ್ಲ. ಅಲ್ಲಿನ ಕಾವಲುಗಾರರಿಗೆ, ನಿರ್ವಾಹಕರಿಗೆ ಜಿಲ್ಲಾ ಪಂಚಾಯಿತಿಯಿಂದ ವೇತನ ನೀಡಲಾಗುತ್ತಿತ್ತು. ಈಗ ಸರ್ಕಾರ ಅದನ್ನೂ ಸ್ಥಗಿತಗೊಳಿಸಿದೆ. ಹಾಗಾಗಿ, ಕ್ರೀಡಾಂಗಣಗಳು ಸಂಕಷ್ಟದಲ್ಲಿವೆ.

ಹಸ್ತಾಂತರವಾಗದ ಹಾಸ್ಟೆಲ್
ಶಿವಮೊಗ್ಗದಲ್ಲಿ ನೆಹರೂ ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಕ್ರೀಡಾ ಹಾಸ್ಟೆಲ್‌ನಲ್ಲಿ 60 ಮಕ್ಕಳು ಇದ್ದರೆ, ಊಟ ಹೊರತುಪಡಿಸಿ ನಿರ್ವಹಣೆಗೆ ವಾರ್ಷಿಕ ₹ 20 ಲಕ್ಷ ಅನುದಾನವಿದೆ. ಆದರೆ, 10 ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೃಷಿ ನಗರದಲ್ಲಿ ಕಟ್ಟಿದ ಕ್ರೀಡಾ ಹಾಸ್ಟೆಲ್‌ ಇದುವರೆಗೂ ಕ್ರೀಡಾ ಇಲಾಖೆಗೆ ಹಸ್ತಾಂತರವಾಗದೆ ಹಾಳು ಬಿದ್ದಿದೆ.

ಮಾಹಿತಿ: ಜಿ.ಬಿ. ನಾಗರಾಜ್, ಚಂದ್ರಹಾಸ ಹಿರೇಮಳಲಿ, ವಿನಾಯಕ ಭಟ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು