ಭಾನುವಾರ, ಏಪ್ರಿಲ್ 18, 2021
25 °C
ಸಂಪೂರ್ಣವಾಗಿ ಪರಾವಲಂಬಿಯಾದ ಹೈನುಗಾರಿಕೆ; ಸಂಕಷ್ಟದಲ್ಲಿ ರೈತರು

ಒಳನೋಟ: ಅತ್ತ ಗೋಮಾಳವಿಲ್ಲ, ಇತ್ತ ಸ್ವಂತ ಭೂಮಿಯೂ ಇಲ್ಲ

ಬಸವರಾಜ ಹವಾಲ್ದಾರ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಅತ್ತ ಗೋಮಾಳವಿಲ್ಲ, ಇತ್ತ ಸ್ವಂತ ಭೂಮಿಯೂ ಇಲ್ಲ. ಕುಟುಂಬ ನಿರ್ವಹಣೆಗೆ ನೆರವಾಗುತ್ತಿದ್ದ ದನಗಳಿಗೆ ನೀಡುವ ಮೇವು, ಹಿಂಡಿ ಸೇರಿದಂತೆ ಎಲ್ಲವನ್ನೂ ಖರೀದಿಸಬೇಕಿದೆ. ವೆಚ್ಚ ಹೆಚ್ಚಾಗಿರುವುದರಿಂದ ಕೃಷಿಯಂತೆ ಹೈನುಗಾರಿಕೆಯಲ್ಲಿಯೂ ಕೈಸುಟ್ಟುಕೊಳ್ಳುವಂತಾಗಿದೆ’

– ಹೀಗೆಂದವರು ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದ ರೈತ ಬಸವಲಿಂಗಪ್ಪ. ‘ಗೋಮಾಳಗಳಿದ್ದಾಗ ಬೆಳಿಗ್ಗೆಯಿಂದ ಸಂಜೆಯವರೆಗೆ ದನಗಳು ಅಲ್ಲಿಯೇ ಮೇಯುತ್ತಿದ್ದವು. ಸ್ವಂತ ಜಮೀನಿನಲ್ಲಿ ಬೆಳೆದ ಬೆಳೆಯೂ ಮೇವಾಗುತ್ತಿತ್ತು. ಈಗ ಅವೆರಡೂ ಇಲ್ಲವಾಗಿವೆ. ಅಲ್ಪ–ಸ್ವಲ್ಪ ಭೂಮಿ ಇದ್ದವರೂ ವಾಣಿಜ್ಯ ಬೆಳೆಗಳತ್ತ ವಾಲಿದ್ದಾರೆ. ಹೈನುಗಾರಿಕೆ ಸಂಪೂರ್ಣ ಪರಾವಲಂಬಿಯಾಗಿದೆ. ಒಕ್ಕೂಟದವರೂ ಹಾಲಿಗೆ ಉತ್ತಮ ಬೆಲೆ ನೀಡದಿರುವ ಕಾರಣ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ’ ಎಂದು ಸಂಕಷ್ಟ ಬಿಚ್ಚಿಟ್ಟರು.

ಗೋಮಾಳಗಳ ಜಾಗ ಈಗ ದಾಖಲೆಯಲ್ಲಿ ಮಾತ್ರ ಉಳಿದಿದೆ. ಕುಟುಂಬಗಳ ವಿಭಜನೆಯಿಂದಾಗಿ ಕೃಷಿ ಭೂಮಿ ಇಲ್ಲವಾಗಿದೆ. ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಅವರ ಸಂಕಷ್ಟಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಗೋಮಾಳದ ಜಾಗ ಬಹುತೇಕ ಕಡೆ ಮನೆ, ದೇವಸ್ಥಾನ, ಸ್ಮಶಾನ, ಕಲ್ಲು ಗಣಿಗಾರಿಕೆ, ರೆಸಾರ್ಟ್ ನಿರ್ಮಾಣ, ಉಳುಮೆ ಸೇರಿದಂತೆ ಹಲವು ಕಾರಣಗಳಿಗೆ ಒತ್ತುವರಿಯಾಗಿದೆ. ಒತ್ತುವರಿ ಮಾಡಿದ ಬಹುತೇಕರು ಆರ್ಥಿಕವಾಗಿ ಬಲಾಢ್ಯರಾಗಿದ್ದಾರೆ. ಅವರ ನೆರವಿಗೆ ಪರೋಕ್ಷವಾಗಿ ಜನಪ್ರತಿಧಿಗಳು ನಿಂತಿದ್ದಾರೆ.

ಮೇವು, ಹಿಂಡಿ ಇತ್ಯಾದಿಗಳನ್ನು ರೈತರು ಕೊಂಡುಕೊಳ್ಳಬೇಕಾದ ಸ್ಥಿತಿ ತಲುಪಿರುವುದರಿಂದ ಹೈನುಗಾರಿಕೆ ವೆಚ್ಚದ ಪ್ರಮಾಣ ಹೆಚ್ಚಾಗಿದೆ. ಆದಾಯ ಕುಸಿದಿದೆ. ಇದರಿಂದಾಗಿ ಜಾನುವಾರುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಗಂಡು ಕರುಗಳನ್ನು ಮೂರ್ನಾಲ್ಕು ತಿಂಗಳು ಸಾಕಿ, ಕಸಾಯಿಖಾನೆಯವರಿಗೆ ಮಾರಾಟ ಮಾಡಿದರೆ ಒಂದಷ್ಟು ಹಣ ಸಿಗುತ್ತದೆ ಎಂದು ರೈತರು ಸಾಕುತ್ತಿದ್ದರು. ಈಗ ಮಾರಾಟ ಮಾಡುವುದನ್ನು ನಿಷೇಧಿಸಿರುವುದರಿಂದ ಮಂಡ್ಯ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳಲ್ಲಿ ಕರುಗಳನ್ನು ಗೋಶಾಲೆಗಳ ಮುಂದೆ, ಕಾಡುಗಳಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಪೌಷ್ಟಿಕ ಆಹಾರದ ಕೊರತೆಯಿಂದ ಕರುಗಳು ಸಾವನ್ನಪ್ಪುತ್ತಿವೆ.

ಗೋಶಾಲೆಗಳ ಮೇಲೆ ಒತ್ತಡ: ಕಾಯ್ದೆ ಜಾರಿ ನಂತರ ಮಂಡ್ಯ ಜಿಲ್ಲೆಯ ಬ್ಯಾಡರಹಳ್ಳಿಯಲ್ಲಿರುವ ಚೈತ್ರಾ ಗೋಶಾಲೆಗೆ 240 ಗಂಡು ಕರುಗಳನ್ನು ತಂದು ಬಿಡಲಾಗಿದೆ. ನಿತ್ಯ ಹತ್ತಾರು ಕರುಗಳನ್ನು ತಂದು ಬಿಡಲಾಗುತ್ತಿದೆ. ಅದರಲ್ಲಿ ಕೆಲವು ಸಾವನ್ನಪ್ಪಿವೆ ಎನ್ನುತ್ತಾರೆ ಗೋ ಸಂರಕ್ಷಕ ಶಿವಕುಮಾರ್.

ಗಂಡು ಕರು ಹಾಗೂ ಬರಡು ದನಗಳನ್ನು ಬಿಡುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಗೋಶಾಲೆಗಳ ಮೇಲಿನ ಒತ್ತಡ ಹೆಚ್ಚಾಗಲಿದೆ. ನಗರಗಳಿಗೆ ತಂದು ಬಿಟ್ಟು ಹೋಗುತ್ತಿರುವುದರಿಂದ ನಗರಗಳಲ್ಲಿ ಬಿಡಾಡಿ ದನಗಳ ಸಂಖ್ಯೆಯೂ ಹೆಚ್ಚಾಗಲಿದೆ.

ಮೇಯಿಸಲು ಗೋಮಾಳವಿಲ್ಲ, ಮಾರಾಟ ಮಾಡಬೇಕೆಂದರೆ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಅಡ್ಡಿಯಾಗಿದೆ. ಭಾವನಾತ್ಮಕವಾಗಿ ಯೋಚಿಸುವ ಬದಲು ರೈತರ ಸಂಕಷ್ಟದ ಸ್ಥಿತಿ ಅರಿಯಬೇಕು. ರೈತರು ಉಳಿದರೆ, ಜಾನುವಾರು ಉಳಿಯುತ್ತವೆ. ರೈತರೇ ಉಳಿಯದಿದ್ದರೆ, ಜಾನುವಾರು ಸಾಕುವವರು ಯಾರು?

- ಬಾಬಾಗೌಡ ಪಾಟೀಲ, ರೈತ ಮುಖಂಡ

***

ಒತ್ತುವರಿಯಾಗಿರುವ ಗೋಮಾಳಗಳನ್ನು ಸಂರಕ್ಷಿಸಿ. ಪ್ರತಿ ಗ್ರಾಮದಲ್ಲಿಯೂ ಗೋಶಾಲೆಗಳನ್ನು ತೆರೆದ ನಂತರ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕಿತ್ತು. ಬೇಸಾಯ ಇತ್ತೀಚಿನ ದಿನಗಳಲ್ಲಿ ಲಾಭದಾಯಕವಾಗಿಲ್ಲ. ಉಪಕಸುಬಾಗಿದ್ದ ಹೈನುಗಾರಿಕೆಯೂ ಸಂಕಷ್ಟಕ್ಕೆ ಸಿಲುಕಿದೆ. ಹೀಗಾದರೆ, ರೈತರು ಬದುಕುವುದು ಹೇಗೆ?

- ಶಂಭುನಹಳ್ಳಿ ಸುರೇಶ, ರೈತ, ಮಂಡ್ಯ

***

ಹೀಗಿದೆ ಹಾಲಿನ ಲೆಕ್ಕಾಚಾರ

ಒಂದು ಹಸುವಿಗೆ 25 ಕೆಜಿ ಹಸಿ ಮೇವು, 5 ಕೆಜಿ ಒಣಮೇವು, ಹಸು ಹಾಲು ನೀಡುವ ಪ್ರಮಾಣದ ಆಧಾರದ ಮೇಲೆ ಹಿಂಡಿ (ಎರಡು ಲೀಟರ್ ಹಾಲು ನೀಡಿದರೆ, 1 ಕೆಜಿಯಷ್ಟು ಹಿಂಡಿ) ನೀಡಬೇಕು. ಪ್ರತಿ ಕೆಜಿ ಹಸಿಮೇವಿಗೆ 75 ಪೈಸೆ, ಪ್ರತಿ ಕೆಜಿ ಒಣ ಮೇವಿಗೆ ₹ 15 ರಿಂದ 20, ಪ್ರತಿ ಕೆಜಿ ಹಿಂಡಿಗೆ ₹40 ವೆಚ್ಚ ಮಾಡಬೇಕು.

ಹಸು 10 ಲೀಟರ್ ಹಾಲು ನೀಡಿದರೆ ₹293 ಖರ್ಚಾಗುತ್ತದೆ. ಕೆಎಂಎಫ್‌ಗೆ 8.5 ಎಸ್‌ಎನ್‌ಎಫ್‌ (ಸಾಲಿಡ್‌ ನಾಟ್‌ ಫ್ಯಾಟ್‌) ಹೊಂದಿರುವ ಪ್ರತಿ ಲೀಟರ್‌ ಹಾಲಿಗೆ ಬೆಂಗಳೂರಿನಲ್ಲಿ ₹ 26 ದರ ಫ್ಯಾಟ್‌ 3.5 ಕನಿಷ್ಠ ಇರಬೇಕು. ಫ್ಯಾಟ್‌ 4 ರಷ್ಟಿರುವುದರಿಂದ ₹28 ಸಿಗುತ್ತಿದೆ. ಸರ್ಕಾರ ಪ್ರತಿ ಲೀಟರ್‌ಗೆ ನೀಡುವ ₹5 ಪ್ರೋತ್ಸಾಹ ಧನ ಸೇರಿ ಪ್ರತಿ ಲೀಟರ್‌ಗೆ ₹ 33 ಸಿಗುತ್ತದೆ. 10 ಲೀಟರ್‌ಗೆ ₹330 ದೊರೆಯುತ್ತಿದೆ.

10 ಲೀಟರ್ ಹಾಲು ನೀಡಿದರೆ ಹಸುವಿನಿಂದ ರೈತರಿಗೆ ಕೇವಲ ₹ 37 ಉಳಿಯುತ್ತದೆ. ಹಸು 6 ಲೀಟರ್ ಹಾಲು ನೀಡಿದರೆ ಖರ್ಚು ₹193 ಆದರೆ, ಆದಾಯ 165 ಆಗುತ್ತದೆ. ಆಗ ನಷ್ಟ ಎದುರಿಸಬೇಕಾಗುತ್ತದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಹಸುವಿನ ಆರೈಕೆಯಲ್ಲಿ ತೊಡಗುವ ರೈತ ದಂಪತಿಗಳ ಕೂಲಿಯ ಲೆಕ್ಕ ಸೇರಿಲ್ಲ.

ಜಾನುವಾರಗಳ ಜೀವಿತಾವಧಿ ಲೆಕ್ಕಾಚಾರ

ಹಸುಗಳು ಸರಾಸರಿ 16 ವರ್ಷ ಬದುಕುತ್ತವೆ. 18ನೇ ತಿಂಗಳಿಗೆ ಪ್ರೌಢಾವಸ್ಥೆಗೆ ಬರುತ್ತದೆ. ಪ್ರತಿ ವರ್ಷಕ್ಕೊಂದರಂತೆ ಕರು ಹಾಕಿದರೆ, 9 ಕರುಗಳನ್ನು ಹಾಕಬಹುದು. ಮೊದಲ ಐದು ಕರುಗಳವರೆಗೆ ಹಸುವಿನ ಹಾಲಿನ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ನಂತರದಲ್ಲಿ ಇಳಿಕೆ ಪ್ರಮಾಣದಲ್ಲಿರುತ್ತದೆ. ಹಾಲು ಕರೆಯುವುದನ್ನು ನಿಲ್ಲಿಸಿದ ನಂತರವೂ ರೈತರು ಹಸು ಸಾಕಿದರೆ, ಪ್ರತಿ ತಿಂಗಳಿಗೆ ₹4 ಸಾವಿರವರೆಗೆ ವೆಚ್ಚವಾಗುತ್ತದೆ. ಗಂಡು ಕರುವಾದರೆ, ಕೆಲವೊಂದು ಮಾತ್ರ ಉಳುಮೆಗೆ ಬಳಕೆಯಾಗುತ್ತವೆ. ಸಣ್ಣ ರೈತರ ಸಂಖ್ಯೆ ಹೆಚ್ಚಿರುವುದರಿಂದ ಜಾನುವಾರು ಬೇಕಿಲ್ಲ. ಅನೇಕ ಮಂದಿ ಭೂಮಿಯನ್ನೇ ಹೊಂದಿಲ್ಲ.

ಕೆಚ್ಚಲುಬಾವು, ಕಾಲುಬಾಯಿ ಜ್ವರ, ಗಂಟಲಬೇನೆ ಜ್ವರ ಸೇರಿದಂತೆ ಹಲವು ರೋಗಗಳು ಜಾನುವಾರುಗಳನ್ನು ಕಾಡುತ್ತವೆ. ಕೆಚ್ಚಲುಬಾವಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಕೊಡಿಸದಿದ್ದರೆ ಬರಡಾಗುತ್ತವೆ. ರೋಗಗಳು ಬಂದಾಗ ಹಾಲಿನ ಉತ್ಪಾದನೆಯೂ ತಿಂಗಳುಗಟ್ಟಲೇ ಕಡಿಮೆಯಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು