ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಗಾದೆಗೆ ಬೇಕಲ್ಲವೆ ಕಾಲನ ತಗಾದೆ?

Published 16 ಆಗಸ್ಟ್ 2023, 23:31 IST
Last Updated 16 ಆಗಸ್ಟ್ 2023, 23:31 IST
ಅಕ್ಷರ ಗಾತ್ರ

ಸಿನಿಮಾ ನಟರೊಬ್ಬರು ಇತ್ತೀಚೆಗೆ ಫೇಸ್‍ಬುಕ್‍ನಲ್ಲಿ ಸಂದರ್ಶನ ನೀಡುವಾಗ ನಮೂದಿಸಿದ ಗಾದೆಯೊಂದು ವಿವಾದಕ್ಕೆಡೆಯಾಗಿದೆ. ನಮಗೆ ಷೇಕ್ಸ್‌ಪಿಯರ್‌ ನಾಟಕಗಳನ್ನು ಬೋಧಿಸುತ್ತಿದ್ದ ಪ್ರೊ. ಎಸ್.ಎನ್.ಶಂಕರ್, ಶತಮಾನದಿಂದ ಶತಮಾನಕ್ಕೆ ಪದಗಳ ಅರ್ಥ ಬದಲಾಗಬಹುದು ಎಂದು ಆಗಿಂದಾಗ್ಗೆ ಹೇಳುತ್ತಿದ್ದರು. ನಾಲ್ಕು ಶತಮಾನಗಳ ಹಿಂದೆ ‘suiter’ ಅಂದರೆ ಭಿಕ್ಷುಕ, ಇಂದು ವಧುವಿಗೆ ತಕ್ಕ ವರ!

‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’ ಎನ್ನುವ ಗಾದೆಯೇ ಇದೆ. ಪದಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸದಿದ್ದರೆ ಅಥವಾ ಉತ್ಪ್ರೇಕ್ಷಿತವಾಗಿ ಬಳಸಿದರೆ ರಂಪಕ್ಕೆ ಆಹ್ವಾನವಾಗುತ್ತದೆ. ಅರೇಬಿಯಾದ ಗಾದೆಯೊಂದು ನಾಲಗೆಯನ್ನು ಕುದುರೆಗೆ ಹೋಲಿಸುತ್ತದೆ. ನಾಲಗೆಯನ್ನು ಚೆನ್ನಾಗಿ ನೋಡಿಕೊಂಡರೆ ಅದು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ. ಪದಗಳೇ ಹೀಗೆ ಕಾಲಘಟ್ಟಕ್ಕೆ ರಾಜಿಯಾದರೆ ಗಾದೆಗಳ ಬಗ್ಗೆ ಹೇಳಬೇಕಿಲ್ಲ. ಹಾಗಾಗಿ ಕಾಲಧರ್ಮವನ್ನು ಅರಿತೇ ಮಾತನಾಡುವುದು ಜಾಣ್ಮೆ.

ಗಾದೆ ಅಂದಮಾತ್ರಕ್ಕೆ ಅದು ಸರ್ವವ್ಯಾಪಿ, ಸಾರ್ವಕಾಲಿಕ ಎಂದೇನಲ್ಲ. ಅದು ಎಲ್ಲ ಕಾಲಕ್ಕೂ ನಿಜವೂ ಆಗಬೇಕಿಲ್ಲ. ಅದು ಭವಿಷ್ಯವಾಣಿಯೂ ಅಲ್ಲ, ಮಾಯಾ ಸೂತ್ರವೂ ಅಲ್ಲ. ಸ್ವಾರಸ್ಯವೆಂದರೆ, ಗಾದೆಗಳೇ ಈ ಅಂಶವನ್ನು ಸ್ಪಷ್ಟಪಡಿಸುತ್ತವೆ. ಗಾದೆಗಳಲ್ಲಿ ಅಲ್ಲಲ್ಲಿ ವೈರುಧ್ಯಗಳೂ ಕಾಣಸಿಗುತ್ತವೆ. ಒಂದು ನಿದರ್ಶನ ಗಮನಿಸಿ. ಹತ್ತು ಕೈಗಳು ಸೇರಿದರೆ ಕೆಲಸ ಕಾರ್ಯ ಸರಾಗ ಎನ್ನುತ್ತದೆ ಒಂದು ಗಾದೆ. ಹಲವು ಬಾಣಸಿಗರಿದ್ದರೆ ಅಡುಗೆ ಕೆಡುತ್ತದೆ ಅಂತ ಹೇಳುತ್ತದೆ ಇನ್ನೊಂದು ಗಾದೆ! ಮೌಢ್ಯ, ಅಂಧಾಚರಣೆ ಬಿತ್ತುವ ನುಡಿಗಟ್ಟುಗಳು ಧಾರಾಳ ಇವೆ. ಅವನ್ನು ಅನುಸಂಧಾನಿಸುವ ತಿಳಿವಳಿಕೆ ನಮಗಿರಬೇಕು. ಸಿಂಹಗಳು ಇತಿಹಾಸಕಾರರನ್ನು ಹೊಂದುವತನಕ ಬೇಟೆಗಾರರ ಸಾಹಸಗಳು ರಂಗುರಂಗಾಗಿರುತ್ತವೆ ಎಂದು ಒಂದು ಗಾದೆಯಿದೆ. ಸಾರ್ವಕಾಲಿಕ ಸತ್ಯವಾದ ಗಾದೆಗೆ ಇದೊಂದು ಉದಾಹರಣೆ.

ಸರ್ವದಾ ಭಾಷಿಕ, ಭೌಗೋಳಿಕ ಹಾಗೂ ಬಹುಸಂಸ್ಕೃತಿಯ ಅನುಭವಗಳು ನುಡಿಗಟ್ಟುಗಳನ್ನು ಪ್ರಭಾವಿಸಿರುತ್ತವೆ. ಒಂದೇ ಗಾದೆ ಬೇರೆ ಬೇರೆ ಭಾಷೆಗಳಲ್ಲಿ ಒಂದೇ ಅರ್ಥ, ಭಾವ ಅಭಿವ್ಯಕ್ತಿಸುತ್ತದೆ ಎಂದು ಭಾವಿಸಿದರೆ ಅದು ತಪ್ಪು ತಿಳಿವಳಿಕೆ ಆಗುತ್ತದೆ. ‘ತಂತ್ರಜ್ಞಾನವು ಬದುಕನ್ನು ಸುಧಾರಿಸಬೇಕು, ಬದುಕೇ ತಂತ್ರಜ್ಞಾನ ಆಗಬಾರದು’, ‘ಮೊಬೈಲ್ ನಮ್ರ ಸೇವಕ, ಆದರೆ ಅಪಾಯಕಾರಿ ನಾಯಕ’, ‘ತಾಸಿಗೊಂದು ಸೆಲ್ಫಿಯಿದ್ರೆ ಮಿತ್ರರು ದೂರ’- ಇವು ಬದುಕನ್ನು ಪ್ರತಿನಿಧಿಸಬಲ್ಲ ನಗರ ನುಡಿಗಟ್ಟುಗಳು ಎನ್ನಬಹುದಲ್ಲ? ಮಾತು ಮನೆಯನ್ನು ಕಟ್ಟಬಹುದು, ಕೆಡಿಸಲೂಬಹುದು. ಆಡುವವರನ್ನು ಅದು ಅವಲಂಬಿಸಿದೆ. ಯಾರೊಬ್ಬರ ಸ್ವತ್ತೂ ಅಲ್ಲದ ಬುದ್ಧಿವಂತಿಕೆಯ ಮೌಖಿಕ ಪ್ರಕಾರವಾದ ಗಾದೆ ಜಾಗತಿಕ ಜನನಿರ್ಮಿತಿ.

ಆಡು ಮುಟ್ಟದ ಸೊಪ್ಪಿಲ್ಲ, ಗಾದೆಗಳು ಒಳಗೊಳ್ಳದ ವಿಷಯವಿಲ್ಲ. ಸುಖ, ದುಃಖ ಪ್ರಶಂಸೆ, ದೌರ್ಬಲ್ಯ, ಎಚ್ಚರಿಕೆ, ಆರೋಗ್ಯ, ಉಳಿತಾಯ, ಬೀಗು, ಪರಿಸರ, ಕೋಪ, ಸೌಂದರ್ಯ... ಒಂದೇ? ಎರಡೇ? ಹಾಸ್ಯವಂತೂ ಪ್ರತಿಯೊಂದು ಗಾದೆಯಲ್ಲೂ ಮೇಳೈಸಿಯೇ ಇರುತ್ತದೆ. ಆಯಾ ಸಾಮಾಜಿಕ ಸಂದರ್ಭವನ್ನು ಗಮನದಲ್ಲಿ ಇಟ್ಟುಕೊಂಡು ಗಾದೆಗಳ ಬಳಕೆಯಾದರಷ್ಟೇ ಅವುಗಳ ಮೊನಚು ಸಾರ್ಥಕ. ಊಟಕ್ಕೆ ಕೂತವರೊಬ್ಬರು ಅದೇಕೊ ಚಡಪಡಿಸುತ್ತಾರೆ. ಆತಿಥೇಯರ ಬಳಿ ಕೊರತೆ ಹೇಳಲು ಸಂಕೋಚ. ಕಡೆಗೆ ಯೋಚಿಸಿಯೇ ಹೇಳಿದ್ದೇನು? ಪಲ್ಯ ಕೊಂಚ ಸಮುದ್ರಕ್ಕೆ ಹತ್ತಿರವಾಗಿದೆ ಎಂದು! ಅಪ್ರಿಯವಾದರೂ ನಯವಾದ ಮಾತಿನಲ್ಲಿ ಹೇಳುವುದೆಂದರೆ ಇದೇ ಅಲ್ಲವೆ?

ದೊರೆ ಸಾಲೊಮನ್ ಒಟ್ಟು 3,000 ಗಾದೆಗಳನ್ನು ಉಪಯೋಗಿಸಿ ಬದುಕಿನ ಸಂಗತಿಗಳನ್ನು ಪ್ರಸ್ತಾಪಿಸುತ್ತಿದ್ದುದಕ್ಕೆ ಪುರಾವೆಯಿದೆ. ಲಿಖಿತ ಸಾಹಿತ್ಯವಿಲ್ಲದ ಸಂಸ್ಕೃತಿಗಳಲ್ಲಿ ಗಾದೆಗಳು ಜ್ಞಾನ, ಮೌಲ್ಯಗಳನ್ನು ಒದಗಿಸುತ್ತವೆ. ‘ಸಾರಯುಕ್ತವೂ ಸಂಕ್ಷಿಪ್ತವೂ ಆದ ವಿವೇಕದ ಗುಳಿಗೆಗಳು’, ‘ಅರಿವಿನ ಜೀವಂತ ಪಳೆಯುಳಿಕೆಗಳು’, ‘ಮಾತಿಗೊಂದು ಗಾದೆ’ ಮುಂತಾಗಿ ಸಾಗುತ್ತದೆ ಗಾದೆಗಳ ಕುರಿತು ಹೊಗಳಿಕೆಗಳು. ಗಾದೆಗಳ ಈ ವಿಶೇಷಣಗಳಿಗೆ ಭಂಗವಾಗಬಾರದು, ಯಾರನ್ನೂ ಅವು ನೋಯಿಸಬಾರದು, ನಿರ್ಭಯವಾಗಿ, ನಿರಾತಂಕವಾಗಿ ಅವನ್ನು ಬಳಸುವಂತಿರಬೇಕು, ಈ ಮೂರು ಅಂಶಗಳನ್ನೂ ದೃಷ್ಟಿಯಲ್ಲಿ ಇರಿಸಿಕೊಂಡು ಒಟ್ಟಂದದಲ್ಲಿ ಗಾದೆಗಳನ್ನು ಪರಿಷ್ಕರಿಸುವ ಅಗತ್ಯವಿದೆ.

ಇಂದು ಬಳಕೆಯಲ್ಲಿಲ್ಲದ, ವಿನಾಕಾರಣ ಒಂದು ಜಾತಿ, ಧರ್ಮ, ಪಂಥ, ಪಂಗಡ, ವರ್ಗವನ್ನು ಕೀಳಾಗಿ ಕಾಣುವಂತಹ ಪದಗಳಿದ್ದರೆ ನಿಘಂಟಿನಿಂದ ಹಾಗೂ ಗಾದೆಗಳಿಂದ ತೆಗೆಯುವ ಕಾರ್ಯ ಆಗಬೇಕು. ಹೇಗೂ ಗಾದೆಗಳು ಜನರಿಂದ ಜನರಿಗಾಗಿ ನಿರ್ಮಿಸಿದ ಆಡುಮಾತುಗಳು. ಅವು ನಿಯಮವೂ ಅಲ್ಲ, ಕಟ್ಟಲೆಯೂ ಅಲ್ಲ, ಜನರ ವರ್ತನೆಗಳು ತಲುಪಬಹುದಾದ ಅತಿರೇಕಗಳನ್ನು, ಎಸಗುವ ಪ್ರಮಾದಗಳನ್ನು, ತೋರುವ ಆತುರ ಕಾತುರವನ್ನು ವಿಮರ್ಶಿಸುವ ಲಘು ನುಡಿಗಳು.

ಆಡುಮಾತು ಆಡಿಕೊಳ್ಳುವ ಮಾತಾಗದಂತೆ, ಬಹು ಜಾಗರೂಕತೆ ವಹಿಸಬೇಕು. ಚೆನ್ನಾಗಿ ಆಲೋಚಿಸುವ ಭಾಗವೆಂದರೆ, ಆಡುವ ಮೊದಲು ಆಲೋಚಿಸುವುದೇ. ಇದರಿಂದ ನಾವು ಉಪಯೋಗಿಸುವ ಪದ, ಒಕ್ಕಣೆಗಳ ಪರಿಣಾಮಗಳನ್ನು ವಿಚಾರ ಮಾಡಲು ಸಮಯ ದೊರೆಯುವುದು. ಬಳಸುವ ಉಕ್ತಿಗಳು ನಮ್ಮ ಅಸ್ಮಿತೆ, ಮನೋಭಾವ, ಸೂಕ್ಷ್ಮತೆಯನ್ನು ನಿರ್ವಚಿಸುತ್ತವೆ. ಪದಗಳ ಆಯ್ಕೆ ನಮ್ಮ ವಿವೇಕ ಅಥವಾ ಅಜ್ಞಾನದ ಸೂಚಕವೂ ಹೌದು.

ಮಾತನಾಡಲು ಹೊರಟಿದ್ದೇನಲ್ಲ, ಅದು ಮೌನಕ್ಕಿಂತ ಉತ್ತಮ ಎಂದು ಖಾತರಿಪಡಿಸಿಕೊಂಡೇ ಮಾತಿಗೆ ಮುಂದಾಗುವುದು ರಾಜಮಾರ್ಗ. ಬಡಿಸುವ ಮುನ್ನ ಪರಮಾನ್ನ, ಪಾಯಸದ ರುಚಿ ನೋಡುವುದಕ್ಕೆ ಈ ಜೋಕೆಯನ್ನು ಹೋಲಿಸಬಹುದೆನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT