ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಮಗುವಿಗೊಂದು ಮಗು, ಕಳೆಯುವುದು ನಗು

ಸ್ವತಃ ಬೆಳವಣಿಗೆಯ ಹಂತದಲ್ಲಿ ಇರುವ ಹದಿಹರೆಯದ ಹುಡುಗಿ, ಇನ್ನೊಂದು ಜೀವವನ್ನು ತನ್ನ ಉದರದಲ್ಲಿ ಪೋಷಿಸಲು ಶಕ್ತಳಾಗಿರಲು ಸಾಧ್ಯವೇ?
Last Updated 24 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಮಹಾರಾಷ್ಟ್ರದ 16 ಜಿಲ್ಲೆಗಳಲ್ಲಿ ಮೂರು ವರ್ಷ ಗಳಲ್ಲಿ 15 ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳು 18 ವರ್ಷ ತುಂಬುವ ಮೊದಲೇ ತಾಯಂದಿರಾಗಿದ್ದಾರೆ ಎಂದು ಪತ್ರಿಕೆಯಲ್ಲಿ ಓದಿ ಗಾಬರಿಯಾಗಿದ್ದೆ. ಅಷ್ಟರಲ್ಲಿ ‘ನಾಲ್ಕು ದಿವಸ ಕೆಲಸಕ್ಕೆ ರಜಾ ಬೇಕು, ಅಕ್ಕನ ಮಗಳ ಸೀಮಂತಕ್ಕೆ’ ಎಂಬ, ಮನೆಯ ಸಹಾಯಕಿಯ ಬೇಡಿಕೆ ಕೇಳಿ ಆಶ್ಚರ್ಯವಾಯಿತು.

ನಾಲ್ಕು ವರ್ಷಗಳ ಹಿಂದೆ ರಜೆಗೆ ಬಂದಿದ್ದ, ಆರನೇ ತರಗತಿ ಓದುತ್ತಿದ್ದ, ಎರಡು ಜಡೆ ಹಾಕಿದ್ದ ಪುಟ್ಟ ಹುಡುಗಿಯ ನೆನಪಿತ್ತು. ಸಂಶಯದಿಂದಲೇ ಆ ಪುಟ್ಟ ಹುಡುಗಿಗೆ ಸೀಮಂತವೇ ಎಂದು ಕೇಳಿದಾಗ ಹೌದೆಂದಳು. ಸಿಟ್ಟಿನಿಂದ ‘ಹದಿನೆಂಟೂ ದಾಟದ ಹುಡುಗಿ ತಾಯಿಯಾಗುವುದೇ’ ಎಂದೆ. ‘ಅಯ್ಯೋ, ಕರೋನಾ ಸಮಯದಲ್ಲಿ ಶಾಲೆಯೇ ಇರಲಿಲ್ಲ. ಇದ್ರೂ ಹುಡ್ಗಿ ಓದಿ ನಮ್ಮನ್ನು ಸಾಕಬೇಕೇ ಅಂತಾರೆ ಅವ್ರು. ಹೊಲದ ದುಡಿಮೆಯೂ ಅಷ್ಟಕ್ಕಷ್ಟೇ. ಅಷ್ಟರಲ್ಲಿ ನಮ್ಮ ಸಂಬಂಧಿಕರೇ ಆದ ಹುಡುಗ ಮದುವೆಯಾಗ್ತೀನಿ ಅಂತ ಕೇಳಿದ. ಒಳ್ಳೆ ಆಸ್ತಿಪಾಸ್ತಿ ಇದ್ದಂವ. ಕರೋನಾ ಅಂದ್ರೆ ಯಾರೂ ಬರೋಷ್ಟಿಲ್ಲ, ಖರ್ಚೂ ಉಳೀತು. ಹಂಗಾಗಿ, ಅವ್ನಿಗೆ ಮೂವತ್ತು ವರ್ಷವಾದ್ರೂ ಪರವಾಗಿಲ್ಲ ಅಂತ ಊರವರೆಲ್ಲಾ ತೀರ್ಮಾನಿಸಿ ಮದುವೆ ಮಾಡಿಬಿಟ್ರು. ಕರೋನ ಇದ್ದಿದ್ದರಿಂದ ನಮಗೂ ವಿಷ್ಯ ತಿಳಿಸಲಿಲ್ಲ. ತಡೆಯುವವರು ಯಾರೂ ಇರಲಿಲ್ಲ. ಈಗ ಅವಳದ್ದೇ ಸೀಮಂತ’ ಎಂದು ಸ್ವಲ್ಪ ಬೇಸರದಿಂದಲೇ ಹೇಳಿದಳು.

ಕೋವಿಡ್ ಸಮಯದಲ್ಲಿ 2020-21ರಲ್ಲಿ ರಾಜ್ಯದಲ್ಲಿ 296 ಬಾಲ್ಯವಿವಾಹಗಳು ವರದಿಯಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ದುಪ್ಪಟ್ಟು. ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಏರಿಕೆಯಾಗುತ್ತಲೇ ಇದೆ! ಹಾಗೆ ನೋಡಿದರೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಪ್ರಕಾರ, 2020ರಲ್ಲಿ ಬಾಲ್ಯವಿವಾಹದ ವಿಷಯಕ್ಕೆ ಬಂದರೆ ಕರ್ನಾಟಕವು, ಭಾರತದ ರಾಜ್ಯಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ! ಬಡತನ, ಶಿಕ್ಷಣದ ಕೊರತೆ, ಮನೆಯಲ್ಲಿನ ಜವಾಬ್ದಾರಿ, ತಮ್ಮ ಕರ್ತವ್ಯ ಮುಗಿಸುವ ಆತುರ, ಹೆಣ್ಣು ಪರರ ವಸ್ತು ಎಂಬ ಮೌಢ್ಯ, ಕಾನೂನಿನ ಬಗ್ಗೆ ಅಜ್ಞಾನ ಇವೆಲ್ಲವೂ ಬಾಲ್ಯವಿವಾಹಕ್ಕೆ ಕಾರಣಗಳು.

ಬಾಲ್ಯವಿವಾಹದ ಪ್ರಮುಖ ದುಷ್ಪರಿಣಾಮ ಗಳಲ್ಲೊಂದು ಹದಿಹರೆಯದಲ್ಲೇ ತಾಯ್ತನ. ತಾಯಿಯಾಗಲು ದೇಹ ಮತ್ತು ಮನಸ್ಸು ಎರಡೂ ಆರೋಗ್ಯವಾಗಿರಬೇಕು. ಪ್ರಪಂಚಜ್ಞಾನವೇ ಅಷ್ಟಾಗಿ ಇರದ, ಆಡುವ, ಶಾಲೆಗೆ ಹೋಗುವ ಮಕ್ಕಳಿಗೆ ಮದುವೆ ಮಾಡಿದಾಗ ಲೈಂಗಿಕ ಜ್ಞಾನ ಇರುವುದು ಸಾಧ್ಯವೇ? ಭಾರತದಲ್ಲಿ ಶೇಕಡ 70ಕ್ಕೂ ಹೆಚ್ಚು ಹದಿಹರೆಯದ ಹೆಣ್ಣುಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.
ಹದಿಹರೆಯದ ಹುಡುಗಿ ಸ್ವತಃ ಬೆಳವಣಿಗೆಯ ಹಂತದಲ್ಲಿ ಇರುತ್ತಾಳೆ. ಇನ್ನೂ ಸಂಪೂರ್ಣವಾಗಿ ಬೆಳೆಯದ ಗರ್ಭಕೋಶ ಮತ್ತು ಇತರ ಅಂಗಾಂಗಗಳು, ಸೂಕ್ಷ್ಮ ಮನಸ್ಸಿನ ಆಕೆ ಇನ್ನೊಂದು ಜೀವವನ್ನು ತನ್ನ ಉದರದಲ್ಲಿ ಪೋಷಿಸಲು ಶಕ್ತಳಲ್ಲ. ಆದರೂ ಗರ್ಭಿಣಿಯಾದಾಗ, ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆ ಉಂಟಾಗುತ್ತದೆ. ಇದು ತಾಯಿ ಮತ್ತು ಮಗು ಇಬ್ಬರ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಅವಧಿಗೆ ಮುನ್ನವೇ ಹೆರಿಗೆ, ಕಷ್ಟಕರ ಹೆರಿಗೆ, ಹೆರಿಗೆಯ ವೇಳೆಗೆ ಅಧಿಕ ರಕ್ತಸ್ರಾವ, ನಂತರ ಸೋಂಕು, ಖಿನ್ನತೆ, ಹಾಲೂಡಿಸಲು ತೊಂದರೆ ಇವೆಲ್ಲವೂ ಸಾಮಾನ್ಯ. ಹಾಗೆಯೇ ಹುಟ್ಟಿದ ಮಕ್ಕಳಲ್ಲಿ ಕಡಿಮೆ ತೂಕ, ಬೆಳವಣಿಗೆಯ ತೊಂದರೆ ಇರುವ ಸಾಧ್ಯತೆಯೂ ಹೆಚ್ಚು. ಇವೆಲ್ಲವೂ ತಾಯಿ ಮತ್ತು ಶಿಶುವಿನ ಮರಣಕ್ಕೆ ಕಾರಣವಾಗಬಹುದು.

ಈ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ಅರಿವು, ತಿಳಿವಳಿಕೆಯ ಜೊತೆ ಭಯವನ್ನು ಮೂಡಿಸಲು ಸರ್ಕಾರ ಬಹಳಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಬಾಲ್ಯವಿವಾಹವನ್ನು ಅಪರಾಧ ಎಂದು ಪರಿಗಣಿಸಿ, ಅದನ್ನು ಮಾಡುವ ಪೋಷಕರಿಗಲ್ಲದೆ ಪ್ರೋತ್ಸಾಹಿಸುವವರಿಗೂ ಶಿಕ್ಷೆಯನ್ನು ನೀಡುತ್ತಿದೆ. ಆದರೂ ಈ ಬಾಲ್ಯವಿವಾಹ ವಿಶೇಷವಾಗಿ ಗಡಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವುದು ಆತಂಕ ಮೂಡಿಸುತ್ತಿದೆ. ಕಾನೂನುಪಾಲನೆಯಲ್ಲಿ ಸಮಸ್ಯೆಯೇ ಅಥವಾ ಇಲಾಖೆಗಳಲ್ಲಿ ಸರಿಯಾಗಿ ಕಾರ್ಯನಿರ್ವಹಣೆ ಆಗುತ್ತಿಲ್ಲವೇ ಎಂದು ವಿಚಾರಿಸಿದರೆ ಅಧಿಕಾರಿಗಳ ಉತ್ತರ ಹೀಗಿದೆ ‘ಸತತ ಪ್ರಯತ್ನ ಮಾಡುತ್ತಲೇ ಇದ್ದೇವೆ. ದುಃಖಕರ ವಿಷಯವೆಂದರೆ, ಗ್ರಾಮಸ್ಥರೇ ಒಟ್ಟಾಗಿ ಬಂದು, ನೀವು ಯಾರು ಕೇಳೋಕೆ ಅಂತಾರೆ. ತಂದೆ ತಾಯಿಯು ಹುಡುಗಿಯ ವಯಸ್ಸಿನ ಬಗ್ಗೆ ಸುಳ್ಳು ಹೇಳುತ್ತಾರೆ. ಶಾಲೆ ಬಿಡಿಸುತ್ತಾರೆ.
ಮಕ್ಕಳಿಗೆ ಏನೇನೋ ಆಸೆ ತೋರಿಸಿ, ಮದುವೆ ಎಂದರೆ ಸುಖ ಎಂದು ನಂಬಿಸುತ್ತಾರೆ. ಇದರ ಜತೆ ಬೇಸರವೆಂದರೆ ಜನರ ಬೆಂಬಲ, ಆ ಮೂಲಕ ವೋಟು ಗಳಿಸಲು ಸ್ವತಃ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳೂ ಇಂಥ ಮದುವೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಇನ್ನಂತೂ ಎಲೆಕ್ಷನ್ ಟೈಮ್. ಸರಿ-ತಪ್ಪು ಎಂಬುದಿಲ್ಲ. ವೋಟಿಗಾಗಿ ಎಲ್ಲವೂ ಸರಿ. ಆ ವಿಷಯದಲ್ಲಿ ನಾವು ಅಸಹಾಯಕರು. ಜನರ ಬೆಂಬಲ ಇಲ್ಲದೆ ನಾವು ಏನನ್ನೂ ಮಾಡುವಂತಿಲ್ಲ’.

ಅಂತರರಾಷ್ಟ್ರೀಯ ಮಹಿಳಾ ದಿನದ ಈ ವರ್ಷದ ಘೋಷಣೆ ‘ಎಂಬ್ರೇಸ್ ಈಕ್ವಿಟಿ’ ಅಂದರೆ ಸಮತೆ, ನ್ಯಾಯಪರತೆಯನ್ನು ನಮ್ಮದಾಗಿಸಿ
ಕೊಳ್ಳೋಣ ಎಂಬುದಾಗಿದೆ. ತಾಯಿಯ ಗರ್ಭದಲ್ಲಿರುವ ಸಮಯದಿಂದ ಮಣ್ಣಾಗುವತನಕ ಮಹಿಳೆ ಸವಾಲುಗಳನ್ನು ಎದುರಿಸುತ್ತಲೇ ಇರುತ್ತಾಳೆ. ಅವುಗಳಲ್ಲೊಂದು ಈ ಬಾಲ್ಯವಿವಾಹ ಮತ್ತು ಹದಿಹರೆಯದ ತಾಯ್ತನ. ಅವನ್ನು ತಡೆಗಟ್ಟಲು ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗಬೇಕು. ತಮಗಿರುವ ಹಕ್ಕುಗಳ ಕುರಿತಾದ ಅರಿವು ಮೂಡಬೇಕು. ಸ್ವಾವಲಂಬಿ ಬದುಕನ್ನು ನಡೆಸಲು, ತನ್ನ ಆರೋಗ್ಯದ ಬಗ್ಗೆ ಮಹಿಳೆ ಹೆಚ್ಚಿನ ತಿಳಿವಳಿಕೆ ಪಡೆಯಲು ಸಾಧ್ಯವಾಗಬೇಕು. ಅದರಲ್ಲಿ ನಮ್ಮೆಲ್ಲರ ಪಾತ್ರವೂ ಇದೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT