ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಕೊರೊನಾ ‘ಮಸೂರ’ದಲ್ಲಿ ಕಾಣದ ಮೌಲ್ಯ

ಹಣದ ಹಪಹಪಿಯಲ್ಲಿ ಮರೆಯಾಗಿದೆ ಮಾನವೀಯ ಗುಣ
Published : 26 ಏಪ್ರಿಲ್ 2021, 20:45 IST
ಫಾಲೋ ಮಾಡಿ
Comments

ಕೊರೊನಾದ ಇಂದಿನ ವಿಷಮ ಸಂದರ್ಭ ಕುರಿತು ನಿತ್ಯ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ, ವಿವಿಧ ವಾಹಿನಿಗಳಲ್ಲಿ ಕಣ್ಣಾರೆ ನೋಡುತ್ತಿದ್ದೇವೆ.

ಆತ್ಮೀಯರು ತೀರಿ ಹೋಗಿದ್ದಾರೆ. ಅವರ ಅಂತ್ಯ ಸಂಸ್ಕಾರ ಮಾಡಬೇಕಾಗಿದೆ. ಅಂಥ ವಿಷ ಗಳಿಗೆಯಲ್ಲೂ ಆಂಬುಲೆನ್ಸ್ ಚಾಲಕ, ತನಗೆ ಸರ್ಕಾರ ಸಂಬಳವನ್ನು ಕೊಡುತ್ತಿದ್ದರೂ ಇಷ್ಟೇ ಕೊಡಬೇಕೆಂದು ಲಂಚಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದಾನೆ. ನಿಷ್ಕರುಣಿ. ಬಡವರು ತಮ್ಮ ಆಪ್ತರನ್ನು ಕಳೆದುಕೊಂಡು ಒಂದೇ ಸಮನೆ ಗೋಳಿಡುತ್ತಿದ್ದಾರೆ. ಈ ಕಟುಕರಿಗೆ ಒಂದಿಷ್ಟೂ ಕನಿಕರವಿಲ್ಲ. ತಮ್ಮ ಕರ್ತವ್ಯವನ್ನು ತಾವು ಮಾಡಲು ದುಬಾರಿ ದುಡ್ಡಿಗಾಗಿ ಪೀಡಿಸುತ್ತಿದ್ದಾರೆ. ಮೌಲ್ಯಗಳಿವೆಯೇನು?

ಕೆಲವು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಖಾಲಿ ಬೆಡ್‍ಗಳಿಲ್ಲ ಎಂದು ಸುಳ್ಳು ಹೇಳುತ್ತಿವೆ. ಕಾಳಸಂತೆಯಲ್ಲಿ ವ್ಯಾಕ್ಸಿನ್ ಮಾರಾಟವಾಗುತ್ತಿದೆ. ಟ್ಯಾಕ್ಸಿಯವನು ಇದೇ ಸರಿಯಾದ ಸಮಯ ಎಂದು ದುಪ್ಪಟ್ಟು ಕೇಳುತ್ತಿದ್ದಾನೆ. ಆಟೊದವನೂ ಕಡಿಮೆಯೇನಿಲ್ಲ. ಒಂದಕ್ಕೆ ಮೂರರಷ್ಟು! ಸುಲಿಗೆ ಎಂಬ ಯಾಗ ನಡೆಯುತ್ತಿದೆ. ಎಲ್ಲೆಡೆ ಇದೇ ರಾಗ... ಮೋಸ... ವಂಚನೆ... ಮುಗ್ಧ ಕಪ್ಪೆಗಳು ಕಾಳಸರ್ಪದ ಹೆಡೆಯ ಕೆಳಗೆ ಕುಳಿತು ಆಶ್ರಯ ಬೇಡುತ್ತಿವೆ. ಮಂತ್ರಿಮಹೋದಯರಿಗೆ ಕಣ್ಣಿಲ್ಲ. ಪಾಪ! ಜಾಣ ಕುರುಡು, ಜಾಣ ಕಿವುಡು. ಬೆಕ್ಕುಗಳು ಕಣ್ಮುಚ್ಚಿ ಹಾಲು ಕುಡಿಯುತ್ತಿವೆ.

ಈ ಒಂದು ವರ್ಷದಲ್ಲಿ ಒಂದು ದಿನವೂ ಶಾಲೆ ನಡೆಯದ ಇಬ್ಬಂದಿ ದಿನಗಳು ಹಾದುಹೋಗಿವೆ. ಪಾಠ ಹೇಳದಿದ್ದರೂ ಪೋಷಕರಿಂದ ಫೀಸುಗಳನ್ನು ವಸೂಲಿ ಮಾಡಿದರು. ತಾವು ದುಡ್ಡು ತೆಗೆದುಕೊಂಡದ್ದನ್ನು ಕೆಲವರು ಸಮರ್ಥಿಸಿಕೊಂಡರು. ‘ನಾವು ಶಾಲೆಯನ್ನು ನಡೆಸಬೇಕಲ್ಲವಾ’ ಎಂದು ಪ್ರಶ್ನಿಸಿದರು. ಶಾಲೆಗಳು ನಡೆಯೋದೇನು ಬಂತು? ನಿಂತಲ್ಲೇ ನಿಂತಿವೆ! ನಿಜಕ್ಕೂ ಕೂತಲ್ಲೇ ಕೂತಿವೆ. ಕೆಲಸ ಮಾಡದೆ ಈಗ ಎಲ್ಲರಿಗೂ ಬೇಕು ಬಿಟ್ಟಿ ಕಮಾಯಿ. ಬಡಪಾಯಿ ಸಹೃದಯಿ ಮೌನವಾಗಿ ಎಲ್ಲವನ್ನೂ ನೋಡುತ್ತಿದ್ದಾನೆ. ಕಣ್ಣೆದುರೇ ಅಕ್ರಮ, ಅನ್ಯಾಯ, ಲೂಟಿ, ಅಸತ್ಯ, ಅಧರ್ಮ ನಿರಾತಂಕ ಸಾಗಿದೆ. ಹಾಗಾದರೆ ಇನ್ನೂ ನಮ್ಮ ಸಮಾಜದಲ್ಲಿ ಮೌಲ್ಯಗಳಿವೆಯೇನು?

ರಾಜಕಾರಣಿಗಳು ಗದ್ದುಗೆಗೆ ಫೆವಿಕಾಲ್ ಹಾಕಿ ಅಂಟಿಸಿಕೊಂಡು ಕೂತಿದ್ದಾರೆ. ಅವರು ಹೇಳಿದ್ದೇ ಸತ್ಯ. ಅವರ ಪಾಲಿಗೆ ಎಲ್ಲ ಮಾಧ್ಯಮಗಳೂ ಸುಳ್ಳು ಹೇಳುತ್ತಿವೆ, ತಪ್ಪು ಅಂಕಿ ಅಂಶಗಳನ್ನು ನೀಡುತ್ತಿವೆ. ಇವು ಅವರ ಆಪಾದನೆ ಪಟ್ಟಿ. ಅವರು ಮಾತ್ರ ಸತ್ಯವಂತರು, ಅವರು ಮಾತ್ರ ದೇಶಪ್ರೇಮಿಗಳು.

ಮೌಲ್ಯಗಳು ಇದ್ದಿದ್ದರೆ– ಎಲ್ಲಿರುತ್ತಿತ್ತು ಲಂಚ?ಎಲ್ಲಿರುತ್ತಿತ್ತು ಕಲಬೆರಕೆ? ಎಲ್ಲಿ ಇರುತ್ತಿತ್ತು ಸ್ವಾಮಿ ತಾವೇ ಹುಟ್ಟು ಹಾಕಿದ ಅಂಕಿ ಅಂಶಗಳು? ಬೇಲಿಯೇ ಎದ್ದು ಹೊಲ ಮೇಯುತ್ತಿದೆ, ಜನಸಾಮಾನ್ಯರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದಾರೆ.

ಇಷ್ಟೆಲ್ಲಾ ಆಗುತ್ತಿರುವುದೇ ಮಾನವನ ಅತಿಯಾದ ದುರಾಸೆಯಿಂದ. ಹಣ! ಹಣ! ಹಣ! ಎಲ್ಲಿ ಹೋಯಿತು ಮಾನವೀಯ ಗುಣ? ಅಂಗಡಿಯ ವರ್ತಕ ರಸೀದಿ ನೀಡುವುದಿಲ್ಲ. ಹೇಳುವುದು ಒಂದು ಮಾಡುವುದು ಮತ್ತೊಂದು. ತಮ್ಮನು ಅಣ್ಣನನ್ನು ಕೊಲ್ಲುತ್ತಾನೆ. ಇದೆಯೇ ಮೌಲ್ಯ ಸಮಾಜದಲ್ಲಿ? ಹೆಂಡತಿ ಅನ್ನುವವಳು ಗಂಡನಿಗೆ ಪ್ರಿಯಕರನ ಸಲುವಾಗಿ ಸುಪಾರಿ ಕೊಡುತ್ತಾಳೆ. ಇದೇ ಏನು ಮೌಲ್ಯ ಎಂದರೆ?

ಮಹಾವೀರ ಜಯಂತಿ ದಿನವೂ ಮಾಂಸದ ಅಂಗಡಿಗಳ ಮುಂದೆ ನೂಕು ನುಗ್ಗಲು. ಏನಾಯಿತು ಸರ್ಕಾರದ ಆಜ್ಞೆ? ಇಂಥವುಗಳನ್ನು ಸಾವಿರ ಪಟ್ಟಿ ಮಾಡಬಹುದು.

ಅಪಮೌಲ್ಯ ಎಂಬುದು ಈಗಿನವರಿಗೆ ಅಫೀಮು! ಅನೀತಿ ತಾಂಡವವಾಡುತ್ತಿದೆ. ಅಸತ್ಯ ಎಂಬುದು ಹಿಮಾಲಯದ ಬೆಳ್ಳಿಬೆಟ್ಟದಷ್ಟು ಎತ್ತರ ಬೆಳೆದಿದೆ. ಅಧರ್ಮವು ಗಂಗಾ, ಕಾವೇರಿ ನದಿಗಳಂತೆ ನಿರಂತರ ಹರಿಯುತ್ತಲೇ ಇದೆ. ಅನ್ಯಾಯಗಳು ಮಾಮೂಲಾಗಿವೆ.

ಬೇಕಾಗಿಲ್ಲ ಇಂದಿನವರಿಗೆ ಸತ್ಪಥ. ಬೇಡವೇ ಬೇಡ ಯುವಜನರಿಗೆ ಸನ್ಮಾರ್ಗ. ಯಾಕೆ ಬೇಕು ಜೀವಸತ್ವ, ಉಪ್ಪು, ಹುಳಿ ಖಾರ ಇಲ್ಲದ ಸಲ್ಲಾಪ? ಇದನ್ನೆಲ್ಲಾ ನೋಡುತ್ತಿದ್ದರೆ– ಈಗ ವಿಶ್ವದಲ್ಲಿ ನಾವು ಉತ್ಪಾತದ ಅಂಚಿಗೆ ಬಂದು ನಿಂತಿದ್ದೇವೆ. ಮುಂದಡಿ ಇಟ್ಟರೆ ಪ್ರಪಾತ. ಕೊಲೆರೆಡೋ ಕಮರಿಯನ್ನೂ ಮೀರಿಸಿದ್ದು. ಈ ದುರಂತ ತಪ್ಪಿಸುವವರು ಯಾರು?
-ದೊಡ್ಡರಂಗೇಗೌಡ, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ,ಸಮ್ಮೇಳನದ ನಿಯೋಜಿತ ಅಧ್ಯಕ್ಷ

***

ಸಿದ್ಧತೆ ಬಿರುಸಾಗಲಿ
ಕೋವಿಡ್ ಎರಡನೇ ಅಲೆ ತೀವ್ರವಾಗಿ ಉಲ್ಬಣಗೊಳ್ಳುತ್ತದೆ ಎಂದು ತಜ್ಞರು ಈ ಮೊದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಎಚ್ಚರಿಸಿದ್ದರು. ಆದರೂ ಪೂರ್ವಸಿದ್ಧತೆಯತ್ತ ಗಮನಹರಿಸದೇ ಇದ್ದುದರಿಂದ ಸರ್ಕಾರಗಳಿಗೆ ಈಗ ದಿಕ್ಕು ತೋಚದಂತಾಗಿದೆ. ಕೇಂದ್ರ ಸರ್ಕಾರ ಈಗಲಾದರೂ ಎಚ್ಚೆತ್ತು ಪಿಎಮ್ ಕೇರ್ಸ್ ನಿಧಿಯಿಂದ ದೇಶದಾದ್ಯಂತ 551 ಆಮ್ಲಜನಕ ಘಟಕಗಳನ್ನು ಸ್ಥಾಪಿಸಲು ಮುಂದಾಗಿರುವುದು ಸ್ವಾಗತಾರ್ಹ.

‘ವಾಸ್ತವ ಸತ್ಯ’ ಹೇಳಿದ ತಜ್ಞರ ಮಾಹಿತಿಯನ್ನು ಮಿಥ್ಯ ಎಂದು ಭಾವಿಸಿದ ಸರ್ಕಾರಗಳು ‘ವ್ಯಾವಹಾರಿಕ ಸತ್ಯ’ವಾದ ರಾಜಕೀಯ ನಿರ್ಣಯಗಳಿಗೆ ಜೋತುಬಿದ್ದ ಪರಿಣಾಮವಾಗಿ, ಕೊರೊನಾ ಸೋಂಕು ಇಷ್ಟರಮಟ್ಟಿಗೆ ಉಲ್ಬಣಿಸುವಂತೆ ಆಗಿದೆ. ಸರ್ಕಾರಗಳು ಕೋವಿಡ್ ಸಂಹಾರಕ್ಕೆ ಬೇಕಾದ ಸಿದ್ಧತೆಗಳಿಗೆ ತಕ್ಷಣದಿಂದಲೇ ಬಿರುಸು ತುಂಬಬೇಕು. ಪ್ರಾಮಾಣಿಕ, ಸಕಾಲಿಕ ನಡೆ– ನಿಲುವುಗಳಿಂದ ದೇಶವನ್ನು ಕೋವಿಡ್‍ನಿಂದ ರಕ್ಷಿಸುವಂತಾಗಲಿ.
-ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ,ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT