ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರಿಗೆ ಆಧಾರ್: ಎಷ್ಟು ಪ್ರಾಯೋಗಿಕ?

ಪಶುವೈದ್ಯಕೀಯ ಸೇವೆ ಒದಗಿಸುವುದೇ ಬಹಳಷ್ಟಿರುವಾಗ, ಜಾನುವಾರುಗಳ ಮಾಹಿತಿಯನ್ನು ಪ್ರತಿನಿತ್ಯ ಅಪ್‍ಡೇಟ್ ಮಾಡುವುದು ಅಸಾಧ್ಯವೇ ಸರಿ
Last Updated 13 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಪ್ರತೀ ವ್ಯಕ್ತಿಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಆಧಾರ್ ಯೋಜನೆಯಂತೆ, ಎಲ್ಲ ಜಾನುವಾರುಗಳಿಗೂ ಪ್ರತ್ಯೇಕ ಗುರುತಿನ ಸಂಖ್ಯೆ ನೀಡುವ ಬೃಹತ್ ಆಂದೋಲನವೊಂದು ದೇಶದಾದ್ಯಂತ ಬಿರುಸಿನಿಂದ ನಡೆಯುತ್ತಿದೆ. ಪ್ರತಿಯೊಂದು ದನ, ಎಮ್ಮೆಗೂ ನಿರ್ದಿಷ್ಟ ಸಂಖ್ಯೆ ಮತ್ತು ಬಾರ್‌ಕೋಡ್ ಹೊಂದಿರುವ ಪ್ಲಾಸ್ಟಿಕ್ ಕಿವಿಯೋಲೆ ಅಳವಡಿಸಿ ‘ಪ್ರಾಣಿಯ ಉತ್ಪಾದಕತೆ ಮತ್ತು ಆರೋಗ್ಯ ಮಾಹಿತಿ ಜಾಲ’ದಲ್ಲಿ (ಇನಾಫ್) ದಾಖಲಿಸುವ ಕಾರ್ಯಕ್ರಮವಿದು.

ನಮ್ಮ ದೇಶದಲ್ಲಿ 19 ಕೋಟಿಗೂ ಅಧಿಕ ಹಸುಗಳು, 11 ಕೋಟಿಯಷ್ಟು ಎಮ್ಮೆಗಳಿವೆ.ಕರ್ನಾಟಕವೊಂದರಲ್ಲೇ ಸುಮಾರು 1.14 ಕೋಟಿ ದನ, ಎಮ್ಮೆಗಳಿವೆ ಎನ್ನುತ್ತದೆ ಇತ್ತೀಚಿನ ಜಾನುವಾರು ಗಣತಿಯ ವರದಿ. ಹನ್ನೆರಡು ಅಂಕೆಗಳುಳ್ಳ ಕಿವಿಯೋಲೆ ಅಳವಡಿಕೆ ಜೊತೆಯಲ್ಲಿ ಆ ಜಾನುವಾರುವಿನ ತಳಿ, ಲಿಂಗ, ವಯಸ್ಸು, ಹಾಲಿನ ಇಳುವರಿ, ಗರ್ಭಾವಸ್ಥೆ, ಮಾಲೀಕರ ಹೆಸರು, ವಿಳಾಸ, ಅವರ ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಸೇರಿದಂತೆ ಸಮಗ್ರ ವಿವರವನ್ನು ಇನಾಫ್ ತಂತ್ರಾಂಶದಲ್ಲಿದಾಖಲಿಸಲಾಗುತ್ತದೆ. ರಾಸುವಿನ ಉತ್ಪಾದಕತೆ, ಆರೋಗ್ಯ ಸ್ಥಿತಿ, ಹಾಕಿದ ಲಸಿಕೆ, ಕೃತಕ ಗರ್ಭಧಾರಣೆಯ ವಿವರ, ಕರುವಿನ ಜನನ, ಪಶು ಆಹಾರ, ರೋಗೋದ್ರೇಕಗಳು ಮುಂತಾದ ಸಮಸ್ತ ಮಾಹಿತಿ ಒಂದೆಡೆ ಸಿಗುವುದರಿಂದ ನೀತಿ ನಿರೂಪಣೆಗೆ, ವಿವಿಧ ಯೋಜನೆಗಳನ್ನು ರೂಪಿಸಲು, ಉತ್ತಮ ರಾಸುಗಳನ್ನು ಆಯ್ಕೆ ಮಾಡಲು ಅನುಕೂಲ.

ನೋಂದಾಯಿತ ರೈತರು, ವಿಜ್ಞಾನಿಗಳು, ಅಧಿಕಾರಿಗಳು, ಸರ್ಕಾರ ಹೀಗೆ ಎಲ್ಲರಿಗೂ ಬೆರಳ ತುದಿಯಲ್ಲೇ ಯಾವುದೇ ಜಾನುವಾರಿನ ಜಾತಕಕ್ಷಣಮಾತ್ರದಲ್ಲಿ ಲಭ್ಯ. ಹಾಲು ಉತ್ಪಾದನೆಯಲ್ಲಿ ನಮ್ಮ ದೇಶ ಜಗತ್ತಿನಲ್ಲೇ ಪ್ರಥಮ ಸ್ಥಾನದಲ್ಲಿದ್ದರೂ ಪ್ರತೀ ರಾಸುವಿನಿಂದ ಪಡೆಯುತ್ತಿರುವ ಸರಾಸರಿ ಇಳುವರಿ ತುಂಬಾ ಕಡಿಮೆ. ಇದನ್ನು ಹೆಚ್ಚಿಸಬೇಕಾದರೆ ಉತ್ತಮ ಆರೋಗ್ಯ, ಪೋಷಣೆಯ ಜೊತೆಗೆ ಆನುವಂಶೀಯ ಗುಣಗಳನ್ನು ಮೇಲ್ದರ್ಜೆಗೇರಿಸಬೇಕು. ಇವೆಲ್ಲಾ ಸಾಧ್ಯವಾಗುವುದು ನಿಖರ ಅಂಕಿ ಅಂಶಗಳಿದ್ದಾಗ ಮಾತ್ರ.

ಹಾಗೆಂದು ಈ ಯೋಜನೆಯ ಸಂಪೂರ್ಣ ಅನುಷ್ಠಾನ ಸುಲಭದ ಮಾತಲ್ಲ. ಹಾದಿಯಲ್ಲಿ ಹಲವು ಎಡರು ತೊಡರುಗಳಿವೆ. ವಿದೇಶಿ, ಮಿಶ್ರತಳಿ ರಾಸುಗಳಿಗೆ ಅವುಗಳ ಸೌಮ್ಯ ಸ್ವಭಾವದ ಕಾರಣ ಕಿವಿಯೋಲೆ ಅಳವಡಿಕೆ ಅಷ್ಟು ಕಷ್ಟದ ಕಾರ್ಯವಲ್ಲ. ಆದರೆ ಹಾಯುವ, ಒದೆಯುವ ಚಾಳಿಯ ದೇಶಿ ಜಾನುವಾರುಗಳು, ಎಮ್ಮೆಗಳಲ್ಲಿ ಈ ಪ್ರಕ್ರಿಯೆ ತುಂಬಾ ಅಪಾಯಕಾರಿ. ನಿಯಂತ್ರಿಸುವ ಸಂದರ್ಭದಲ್ಲಿ ರೈತರು, ಪಶುವೈದ್ಯಕೀಯ ಕಾರ್ಯಕರ್ತರು ಪೆಟ್ಟು ತಿಂದಿದ್ದಾರೆ. ಜಾನುವಾರುಗಳಿಗೂ ಏಟಾಗಿರುವ, ಕಿವಿ ಹರಿದು ಹೋಗಿರುವ ಹಲವು ನಿದರ್ಶನಗಳಿವೆ.

ನಮ್ಮ ಹಲವು ದೇಶಿ ತಳಿಗಳು ಪ್ರಮುಖವಾಗಿ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಕಂಡು ಬರುವ ಮಲೆನಾಡು ಗಿಡ್ಡ ತಳಿಯ ಹಸು-ಕರುಗಳನ್ನು ಗೊಬ್ಬರದ ಉದ್ದೇಶಕ್ಕಷ್ಟೇ ಸಾಕುವವರು ಹೆಚ್ಚು. ಇವುಗಳ ಹಾಲಿನ ಉತ್ಪಾದನೆ ತುಂಬಾ ಕಮ್ಮಿ. ನಿರ್ವಹಣೆಯೂ ಬಹುತೇಕ ಶೂನ್ಯ. ಮೇಯಲು ಹೊರಕ್ಕೆ ಬಿಡುತ್ತಾರೆ. ಕೇವಲ ಸಗಣಿ ಗೊಬ್ಬರಕ್ಕಾಗಿ ಸಾಕುವ ಈ ದನಕರುಗಳಿಗೂ ಆಧಾರ್ ಅಗತ್ಯವಿದೆಯೇ? ಹಿಂದೆ ಕಿವಿಯೋಲೆ ಹಾಕಿಸಿಕೊಂಡ ಬಹಳಷ್ಟು ಜಾನುವಾರುಗಳು ಮೇಯಲು ಬಿಟ್ಟಾಗ ಪೊದೆ, ಗಿಡಗಂಟಿಗಳಲ್ಲಿ ನುಸುಳುವಾಗ ಓಲೆ ಸಿಲುಕಿ ಕಿವಿ ಹರಿದುಕೊಂಡಿವೆ. ಕಿವಿಗಿಂತಲೂ ಬಿಲ್ಲೆಯ ಗಾತ್ರ ದೊಡ್ಡದಾಗಿರುವುದೇ ಇದಕ್ಕೆ ಕಾರಣ. ನಿಯಮದ ಪ್ರಕಾರ, ಇವುಗಳಿಗೆ ಮತ್ತೆ ಟ್ಯಾಗ್ ಮಾಡಿ ಮಾಹಿತಿ ಜಾಲದಲ್ಲಿ ನವೀಕರಿಸಬೇಕು. ಈಗಾಗಲೇ ಕಿವಿಗೆ ಹಾನಿಯಾಗಿರುವುದರಿಂದ ರೈತರು ಮತ್ತೊಮ್ಮೆ ಈ ಕಾರ್ಯಕ್ಕೆ ಸುತರಾಂ ಒಪ್ಪರು.

ಜಾನುವಾರುಗಳ ಉತ್ಪಾದಕ ಆಯಸ್ಸೇ ಹದಿಮೂರು, ಹದಿನಾಲ್ಕು ವರ್ಷಗಳು. ಕೊಟ್ಟಿಗೆಯಲ್ಲಿ ಸಂಖ್ಯೆ ಮಿತಿ ದಾಟಿದರೆ, ಹಣದ ತುರ್ತು ಅಗತ್ಯ ಎದುರಾದರೆ, ಮನೆಯಲ್ಲಿ ಕರಾವು ಕಡಿಮೆಯಾಗಿ ಹಾಲಿನ ಸಮಸ್ಯೆಯಾದಾಗ, ಗರ್ಭ ಕಟ್ಟದೆ ಗೊಡ್ಡು ಬಿದ್ದಾಗ ಹೀಗೆ ಬೇರೆ ಬೇರೆ ಕಾರಣಕ್ಕೆ ಗೋಪಾಲಕರು ತಮ್ಮ ರಾಸುಗಳನ್ನು ಮಾರಾಟ ಮಾಡುತ್ತಾರೆ. ಕೆಲವು ಜಾನುವಾರುಗಳು ಕಾಯಿಲೆ ಅಥವಾ ನಿರ್ವಹಣೆಯ ಕೊರತೆಯಿಂದ ಮೃತಪಡುತ್ತವೆ. ಕಾಡಂಚಿನಲ್ಲಿರುವ ಜಾನುವಾರುಗಳನ್ನು ಮೇಯಲು ಬಿಟ್ಟಾಗ ಹುಲಿ, ಚಿರತೆಗಳಿಗೆ ಆಹಾರವಾಗುತ್ತವೆ. ಹೀಗಾದಾಗಲೆಲ್ಲಾ ಇನಾಫ್ ಮಾಹಿತಿ ಕಣಜದಲ್ಲಿ ದಾಖಲಿಸಬೇಕು. ಕೈ ಬದಲಾದಂತೆ ಮಾಲೀಕರೂ ಬದಲಾಗುವುದರಿಂದ ಮಾಹಿತಿಯನ್ನು ತಿದ್ದುಪಡಿ ಮಾಡಲೇಬೇಕು. ಹುಟ್ಟುವ ಕರುಗಳ ವಿವರ ಸೇರಿಸಬೇಕು. ಇದನ್ನೆಲ್ಲಾ ಇಲಾಖಾ ಸಿಬ್ಬಂದಿ ವರ್ಗದವರೇ ನಿರ್ವಹಿಸಬೇಕು.

ನಮ್ಮ ರಾಜ್ಯದ ಬಹುತೇಕ ಪಶುವೈದ್ಯ ಸಂಸ್ಥೆಗಳಲ್ಲಿ ಸಿಬ್ಬಂದಿಯ ತೀವ್ರ ಕೊರತೆಯಿದೆ. ಪಶುವೈದ್ಯಕೀಯ ಸೇವೆ ಒದಗಿಸುವುದೇ ಬಹಳಷ್ಟಿರುವಾಗ, ಪ್ರತಿನಿತ್ಯವೆಂಬಂತೆ ಮಾಹಿತಿಯನ್ನು ಅಪ್‍ಡೇಟ್ ಮಾಡಲು ಸಾಧ್ಯವೇ? ಹಾಗಾಗಿ ಪ್ರತೀ ಸಂಸ್ಥೆಯಲ್ಲೂ ಡೇಟಾ ಎಂಟ್ರಿ ವಿಭಾಗ ತೆರೆದು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿದಾಗ ಮಾತ್ರ ವಿಶ್ವಾಸಾರ್ಹ ಮಾಹಿತಿ ನಿರೀಕ್ಷಿಸಲು ಸಾಧ್ಯ.

ನೀತಿ ನಿರೂಪಣೆಯ ಉದ್ದೇಶಕ್ಕಾಗಿ ದೇಸಿ ತಳಿಗಳನ್ನು ಹೊರತುಪಡಿಸಿ ಉತ್ತಮ ಇಳುವರಿ ನೀಡುವ ಮಿಶ್ರತಳಿ ಹಸುಗಳ ವಿವರಗಳನ್ನಷ್ಟೇ ಡಿಜಿಟಲೀಕರಣಗೊಳಿಸಿದರೆ ದೊಡ್ಡ ಹೊರೆಯನ್ನೂ ಇಳಿಸಬಹುದು. ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕಾದ ಜರೂರತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT