ಬುಧವಾರ, ಜೂನ್ 29, 2022
25 °C
ವಿದ್ಯಾರ್ಥಿಗಳ ಸಮಸ್ಯೆ ಪರಿಹಾರದ ಬಗ್ಗೆ ಶಿಕ್ಷಕರು ಪಠ್ಯದ ಆಚೆಗೂ ಯೋಚಿಸಿ ನೆರವಾದರೆ ವಿದ್ಯಾರ್ಥಿಗಳು ಬೆಳೆಯಲು ಅನುಕೂಲವಾಗುತ್ತದೆ

ಸಂಗತ: ಗುರು ಕಾಳಜಿಯಿಂದ ಗುರಿ ಸಾಧನೆ

ಮಲ್ಲಿಕಾರ್ಜುನ ಹೆಗ್ಗಳಗಿ Updated:

ಅಕ್ಷರ ಗಾತ್ರ : | |

Prajavani

ನಾನು 5ನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಕ್ಲಾಸ್ ಟೀಚರ್ ಬಹಳ ಬಡಿಯುತ್ತಿದ್ದರು. ಹೆದರಿ ಶಾಲೆ ಬಿಟ್ಟುಬಿಟ್ಟೆ. ಒಂದು ವಾರದ ನಂತರ ‘ಶಾಲೆಯ ಮುಖ್ಯ ಅಧ್ಯಾಪಕರಾಗಿದ್ದ ಹಣಮಂತರಾವ್ ಚಿತ್ರಗಾರ ಅವರು ನಮ್ಮ ಮನೆಗೆ ಬಂದು, ‘ಶಾಲೆ ತಪ್ಪಿಸಬಾರದು, ನಾಳೆಯಿಂದ ಶಾಲೆಗೆ ಬಾ’ ಎಂದು ತಿಳಿವಳಿಕೆ ಹೇಳಿ ನಮ್ಮ ತಂದೆಗೂ ಸೂಚನೆ ನೀಡಿ ಹೋದರು.

ನಾನು ಹೋಗಲಿಲ್ಲ. ಪುನಃ ಮುಖ್ಯ ಅಧ್ಯಾಪಕರು ಬಂದು, ‘ಶಾಲೆ ತಪ್ಪಿಸಕೂಡದು’ ಎಂದು ಖಡಕ್‌ ಸೂಚನೆ ನೀಡಿದರು. ಆಗಲೂ ನಾನು ಹೋಗಲಿಲ್ಲ. ಮೂರನೇ ಬಾರಿ ಒಂದು ಪರಿಹಾರ ಸೂತ್ರದೊಂದಿಗೆ ಬಂದು, ‘ಬೇರೆ ಶಾಲೆಗೆ ಹೋಗಲು ಸಿದ್ಧನಿದ್ದೀಯಾ?’ ಎಂದು ಕೇಳಿದರು. ನಾನು ತಕ್ಷಣ ಒಪ್ಪಿಕೊಂಡೆ. ನಮ್ಮೂರಿನಲ್ಲಿಯೇ ಇರುವ ಮತ್ತೊಂದು ಶಾಲೆಗೆ ಹೋಗಲು ಟ್ರಾನ್ಸ್‌ಫರ್ ಸರ್ಟಿಫಿಕೇಟ್ ಕೊಟ್ಟರು. ನಾನು ಹೊಸ ಶಾಲೆಯಲ್ಲಿ ಓದು ಮುಂದುವರಿಸಿದೆ. ಚಿತ್ರಗಾರ ಗುರುಗಳು ತೋರಿದ ಕಾಳಜಿ ನನ್ನ ಬದುಕಿಗೆ ಬೆಳಕಾಯಿತು.

ವಿದ್ಯಾರ್ಥಿಗಳ ಸಮಸ್ಯೆ ಹಾಗೂ ಕಷ್ಟಗಳ ಪರಿಹಾರದ ಬಗ್ಗೆ ಶಿಕ್ಷಕರು ಪಠ್ಯದ ಆಚೆಗೂ ಯೋಚಿಸಿ ನೆರವಾದರೆ ವಿದ್ಯಾರ್ಥಿಗಳು ಬೆಳೆಯಲು ಅನುಕೂಲವಾಗುವುದು. ಸರ್ಕಾರ ಹಾಗೂ ಸಾರ್ವಜನಿಕರು ಈ ದಿಸೆಯಲ್ಲಿ ಶಿಕ್ಷಕರನ್ನು ಪ್ರೇರೇಪಿಸುವುದು ಅವಶ್ಯ.

ಶಾಲೆಯ ಕೋಣೆಯಲ್ಲಿ ಮಕ್ಕಳು ಪಠ್ಯದ ವಿಷಯ ಮಾತ್ರ ಕಲಿಯುತ್ತಾರೆ. ಬದುಕು ಎದುರಿಸುವ ನಿಜವಾದ ತರಬೇತಿ ಶಾಲೆಯ ಹೊರಗೆ ದೊರೆಯುತ್ತದೆ. ಬದುಕಿನಲ್ಲಿ ಬರುವ ಎಲ್ಲ ಅನಿಶ್ಚಿತತೆಯನ್ನು ಎದುರಿಸಲು ಅವರಲ್ಲಿ ಧೈರ್ಯ, ಆತ್ಮವಿಶ್ವಾಸ, ಛಲವನ್ನು ತುಂಬುವ ಕೆಲಸ ಶಿಕ್ಷಕರಿಂದ ನಡೆಯಬೇಕು ಎಂದು ಚಿಂತಕ ಡಾ. ವಿ.ಎಸ್.ಮಾಳಿ ಹೇಳುತ್ತಾರೆ.

ಅಂಧ ಮಕ್ಕಳ ಶಾಲೆಯ ಶಿಕ್ಷಕರೊಬ್ಬರು ಮಕ್ಕಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಬಂದಿ ದ್ದರು. ದೇವರ ಎದುರಿನಲ್ಲಿ ನಿಂತ ಮಕ್ಕಳನ್ನು ನೋಡಿ ಪೂಜಾರೆಪ್ಪ ‘ಮೇಷ್ಟರೇ ನಿಮ್ಮ ಹುಡುಗರು ದೇವರನ್ನು ನೋಡುತ್ತಾರೆಯೇ?’ ಎಂದು ಕೆಣಕಿದ. ‘ದೇವರು ಮಕ್ಕಳನ್ನು ನೋಡುತ್ತಾನಲ್ಲ, ಅಷ್ಟು ಸಾಕು!’ ಎಂದು ಸಾವಧಾನದಿಂದ ಶಿಕ್ಷಕರು ಉತ್ತರಿಸಿದರು. ಪೂಜಾರೆಪ್ಪನ ಮನದ ಕಣ್ಣು ತೆರೆದಿರಬಹುದು. ಮಕ್ಕಳಿಗೆ ನಮಸ್ಕರಿಸಿ ಪ್ರಸಾದ ಹಂಚಿದ. ಮಕ್ಕಳ ಬಗ್ಗೆ ಬೋಧಕರು ಸಕಾರಾತ್ಮಕವಾಗಿ ಧ್ಯಾನಿಸುವುದ ರಿಂದ ಇಂಥ ಬೆಳಕು ಕಾಣುವುದು ಸಾಧ್ಯ.

ಕೌಟುಂಬಿಕ ಕಲಹಗಳು, ಬಡತನ, ಪಾಲಕರ ಏಟು, ವಿದ್ಯಾರ್ಥಿಗಳ ನಡುವಿನ ಈರ್ಷ್ಯೆ, ಏಕಾಗ್ರತೆ ಕೊರತೆ, ಪಾಠ ಅರ್ಥವಾಗದೇ ಇರುವುದು, ತಂದೆ ಅಥವಾ ತಾಯಿಯ ಅಕಾಲಿಕ ನಿಧನ ಹೀಗೆ ಅನೇಕ ತೊಂದರೆ ಗಳು ವಿದ್ಯಾರ್ಥಿಗಳನ್ನು ಕಾಡುತ್ತವೆ. ವಿದ್ಯಾರ್ಥಿ ಜೀವನ ಬಹಳ ಸುಖಮಯ ಎನ್ನುವ ಕಲ್ಪನೆ ಇದೆ. ಆದರೆ ಇದು ಪೂರ್ಣ ಸತ್ಯವಲ್ಲ.

ಯುವ ಚೇತನಗಳು ಕೋಮುದ್ವೇಷ, ಅಸೂಯೆಯನ್ನು ಬಿತ್ತುವವರ ಕೈಗೊಂಬೆಯಾಗದಂತೆ ಕಾಪಾಡಬೇಕು. ಶಿಶುನಾಳ ಷರೀಫ ಮುಸ್ಲಿಮರು, ಗುರು ಗೋವಿಂದ ಭಟ್ಟರು ಬ್ರಾಹ್ಮಣರು. ಗುರು-ಶಿಷ್ಯ ಸಂಬಂಧಕ್ಕೆ ಜಾತಿಯಾಗಲೀ ಧರ್ಮವಾಗಲೀ
ಅಡ್ಡಿಯಾಗಲಿಲ್ಲ. ಗೋವಿಂದ ಭಟ್ಟರು ತಮ್ಮ ಜನಿವಾರ ತೆಗೆದು ಷರೀಫರಿಗೆ ಹಾಕುತ್ತಾರೆ. ‘ಹಾಕಿದ ಜನಿವಾರ ಶ್ರೀಗುರು, ಕಳೆದನು ಭವಭಾರ’ ಎಂದು ಇದನ್ನೇ ಹಾಡಾಗಿ ಹಾಡಿದ್ದಾರೆ ಷರೀಫರು.

ವಿದ್ಯಾರ್ಥಿಗಳನ್ನು ಕ್ಲಾಸಿನಲ್ಲಿ ಅಪಮಾನಿಸುವುದರಿಂದ ಅವರ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಅವರ ಮನ ಅರಳುವಂತೆ ಸಕಾರಾತ್ಮಕವಾಗಿ ನಡೆದುಕೊಳ್ಳ ಬೇಕು. ‘ನೀನು ಒಳ್ಳೆಯ ಹುಡುಗ ಎಂದು ಶಿಕ್ಷಕರು ಮತ್ತೆ ಮತ್ತೆ ಹೇಳಿದ್ದರಿಂದ ಶಾಲೆಯಲ್ಲಿ ನಾನು ಒಳ್ಳೆಯ ವಿದ್ಯಾರ್ಥಿಯಾಗಿದ್ದೆ’ ಎಂದು ಪಿ.ಲಂಕೇಶ್‌ ತಮ್ಮ ಆತ್ಮಕತೆಯಲ್ಲಿ ಹೇಳಿದ್ದಾರೆ.

ಗುಜರಾತ್‌ನ ಶಿಕ್ಷಣ ತಜ್ಞ ಗೀಜುಭಾಯ್ ಬಥೇಕಾ, ಮಕ್ಕಳ ಸಮಗ್ರ ವಿಕಸನ ಕುರಿತು ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಒಂದು ಕವಿತೆಯ ಭಾವಾನುವಾದ ಎಲ್ಲರಿಗೂ ಕಿವಿಮಾತು ಹೇಳುವಂತಿದೆ.

ಎಲ್ಲಿಯವರೆಗೂ ಮಕ್ಕಳು ಮನೆಯಲಿ ಪೆಟ್ಟುಗಳ ತಿನ್ನುವರೋ
ಶಾಲೆಗಳಲ್ಲಿ ಬೈಗುಳ ತಿನ್ನುವರೋ

ಪ್ರೇಮ-ಸಮ್ಮಾನಗಳು ದೊರೆಯುವುದಿಲ್ಲವೋ
ಅಲ್ಲಿಯವರೆಗೂ ನೆಮ್ಮದಿ ನನಗೆಲ್ಲಿಯದು?

ಆಟವೇ ನಿಜವಾದ ಓದು. ಪಠ್ಯಕ್ರಮದ ಮೂಲ ಉದ್ದೇಶ ಮಕ್ಕಳಲ್ಲಿ ಜ್ಞಾನ ಮತ್ತು ಜಿಜ್ಞಾಸೆ ವಿಕಸಿತಗೊಳಿಸುವುದು, ಕುತೂಹಲ, ಉತ್ಸುಕತೆ, ಸ್ವಾತಂತ್ರ್ಯ, ಸ್ವಾವಲಂಬನೆ, ಹಾಡು, ಕುಣಿತಕ್ಕೆ ಪ್ರಾಧಾನ್ಯ ಕೊಡುವುದು. ಮಕ್ಕಳಿಗೆ ಯಾವುದೇ ಕಾರಣಕ್ಕೂ ಹಿಂಸೆ ಮಾಡಕೂಡದು, ಪರೀಕ್ಷೆಯ ಬಗ್ಗೆ ಉತ್ಸುಕತೆ ಇರಬೇಕು. ಇವು ಗೀಜುಭಾಯ್‍ ಅವರು ಪ್ರತಿಪಾದಿಸಿದ ಮಹತ್ವದ ವಿಚಾರಗಳು.

ವಿದ್ಯಾರ್ಥಿನಿಯರಲ್ಲಿ ಭಿನ್ನ ಸಮಸ್ಯೆಗಳು ಇರುತ್ತವೆ. ಅವರು ಮನಬಿಚ್ಚಿ ಹೇಳುವುದು ಕಡಿಮೆ. ಶಿಕ್ಷಕಿಯರು ಸಮಾಲೋಚನೆ ಮೂಲಕ ಅವರ ಕಷ್ಟಗಳಿಗೆ ನೆರವಾಗುವುದು ಕೂಡ ಅವಶ್ಯ.

ವಿದ್ಯಾರ್ಥಿಗಳಲ್ಲಿ ವಿಜ್ಞಾನ, ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಹಾಗೂ ಸಮಾಜಸೇವೆಯ ಬಗ್ಗೆ ಅಭಿರುಚಿ ಬೆಳೆಸುವುದು ಶಿಕ್ಷಕರಿಂದ ಸಾಧ್ಯ. ಹಿಂದಿನ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಮಗುವಿನ ಸಮಗ್ರ ವಿಕಾಸ ಗುರುವಿನ ಹೊಣೆಯಾಗಿತ್ತು. ಆಧುನಿಕ ಶಿಕ್ಷಣ ಈ ಆಶಯವನ್ನು ಗಟ್ಟಿಯಾಗಿ ಕಾಪಾಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.