ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರದ ರುಚಿ; ಪ್ರಜಾಪ್ರಭುತ್ವದ ಔದಾರ್ಯ

Last Updated 20 ಮೇ 2019, 19:39 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವದ ನಿರ್ಣಾಯಕ ಶಕ್ತಿಯೇ ಸಾರ್ವತ್ರಿಕ ಮತದಾನ. ಇದರ ರೀತಿ ನೀತಿ, ಸೊಗಸು, ವೈರುಧ್ಯಗಳ ಅಧ್ಯಯನಕ್ಕಾಗಿಯೇ ವಿದೇಶಗಳ ಅಧ್ಯಯನಕಾರರು ಭಾರತಕ್ಕೆ ಬರುವುದುಂಟು. ಇಂಡೊನೇಷ್ಯಾದಲ್ಲಿ ಮತಪತ್ರಗಳ ಬಿಡುವಿಲ್ಲದ ಎಣಿಕೆಯ ಆಯಾಸದ ಹೊಡೆತದಿಂದ 270 ಮಂದಿ ಸತ್ತಿದ್ದು ಈಚೆಗಿನ ಸುದ್ದಿ. ದಶಕಗಳ ಹಿಂದೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತಗಳ ಲೆಕ್ಕದಲ್ಲಿ ಪ್ರತೀ ಬಾರಿ ಎಣಿಸಿದಾಗಲೂ ವ್ಯತ್ಯಾಸ ಬಂದು, ಕೊನೆಗೊಂದು ನಿರ್ಣಯಕ್ಕೆ ಬರಲು ಕೆಲವು ದಿನಗಳೇ ಬೇಕಾಗಿತ್ತು.

ಭಾರತದಲ್ಲಿನ ಚುನಾವಣೆಯ ಯಶಸ್ಸು ಒಟ್ಟಾರೆ ಪ್ರಜಾಪ್ರಭುತ್ವದ ಯಶಸ್ಸೇ ಆಗಿರುತ್ತದೆ. ಒಂದೇ ಕ್ಷೇತ್ರ
ದಲ್ಲಿ ನೂರಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದು, ಒಂದೇ ಹೆಸರಿನ ಅನೇಕರು ಒಂದೇ ಕ್ಷೇತ್ರದಿಂದ ಸ್ಪರ್ಧಿಸುವುದು, ಕೇವಲ ಒಂದು ವೋಟಿನಲ್ಲಿ ಗೆಲುವಿನ ನಿರ್ಣಯ, ಸೋಲು ನಿಶ್ಚಯವೆಂದು ತಿಳಿದೂ ಸ್ಪರ್ಧಿಸುವುದು, ಬೇರೆ ಪಕ್ಷದವರಿಂದ ಹಣ ಪಡೆದು ನಾಮಪತ್ರ ವಾಪಸು ಪಡೆಯುವುದು, ಬಂಡಾಯ ಅಭ್ಯರ್ಥಿ ಹೆಸರಿನಲ್ಲಿ ತನ್ನ ಪಕ್ಷಕ್ಕೇ ತಿರುಗೇಟು ನೀಡುವುದು, ಮಾಧ್ಯಮಗಳಲ್ಲಿ ಮಿಂಚುವುದಕ್ಕಾಗಿಯೇ ಪ್ರಧಾನಿ ಅಭ್ಯರ್ಥಿಯ ಎದುರೇ ಅಭ್ಯರ್ಥಿಯಾಗುವುದು, ದಾಖಲೆ ನಿರ್ಮಾಣಕ್ಕಾಗಿಯೇ ಪ್ರತೀ ಬಾರಿ ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸುವುದು, ಮತದಾರರಿಂದಲೇ ವೋಟನ್ನೂ, ಖರ್ಚಿಗೆ ನೋಟನ್ನೂ ಕೇಳುವುದು, ಚುನಾವಣಾ ಖರ್ಚಿಗಾಗಿ ದೊಡ್ಡ ಕಂಪನಿಗಳಿಂದ ದೊಡ್ಡ ಮೊತ್ತದ ದೇಣಿಗೆ ಪಡೆಯುವುದು... ಇಂತಹ ಸ್ವಾರಸ್ಯಕರ ಸಂಗತಿಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದಾಗಿದೆ. ಇವೆಲ್ಲಾ ಕೇವಲ ಅಧಿಕಾರದ ರುಚಿಯ ಮುಂದುವರಿಕೆ ಎಂದು ಮೇಲ್ನೋಟಕ್ಕೇ ಯಾರಿಗಾದರೂ ಅನಿಸಬಹುದಾದರೂ, ಪ್ರಜಾಪ್ರಭುತ್ವದಲ್ಲಿ ಇವೆಲ್ಲಕ್ಕೂ ಅವಕಾಶಗಳಿವೆ ಎಂಬುದೇ ಅದರ ಔದಾರ್ಯವೂ ಆಗಿದೆ.

ಪಕ್ಷಗಳ ಮತ ಗಳಿಕೆಯ ಕಾರ್ಯತಂತ್ರವೂ ವರ್ಷದಿಂದ ವರ್ಷಕ್ಕೆ ಬದಲಾಗುತ್ತಲೇ ಬರುತ್ತಿದೆ ಎಂಬುದೂ ದಾಖಲಾರ್ಹ ವಿದ್ಯಮಾನ. ಪಕ್ಷಗಳು ಯಾವ ಮಾನದಂಡ ಆಧರಿಸಿ ಟಿಕೆಟ್ ನೀಡುತ್ತವೆ, ಬಹುಮುಖ್ಯ ಹುರಿಯಾಳುಗಳು ಸಂಭವನೀಯ ಮುಖಭಂಗ ತಪ್ಪಿಸಿಕೊಳ್ಳುವುದಕ್ಕಾಗಿ ಸುರಕ್ಷಿತ ಗೆಲುವು ತಂದುಕೊಡುವ ಕ್ಷೇತ್ರವನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದೂ ಸಮರ ನೀತಿಯ ಕಾರ್ಯತಂತ್ರಗಳೇ ಆಗಿರುತ್ತವೆ. ಅಧಿಕಾರ ಪ್ರಾಪ್ತಿಗೆ ಅಗತ್ಯ ಬಲ ದೊರೆಯದಾದಾಗ ನಡೆಸುವ ‘ಕುದುರೆ ವ್ಯಾಪಾರ’ವನ್ನೂ ಪ್ರಜಾಪ್ರಭುತ್ವ ನೀಡಿದ ‘ಕೊಡುಗೆ’ ಎಂದೇ ಸಮರ್ಥಿಸಿಕೊಳ್ಳುವವರೂ ಇದ್ದಾರೆ.

ಆರಂಭದ ಚುನಾವಣೆಗಳಲ್ಲಿ ರಾಜಕಾರಣಿಗಳ ಕೆಲ ನಿರ್ದಿಷ್ಟ ಗುಣ ಚಹರೆಗಳಿಗೆ ಮತದಾರರು ಆದ್ಯತೆ ನೀಡುತ್ತಿದ್ದರು. ಆತ ಸ್ವಾತಂತ್ರ್ಯಕ್ಕಾಗಿ ಹೋರಾಡಿದವ, ಸಮಾಜಕ್ಕಾಗಿ ದುಡಿಯುವವ, ಸಜ್ಜನ... ಇಂತಹ ಕೆಲವು ಗುಣಗಳಿದ್ದರೆ ಆಯ್ಕೆ ಸುಲಭವಿತ್ತು. ಬಳಿಕದ ಒಂದೆರಡೇ ಅವಧಿಯೊಳಗಾಗಿ ಗುಣಕ್ಕೆ ಬದಲು ಹಣಕ್ಕೆ ಆದ್ಯತೆ ದೊರೆಯತೊಡಗಿತು. ಕೇವಲ ಒಂದು ಕಾಸಿನ ಬೀಡಿ ಕೊಟ್ಟು ವೋಟು ಕೇಳಿದವರೂ ಇದ್ದರು. ಕ್ರಮೇಣ ಆಮಿಷದ ರೂಪಗಳು ವಿಸ್ತೃತವಾಗತೊಡಗಿದವು, ಮುಖಬೆಲೆ ಬದಲಾಗತೊಡಗಿತು. ಇಂದು ಮತದಾರರನ್ನಲ್ಲದೆ, ಅಭ್ಯರ್ಥಿಯನ್ನೇ ಖರೀದಿಸುವ ಹಂತ ತಲುಪಿರುವುದು ಒಂದೆಡೆಯಾದರೆ, ಪ್ರಚಾರ ತಂತ್ರಗಳನ್ನೇ ಹೈಟೆಕ್ ಮಾಡಿರುವುದು ಮತ್ತೊಂದು ಬೆಳವಣಿಗೆ. ಕರಪತ್ರಗಳು, ಬೃಹತ್ ಕಟೌಟ್‍ಗಳು, ಮೈಕಾಸುರರ ಅಬ್ಬರ ಮಿತಿ ಮೀರಿದಾಗ ಚುನಾವಣಾ ಆಯೋಗ ಹಾಕಿದ ಕಡಿವಾಣಗಳಿಗೆ ಸಡ್ಡು ಹೊಡೆದು, ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಹಂತಕ್ಕೆ ಪಕ್ಷಗಳು ಬಂದು ನಿಂತಿವೆ.

ಚುನಾವಣಾ ಕಾರ್ಯ ಈಗ ಇವೆಂಟ್ ಮ್ಯಾನೇಜ್‌ಮೆಂಟ್‌ ಆಗಿದೆ. ಇದಕ್ಕಾಗಿಯೇ ಜನ್ಮತಳೆದ ವಿದೇಶದ ಸಂಸ್ಥೆಗಳಿಗೆ ಕೆಲವಾದರೂ ಬಲಾಢ್ಯ ಪಕ್ಷಗಳು ಗುತ್ತಿಗೆ ಕೊಟ್ಟುಕೊಂಡಿವೆ. ಯಾವ ಕ್ಷೇತ್ರದಲ್ಲಿ ಯಾವ ಜಾತಿ, ಮತದವರು ಹೆಚ್ಚಿದ್ದಾರೆ, ಅಲ್ಲಿನ ಭಾವನಾತ್ಮಕ ಸಂಗತಿಗಳೇನು, ಅಭ್ಯರ್ಥಿ ಹೇಗೆ ಮಾತನಾಡಬೇಕು, ಈಡೇರಿಸಲಾಗದ ಭರವಸೆಗಳಾದರೂ ಹೇಗೆ ಅಂಗೈಯಲ್ಲಿ ಆಗಸ ತೋರಿಸಬೇಕು ಎಂಬಿತ್ಯಾದಿ ಎಲ್ಲಾ ಅಂಶಗಳ ಪ್ಲಾಟ್ (ಚಿತ್ರಕತೆ, ಡೈಲಾಗ್) ಅನ್ನು ಅವರು ಸಿದ್ಧ ಮಾಡಿಕೊಡುತ್ತಾರೆ. ಎದುರಾಳಿ ಬಗ್ಗೆ ಏನೇನು ಹೇಳಿ ಮತದಾರರಲ್ಲಿ ಅನುಮಾನ ಹುಟ್ಟುಹಾಕಬೇಕು ಎಂಬಂಥ ಅಂಶಗಳೂ ತಪ್ಪದೇ ಸೇರಿರುತ್ತವೆ.

ಇದು ಒಂದು ರೀತಿ ಟಿ.ವಿ. ಚಾನೆಲ್‍ಗಳಲ್ಲಿನ ರಿಯಾಲಿಟಿ ಷೋನ ಅನುಕರಣೆಯೇ ಆಗಿರುತ್ತದೆ. ಆದರೆ ರಿಯಾಲಿಟಿ ಷೋಗಳಲ್ಲಿ ಪಾಲ್ಗೊಳ್ಳುವವರಲ್ಲಿ ಪ್ರಾಮಾಣಿಕತೆ ಇರುತ್ತದೆ, ಒಂದು ಗೆಲುವಿಗಷ್ಟೇ ತುಡಿತವಿರುತ್ತದೆ.
ಹಾಗಾಗಿಯೇ ಅಂತಹ ಷೋಗಳನ್ನು ಕೆಲವು ಮಿತಿಗಳ ನಡುವೆಯೂ ನೋಡಬೇಕೆನಿಸುತ್ತದೆ. ಆದರೆ, ಚುನಾ
ವಣೆಯ ಸ್ಪರ್ಧಿಗಳಲ್ಲಿ ಪ್ರಾಮಾಣಿಕರು, ಸಚ್ಚಾರಿತ್ರ್ಯರುತೀರಾ ಅಪರೂಪ. ಅಂತೆಯೇ, ಹೆಚ್ಚಿನ ರಾಜಕಾರಣಿ
ಗಳ ಮಾತುಗಳನ್ನು ಕೇಳುವುದು ತೀರಾ ನಿರಾಶಾದಾಯಕವೂ ಸಿಟ್ಟುಬರಿಸುವಂತಹದ್ದೂ ಆಗಿರುತ್ತದೆ.

ಹೀಗೆ, ನಮ್ಮ ಚುನಾವಣಾ ಆಗುಹೋಗುಗಳಿಗೂ ರಿಯಾಲಿಟಿ ಷೋಗಳಿಗೂ ಹೆಚ್ಚಿನ ಸಾಮ್ಯತೆಯಿದೆ ಎಂದಷ್ಟೇ ಹೇಳುವ ಬದಲು, ಚುನಾವಣೆ ಎಂಬುದೇ ಮತ್ತೊಂದು ಮೆಗಾ ರಿಯಾಲಿಟಿ ಷೋ ಆಗುತ್ತಿದೆ ಎಂದೇ ಹೇಳಬಹುದು. ನಮ್ಮ ಇಂದಿನ ಬದುಕು ವರ್ಚಸ್ಸು ಕಂಡುಕೊಳ್ಳುವುದೇ ತೋರಿಕೆಯ ಪ್ರದರ್ಶನದಲ್ಲಿ- ಷೋಮನ್‍ಶಿಪ್‍ನಲ್ಲಿ ಎಂಬಂತಾಗಿರುವುದನ್ನೇ ಕೆಲ ರಾಜಕಾರಣಿಗಳು ನಮಗೆ ಸ್ವತಃ ತೋರಿಸುತ್ತಾ ಮರುಳು ಮಾಡುತ್ತಿದ್ದಾರೆ, ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT