ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ

ಭಾಷೆ ಸುಧಾರಿಸಲು ಸಾಹಿತ್ಯದ ಓದು ಒಂದು ಪರ್ಯಾಯ ಮಾರ್ಗ
Last Updated 23 ಫೆಬ್ರವರಿ 2023, 22:00 IST
ಅಕ್ಷರ ಗಾತ್ರ

ರಾಜಕಾರಣಿಗಳಿಗೆ ಘನತೆಯಿಂದ ಮಾತನಾಡಲು ಗೊತ್ತಿಲ್ಲ ಎಂದು ಕೆಲವರು ಆಗಾಗ ಆತಂಕ ವ್ಯಕ್ತಪಡಿಸುತ್ತಾರೆ. ರಾಜಕಾರಣದಲ್ಲಿ ಭಾಷೆಯನ್ನು ದ್ವೇಷದ ನುಡಿಗಟ್ಟಾಗಿ ಪರಿವರ್ತಿಸಿರುವುದಕ್ಕೆ, ನಮ್ಮ ಬಹಳಷ್ಟು ರಾಜಕಾರಣಿಗಳಿಗೆ ಪುಸ್ತಕ ಪ್ರೀತಿ ಇಲ್ಲದಿರುವುದೇ ಕಾರಣ. ಸೃಜನಶೀಲತೆಗೂ ರಾಜಕಾರಣಕ್ಕೂ ಎಣ್ಣೆ-ಸೀಗೆಕಾಯಿ ಸಂಬಂಧ. ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯ ಮೇಲೂ ನಮ್ಮ ರಾಜಕಾರಣಿಗಳು ಸಾಹಿತ್ಯವನ್ನು ಬದಿಗೆ ಸರಿಸಿ ರಾಜಕೀಯದ ಮಾತುಗಳನ್ನಾಡುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಯಲ್ಲೂ ರಾಜಕಾರಣಿಗಳ ಶಿಫಾರಸು ಮಹತ್ವದ ಪಾತ್ರ ವಹಿಸುತ್ತದೆ.

ಪುಸ್ತಕ ಪ್ರೀತಿಯನ್ನು ಮೈಗೂಡಿಸಿಕೊಂಡಿದ್ದ ರಾಜಕಾರಣದ ಪರಂಪರೆ ನಮ್ಮ ಕಣ್ಣೆದುರಿಗಿದೆ. ಜವಾಹರಲಾಲ್‌ ನೆಹರೂ ‘ಡಿಸ್ಕವರಿ ಆಫ್ ಇಂಡಿಯಾ’ ಕೃತಿ ರಚಿಸಲು ಅವರಿಗಿದ್ದ ಓದಿನ ಅಪಾರ ಅನುಭವವೇ ಕಾರಣವಾಯಿತು. ಪಿ.ವಿ. ನರಸಿಂಹ ರಾವ್ ತಮ್ಮ ಓದಿನ ಬಲದಿಂದ ಭಾರತದ ಅನೇಕ ಭಾಷೆಗಳನ್ನು ಒಳಗೊಂಡಂತೆ ವಿದೇಶಿ ಭಾಷೆಗಳಲ್ಲೂ ವ್ಯವಹರಿಸಬಲ್ಲವರಾಗಿದ್ದರು. ಪುಸ್ತಕಗಳ ಓದಿನ ಜ್ಞಾನವು ರಾಜಕೀಯದಲ್ಲಿದ್ದೂ ಅಟಲ್ ಬಿಹಾರಿ ವಾಜಪೇಯಿ ಅವರನ್ನು ವಾಗ್ಮಿ ಮತ್ತು ಸೂಕ್ಷ್ಮ ಸಂವೇದನೆಯ ಕವಿಯನ್ನಾಗಿ ರೂಪಿಸಿತು. ಸೋಮನಾಥ ಚಟರ್ಜಿ, ಪ್ರಣವ್‌ ಮುಖರ್ಜಿ, ಕರಣ್‌ ಸಿಂಗ್, ಎಲ್‌.ಕೆ.ಅಡ್ವಾಣಿ ತಮ್ಮ ಓದಿನ ವಿದ್ವತ್ತಿನಿಂದ ಅತ್ಯುತ್ತಮ ಸಂಸದೀಯಪಟುಗಳೆಂಬ ಗೌರವಕ್ಕೆ ಪಾತ್ರರಾದರು.

ಕರ್ನಾಟಕದ ರಾಜಕಾರಣದಲ್ಲಿ ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡ, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್‌, ಎಂ.ಪಿ.ಪ್ರಕಾಶ್ ಅವರಂತಹ ಅನೇಕ ರಾಜಕಾರಣಿಗಳು ತಮ್ಮ ಬಿಡುವಿಲ್ಲದ ರಾಜಕಾರಣದ ನಡುವೆಯೂ ಪುಸ್ತಕ ಪ್ರೀತಿಯನ್ನು ಕಾಪಿಟ್ಟುಕೊಂಡಿದ್ದರು. ಎಂ.ಪಿ.ಪ್ರಕಾಶ್ ಓದಿನ ಪ್ರೀತಿಯೊಂದಿಗೆ ಕಲಾವಿದರಾಗಿಯೂ ಈ ನೆಲದ ಸಾಂಸ್ಕೃತಿಕ ಹಿರಿಮೆಯನ್ನು ಎತ್ತರಕ್ಕೆ ಕೊಂಡೊಯ್ದರು. ವೀರಪ್ಪ ಮೊಯಿಲಿ ಬರಹಗಾರರಾಗಿ ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿರುವರು.

ಭಾಷೆ ಸುಧಾರಿಸಲು ಸಾಹಿತ್ಯದ ಓದು ಒಂದು ಪರ್ಯಾಯ ಮಾರ್ಗ. ಜೊತೆಗೆ ಓದು ಮನುಷ್ಯನ ಹೃದಯಾಂತರಾಳದಲ್ಲಿ ಪ್ರೀತಿ, ಅನುಕಂಪ ಮತ್ತು ಕರುಣೆಯನ್ನು ಹುಟ್ಟಿಸುವ ಕೆಲಸ ಮಾಡುತ್ತದೆ. ಲೋಕಾಂತದಲ್ಲೂ ಏಕಾಂತವನ್ನು ಒದಗಿಸುವ ಶಕ್ತಿ ಓದಿಗಿದೆ. ಆದರೆ ಸದಾ ಲೋಕಾಂತದ ಬದುಕಿನಲ್ಲೇ ಧನ್ಯತೆ ಅನುಭವಿಸುವ ರಾಜಕಾರಣಿಗಳಿಗೆ ಮೌನದ ಸುಖ ಅರ್ಥವಾಗುವುದಾದರೂ ಹೇಗೆ? ಗ್ರಂಥಾಲಯ ಇಲಾಖೆ ಎನ್ನುವ ಒಂದು ಸಾಂಸ್ಕೃತಿಕ ಇಲಾಖೆ ಇಂದು ರಾಜಕಾರಣದ ಅವಕೃಪೆಗೆ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವ ದೃಷ್ಟಾಂತ ನಮ್ಮ ಕಣ್ಣೆದುರಿಗಿದೆ.

‘ರಾಜಕಾರಣದಲ್ಲಿ ಸದ್ದನ್ನೇ ತುಂಬ ನೆಚ್ಚಿಕೊಂಡ ಭಾಷೆಗೆ ಮೌನದ ಪರಿಚಯವಿಲ್ಲ. ಶಬ್ದ ಮತ್ತು ಆವೇಶವು ರಾಜಕಾರಣದ ಪ್ರಧಾನ ಮೆಚ್ಚುಗೆಗಳಾಗಿವೆ. ಮೌನ ಅರ್ಥವಾಗಲು ರಾಜಕಾರಣಿಗಳಿಗೆ ಓದಿನಲ್ಲಿ ಆಸಕ್ತಿ ಹುಟ್ಟುವಂತಾಗಬೇಕು, ರಾಜಕಾರಣಕ್ಕೆ ಸಾಹಿತ್ಯದ ದೀಕ್ಷೆಯಾಗಬೇಕು’ ಎಂದು ಯಶವಂತ ಚಿತ್ತಾಲರು ‘ಸಾಹಿತ್ಯದ ಸಪ್ತಧಾತುಗಳು’ ಪುಸ್ತಕದಲ್ಲಿ ಹೇಳಿದ್ದಾರೆ. ನೊಬೆಲ್ ಪ್ರಶಸ್ತಿ ಸ್ವೀಕರಿಸುವಾಗ ಕವಿ ಬ್ರಾಡ್‍ಸ್ಕೀ ತಮ್ಮ ಭಾಷಣದಲ್ಲಿ ಹೀಗೆ ಹೇಳುತ್ತಾರೆ, ‘ನಾವು ನಮ್ಮ ನಾಯಕರನ್ನು ಅವರ ರಾಜಕೀಯ ಕಾರ್ಯಸೂಚಿಗಿಂತ ಅವರ ಓದಿನ ಅನುಭವವನ್ನು ಆಧರಿಸಿ ಆಯ್ಕೆ ಮಾಡಿದ್ದಲ್ಲಿ ಭೂಮಿಯ ಮೇಲೆ ಅತ್ಯಂತ ಕಡಿಮೆ
ದುಃಖವಿರುತ್ತಿತ್ತು’.

ಓದಿನ ಅನುಭವದ ಕೊರತೆಯಿಂದ ಸಭೆ ಸಮಾರಂಭಗಳಲ್ಲಿ, ಶಾಸನಸಭೆಗಳಲ್ಲಿ, ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನಮ್ಮ ರಾಜಕಾರಣಿಗಳು ಭಾಷೆಯನ್ನು ಕೀಳುಮಟ್ಟಕ್ಕಿಳಿಸಿ ಮಾತನಾಡುವುದು ಸಾಮಾನ್ಯವಾಗಿದೆ. ರಾಜಕಾರಣವೇ ಸಾರ್ವಜನಿಕರ ನಡೆ ನುಡಿಯನ್ನು ನಿರ್ಧರಿಸುತ್ತಿರುವ ಇಂಥ ಹೊತ್ತಿನಲ್ಲಿ ಸಹಜವಾಗಿಯೇ ರಾಜಕಾರಣಿಗಳು ಯುವಪೀಳಿಗೆಗೆ ಐಕಾನ್‍ಗಳಾಗಿ ಕಾಣಿಸುತ್ತಾರೆ. ಹೀಗಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಕಾರಿಡಾರ್‌ಗಳಲ್ಲಿ ರಾಜಕಾರಣದ ಭಾಷೆಯೇ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೂಡಿಯೇ ಶಿಕ್ಷಣಕ್ಕೆ ರಾಜಕಾರಣದ ವೇಷ ತೊಡಿಸುತ್ತಿರುವುದು ಇಂದಿನ ಶಿಕ್ಷಣ ವ್ಯವಸ್ಥೆಯ ದುರಂತ.

ಹಿರಿಯರ ಸದನವೆಂದೇ ಪರಿಗಣಿತವಾಗಿರುವ ವಿಧಾನ ಪರಿಷತ್ತಿಗೆ ಒಂದುಕಾಲದಲ್ಲಿ ಸಾಹಿತಿಗಳು, ಕಲಾವಿದರು, ಚಿಂತಕರು ನೇಮಕಗೊಳ್ಳುತ್ತಿದ್ದರು. ಇಂತಹವರಿಂದ ತುಂಬಿರುತ್ತಿದ್ದ ಪರಿಷತ್ ಒಂದರ್ಥದಲ್ಲಿ ವಿಧಾನಸಭೆಯಲ್ಲಿನ ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡುವ ಹಿರಿಯಣ್ಣನಂತೆ ಕೆಲಸ ಮಾಡುತ್ತಿತ್ತು. ಶಾಸನ ಸಭೆಯಲ್ಲಿನ ಭಾಷಣಗಳು ಐತಿಹಾಸಿಕ ದಾಖಲೆಗಳಾಗಿ ಉಳಿದುಕೊಂಡಿರುವುದರ ಹಿಂದೆ ಅಂದಿನ ರಾಜಕಾರಣಿಗಳ ಓದಿನ ವಿಸ್ತಾರವಾದ ಅನುಭವವೇ ಕಾರಣ. ಇಂದು ವಿಧಾನ ಪರಿಷತ್ತಿಗೂ ಪೂರ್ಣಾವಧಿಯ ರಾಜಕಾರಣಿಗಳೇ ಸಾಹಿತ್ಯ, ಕಲೆ, ಸಮಾಜ ಸೇವೆಯ ಕೋಟಾದಡಿ ಪ್ರವೇಶ ಪಡೆಯುತ್ತಿದ್ದಾರೆ. ಹೀಗಾಗಿ, ಶಾಸನ ಸಭೆಯ ಮಾತುಗಳು ವಿದ್ವತ್ತನ್ನು ಕಳೆದುಕೊಂಡು ಅಲ್ಲಿ ವಾಚಾಳಿತನ ಗೋಚರಿಸುತ್ತಿದೆ.

ಅಮೆರಿಕ, ಇಂಗ್ಲೆಂಡ್‌ನಂತಹ ದೇಶಗಳಲ್ಲಿ ರಾಜಕಾರಣಿಗಳು ನಿವೃತ್ತಿಯ ನಂತರ ಪುಸ್ತಕಗಳ ಓದಿನಲ್ಲಿ ಮತ್ತು ಬರವಣಿಗೆಯಲ್ಲಿ ತೊಡಗಿಕೊಳ್ಳುತ್ತಾರೆ. ತಮ್ಮ ರಾಜಕೀಯದ ಅನುಭವವನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸುತ್ತಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತ ತಮ್ಮ ಅನುಭವ ಮತ್ತು ಓದಿನ ಜ್ಞಾನವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಸದ್ಯದ ರಾಜಕಾರಣವನ್ನು ನೋಡಿದಾಗ, ಭಾರತದ ರಾಜಕಾರಣದಲ್ಲಿ ಇಂಥದ್ದೊಂದು ಪ್ರಬುದ್ಧ ಮತ್ತು ವಿದ್ವತ್ತಿನ ನಡೆಯನ್ನು ನಿರೀಕ್ಷಿಸಲು ಸಾಧ್ಯವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT