ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬಿದಿರು.. ನೀನಾರಿಗಲ್ಲವಾದೆ? ಇದು, ಆರ್ಥಿಕ ಅಭಿವೃದ್ಧಿಯ ಹೆಬ್ಬಾಗಿಲು

Last Updated 6 ಫೆಬ್ರುವರಿ 2022, 20:45 IST
ಅಕ್ಷರ ಗಾತ್ರ

ಕಳೆದ ವರ್ಷ ಮಲೆನಾಡಿನ ಕೆಲವು ಊರುಗಳಿಗೆ ತೆರಳಿದ್ದಾಗ, ದಾರಿಯುದ್ದಕ್ಕೂ ಉರುಳಿಬಿದ್ದಿದ್ದ ಒಣ ಬಿದಿರಿನ ಹಿಂಡಲುಗಳು ಕಂಡವು. ಕಾಡ್ಗಿಚ್ಚಿಗೂಕಾರಣವಾಗಬಲ್ಲ ಈ ನೈಸರ್ಗಿಕ ವನ್ಯಸಂಪತ್ತು ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದ ಫಲವಾಗಿ ಬಳಕೆಯಾಗದೆ ಮಣ್ಣು ಸೇರುತ್ತಿದೆ ಅನಿಸಿತು.

ನಿಜ, ಭಾರತವು ಬಿದಿರು ಎಂಬ ಬಂಗಾರ ಬೆಳೆಯುವ ರಾಷ್ಟ್ರಗಳಲ್ಲಿ ಎರಡನೆಯ ಸ್ಥಾನದಲ್ಲಿದೆ. ಇಲ್ಲಿ ಅದರ ಬಳಕೆಯಾಗುತ್ತಿರುವುದು ಪ್ರತಿಶತ ನಾಲ್ಕು ಮಾತ್ರ. ಅರಣ್ಯದೊಳಕ್ಕೆ ಹೋಗಿ ಬಿದಿರನ್ನು ತಂದು ತಟ್ಟಿ, ಬುಟ್ಟಿ ಮಾಡುತ್ತಿದ್ದ ಬುಡಕಟ್ಟು ಜನಾಂಗಗಳಿಗೆ ಪ್ರವೇಶ ನಿರಾಕರಿಸಿದ್ದರ ಫಲವಾಗಿ ಅಂತಹ ಕಸುಬುಗಳು ದೂರ ಸರಿಯುತ್ತಿರುವುದು ಒಂದೆಡೆಯಾದರೆ, ಪ್ಲಾಸ್ಟಿಕ್ ಪರಿಕರಗಳು ಇದಕ್ಕಿಂತ ಅಗ್ಗ ಎಂಬ ಕಾರಣಕ್ಕೆ ಬಿದಿರಿನ ವಸ್ತುಗಳು ಬೇಡಿಕೆಯನ್ನೂ ಕಳೆದುಕೊಂಡಿವೆ.

ಭಾರತದ ಕರಾವಳಿಯಿಂದ ಹಿಮಾಚಲದ ತನಕ 125 ಜಾತಿಯ ಬಿದಿರುಗಳು ಬೆಳೆಯುತ್ತಿವೆ. ರಾಸಾಯನಿಕ, ಕೀಟನಾಶಕ ಬಳಸದೆ ನಿಸರ್ಗಕ್ಕೆ ಹಸಿರು ಹೊದೆಸುವ ಸಂಪನ್ಮೂಲವೂ ಹೌದು. ಮರಗಳಿಗಿಂತ ಪ್ರತಿಶತ 35ರಷ್ಟು ಅಧಿಕ ಆಮ್ಲಜನಕ ವನ್ನು ವಾತಾವರಣಕ್ಕೆ ಅದು ಕೊಡುತ್ತದೆ. ಒಂದೇ ವರ್ಷದಲ್ಲಿ ಗರಿಷ್ಠ ಎತ್ತರ ಬೆಳೆದು ಉಪಯೋಗಕ್ಕೆ ಸಿದ್ಧವಾಗುವ ಜಾತಿಗಳೂ ನಮ್ಮಲ್ಲಿವೆ. ಆದರೂ ಬಿದಿರಿನ ಮಹತ್ವಪೂರ್ಣ ಬಳಕೆಯ ಬಗೆಗೆ ಇನ್ನೂ ಹೆಚ್ಚಿನ ಪ್ರಯತ್ನಗಳು ನಡೆದಿಲ್ಲ.

ಪುಣೆಯ ಯೋಗೀಶ್ ಶಿಂಧೆ ತಮ್ಮ ಪತ್ನಿ ಅಶ್ವಿನಿ ಜತೆಗೂಡಿ ಆರು ವರ್ಷಗಳಿಂದ ಬಿದಿರಿನ ಸದ್ಬಳಕೆಯ ಉದ್ಯಮವನ್ನು ಆರಂಭಿಸಿದ್ದಾರೆ. ಭಾರತದಲ್ಲಿ ತಿಂಗಳಿಗೆ 3.5 ಕೋಟಿ ಹಲ್ಲುಜ್ಜುವ ಬ್ರಷ್‍ಗಳು ಬೀದಿ ಸೇರುತ್ತವೆ ಎಂಬ ಲೆಕ್ಕಾಚಾರ ಸಿಕ್ಕಿದ ಮೇಲೆ ಅವರು ಮೊದಲು ತಯಾರಿಸಿದ್ದು ಬಿದಿರಿನಿಂದ ಟೂತ್‌ಬ್ರಷ್ ಸರಣಿ. ಮಕ್ಕಳಿಗೆ, ವಯಸ್ಕರಿಗೆ ಬೇಕಾದ ಹದಿಮೂರು ಮಾದರಿಯ ಬ್ರಷ್‍ಗಳನ್ನು ಮಾರುಕಟ್ಟೆಗಿಳಿಸಿ ಗೆದ್ದಿದ್ದಾರೆ. ಇದರಿಂದಾಗಿ 17 ಲಕ್ಷ ಕಿಲೊ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಬೀದಿ ಸೇರುವುದನ್ನು ತಡೆಯಲು ಸಾಧ್ಯವಾಗಿದೆ ಎನ್ನುತ್ತಾರೆ ಅವರು.

ಶಿಂಧೆ ದಂಪತಿ ಬಿದಿರಿನಿಂದ ತಯಾರಿಸುವ ಬಹು ವಸ್ತುಗಳ ಬ್ಯಾಂಬೂ ಇಂಡಿಯಾ ಕಾರ್ಖಾನೆ ನೂರಾರು ಮಂದಿಗೆ ಉದ್ಯೋಗ ನೀಡಿದೆ. ತಟ್ಟೆ, ಬುಟ್ಟಿ, ಆಕಾಶದೀಪ, ಬಾಚಣಿಗೆ, ನಾಲಿಗೆ ಕ್ಲೀನರ್, ಕೀಚೈನ್, ಇಯರ್‌ಬಡ್, ಡೆಸ್ಕ್‌ಟಾಪ್ ಪರಿಕರಗಳು, ಲೇಖನಿಗಳು, ಟ್ರಾವೆಲ್ ಕಿಟ್, ರಟ್ಟು ಸೇರಿದಂತೆ ಹಲವಾರು ವಸ್ತುಗಳನ್ನು ಬಿದಿರಿನಿಂದ ತಯಾರಿಸುತ್ತಿದೆ. ಮುಂದಿನ ದಿನಗಳಲ್ಲಿ ಆಭರಣ ಮತ್ತು ಬಟ್ಟೆಗಳನ್ನೂ ಅದು ಬಿದಿರಿನಿಂದ ತಯಾರಿಸಲಿದೆ. ಎಲ್ಲವೂ ಪ್ಲಾಸ್ಟಿಕ್ ವಸ್ತುಗಳಿಗಿಂತ ಅಧಿಕ ದೃಢತೆ ಮತ್ತು ಗುಣಮಟ್ಟ ಹೊಂದಿವೆ. ಇವನ್ನೆಲ್ಲ ತಯಾರಿಸುವ ಯಂತ್ರಗಳು ಚೀನಾ, ತೈವಾನ್, ವಿಯೆಟ್ನಾಂ ಮುಂತಾದ ದೇಶಗಳಿಂದ ಬರಬೇಕಾಗಿತ್ತು. ಶಿಂಧೆ ಈಗ ಇಲ್ಲಿಯೇ ಅಂತಹ ಯಂತ್ರಗಳನ್ನು ತಯಾರಿಸುತ್ತಿದ್ದಾರೆ.

ಹಿರೋಷಿಮಾದಲ್ಲಿ ಪರಮಾಣು ದಾಳಿ ನಡೆದ ಸಂದರ್ಭದಲ್ಲಿ ಬದುಕುಳಿದ ಏಕೈಕ ಸಸ್ಯ ತಾನೆಂಬ ಹೆಮ್ಮೆಗೆ ಬಿದಿರು ಪಾತ್ರವಾಗಿದೆ. ಸಾಮಾಜಿಕಉದ್ಯಮಶೀಲತೆಗೆ ಮಹತ್ವದ ಕೊಡುಗೆಯಾಗಿರುವ ಅದು ಉಕ್ಕಿಗಿಂತಲೂ ದೃಢವಾದುದು ಎಂಬುದನ್ನು ಗುರುತಿಸಿದವರು ಜಪಾನ್ ತಂತ್ರಜ್ಞರು. ವಿಶ್ವಯುದ್ಧದ ಸಮಯದಲ್ಲಿ ಅಲ್ಲಿ ಬಿದಿರಿನಿಂದ ತಾತ್ಕಾಲಿಕ ರೈಲು ಸೇತುವೆ ನಿರ್ಮಿಸಿದ್ದರು.

ನಮ್ಮಲ್ಲಿ ಖಾಲಿ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯವರು ಸಿಲ್ವರ್, ಅಕೇಶಿಯಾದಂತಹ ಮರಗಳನ್ನು ಬೆಳೆದು ಅದರ ಆರೈಕೆಗಾಗಿ ಬಹಳಷ್ಟು ಹಣ ಖರ್ಚು ಮಾಡುತ್ತಾರೆ. ಇದರಿಂದ ಲಾಭ ಸಿಗಲು ದಶಕಗಳ ತನಕ ಕಾದರೂ ಅದು ಸರ್ಕಾರೀಕರಣದ ಯೋಜನೆಯಾದ ಕಾರಣ ಸಾಧಕ, ಬಾಧಕಗಳ ಗಣನೆ ಮಾಡುವುದಿಲ್ಲ. ಆದರೆ ವೆಚ್ಚವಿಲ್ಲದೆ ಶೀಘ್ರವಾಗಿ ಬೆಳೆಯಬಲ್ಲ ಬಿದಿರಿನ ಸಂವರ್ಧನೆಗೆ ಅರಣ್ಯ ಇಲಾಖೆ ನೀಡುತ್ತಿರುವ ಮಹತ್ವ ಅತ್ಯಲ್ಪವಾಗಿದೆ. ಕೇವಲ ಬೆಳೆದರೆ ಸಾಲದು, ಬಿದಿರು ಆಧಾರಿತ ಉತ್ಪನ್ನಗಳ ತಯಾರಿಕೆಗೆ ಗ್ರಾಮೀಣ ಭಾಗದ ಜನರಲ್ಲೂ ಜಾಗೃತಿ ಮೂಡಿಸಬೇಕು. ಯಾಂತ್ರಿಕವಾಗಿ ಸಲಕರಣೆಗಳು ತಯಾರಾಗುವ ಕಾರಣ ಪ್ಲಾಸ್ಟಿಕ್ ಪರಿಕರಗಳಿಗಿಂತ ಅಗ್ಗವಾಗಿ ಕೊಡುವ ಪ್ರಯತ್ನವೂ ನಡೆಯಬೇಕು. ಇದು ದೇಶದ ಆರ್ಥಿಕ ಅಭಿವೃದ್ಧಿಯ ಹೆಬ್ಬಾಗಿಲು ತೆರೆಯಬಹುದು ಎಂಬುದನ್ನು ಮೊದಲು ಅರಣ್ಯ ಇಲಾಖೆಯ ವರಿಷ್ಠರು ಮನಗಾಣಬೇಕು.

ಮೂಡುಬಿದಿರೆಯ ಸೋನ್ಸ್ ಸೇರಿದಂತೆ ನಾನಾ ಜಾತಿಯ ಬಿದಿರಿನ ಪ್ರಾಯೋಗಿಕ ಕೃಷಿ ಮಾಡಿದ ಹಲವರು ನಮ್ಮಲ್ಲಿದ್ದಾರೆ. ಬಿದಿರು ಕೂಡ ಹಣದಬೆಳೆಯಾಗುತ್ತದೆಂಬ ಕಲ್ಪನೆ ಜನರಿಗೆ ಮೂಡಬೇಕಿದ್ದರೆ ಪ್ರತೀ ಜಿಲ್ಲೆಯಲ್ಲೂ ಬಿದಿರು ಆಧಾರಿತ ಕೈಗಾರಿಕೆಗಳ ಸ್ಥಾಪನೆಯಾಗಬೇಕು. ಮಲೆನಾಡಿನ ಕಾಡುಗಳಲ್ಲಿ ಹೂ ಬಿಟ್ಟು ಬಿದಿರಕ್ಕಿ ಉದುರಿಸಿ ಬುಡದಿಂದಲೇ ಕಳಚಿ, ಹಲವು ವರ್ಷಗಳ ಕಾಲ ಉಳಿದು ನಾಶವಾಗುವ ಬಿದಿರಿನ ಅವಗಣನೆ ನಿಲ್ಲಬೇಕು.

ಕರ್ನಾಟಕ ಸೇರಿದಂತೆ ಬಿದಿರು ಬೆಳೆಯುವ ರಾಜ್ಯಗಳ ಕುತೂಹಲದ ದೃಷ್ಟಿ ಅದರೆಡೆಗೆ ಹರಿದಿಲ್ಲ. ಅರಣ್ಯ ಇಲಾಖೆಯ ನಿರ್ಬಂಧಗಳ ಪರಿಣಾಮ ಗುಡಿ ಕೈಗಾರಿಕೆಗಳ ಪರಂಪರೆಯೇ ಅಗೋಚರವಾಗುತ್ತಿರುವ ಈ ದಿನಗಳಲ್ಲಿ, ಬಿದಿರಿಗೆ ನೀಡುವ ಅವಕಾಶ ಹೊಸದೊಂದು ಕೈಗಾರಿಕೆ ಕ್ರಾಂತಿಯ ಸೃಷ್ಟಿಗೆ ಕಾರಣವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT