ಬುಧವಾರ, ಆಗಸ್ಟ್ 4, 2021
20 °C
ಕಪ್ಪುವರ್ಣೀಯರ ಮೇಲಿನ ಅಮೆರಿಕದ ಶ್ವೇತವರ್ಣೀಯರ ದ್ವೇಷದ ದಳ್ಳುರಿ ಇನ್ನೂ ಆರಿಲ್ಲವೆಂಬುದಕ್ಕೆ ಇತ್ತೀಚೆಗೆ ಅಲ್ಲಿ ನಡೆದ ಅಮಾನವೀಯ ಘಟನೆಯೇ ಸಾಕ್ಷಿ

ಸಂಗತ | ಮನೋದಾರಿದ್ರ್ಯಕ್ಕೆ ಯಾವ ಶಿಕ್ಷೆ?

ಡಾ. ಬಸವರಾಜ ಸಾದರ Updated:

ಅಕ್ಷರ ಗಾತ್ರ : | |

Prajavani

ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣ ವೊಂದರಲ್ಲಿ ಮೈ ಜುಮ್ಮೆನ್ನಿಸುವ ಸುದ್ದಿಚಿತ್ರವೊಂದು ಬಂದಿತ್ತು. ಬೇಸಿಗೆಯ ಬಿಸಿಲಲ್ಲಿ ನೀರು ಸಿಗದೆ ಹೈರಾಣಾದ ಕಾಳಿಂಗ ಸರ್ಪವೊಂದು ನೀರನ್ನರಸಿ ಊರಿಗೆ ಬರುತ್ತದೆ. ಆ ಊರಿನ ‘ಮನುಷ್ಯ’ನೊಬ್ಬ ಸರ್ಪದ ದಾಹವನ್ನು ಅರ್ಥಮಾಡಿಕೊಂಡು, ಬಾಟಲಿ ತುಂಬ ನೀರು ತಂದು, ತನ್ನ ಕೈಯಾರೆ ಅದಕ್ಕೆ ಕುಡಿಸಿ, ನಂತರ ಮರಳಿ ಕಾಡಿಗೆ ಕಳಿಸಿದ ಅಚ್ಚರಿಯ ಮತ್ತು ನಂಬಲಾಗದ ಚಿತ್ರದೃಶ್ಯವದು! ಮನುಷ್ಯನ ಈ ಔದಾರ್ಯದ ಘಟನೆಯನ್ನು ನೆನಪಿಸಿಕೊಂಡಾಗ, ವ್ಯಕ್ತಿಯೊಬ್ಬನ ಕುತ್ತಿಗೆಯ ಮೇಲೆ ಮಂಡಿಯೂರಿ ಕುಳಿತು, ಆತ ಆರ್ತವಾಗಿ ಅಂಗಲಾಚಿದರೂ ಬಿಡದೆ, ಅವನ ಪ್ರಾಣವನ್ನೇ ಕಿತ್ತುಕೊಂಡ ಅಮೆರಿಕದ ಪೊಲೀಸನ ಅಮಾನವೀಯ ಕೃತ್ಯದ ಚಿತ್ರ ಕಣ್ಮುಂದೆ ಬಂದು, ಮೈಯನ್ನೆಲ್ಲ ಉರಿಸುತ್ತದೆ.

ಶತಶತಮಾನಗಳ ಹಿಂದೆ ಆಫ್ರಿಕಾದಿಂದ ಕಪ್ಪು ವರ್ಣೀಯರನ್ನು ದನಗಳಂತೆ ಹಡಗುಗಳಲ್ಲಿ ತುಂಬಿ ತಂದು ಮಾರುಕಟ್ಟೆಯಲ್ಲಿ ಮಾರುವಾಗ, ಅಗ್ಗಕ್ಕೆ ಕೊಂಡು, ಅವರ ಕನಿಷ್ಠ ಅಗತ್ಯಗಳನ್ನೂ ಪೂರೈಸದೆ, ತಮ್ಮ ಹೊಲ-ಮನೆಗಳಲ್ಲಿ ದನಗಳಂತೆ ದುಡಿಸಿಕೊಂಡದ್ದು ಮತ್ತು ಅವರನ್ನು ಪ್ರಾಣಿಗಳಂತೆ ಹಿಂಸಿಸಿದ್ದು, ಆನಂತರ ಕಪ್ಪು ವರ್ಣೀಯರ ದೀರ್ಘ ಕಾಲದ ಸಂಘರ್ಷದ ಫಲವಾಗಿ ಅವರು ಒಂದಿಷ್ಟು ನೆಮ್ಮದಿ ಪಡೆದದ್ದು ಅಮೆರಿಕದ ಕರಾಳ ಇತಿಹಾಸ. ಆದರೆ ಕಪ್ಪು ವರ್ಣದವರ ಮೇಲಿನ ಅಮೆರಿಕದ ಶ್ವೇತ ವರ್ಣದವರ ದ್ವೇಷದ ದಳ್ಳುರಿ ಇನ್ನೂ ಆರಿಲ್ಲವೆಂಬು ದಕ್ಕೆ ಕಳೆದ ವಾರ ಅಲ್ಲಿ ನಡೆದ ಅಮಾನವೀಯ ಘಟನೆಯೇ ಸಾಕ್ಷಿ. 

ಗಂಡು ಕ್ರೌಂಚಪಕ್ಷಿಯನ್ನು ಕೊಂದಾಗ ನೋವನ್ನು ತಾಳಲಾರದೆ, ಹೆಣ್ಣುಕ್ರೌಂಚವು ಹೊರಹಾಕಿದ ಶೋಕವೇ ಕಾರಣವಾಗಿ ವಾಲ್ಮೀಕಿಯಿಂದ ರಾಮಾಯಣದಂಥ ಮಹಾಕಾವ್ಯ ಸೃಷ್ಟಿಯಾಗಿದೆ. ಪ್ರಾಣಿಗಳ ಅಳು ಮಹಾಕಾವ್ಯ ರಚಿಸುವಷ್ಟು ಕರುಣೆ ಯನ್ನು ಉಕ್ಕಿಸುವಾಗ, ಸಾಯುವ ಮನುಷ್ಯನ ಹೃದಯ ಬಿರಿಯುವಂಥ ಆಕ್ರಂದನವೂ ಅಮೆರಿಕದ ಪೊಲೀಸನಿಗೆ ಕೇಳಲಿಲ್ಲವೆಂದರೆ ಅಧಿಕಾರಶಾಹಿಯ ದರ್ಪಕ್ಕೆ, ಮನೋದಾರಿದ್ರ್ಯಕ್ಕೆ ಯಾವ ಶಿಕ್ಷೆ?

ಅಮೆರಿಕದ ಷಿಕಾಗೊದಲ್ಲಿ ಒಂದು ಹೆಸರಾಂತ ವಧಾಲಯ ಇದೆಯಂತೆ (ದಾವಣಗೆರೆಯ ಡಾ. ಎಂ.ಜಿ.ಈಶ್ವರಪ್ಪ ಅವರು ಅಮೆರಿಕಕ್ಕೆ ಹೋದಾಗ ಅದನ್ನು ನೋಡಿ ಬೆರಗಾದುದನ್ನು ಹೇಳಿದ್ದುಂಟು). ಅಲ್ಲಿ ನಿತ್ಯ ಕೋಣ, ಎತ್ತು, ಆಡು, ಹಂದಿ, ಕುರಿ, ಕೋಳಿಯೇ ಮೊದಲಾದ ಸಾವಿರ ಸಾವಿರ ಪ್ರಾಣಿಗಳನ್ನು ಕೊಂದು, ಅತ್ಯಂತ ವ್ಯವಸ್ಥಿತ ಕ್ರಮದಲ್ಲಿ ಮಾಂಸವನ್ನು ಸಂಸ್ಕರಿಸಿ, ಪ್ಯಾಕ್ ಮಾಡಿ ರಫ್ತು ಮಾಡುತ್ತಾರಂತೆ. ಆ ಕಾರ್ಖಾನೆಯ ಹೊರಗೋಡೆಯ ಮೇಲೆ ‘ಎವೆರಿಥಿಂಗ್‌ ಈಸ್‌ ಯುಟಿಲೈಸ್ಡ್‌ ಹಿಯರ್‌’ ಎಂದು ದಪ್ಪ ಅಕ್ಷರಗಳಲ್ಲಿ ಬರೆದಿದ್ದಾರಂತೆ. ಇಲ್ಲಿ ಕೊಲ್ಲಲಾಗುವ ಎಲ್ಲ ಪ್ರಾಣಿಗಳ ಮಾಂಸ, ಚರ್ಮ, ಕೊಂಬು, ಕೂದಲು, ಬಾಲ, ರಕ್ತ ಯಾವುದೂ ಹಾಳಾಗದ ಹಾಗೆ ನೋಡಿಕೊಳ್ಳುತ್ತೇವೆ ಎಂಬುದೇ ಆ ಮಾತಿನ ಅರ್ಥ! ಆ ವಧಾಲಯವು ಅಮೆರಿಕದಲ್ಲೇ ಅದ್ಭುತ ಉದ್ಯಮವೆಂದು ಹೆಸರಾಗಿ ರುವ ಕಾರಣಕ್ಕಾಗಿ ಅದನ್ನು ನೋಡಲು ಪ್ರತಿದಿನವೂ ಅಸಂಖ್ಯ ಜನ ಹೋಗುತ್ತಾರಂತೆ!

ಇಂಥ ವಧಾಲಯದ ಪ್ರಸಿದ್ಧಿ ಕೇಳಿದ ಹೆಸರಾಂತ ವಿಚಾರವಾದಿಯೊಬ್ಬ ಅದನ್ನು ನೋಡಬೇಕೆಂಬ ಕುತೂಹಲದಿಂದ ಅಲ್ಲಿಗೆ ಬರುತ್ತಾನೆ. ಒಳಗೆ ಸುತ್ತಾಡಿ ಅಲ್ಲಿ ನಡೆಯುತ್ತಿದ್ದ ಎಲ್ಲ ವಿದ್ಯಮಾನಗಳನ್ನೂ ಗಮನಿಸಿದಾಗ, ಹೊರಗೋಡೆಯ ಮೇಲೆ ಬರೆದಿದ್ದ ಅಕ್ಷರಕ್ಷರವೂ ನಿಜವೆಂಬುದು ಗೊತ್ತಾಗಿ ಆತ ದಂಗಾಗುತ್ತಾನೆ. ಅಲ್ಲಿಂದ ಹೊರಬಂದು ಮ್ಯಾನೇಜರ್‌ನ ಕೋಣೆಗೆ ಹೋಗಿ, ‘ನಿಮ್ಮ ವಧಾಲಯದ ಹೊರಗೋಡೆಯ ಮೇಲಿನ ಬರಹದ ಕೆಳಗೆ ನಾನೊಂದು ಮಾತು ಬರೆಯಬಹುದೇ?’ ಎಂದು ಕೇಳಿದಾಗ, ಮ್ಯಾನೇಜರ್ ಅಷ್ಟೇ ವಿನಯದಿಂದ ‘ಆಯ್ತು’ ಎಂದುಬಿಡುತ್ತಾನೆ. ಬಳಿಕ ವಿಚಾರವಾದಿಯು ‘ಯೂ ಕ್ಲೇಮ್‌ ಎವೆರಿಥಿಂಗ್‌ ಈಸ್‌ ಯುಟಿಲೈಸ್ಡ್‌ ಹಿಯರ್‌, ಬಟ್‌ ವಾಟ್‌ ಅಬೌಟ್‌ ದ ಲಾಸ್ಟ್‌ ಕ್ರೈ ಆಫ್‌ ದಿ ಅನಿಮಲ್‌’ ಎಂದು ಬರೆದವನೇ ಅಲ್ಲಿಂದ ನಡೆದುಬಿಡುತ್ತಾನೆ.

ನಿಜ, ನಿತ್ಯವೂ ಅಸಂಖ್ಯ ಪ್ರಾಣಿಗಳನ್ನು ಕೊಲ್ಲುವ ವ್ಯವಸ್ಥೆಗೆ, ಪ್ರಾಣಿಗಳ ಎಲ್ಲ ಅಂಗಾಂಗಗಳನ್ನು ಉಪಯೋಗಿಸುವುದು ಗೊತ್ತಿತ್ತೇ ಹೊರತು, ಅವು ಸಾಯುವ ಮುಂಚೆ ಹೊರಡಿಸುವ ಆರ್ತಧ್ವನಿಯನ್ನು ಕೇಳುವ ಮನುಷ್ಯತ್ವ ಇರಲಿಲ್ಲ. ತಮ್ಮ ಕತ್ತುಗಳನ್ನು ಕತ್ತರಿಸುವಾಗ ಅಲ್ಲಿ ಪ್ರಾಣಿಗಳು ಹೊರಡಿಸುತ್ತಿದ್ದ ಆಕ್ರಂದನವು ಆ ವಿಚಾರವಾದಿಯ ಮನಸ್ಸನ್ನು ಮಮ್ಮಲ ಮರುಗಿಸಿತ್ತು. ಆತ ಬರೆದ ಮಾತು ಅವನ ಹೃದಯದ ಪಡಿನುಡಿಯಾಗಿತ್ತು!

ಈಗ ಅದೇ ಅಮೆರಿಕದಲ್ಲಿ ಅಂಥದ್ದೇ ಘಟನೆ ನಡೆದಿದೆ. ಅದು ವಧಾಲಯದ ಒಳಗೆ ಅಲ್ಲ, ದೊಡ್ಡ ನಗರದ ನಡುಬೀದಿಯಲ್ಲಿ! ಅದೂ ಹಾಡ ಹಗಲಿನಲ್ಲಿ! ಅಮಾಯಕ ಜೀವವೊಂದನ್ನು ಆಹುತಿ ತೆಗೆದುಕೊಂಡ ಅಲ್ಲಿನ ಪೊಲೀಸನಿಗೆ, ಸಾಯುವ ಮುಂಚೆ ಒರಲಿದ ಆ ಜೀವಿಯ ಆರ್ತನಾದ ಕೇಳಿಸಲಿಲ್ಲ. ಅಂದರೆ, ಕೇಳಿಸಿ ಕೊಳ್ಳುವಷ್ಟು ತಾಳ್ಮೆ ಮತ್ತು ಮನುಷ್ಯತ್ವ ಅಮೆರಿಕದ ಅಧಿಕಾರಶಾಹಿಗೆ ಈಗ ಉಳಿದಿಲ್ಲವೆಂದೇ ಅರ್ಥ. ಆ ಅಮಾನುಷ ಕ್ರೌರ್ಯಕ್ಕೆ ಆ ದೇಶ ಈಗ ಬೆಲೆ ತೆರಬೇಕಾಗಿದೆ. ಅಧಿಕಾರದ ದರ್ಪ ತಲೆಗೇರಿದ ಯಾವುದೇ ದೇಶ ಅಥವಾ ದುರಾಡಳಿತಗಾರರಿಗೂ ಇದು ಬಹುದೊಡ್ಡ ಪಾಠ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು