ಕನ್ನಡ ಪುಸ್ತಕೋದ್ಯಮ ಎನ್ನುವುದು ಮೇಕೆಯ ಕಣ್ಣ ಮುಂದೆ ಕಟ್ಟಿದ ಗಜ್ಜರಿ (ಕ್ಯಾರೆಟ್) ಇದ್ದಂತೆ ಎನ್ನುವುದು ಈ ಉದ್ಯಮದಲ್ಲಿ ತೊಡಗಿಸಿಕೊಂಡ ಬಹುತೇಕರ ಅಭಿಪ್ರಾಯ. ಮುಂದೆ ಕ್ಯಾರೆಟ್ ಇದೆ ಎಂದುಕೊಂಡು ಅದನ್ನು ಹಿಡಿಯುವ ಸಲುವಾಗಿ ಹೆಜ್ಜೆ ಹಾಕುವ ಮೇಕೆಗೆ, ತಾನು ಹೆಜ್ಜೆ ಇಟ್ಟಂತೆ ತನಗೇ ಕಟ್ಟಿದ ಕ್ಯಾರೆಟ್ ಕೂಡ ಮುಂದಕ್ಕೆ ಚಲಿಸುತ್ತದೆ ಎಂಬುದರ ಅರಿವೇ ಇರುವುದಿಲ್ಲ. ಬರೆದ ಪುಸ್ತಕಗಳೆಲ್ಲ ಬಿಸಿ ಕೇಕ್‌ನಂತೆ ಖರ್ಚಾಗಿ ಬಿಡುತ್ತವೆ ಎಂಬ ಭ್ರಮೆಯನ್ನು ಉದ್ಯಮದ ಹೊರಗೆ ನಿಂತು ನೋಡುವವರಿಗೆ ಈ ವ್ಯವಹಾರ ಹುಟ್ಟಿಸುತ್ತದೆ. ವಾಸ್ತವದಲ್ಲಿ, ಹಾಕಿದ ಬಂಡವಾಳ ತಿರುಗಿ ಬಂದರೆ ಸಾಕು ಎಂಬಂತೆ ಇರುತ್ತದೆ. ಹಾಗೆ ಬಂದರೂ ಅದಕ್ಕೆ ಈ ಕಾಲಘಟ್ಟದಲ್ಲಿ ಕನಿಷ್ಠ ನಾಲ್ಕು ವರ್ಷಗಳಾದರೂ ಬೇಕಾಗುತ್ತದೆ. ಪುಸ್ತಕಕ್ಕೆ ಒಟ್ಟಾರೆಯಾಗಿ ಹಾಕುವ ಬಂಡವಾಳ ಬಿಡಿಬಿಡಿಯಾಗಿ ಸಿಗುವಂತೆ ಆಗಿದೆ.
ಸಾವಿರ ಪ್ರತಿಗಳನ್ನು ಅಚ್ಚು ಹಾಕಿಸಿ ಮುನ್ನೂರು ಪ್ರತಿಗಳನ್ನು ಗ್ರಂಥಾಲಯಕ್ಕೆ ನೀಡಿದ ನಂತರ ಉಳಿಯುವ ಪ್ರತಿಗಳಲ್ಲಿ ಇನ್ನೂರು- ಮುನ್ನೂರು ಪ್ರತಿಗಳು ಮಾರಾಟವಾದರೆ ಅದೇ ಹೆಚ್ಚು. ಇನ್ನು ಪುಸ್ತಕೋದ್ಯಮವನ್ನೇ ನಂಬಿದವರಾದರೆ, ಪ್ರತಿ ಜಿಲ್ಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಟ್ಟು, ಒಂದಿಷ್ಟು ಮಾರಾಟ ಮಾಡಿಕೊಳ್ಳಬಹುದು. ಅದುಬಿಟ್ಟರೆ ಒಂದೋ ಎರಡೋ ಪುಸ್ತಕಗಳನ್ನು ಪ್ರಕಟಿಸುವ ಲೇಖಕ, ಪ್ರಕಾಶಕರಿಗೆ ಆ ಹಾದಿಯೂ ಸುಲಭವಲ್ಲ.
ಇನ್ನು ಗ್ರಂಥಾಲಯಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡುವ ಮಾನದಂಡದ ಕುರಿತು ಹೇಳ ಹೊರಟರೆ ಅದು ಮುಗಿಯದ ಕಥೆ. ಹಲವಾರು ಪ್ರಕಾಶನಗಳ ಪುಸ್ತಕಗಳನ್ನು ಕೋಟ್ಯಂತರ ರೂಪಾಯಿ ನೀಡಿ ಗ್ರಂಥಾಲಯ ಇಲಾಖೆ ಕೊಂಡುಕೊಳ್ಳುತ್ತದೆ. ಆದರೆ ಪ್ರಭಾವಶಾಲಿ ಪ್ರಕಾಶಕರು ಹತ್ತು- ಹನ್ನೆರಡು ಪ್ರಕಾಶನಗಳ ಹೆಸರುಗಳ ಅಡಿಯಲ್ಲಿ ಪುಸ್ತಕಗಳನ್ನು ಕೊಂಡುಕೊಳ್ಳುವಂತೆ ಮಾಡಬಲ್ಲರು. ಅಂತಹ ಪ್ರಭಾವಶಾಲಿಗಳಲ್ಲದ ಪ್ರಕಾಶಕರಿಗೆ ಈ ಕೆಲಸ ಅಸಾಧ್ಯ. ಪ್ರತಿ ಪ್ರಕಾಶಕನೂ ಗ್ರಂಥಾಲಯ ಅವಲಂಬಿತನೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.
ಪುಸ್ತಕ ಖರೀದಿಗಾಗಿಯೇ ಸರ್ಕಾರದ ಹಲವಾರು ಯೋಜನೆಗಳಿವೆ. ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ಸೇರಿದ ಈ ಎಲ್ಲಾ ಯೋಜನೆಗಳನ್ನು ಕೆಲವು ಪಟ್ಟಭದ್ರ ಪ್ರಕಾಶಕರು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ. ಪ್ರಕಾಶಕರಿಗೆ ಬೆನ್ನೆಲುಬಾಗಿ ನಿಲ್ಲಬೇಕಾಗಿದ್ದ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಆ ಬಗ್ಗೆ ಲಕ್ಷ್ಯವೇ ಇದ್ದಂತಿಲ್ಲ.
ಕರ್ನಾಟಕದಲ್ಲಿ ಸುಮಾರು ಏಳು ಸಾವಿರಕ್ಕೂ ಹೆಚ್ಚು ಗ್ರಂಥಾಲಯಗಳಿವೆ. ಪ್ರತಿ ಗ್ರಂಥಾಲಯ ಒಂದೊಂದು ಪ್ರತಿಯಂತೆ ಖರೀದಿಸಿದರೂ ಏಳು ಸಾವಿರ ಪ್ರತಿಗಳು ಖರ್ಚಾಗಬೇಕು.
ದುರಂತವೆಂದರೆ, ಸರ್ಕಾರದ ಸಗಟು ಖರೀದಿಯಲ್ಲಿ ಇಲಾಖೆ ಮುನ್ನೂರು ಪ್ರತಿ ಖರೀದಿಸಿ ಲೇಖಕ ಮತ್ತು ಪ್ರಕಾಶಕರ ಮೂಗಿಗೆ ತುಪ್ಪ ಸವರುವ ನಾಟಕವಾಡುತ್ತಿದೆ (ಜನಪ್ರಿಯವಾದ ಈ ಯೋಜನೆಯನ್ನೇ ನಿಲ್ಲಿಸುವ ಹುನ್ನಾರ ಸಹ ನಡೆದಿದೆ).
ಈ ಯೋಜನೆಯಾದರೂ ಸಮರ್ಪಕವಾಗಿ ನಡೆಯುತ್ತದೆಯೇ ಎಂದರೆ, ಅದೂ ಇಲ್ಲ. ಏಕೆಂದರೆ 2020ರ ಪುಸ್ತಕಗಳೇ ಇನ್ನೂ ಗ್ರಂಥಾಲಯಗಳನ್ನು ಸೇರಿಲ್ಲ. ಸರ್ಕಾರದ ನಿಯಮಗಳ ಪ್ರಕಾರ, ಎರಡು ವರ್ಷಕ್ಕಿಂತ ಹಳೆಯ ಪುಸ್ತಕಗಳನ್ನು ಖರೀದಿಸುವಂತಿಲ್ಲ. ಸಕಾಲದ ನಿಯಮದಂತೆ ಪುಸ್ತಕ ಖರೀದಿಸಿದ ಅರವತ್ತು ದಿನಗಳ ಒಳಗೆ ಸಂಬಂಧಿಸಿದವರಿಗೆ ಹಣ ಪಾವತಿ ಮಾಡಬೇಕು. ಆದರೆ, ಈ ಕಾರ್ಯ ನಡೆಯುತ್ತಿಲ್ಲ.
ಕನ್ನಡದ ಓದುಗರು ಅತ್ಯುತ್ತಮವಾದ ಪುಸ್ತಕಗಳನ್ನು ಓದುತ್ತಾರೆ ಎಂಬುದು ನಿಜವಾದರೂ ಟಾಪ್ ಟೆನ್ ನೋಡಿ, ಆಯ್ಕೆ ಮಾಡಿಕೊಂಡು ಓದುತ್ತಾರೆ ಎಂಬುದು ಅಪ್ಪಟ ಸುಳ್ಳು. ಸಾವಿರ ಪ್ರತಿ ಹಾಕಿಸಿದ ಮೊದಲ ಮುದ್ರಣ ರಾತ್ರಿ ಬೆಳಗಾಗುವುದರಲ್ಲಿ ಖಾಲಿಯಾಗಿ ಮತ್ತೆ ಮರು ಮುದ್ರಣಕ್ಕೆ ಹೋಗುತ್ತದೆ ಎಂಬುದು ವ್ಯಾಪಾರದ ತಂತ್ರಗಾರಿಕೆ. ಇಂತಹ ಉತ್ಪ್ರೇಕ್ಷಿತ ಹೇಳಿಕೆಯನ್ನು ನಂಬಿಕೊಂಡು ಯಾರಾದರೂ ಪುಸ್ತಕೋದ್ಯಮ ಲಾಭದಾಯಕ ಎಂದು ನಂಬಿದರೆ ಬಹುಶಃ ಅದರಷ್ಟು ಮೂರ್ಖತನ ಇನ್ನೊಂದಿಲ್ಲ. ಇವೆಲ್ಲವೂ ಪುಸ್ತಕ ಚೆನ್ನಾಗಿದೆ ಎಂದು ಭ್ರಮೆ ಹುಟ್ಟಿಸಲು ದೊಡ್ಡವರು ಮಾಡುವ ವ್ಯಾಪಾರದ ಗಿಮಿಕ್‌ಗಳಷ್ಟೇ.
ಸಂಕಷ್ಟದ ತಿರುವು ಹಾದಿಯಲ್ಲಿ ನಿಂತಿರುವ ಪುಸ್ತಕೋದ್ಯಮಕ್ಕೆ ಕೆಲವು ಪ್ರಕಾಶಕರು ಮತ್ತು ಲೇಖಕರ ಹೇಳಿಕೆಗಳೇ ದೊಡ್ಡ ಹೊಡೆತ. ಇನ್ನೂರು, ಮುನ್ನೂರು ಪುಸ್ತಕಗಳನ್ನು ಪ್ರಕಟಿಸಿ, ಸ್ನೇಹಿತರಿಗೆ ಹಂಚಿ, ಮೊದಲ ಮುದ್ರಣ ಬೆಳಗಾಗುವಷ್ಟರಲ್ಲಿ ಖಾಲಿಯಾಗಿದೆ ಎಂದು ಹೇಳುವ ಬಹಳಷ್ಟು ಉದಾಹರಣೆಗಳು ಈಗಾಗಲೇ ನಮ್ಮ ಕಣ್ಣೆದುರಿಗೆ ಇವೆ.
ಇದರ ಹೊರತಾಗಿ ಪುಸ್ತಕೋದ್ಯಮದ ಊರುಗೋಲಾಗಿ ನಿಲ್ಲುವ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾದುದು ಕನ್ನಡದ ಲೇಖಕ ಮತ್ತು ಪ್ರಕಾಶಕರ ಇಂದಿನ ತುರ್ತು ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.