ಶುಕ್ರವಾರ, ಜುಲೈ 1, 2022
23 °C
ಕೋವಿಡ್ ಸಂಕಷ್ಟದ ಕಾಲದಲ್ಲಿ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳು ಬೊಕ್ಕಸಕ್ಕೆ ಭಾರವಾಗಿವೆ ಎಂದು ಕೆಲವರು ಕೂಗೆಬ್ಬಿಸಿರುವುದು ಹಾಸ್ಯಾಸ್ಪದ ಸಂಗತಿ

ಸಂಗತ: ಜೀವಪರ ಕಲೆ ಬೊಕ್ಕಸಕ್ಕೆ ಭಾರವೇ?

ಮಲ್ಲಿಕಾರ್ಜುನ ಹೆಗ್ಗಳಗಿ Updated:

ಅಕ್ಷರ ಗಾತ್ರ : | |

Prajavani

ಲೆಬನಾನಿನ ಲೇಖಕ ಖಲೀಲ್ ಗಿಬ್ರಾನ್ ಬರೆದ ‘ಬಿಲ್ಡರ್ಸ್‌ ಆಫ್ ಬ್ರಿಡ್ಜಸ್‌’ ಎಂಬ ಕಥೆ ಪ್ರಸಿದ್ಧವಾಗಿದೆ. ಈ ಕಥೆಯು ಅಸ್ನಿ ನದಿಯ ಮೇಲೆ ಕಟ್ಟಲಾದ ಒಂದು ಸೇತುವೆ ಕುರಿತಾದದ್ದು. ಕಟ್ಟುವುದು ಮುಗಿದ ಮೇಲೆ ‘ದೊರೆ ಅಂಟಿಯೋರಸ್ ಕಟ್ಟಿದ್ದಾನೆ, ದೊರೆಯಿಂದಾಗಿ ಜನ ಬದುಕಿದ್ದಾರೆ’ ಎಂಬ ಫಲಕ ಕೆತ್ತಲಾಗುತ್ತದೆ. ಇದನ್ನು ಕಂಡು ರೋಸಿ ಹೋದ ಗಿಬ್ರಾನ್, ‘ಸೇತುವೆ ಕಟ್ಟಲು ಕಲ್ಲುಗಳನ್ನು ಹೊತ್ತು ತಂದಿದ್ದು ಕತ್ತೆಗಳು, ಜನರು ಬದುಕುವುದು ದೊರೆಯಿಂದಲ್ಲ; ಕಲೆಯಿಂದ’ ಎಂದು ಹೇಳುವ ಕಥೆ ಹೆಣೆದಿದ್ದಾರೆ. ತರತಮ
ಗಳಿರುವ ಸಮಾಜದಲ್ಲಿ ಸಾಹಿತ್ಯವು ಪ್ರತಿಪಕ್ಷವಾಗಿ ಕೆಲಸ ಮಾಡುತ್ತದೆ ಎಂಬ ಆಶಯಕ್ಕೆ ಈ ಕಥೆ ಸಾಕ್ಷಿಯಾಗಿ ನಿಲ್ಲುತ್ತದೆ.

ರಾಜ್ಯದ ಅಕಾಡೆಮಿಗಳು, ಪ್ರಾಧಿಕಾರಗಳನ್ನು ಸರ್ಕಾರ ತಕ್ಷಣ ವಿಸರ್ಜಿಸಬೇಕು. ಕೋವಿಡ್-19 ಸಂಕಷ್ಟದ ಕಾಲದಲ್ಲಿ ಇವು ಬೊಕ್ಕಸಕ್ಕೆ ಭಾರವಾಗಿವೆ ಎಂದು ಕೆಲವರು ಕೂಗೆಬ್ಬಿಸಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ದುಡ್ಡು ಒಂದೇ ಬದುಕನ್ನು ಮುನ್ನಡೆಸುತ್ತದೆ ಎಂದು ಇವರು ನಂಬಿದಂತೆ ಕಾಣುತ್ತದೆ.

ಕಲೆ, ಸಾಹಿತ್ಯ, ಸಂಗೀತ, ನೃತ್ಯಕ್ಕೆ ಮನುಷ್ಯರನ್ನು ಪೊರೆಯುವ ಅಪರೂಪದ ಶಕ್ತಿಯಿದೆ. ಇಂಥ ಅನುಭೂತಿಯಿಂದಲೇ ಉಳಿದ ಪ್ರಾಣಿಗಳಿಗಿಂತ ಮನುಷ್ಯ ಭಿನ್ನವಾಗಿ ಬೆಳೆದಿದ್ದಾನೆ, ಬೆಳೆಯುತ್ತಿದ್ದಾನೆ.

ಡಾ. ಪುಟ್ಟರಾಜ ಗವಾಯಿಗಳನ್ನು ‘ಸಾವಿರಾರು ಅಂಧ ಮಕ್ಕಳಿಗೆ ಸಂಗೀತ ಕಲಿಸಿ ಉದ್ಧಾರ ಮಾಡಿದ್ದೀರಿ’ ಎಂದು ಕಾರ್ಯಕ್ರಮವೊಂದರಲ್ಲಿ ಡಾ. ರಾಜ್‌ಕುಮಾರ್‌ ಶ್ಲಾಘಿಸಿದರು. ಆಗ ಗವಾಯಿಗಳು ‘ನಾನು ಸಂಗೀತ ಕಲಿಸುವುದು ಇನ್ನೊಬ್ಬರ ಉದ್ಧಾರಕ್ಕೆ ಅಲ್ಲ; ನನ್ನ ಉದ್ಧಾರಕ್ಕೆ. ಮಕ್ಕಳಿಗೆ ಪಾಠ ಹೇಳುವುದು ನನ್ನ ಆತ್ಮೋನ್ನತಿಗೆ’ ಎಂದರು. ಡಾ. ರಾಜ್ ಭಾವುಕರಾಗಿ ತುಂಬಿದ ಸಭೆಯಲ್ಲಿ ಗವಾಯಿಗಳ ಚರಣ ಮುಟ್ಟಿ ನಮಸ್ಕರಿಸಿದರು.

ರೂಸೊ ವೈಚಾರಿಕ ಸಾಹಿತ್ಯವು ಟಾಲ್‍ಸ್ಟಾಯ್‍ ಅವರನ್ನು ರೂಪಿಸಿತು. ಟಾಲ್‍ಸ್ಟಾಯ್ ಬರಹಗಳು ಗಾಂಧೀಜಿ ಅವರನ್ನು ಪ್ರೇರೇಪಿಸಿದವು. ಟಾಲ್‍ಸ್ಟಾಯ್ ‘ಎ ಲ್ಯಾಂಡ್‌ಲಾರ್ಡ್ಸ್‌ ಮಾರ್ನಿಂಗ್‌’ ಎಂಬ ಮಹತ್ವದ ಕೃತಿ ರಚಿಸಿದ್ದಾರೆ. ಒಬ್ಬ ರಷ್ಯನ್ ಜಮೀನ್ದಾರ ಹಾಗೂ ಸಾವಿರಾರು ಕೃಷಿ ಕೂಲಿಕಾರರ ನಡುವಿನ ಸಂಘರ್ಷದ ಚಿತ್ರಣ ಇದರಲ್ಲಿದೆ. ಈ ಕೃತಿ ಜಗತ್ತಿನ ತುಂಬ ‘ಉಳುವವನಿಗೆ ಹೊಲ; ಬೆಳೆಯುವವನಿಗೆ ಬೆಳೆ’ ಎಂಬ ರೈತಕ್ರಾಂತಿಗೆ ಕಾರಣವಾಯಿತು. ಕರ್ನಾಟಕದಲ್ಲಿ ‘ಉಳುವವನೇ ಹೊಲದೊಡೆಯ’ ಎಂಬ ಕಾನೂನು ರೂಪುಗೊಳ್ಳುವುದಕ್ಕೆ ಪ್ರೇರಣೆಯಾಯಿತು.

ಎಲ್ಲಕ್ಕಿಂತಲೂ ಮುಖ್ಯವಾಗಿ ಜೀವನಕ್ಕೆ ಹತ್ತಿರವಾಗುವ ಜೀವಪರ ಸಂಗತಿಯೆಂದರೆ, ಕಲೆ, ಸಂಸ್ಕೃತಿಯು ಸಂಕಟದಲ್ಲಿರುವ ಸಮುದಾಯಕ್ಕೆ ಪ್ರತಿರೋಧಿಸುವ ಚೈತನ್ಯವನ್ನು ತುಂಬಿ, ಪರ್ಯಾಯ ಮಾರ್ಗಗಳ ಹುಡುಕಾಟಕ್ಕೆ ಪ್ರೇರೇಪಿಸುತ್ತವೆ. ಕೋವಿಡ್ ಸಂಕಷ್ಟದ ಈ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಫೂರ್ತಿ ತುಂಬುವ ಮಾತು, ಹಾಡು, ನೃತ್ಯ, ಕಥೆ, ಚಿತ್ರ, ಜೋಕು, ಸಲಹೆ ಹೀಗೆ ಅನೇಕ ಸಂಗತಿಗಳು ಹರಿದಾಡುತ್ತಿವೆ. ಕೆಲವರು ತಮ್ಮ ನೋವುಗಳನ್ನು ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದಾರೆ.

ಮಾನವಜೀವಿಗಳನ್ನು ಮನುಷ್ಯರನ್ನಾಗಿ ರೂಪಿಸುವುದು ಕಲೆ. ‘ಗದಾಯುದ್ಧ’ ಕಾವ್ಯದಲ್ಲಿ ಮಹಾಕವಿ ರನ್ನ, ದೊರೆಗೆ ನೆಲದ ಮೇಲೆ ಬರಿಗಾಲಿನಲ್ಲಿ ನಿಲ್ಲುವ ಗಮ್ಯವನ್ನು ಹೇಳಿಕೊಡುತ್ತಾನೆ. ಇಂತಹ ಮೌಲ್ಯಗಳ ಪ್ರತಿಪಾದನೆಯಿಂದಾಗಿಯೇ ರನ್ನ ಕವಿಯ ಕಾವ್ಯ ಸಾವಿರ ವರ್ಷಗಳ ನಂತರವೂ ಪ್ರಸ್ತುತವಾಗಿ ಉಳಿದಿದೆ.

70ರ ದಶಕದಲ್ಲಿ ಬಂದ ‘ಸಂಪತ್ತಿಗೆ ಸವಾಲ್’ ಕನ್ನಡ ನಾಟಕ ದೊಡ್ಡ ಸಂಚಲನವನ್ನು ಮೂಡಿಸಿತು. ಶ್ರೀಮಂತರ ಅಹಂಕಾರ, ದಬ್ಬಾಳಿಕೆಗಳನ್ನು ಬಡತನದಲ್ಲಿ ಬೆಂದ ಯುವಕನೊಬ್ಬ ಧೈರ್ಯವಾಗಿ ಪ್ರತಿಭಟಿಸುತ್ತಾನೆ. ಇದು ಎಲ್ಲ ಬಡ ನೊಂದ ಯುವಕರ ಧ್ವನಿಯಾಗುವುದು ಈ ನಾಟಕದ ಹಿರಿಮೆಯಾಗಿದೆ. ಇದು ಚಲನಚಿತ್ರವಾಗಿಯೂ ಗಮನಸೆಳೆಯಿತು. ಹೆಚ್ಚು ಓದದ, ತುಂಬ ಬಡತನದಿಂದ ಬಂದ ಪಿ.ಬಿ.ಧುತ್ತರಗಿ ಈ ನಾಟಕ ರಚಿಸಿದ್ದಾರೆ.

ರಾಮನಿಗಿಂತ ‘ರಾಮಾಯಣ’ ದೊಡ್ಡದು ಎನ್ನುವ ಮಾತೊಂದಿದೆ. ಕಾವ್ಯಕ್ಕೆ ಕಾವ್ಯದ ನಾಯಕನಿಗಿಂತ ಹೆಚ್ಚಿನ ಮೌಲ್ಯವನ್ನು ಈ ಮಾತು ದೃಢಪಡಿಸುತ್ತದೆ. ‘ಅರೇಬಿಯನ್ ನೈಟ್ಸ್’ ಸಾವಿರ ಕಥೆಗಳು ಸಾವನ್ನು ಗೆಲ್ಲುವ ಸಂಕೇತವಾಗಿ ನಿಲ್ಲುತ್ತವೆ. ಎಸ್ಕಿಮೋ ಜನರು ಯಾವುದೋ ಗಳಿಗೆಯಲ್ಲಿ ತಮ್ಮ ಮೇಲೆ ಹಿಮದ ರಾಶಿ ಬಿದ್ದು ಸತ್ತು ಹೋಗುವ ಆತಂಕದಲ್ಲಿ ಇದ್ದಾಗ, ಒಬ್ಬರಿಗೊಬ್ಬರು ಕಥೆ ಹೇಳಿಕೊಂಡು ನೆಮ್ಮದಿ ಹುಡುಕುವುದು ಅನನ್ಯವಾದದ್ದು.

ಬಾಲ್ಯದಲ್ಲಿ ತಾಯಿ, ಅಜ್ಜಿ ಹೇಳಿದ ಕಥೆಗಳು ನಮ್ಮ ಜೀವನದುದ್ದಕ್ಕೂ ಚೈತನ್ಯರೂಪಿಯಾಗಿ ಉಳಿದಿರುತ್ತವೆ. ಕವಿ ಈಶ್ವರ ಸಣಕಲ್ಲ ಅವರು ಸುಮಾರು 8 ದಶಕಗಳ ಹಿಂದೆ ಬರೆದ ‘ಕೋರಿಕೆ’ ಕವಿತೆ ಜಗತ್ತಿನ ಬಹಳಷ್ಟು ಭಾಷೆಗಳಿಗೆ ಅನುವಾದಗೊಂಡಿದೆ. ಜಗವೆಲ್ಲ ನಗುತಿರಲಿ! ಜಗದಳುವು ನನಗಿರಲಿ! ನಾನಳಲು ಜಗವೆನ್ನನೆತ್ತಿಕೊಳದೇ? ನಾ ನಕ್ಕು, ಜಗವಳಲು ನೋಡಬಹುದೇ?– ಸಣಕಲ್ಲ ಅವರ ಕವಿತೆಯ ಈ ಸಾಲುಗಳು ಕೋವಿಡ್ ಕಾಲಮಾನದ ಎಲ್ಲರ ಕೋರಿಕೆಯಾಗಿವೆ.

ಕಲೆ, ಸಂಗೀತ, ಸಾಹಿತ್ಯ ಸದಾ ಮನುಕುಲವ ಪೊರೆವ ತೊಟ್ಟಿಲು. ಕಲೆ ಇಲ್ಲದ ಜಗತ್ತನ್ನು ಊಹಿಸುವುದು ಸಾಧ್ಯವಿಲ್ಲ. ಕಲೆಯನ್ನು ಪ್ರೀತಿಸುವವರು ಮನುಷ್ಯರನ್ನು ಪ್ರೀತಿಸುತ್ತಾರೆ ಎಂದು ಖಲೀಲ್ ಗಿಬ್ರಾನ್ ಹೇಳಿದ ಮಾತು ಮತ್ತೆ ಮತ್ತೆ ನೆನಪಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು