ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ರಜೆಯ ಮಜಾ ಹಿತವಾಗಿರಲಿ

ರಜೆಯ ಕುರಿತು ಪೋಷಕರು ಮತ್ತು ಮಕ್ಕಳ ದೃಷ್ಟಿಕೋನ ಬದಲಾಗಬೇಕು
Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಶಾಲಾ ಮಕ್ಕಳಿಗೆ ಈಗ ಪರೀಕ್ಷೆ ಮುಗಿದು ರಜೆ. ರಜಾ ಎಂದರೆ ಮಜಾ ಎಂದು ಖುಷಿಪಡುತ್ತಿರುವಾಗಲೇ ಪಾರ್ಕಿನಲ್ಲಿ ಪೋಷಕರ ಮಾತು ಕಿವಿಗೆ ಬಿತ್ತು. ‘ನಮಗಿದ್ದ ಹಾಗೆ ಈಗಿನ ಬಹುತೇಕ ಮಕ್ಕಳಿಗೆ ಅಜ್ಜ-ಅಜ್ಜಿ ಮನೆ ಎಲ್ಲಾ ಇಲ್ಲ. ಸಮ್ಮರ್ ಕ್ಯಾಂಪ್‌ಗೆ ಸೇರಿಸೋಣ ಅಂದರೆ ತುಂಬಾ ಖರ್ಚು. ಹೊರಗೆ ಆಟವಾಡಲು ಸಿಕ್ಕಾಪಟ್ಟೆ ಬಿಸಿಲು ಮತ್ತೆ ಹೆದರಿಕೆ ಬೇರೆ. ಹೇಗಿದ್ರೂ ರಜ ಅಲ್ವಾ? ಟಿ.ವಿ., ಮೊಬೈಲು ಕೊಟ್ಟುಬಿಟ್ರೆ ಆಟ, ಊಟ ಯಾವುದೂ ಕೇಳದೆ ಸುಮ್ನೆ ಇರ್ತಾರೆ, ಸೇಫ್ ಕೂಡ. ನಮ್ಮಷ್ಟಕ್ಕೆ ನಾವು ಇರಬಹುದು’. ಬದಲಾದ ಆಧುನಿಕ ಬದುಕಿನಲ್ಲಿ ಸಮಯವೇ ಇಲ್ಲದ ಪೋಷಕರಿಗೆ ಇದು ಸುಲಭದ ಉಪಾಯ ಎನಿಸಿದರೂ ಶಾಲಾಮಕ್ಕಳು ಕನ್ನಡಕಧಾರಿಗಳಾಗುತ್ತಿರುವುದಕ್ಕೆ ಇದು ಪ್ರಮುಖ ಕಾರಣ!

ಆರೋಗ್ಯ ಇಲಾಖೆಯ 2022- 23ನೇ ಸಾಲಿನ ಅಧ್ಯಯನದಲ್ಲಿ, ರಾಜ್ಯದಲ್ಲಿ ಒಂದರಿಂದ 10ನೇ ತರಗತಿ
ಯವರೆಗಿನ 1.73 ಲಕ್ಷ ವಿದ್ಯಾರ್ಥಿಗಳಲ್ಲಿ ದೃಷ್ಟಿದೋಷ ಇರುವುದು ಪತ್ತೆಯಾಗಿದೆ. ಶೇಕಡ 50ರಷ್ಟು ಮಕ್ಕಳಲ್ಲಿ ಅತಿಯಾದ ಟಿ.ವಿ. ವೀಕ್ಷಣೆ ಮತ್ತು ಮೊಬೈಲ್ ಬಳಕೆಯು ಈ ದೃಷ್ಟಿದೋಷಕ್ಕೆ ಕಾರಣವಾಗಿದ್ದು, ಜನ್ಮಜಾತ ತೊಂದರೆ, ಅಪೌಷ್ಟಿಕತೆ, ನಿದ್ದೆ, ವ್ಯಾಯಾಮದ ಕೊರತೆ ಇನ್ನಿತರ ಕಾರಣಗಳಾಗಿವೆ ಎನ್ನಲಾಗಿದೆ.

ಜ್ಞಾನೇಂದ್ರಿಯವಾದ ಕಣ್ಣುಗಳು ಮಕ್ಕಳ ಕಲಿಕೆಯಲ್ಲಿ ಪ್ರಮುಖವಾದ ಪಾತ್ರ ವಹಿಸುವುದರಿಂದ ಕಾಲಕಾಲಕ್ಕೆ ತಕ್ಕಂತೆ ಅವುಗಳ ತಪಾಸಣೆ ನಡೆಸಬೇಕು. ದೃಷ್ಟಿದೋಷ ಇದ್ದಲ್ಲಿ ಮಕ್ಕಳು ಕನ್ನಡಕ ಧರಿಸಬೇಕು. ಸಣ್ಣ ವಯಸ್ಸಿನಲ್ಲಿಯೇ ಕನ್ನಡಕ ಬೇಡ ಅಥವಾ ನೋಡಲು ಚೆನ್ನಾಗಿ ಕಾಣುವುದಿಲ್ಲ ಎಂದು ಧರಿಸದೇ ಇದ್ದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಬಹುದು, ಜತೆಗೇ ದೃಷ್ಟಿದೋಷ ಬಾರದಂತೆ ಎಲ್ಲ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಮೊಬೈಲ್ ಮತ್ತು ಟಿ.ವಿ. ಬಳಕೆ ಅತಿಯಾಗಲು ಕೋವಿಡ್ ಕೊಡುಗೆಯೂ ಬಹಳಷ್ಟಿದೆ. ಕೋವಿಡ್ ಉಲ್ಬಣಿಸಿದ ಸಮಯದಲ್ಲಿ ಆರೋಗ್ಯದ ದೃಷ್ಟಿಯಿಂದ ಶಾಲೆ ನಡೆಯದ ಕಾರಣ, ಕಲಿಕೆಯ ಹೊಸ ಮಾರ್ಗವಾಗಿ ಆನ್‌ಲೈನ್ ತರಗತಿಗಳು ಆರಂಭವಾದವು. ಮನರಂಜನೆ, ಮಾಹಿತಿ ಮತ್ತು ಸಂಪರ್ಕ ಎಲ್ಲವೂ ಸಾಧ್ಯವಾಗಿದ್ದು ಈ ಸಾಧನಗಳ ಮೂಲಕವೇ. ಹೀಗೆ ಅನಿವಾರ್ಯವಾಗಿ ಆರಂಭವಾದದ್ದು ಈಗ ಅವಲಂಬನೆಯಾಗಿ ಬದಲಾಗಿದೆ.

ಶಾಲಾ ಮಕ್ಕಳಿಗೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ನಿದ್ದೆ ಬೇಕು. ಆದರೆ ಸ್ಕ್ರೀನ್ ಟೈಮ್ ಹೆಚ್ಚಿದ ಕಾರಣದಿಂದ ಇದು ಸಾಧ್ಯವಾಗುತ್ತಿಲ್ಲ. ರಾತ್ರಿ ಊಟ ಮುಗಿಸಿ ಟಿ.ವಿ., ಮೊಬೈಲ್ ವೀಕ್ಷಣೆ ಮಕ್ಕಳ ರೂಢಿ. ಈ ಸಾಧನಗಳಲ್ಲಿ ಬದಲಾಗುವ ಬೆಳಕು, ಚಿತ್ರ, ಪ್ರಖರ ಬಣ್ಣ, ಹೊರಡುವ ಶಬ್ದ ಮತ್ತು ಕಂಪನ ಮೆದುಳನ್ನು ಉತ್ತೇಜಿಸುತ್ತವೆ. ಹೀಗಾಗಿ, ನಿದ್ದೆಗೆ ಸಹಕಾರಿಯಾಗುವ ಮೆಲಟೊನಿನ್ ಪ್ರಮಾಣ ಕಡಿಮೆಯಾಗುತ್ತದೆ. ಮಲಗಿದರೂ ನಿದ್ದೆ ಬರಲು ಬಹಳಷ್ಟು ತಡವಾಗುತ್ತದೆ. ಈ ಸಾಧನಗಳಿಂದ ಹೊರಬರುವ ನೀಲಿ ಬಣ್ಣದ ಬೆಳಕು ಕಣ್ಣಿಗೆ ಒಳ್ಳೆಯದಲ್ಲ. ಹಾಗೆಯೇ ಕತ್ತಲಿರುವ ಕೋಣೆಯಲ್ಲಿ ಮಲಗಿ, ಬಗ್ಗಿ ನೋಡುವ ಅಭ್ಯಾಸಗಳು ಕೂಡ ದೃಷ್ಟಿಗೆ ಸಂಬಂಧಿಸಿದ ಕಣ್ಣು ಕೆಂಪಾಗುವಿಕೆ, ನೋವು, ಉರಿ, ತುರಿಕೆ, ಶುಷ್ಕ ಕಣ್ಣಿನಂತಹ ಸಮಸ್ಯೆಗಳ ಜತೆ ದೃಷ್ಟಿದೋಷಕ್ಕೂ ಕಾರಣವಾಗಬಹುದು.

ನಾವು ತಿನ್ನುವ ಆಹಾರವು ಸಾಮಾನ್ಯ ಆರೋಗ್ಯ ಮತ್ತು ಕಣ್ಣಿನ ಆರೋಗ್ಯದ ಮೇಲೆ ನೇರವಾದ ಸಂಬಂಧವನ್ನು ಹೊಂದಿದೆ. ವಿಟಮಿನ್ ಎ ಹೆಚ್ಚಿರುವ ತರಕಾರಿ, ಹಣ್ಣುಗಳನ್ನು ಮಕ್ಕಳು ಸೇವಿಸಬೇಕು. ಸುಲಭವಾಗಿ ಸಿಗುವ, ಬಾಯಿಗೂ ರುಚಿ ಎನಿಸುವ ಸಂಸ್ಕರಿಸಿದ ಆಹಾರವನ್ನು ಮಕ್ಕಳು ಹೆಚ್ಚಾಗಿ
ಇಷ್ಟಪಡುತ್ತಾರೆ, ಪೋಷಕರೂ ನೀಡುತ್ತಾರೆ. ಹೀಗೆ ಮಕ್ಕಳ ಆಹಾರವೂ ಆರೋಗ್ಯಕ್ಕೆ ಪೂರಕವಾಗಿಲ್ಲ. ಈ ಎಲ್ಲಾ ಅಂಶಗಳಿಂದಾಗಿ ದೃಷ್ಟಿದೋಷದ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಟಿ.ವಿ., ಮೊಬೈಲ್, ಕಂಪ್ಯೂಟರ್‌ ಅನ್ನು ಸಂಪೂರ್ಣ ದೂರ ಇಡುವುದು ಅಸಾಧ್ಯ. ಬದಲಿಗೆ ವೀಕ್ಷಣೆಯ ಸಮಯ, ಬಳಸುವಾಗ ಸರಿಯಾದ ಭಂಗಿ, ಇರಬೇಕಾದ ಅಂತರ ಇವೆಲ್ಲದರ ಬಗ್ಗೆ ಎಚ್ಚರ ವಹಿಸಬೇಕು. ಎರಡು ವರ್ಷದ ಒಳಗಿನ ಮಕ್ಕಳಿಗೆ ಟಿ.ವಿ., ಮೊಬೈಲ್ ಬೇಡವೇ ಬೇಡ. ಶಾಲೆಗೆ ಹೋಗುವ ಮಕ್ಕಳಿಗೆ ಎಲ್ಲಾ ಸಾಧನ ಸೇರಿ ಒಂದರಿಂದ ಎರಡು ತಾಸು ವೀಕ್ಷಣಾ ಸಮಯ ನೀಡಬಹುದು. ಮಕ್ಕಳು ಮಲಗುವ ಕೊಠಡಿ ಮತ್ತು ಊಟದ ಕೋಣೆಯಲ್ಲಿ ಇವುಗಳ ಬಳಕೆ ಕೂಡದು.

ರಜೆ ಎಂದರೆ ಪಠ್ಯದ ಓದು, ಬರಹ, ಪರೀಕ್ಷೆಯ ಒತ್ತಡ ಈ ರೀತಿ ಶಾಲೆಯಲ್ಲಿ ವರ್ಷವಿಡೀ ನಡೆದಂತಹ ಚಟುವಟಿಕೆಗಳಿಂದ ದೇಹ, ಮನಸ್ಸಿಗೆ ಒಂದಷ್ಟು ವಿಶ್ರಾಂತಿ ನೀಡುವ ಸಮಯ. ಆ ಮೂಲಕ ಮನಸ್ಸಿಗೆ ಖುಷಿ ಕೊಡುವ ಹವ್ಯಾಸಗಳು, ಆಟದ ಚಟುವಟಿಕೆಗಳ ಮೂಲಕ ಹೊಸ ಚೈತನ್ಯವನ್ನು ಪಡೆಯಬಹುದು. ಮನಸ್ಸನ್ನು ಒತ್ತಡದಿಂದ ದೂರ ಮಾಡಿ ಸೃಜನಶೀಲತೆ
ಯನ್ನು ಹೆಚ್ಚಿಸುವುದರ ಜತೆಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಸಕಾಲ. ಬೆಳಿಗ್ಗೆ ಮತ್ತು ಸಂಜೆ, ಬಿಸಿಲು ಕಡಿಮೆ ಇರುವಾಗ ಹೊರಗೆ ಉದ್ಯಾನ, ಮೈದಾನದಲ್ಲಿ ಆಟ ಆಡಬಹುದು. ಈಜು, ನೀರಾಟವು ಬೇಸಿಗೆಗೆ ಖುಷಿ ಮತ್ತು ವ್ಯಾಯಾಮ ನೀಡುವ ಅತ್ಯುತ್ತಮ ಮಾರ್ಗ. ಇದಲ್ಲದೆ ನೆರಳಿನಲ್ಲಿ ಒಳಾಂಗಣ ಆಟಗಳು, ಆಸಕ್ತಿಗೆ ಪೂರಕವಾಗಿ ಕಥೆ ಹೇಳುವುದು– ಕೇಳುವುದು, ಹಾಡು, ನೃತ್ಯ, ನಾಟಕ, ಚಿತ್ರಕಲೆ ಇವೆಲ್ಲವೂ ಮಕ್ಕಳ ಸಮಯವನ್ನು ಸಾರ್ಥಕವಾಗಿ ಕಳೆಯಲು ಸಹಾಯಕ.

ಹೊಸ ಅನುಭವಗಳಿಗೆ ತೆರೆದುಕೊಳ್ಳುವ ಚಿಕ್ಕಪುಟ್ಟ ಪ್ರವಾಸಗಳು ಮನಸ್ಸಿಗೆ ಸಂತಸವನ್ನು ನೀಡುತ್ತವೆ. ಹಾಗೆಯೇ ಮಕ್ಕಳಿಗೆ ಸ್ವಚ್ಛತೆ, ಅಡುಗೆಯಂತಹ ಸ್ವಾವಲಂಬನೆಯ ಪಾಠಗಳನ್ನು ಕಲಿಸಲೂ ಸುಸಮಯ. ಒಟ್ಟಿನಲ್ಲಿ ರಜೆಯ ಕುರಿತು ಪೋಷಕರು ಮತ್ತು ಮಕ್ಕಳ ದೃಷ್ಟಿಕೋನ ಬದಲಾಗಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT