ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮಕ್ಕಳನ್ನು ದಂಡಿಸುವ ಮುನ್ನ...

ಮಕ್ಕಳನ್ನು ದೈಹಿಕವಾಗಿ ದಂಡಿಸುವುದರಿಂದ ನಮ್ಮೊಳಗಿನ ಸಿಟ್ಟು ತಣಿಯಬಹುದು, ಆದರೆ ಅವರಲ್ಲಿ ಅಗತ್ಯ ಬದಲಾವಣೆ ತರಲು ಅದು ನೆರವಾಗದು
Last Updated 26 ಸೆಪ್ಟೆಂಬರ್ 2022, 20:07 IST
ಅಕ್ಷರ ಗಾತ್ರ

ಪ್ರಾಂಶುಪಾಲರು ತನ್ನ ಕೆನ್ನೆಗೆ ಹೊಡೆದರು ಎಂಬ ಕಾರಣಕ್ಕಾಗಿ ಉತ್ತರಪ್ರದೇಶದ ಶಾಲೆಯೊಂದರ 12ನೇ ತರಗತಿಯ ವಿದ್ಯಾರ್ಥಿಯು ಪ್ರಾಂಶುಪಾಲರ ಮೇಲೆ ಗುಂಡು ಹಾರಿಸಿದ ಕುರಿತಾದ ಸುದ್ದಿಯು (ಪ್ರ.ವಾ.,ಸೆ. 25) ಪೋಷಕರು ಹಾಗೂ ಶಿಕ್ಷಣ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ದೈಹಿಕವಾಗಿ ದಂಡಿಸುವ ಮೂಲಕ ವಿದ್ಯಾರ್ಥಿಗಳನ್ನು ಶಿಸ್ತಿಗೊಳಪಡಿಸುವುದು ತಪ್ಪೇ ಎಂಬ ಚರ್ಚೆಯು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಪ್ರಾಂಶುಪಾಲರ ಮೇಲೆ ಗುಂಡು ಹಾರಿಸಿದ ವಿದ್ಯಾರ್ಥಿಯು ಈ ಹಿಂದೆಯೂ ಅನೇಕ ತೀವ್ರ ಅಶಿಸ್ತಿನ ವರ್ತನೆಗಳನ್ನು ತೋರಿದ್ದ ಎನ್ನಲಾಗಿದೆ. ತೀವ್ರ ಅಶಿಸ್ತನ್ನು ತೋರುವ ಇಂತಹ ವಿದ್ಯಾರ್ಥಿಗಳನ್ನು ಶಿಸ್ತಿಗೆ ಒಳಪಡಿಸಲು ದಂಡಿಸುವ ವಿಧಾನವು ಉಪಯೋಗಕ್ಕೆ ಬಾರದು. ಉತ್ತರಪ್ರದೇಶದ ಘಟನೆಯಂತೆ ಕೆಲವು ಸಲ ದಂಡಿಸುವವರಿಗೇ ತೀವ್ರ ಅಪಾಯ ತಂದೊಡ್ಡುತ್ತದೆ.

ಮಕ್ಕಳನ್ನು ದಂಡಿಸದಿದ್ದಲ್ಲಿ ಅವರ ಪುಂಡಾಟಕ್ಕೆ ಕೊನೆ ಹೇಗೆ ಎಂದು ಅನೇಕರು ಅದನ್ನು ಸಮರ್ಥಿಸು ತ್ತಾರೆ. ಆದರೆ ಸರಿದಾರಿಗೆ ತರಲು ವಿದ್ಯಾರ್ಥಿಯ ಕೆನ್ನೆಗೆ ಒಂದು ಏಟು ಕೊಟ್ಟ ಪ್ರಾಂಶುಪಾಲರು ಸಾವು– ಬದುಕಿನ ನಡುವೆ ಆಸ್ಪತ್ರೆಯಲ್ಲಿದ್ದರೆ, ಗುರುವಿಗೇ ಗುಂಡು ಹೊಡೆದ ಪುಂಡ ಹುಡುಗ ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದಾನೆ. ಪೊಲೀಸರು ಪತ್ತೆಹಚ್ಚಿದ ನಂತರ ಬಾಲಕ ಪುನರ್ವಸತಿ ಕೇಂದ್ರದ ಪಾಲಾಗುವುದು ಖಚಿತ. ಇಲ್ಲಿ ದಂಡಿಸಿದ್ದರಿಂದಾದ ಪ್ರಯೋಜನವೇನು ಎಂಬ ಪ್ರಶ್ನೆ ಮೂಡದೇ ಇರದು.

ಮಕ್ಕಳನ್ನು ದಂಡಿಸುವ ಮೂಲಕ ನಮ್ಮೊಳಗಿನ ಸಿಟ್ಟು, ಆಕ್ರೋಶಗಳು ತಣಿಯಬಹುದು. ತಾತ್ಕಾಲಿಕ ಸಮಾಧಾನ ಸಿಗಬಹುದು. ಆದರೆ ದಂಡನೆಯು ಮಕ್ಕಳಲ್ಲಿ ಅಗತ್ಯ ಬದಲಾವಣೆ ತರುವಲ್ಲಿ ಸಹಾಯಕ ವಾಗದು. ತನ್ನ ಓರಗೆಯ ಸ್ನೇಹಿತರು, ಸಹಪಾಠಿಗಳ ಎದುರು ಹೊಡೆಯುವುದು, ಮೂದಲಿಸುವುದು, ಹೀಯಾಳಿಸುವುದನ್ನು ಮಾಡಿದಲ್ಲಿ ಮಕ್ಕಳು ಸಹಜವಾಗಿ ಅವಮಾನಕ್ಕೆ ಒಳಗಾಗುತ್ತಾರೆ. ಕೌಟುಂಬಿಕ ಪ್ರೀತಿ, ಮನ್ನಣೆ, ಭರವಸೆಗಳು ದೊರೆಯದ ಹಿನ್ನೆಲೆಗಳಿಂದ ಬಂದ ಕೆಲವು ಮಕ್ಕಳು ತಮಗಾದ ಅವಮಾನಗಳಿಂದ ‘ಗಾಯಗೊಂಡ ಹುಲಿ’ಗಳಂತಾಗಿ, ಅವಮಾನ ಮಾಡಿದವರು ಶಿಕ್ಷಕರು ಅಥವಾ ಪೋಷಕರು ಎಂಬುದನ್ನೂ ನೋಡದೆ ಅಪಾಯಕಾರಿ ಕೃತ್ಯಗಳಿಗೆ ಕೈಹಾಕುತ್ತಾರೆ.

ತಾವು ಚಿಕ್ಕ ವಯಸ್ಸಿನಲ್ಲಿ ದಂಡನೆಗೊಳಗಾದ ಕಾರಣದಿಂದಲೇ ಶಿಸ್ತಿನಿಂದ ಬೆಳೆದಿದ್ದೇವೆ ಎಂದು ಹೇಳುತ್ತಾ ಬೆತ್ತ ಬಳಸುವುದನ್ನು ಅನೇಕರು ಸಮರ್ಥಿಸಿ ಕೊಳ್ಳುತ್ತಾರೆ. ದಂಡಿಸದೇ ಮಕ್ಕಳನ್ನು ಸರಿದಾರಿಗೆ ತರುವ ಮನೋವೈಜ್ಞಾನಿಕ ವಿಧಾನಗಳ ಅರಿವು ಹೆಚ್ಚಿನವರಲ್ಲಿ ಇಲ್ಲದ ಕಾಲದಲ್ಲಿ ಮಕ್ಕಳನ್ನು ದೈಹಿಕವಾಗಿ ದಂಡಿಸುವುದು ಸಾಮಾನ್ಯ ಹಾಗೂ ಒಪ್ಪಿತ ವಿಧಾನ ವಾಗಿತ್ತು.

ಬದಲಾದ ಆಧುನಿಕ ಯುಗದಲ್ಲಿ ಮಕ್ಕಳು ತೀವ್ರ ರೀತಿಯ ಒತ್ತಡ, ಆತಂಕ, ಸಂಘರ್ಷಗಳನ್ನು ಎದುರಿ ಸುತ್ತಿದ್ದಾರೆ. ಅನಾಕರ್ಷಕ ಶಿಕ್ಷಣ, ಕುಟುಂಬದಲ್ಲಿ ಪೋಷಕರ ನಡುವಿನ ಕಲಹ, ಭಿನ್ನಾಭಿಪ್ರಾಯಗಳು, ಮಕ್ಕಳು ಕೇಳಿದ್ದನ್ನೆಲ್ಲಾ ಕ್ಷಣಮಾತ್ರದಲ್ಲಿ ಪೂರೈಸುವ ಪೋಷಕರ ಅತಿ ಎನಿಸುವಂತಹ ಕುರುಡುಪ್ರೀತಿ, ಮಾಧ್ಯಮಗಳ ಪ್ರಭಾವದಂತಹ ಅಂಶಗಳೂ ಮಕ್ಕಳ ಅಶಿಸ್ತಿಗೆ ಕಾರಣವಾಗುತ್ತವೆ.

ತಮ್ಮಲ್ಲಿ ಇರಬಹುದಾದ ಮಾನಸಿಕ ದೌರ್ಬಲ್ಯ, ಕೌಟುಂಬಿಕ ಒತ್ತಡಗಳನ್ನು ನಿರ್ವಹಣೆ ಮಾಡಲು ಅರಿಯದ ಕೆಲ ಶಿಕ್ಷಕರು ಮಕ್ಕಳಿಗೆ ದಂಡನೆ ನೀಡುವ ಮೂಲಕ ಸಮಾಧಾನ ಕಂಡುಕೊಳ್ಳುತ್ತಾರೆ. ಸಮರ್ಪಕ ಹಾಗೂ ಪರಿಣಾಮಕಾರಿ ಬೋಧನೆಯ ಮೂಲಕ ಮಕ್ಕಳನ್ನು ತೊಡಗಿಸಿಕೊಳ್ಳಲು ಸಮರ್ಥರಲ್ಲದ ಶಿಕ್ಷಕರು ಸುಲಭವಾಗಿ ದಂಡನೆಯ ಮೊರೆ ಹೋಗುತ್ತಾರೆ. ಮಕ್ಕಳನ್ನು ಮನೋವೈಜ್ಞಾನಿಕ ಹಿನ್ನೆಲೆ ಯಿಂದ ಅರ್ಥ ಮಾಡಿಕೊಂಡು, ಅವರೊಂದಿಗೆ ಒಡನಾಡುವ ಪ್ರಾಯೋಗಿಕ ಜ್ಞಾನ, ಅನುಭವಗಳ ಅಭಾವ ಸಹ ದಂಡಿಸುವಂತೆ ಮಾಡುವ ಸಾಧ್ಯತೆ ಇದೆ. ಚಿಕ್ಕಂದಿನಲ್ಲಿ ತಾವು ಬೆತ್ತದ ಏಟು ತಿಂದೇ ಶಿಕ್ಷಣ ಪಡೆದು ಶಿಕ್ಷಕರಾದವರು ಸಹ ‘ದಂಡಿಸುವುದು ಪರಿಣಾಮಕಾರಿ’ ಎಂದು ಭಾವಿಸುತ್ತಾರೆ.

ಮಕ್ಕಳ ಮಾತನ್ನು ಹೇಗೆ ಗಮನವಿಟ್ಟು ಕೇಳಿಸಿ ಕೊಳ್ಳಬೇಕು ಹಾಗೂ ಅವರಿಗೆ ಇಷ್ಟವಾಗುವಂತೆ ಶಾಲೆಯನ್ನು ಹೇಗೆ ರೂಪಿಸಬೇಕು ಎಂಬುದನ್ನು ನೈಜ ಕಥನವಾದ ಜಪಾನಿನ ಪ್ರಸಿದ್ಧ ಪುಸ್ತಕ ‘ತೊತ್ತೊಚಾನ್’ ಸುಂದರವಾಗಿ ವಿವರಿಸುತ್ತದೆ. ಯಾವಾಗಲೂ ಕೀಟಲೆ, ತುಂಟತನ ಮಾಡುತ್ತಿದ್ದ ತೊತ್ತೊಚಾನ್‍ಳ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರು ಒಂದು ದಿನವೂ ಅವಳ ತಂದೆತಾಯಿಗೆ ದೂರು ಕಳಿಸುವುದಿಲ್ಲ. ಬದ ಲಾಗಿ ತೊತ್ತೊಚಾನ್ ಕುರಿತು ಅವರು ಅವಕಾಶ ಸಿಕ್ಕಾ ಗಲೆಲ್ಲಾ ‘ನೀನು ನಿಜವಾಗಿಯೂ ಒಳ್ಳೆಯ ಹುಡುಗಿ ಗೊತ್ತಾ?!’ ಎಂದು ಹೇಳುತ್ತಿದ್ದರು. ತಾನು ಒಳ್ಳೆಯ ಹುಡುಗಿ ಎಂಬ ಭಾವನೆಯನ್ನು ಮುಖ್ಯೋಪಾಧ್ಯಾಯರು ಅವಳಲ್ಲಿ ಆಳವಾಗಿ ಬೇರೂರುವಂತೆ ಮಾಡಿದ್ದರು. ಈ ಮಾತು ಅವಳ ಇಡೀ ಬದುಕು ರೂಪುಗೊಳ್ಳಲು ಸಹಾಯಕವಾಗುತ್ತದೆ. ತೊತ್ತೊ ಚಾನ್‍ಳ ಶಾಲೆಯ ವಾತಾವರಣ, ಬಳಕೆಯಲ್ಲಿದ್ದ ಶಿಕ್ಷಣ ಪದ್ಧತಿಗಳು ಅವಳು ಒಳ್ಳೆಯವಳಾಗಲು ಪೂರಕವಾಗುತ್ತವೆ.

ಪೋಷಕರು, ಶಿಕ್ಷಕರು ಮಕ್ಕಳಿಗೆ ನೀಡಬಹುದಾದ ಪ್ರೀತಿ, ಬೆಂಬಲ, ಆಕರ್ಷಣೀಯ ಬೋಧನಾ ಪದ್ಧತಿ, ಮಕ್ಕಳಸ್ನೇಹಿ ಕೌಟುಂಬಿಕ ಶಾಲಾ ವಾತಾವರಣ ಹಾಗೂ ಮಕ್ಕಳನ್ನು ಬೆವರಿಳಿಸುವಂತೆ ತೊಡಗಿಸಿಕೊಳ್ಳುವ ಆಟೋಟ, ಕ್ರೀಡೆಗಳು, ಮನಸ್ಸನ್ನು ಮುದಗೊಳಿಸುವ ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳಲ್ಲಿ ಶಿಸ್ತು ಮೂಡಿಸುವಲ್ಲಿ ನೆರವಾಗುವ ಕೆಲ ಅಂಶಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT