ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಬಣ್ಣಬಣ್ಣದ ಆಹಾರ: ಇರಲಿ ಎಚ್ಚರ

ಕಣ್ಣಿಗೆ ಹಿತಕರವಾಗಿ ಕಾಣುವ ಆಹಾರವೆಲ್ಲ ಆರೋಗ್ಯಕ್ಕೆ ಪೂರಕ ಎಂದೇನಿಲ್ಲ
ಡಾ. ಕೆ.ಎಸ್.ಚೈತ್ರಾ
Published : 22 ಮಾರ್ಚ್ 2024, 23:54 IST
Last Updated : 22 ಮಾರ್ಚ್ 2024, 23:54 IST
ಫಾಲೋ ಮಾಡಿ
Comments

ಪುಟ್ಟಪುಟ್ಟ ಹೆಜ್ಜೆ ಇಡುತ್ತಾ, ತೊದಲು ಮಾತಿನಲ್ಲಿ ಮಗು ‘ಗೋಪಿ ಮಂಜೂರಿ ಬೇಕು’ ಎಂದು ಗಲಾಟೆ ಮಾಡುತ್ತಿತ್ತು. ಅಮ್ಮ ‘ಆ ಗಾಡಿ ಇಲ್ಲ, ಪಾನಿಪುರಿ ತಿನ್ನೋಣ’ ಎಂದು ಸಮಾಧಾನ ಮಾಡಿದಳು. ಹಿಂದೆ ನಡೆಯುತ್ತಿದ್ದ ನಾನು ಕಣ್ಣಾಡಿಸಿದರೆ, ಸಂಜೆಯಾದೊ ಡನೆ ಝಗಮಗ ಬೆಳಕಲ್ಲಿ ದೊಡ್ಡ ಬಾಣಲೆಯಲ್ಲಿ ಬಿಡುವಿಲ್ಲದೇ ಕೆಂಪಾದ ಗೋಬಿ ಹುರಿಯುತ್ತಿದ್ದ ಅದೆಷ್ಟೋ ಗಾಡಿಗಳು ಕಾಣಿಸಲಿಲ್ಲ. ಇದಕ್ಕೆ ಕಾರಣ, ಕೆಲ ದಿನಗಳ ಹಿಂದಷ್ಟೇ ಕರ್ನಾಟಕದಲ್ಲಿ ರಾಸಾಯನಿಕ ಬಳಸಿ ಮಾಡುವ ಗೋಬಿ ಮಂಚೂರಿ ಮತ್ತು ಬಾಂಬೆಮಿಠಾಯಿಯ ಮಾರಾಟವನ್ನು ನಿಷೇಧಿಸಿರುವುದು.

ಆಹಾರ ಇಲಾಖೆ ಅಧಿಕಾರಿಗಳು ಅದಾಗಲೇ ಮಾರಾಟವಾಗುತ್ತಿದ್ದ ಮಾದರಿಗಳನ್ನು ಸಂಗ್ರಹಿಸಿ
ಪ್ರಯೋಗಾಲಯದಲ್ಲಿ ಪರಿಶೀಲಿಸಿದಾಗ, ರೋಡಮೈನ್ ಬಿ, ಸನ್‍ಸೆಟ್‍ ಯೆಲ್ಲೊ ಮತ್ತು ಟೆಟ್ರಾಜಿನ್ ಎಂಬ ರಾಸಾಯನಿಕಗಳು ಕಂಡುಬಂದಿದ್ದವು. ಪ್ಲಾಸ್ಟಿಕ್ ಉದ್ಯಮ, ಸಿಂಥೆಟಿಕ್ ಬಣ್ಣಗಳಲ್ಲಿ ಬಳಸುವ ಈ ರಾಸಾಯನಿಕಗಳು ಆಹಾರದ ಮೂಲಕ ದೇಹದೊಳಗೆ ಪ್ರವೇಶಿಸಿದಾಗ ಚರ್ಮದಲ್ಲಿ ತುರಿಕೆ, ಕಣ್ಣಿನ ಸಮಸ್ಯೆ, ಶ್ವಾಸಕೋಶದ ಸೋಂಕು ಮತ್ತು ವಿಶೇಷವಾಗಿ ಮಕ್ಕಳಲ್ಲಿ ದೀರ್ಘಕಾಲದ ಬಳಕೆಯಿಂದ ಕ್ಯಾನ್ಸರ್ ಕೂಡ ಬರುವ ಸಾಧ್ಯತೆ ಇದೆ.

ತಿನ್ನುವ ಆಹಾರ ಕಣ್ಣಿಗೆ ಆಕರ್ಷಕವಾಗಿರಬೇಕು, ನಂತರ ರುಚಿಯ ವಿಷಯ. ಹಾಗಾಗಿಯೇ ಆಹಾರ ಸೇವನೆಯಲ್ಲಿ ಬಣ್ಣಕ್ಕೆ ಮಹತ್ವವಿದೆ. ಇದನ್ನು ಮನಗಂಡು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣ ಮಟ್ಟ ಪ್ರಾಧಿಕಾರವು ಆಹಾರ ಪದಾರ್ಥಗಳಲ್ಲಿ ಕೆಲವು ಅಧಿಕೃತ ಬಣ್ಣಗಳನ್ನು ಬಳಸಲು ಅನುಮತಿ ನೀಡಿದೆ.

ರೋಡಮೈನ್ ಬಿ ಮತ್ತು ಉಳಿದವು ಹಾನಿಕಾರಕ ಎಂದು ವರದಿಯಾಗಿರುವುದರಿಂದ ಅವನ್ನು ಹೊರಗಿಡಲಾಗಿದೆ. ಆದರೆ ಗ್ರಾಹಕರ ಮನಸೆಳೆಯಲು, ಕಡಿಮೆ ಬೆಲೆಗೆ ಸಿಗುವ ಈ ರಾಸಾಯನಿಕಗಳನ್ನು ಮತ್ತು ಗರಿಗರಿಯಾಗಿ ಬರಲು ಕೆಲವು ಕಡೆ ಸೋಪಿನ ಪುಡಿಯನ್ನು ಕೂಡ ಬಳಸಲಾಗುತ್ತಿತ್ತು ಎಂಬ ಅಂಶಗಳು ಬೆಳಕಿಗೆ ಬಂದು ನಿಷೇಧಿಸಲಾಯಿತು. ಈ ನಿಷೇಧದ ನಂತರ, ಎಲ್ಲಾ ಕಡೆ ಬಹುಜನಪ್ರಿಯ ತಿನಿಸುಗಳಲ್ಲಿ ಒಂದಾದ ಗೋಬಿ ಮಂಚೂರಿ ವ್ಯಾಪಾರ ಕುಸಿದಿದೆ. ಬೆಂಗಳೂರಿನಲ್ಲಂತೂ ಶೇಕಡ 80ರಷ್ಟು ಕಡಿಮೆಯಾಗಿದ್ದು, ಚಿಕ್ಕಪುಟ್ಟ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.

‘ನಮ್ಮ ಗ್ರಾಹಕರಲ್ಲಿ ಬೇರೆ ಊರುಗಳಿಂದ ಬಂದು ಇಲ್ಲಿ ನೆಲೆಸಿ ಸಣ್ಣ ಉದ್ಯೋಗದಲ್ಲಿ ಇರುವವರೇ ಹೆಚ್ಚು. ಮಧ್ಯಾಹ್ನ ಊಟಕ್ಕೆ ಹೋಟೆಲ್‍ಗೆ ಹೋದರೆ ಖರ್ಚು ಹೆಚ್ಚು. ನಮ್ಮ ಬಳಿ ರೈಸ್‍ಬಾತ್, ನೆಂಚಿಕೊಳ್ಳಲು ಗೋಬಿ ಮಂಚೂರಿ ಸಾಕಾಗಿತ್ತು. ನಮ್ಮ ಬದುಕೂ ಸಾಗುತ್ತಿತ್ತು. ಈಗ ಬ್ಯಾನ್‌ನಿಂದ ರೈಸ್ ಐಟಂ ಕೂಡಾ ಸೇಲ್ ಆಗ್ತಿಲ್ಲ. ಆಹಾರಕ್ಕೆ ಬಣ್ಣ ಬಳಸಬಾರದು ಸರಿ, ಜೊತೆಗೆ ಟೇಸ್ಟಿಂಗ್ ಪೌಡರ್ ಕೂಡ ಹಾಕುವಂತಿಲ್ಲ. ಬಳಸಿದರೆ ದಂಡ, ಜೈಲು ಅಂತ ಹೇಳಿದ್ದಾರೆ. ಇದ್ಯಾವುದನ್ನೂ ಹಾಕದೆ ಆಹಾರ ತಯಾರಿಸಲು ನಾವು ರೆಡಿ. ಆದರೆ ಬಣ್ಣವಿಲ್ಲ, ರುಚಿ ಇಲ್ಲ, ಗ್ರಾಹಕರನ್ನು ತೃಪ್ತಿಪಡಿಸುವುದು ಹೇಗೆ?’

‘ಪರ್ಮಿಷನ್ ಇರೋ ಉತ್ತಮ ಗುಣಮಟ್ಟದ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ತುಂಬಾ ದುಬಾರಿ, ಬೇಗ ಸಿಗುವುದೂ ಇಲ್ಲ. ಅವನ್ನು ಹಾಕಿ ಲಾಭ ಗಳಿಸುವುದು ಸಾಧ್ಯವಿಲ್ಲ. ಹೀಗಾಗಿ, ಬದಲಿ ವ್ಯವಸ್ಥೆ ಮಾಡದೆ ಬದುಕು ನಡೆಸುವುದು ಬಹಳ ಕಷ್ಟ’ ಎನ್ನುವುದು ಈ ವ್ಯಾಪಾರಿಗಳ ಅಳಲು.

‘ಗೋಬಿ ಮಂಚೂರಿ ಮಾಡಲು ಉಪಯೋಗಿಸುವ ಹೂಕೋಸಿಗೆ ಬೇರೆಲ್ಲ ತರಕಾರಿಗಳಿಗಿಂತ ಅತಿ ಹೆಚ್ಚು ಕ್ರಿಮಿನಾಶಕವನ್ನು ಸಿಂಪಡಿಸಿರುತ್ತಾರೆ. ಹೀಗಾಗಿ, ಉಪ್ಪು ನೀರಿನಲ್ಲಿ ಮುಳುಗಿಸಿಟ್ಟು ಸ್ವಚ್ಛವಾಗಿ ತೊಳೆದು ಅಡುಗೆ ಮಾಡುವುದು ಮುಖ್ಯ. ಕುಡಿಯುವ ನೀರಿಗೂ ಕೊರತೆ ಇರುವ ಸಮಯದಲ್ಲಿ ಈ ರೀತಿಯ ಸ್ವಚ್ಛತೆ ಕಷ್ಟವೇ. ಅದರೊಂದಿಗೆ ನೆಂಚಿಕೊಳ್ಳಲು ಕೊಡುವ ಸಾಸ್‌ನಲ್ಲಿ ಕೂಡ ಕೃತಕ ಬಣ್ಣವಿದ್ದು ಅಪಾಯಕಾರಿ. ಕರಿಯುವ ಎಣ್ಣೆಯನ್ನು ಪದೇಪದೇ ಬಳಸುವುದೂ ಒಳ್ಳೆಯದಲ್ಲ. ಬಾಂಬೆಮಿಠಾಯಿಯಲ್ಲಿ ಬಣ್ಣ ಗಾಢವಾದಷ್ಟೂ ಅಪಾಯ ಹೆಚ್ಚು. ಜತೆಗೆ ಸಕ್ಕರೆ ಅಂಶವೂ ಹೆಚ್ಚಿರುತ್ತದೆ. ಹೀಗಾಗಿ ಇವು ತಿನ್ನಲು ಸೂಕ್ತವಾದ ಆಹಾರವಲ್ಲ.

ಗೋಬಿಮಂಚೂರಿ ನಿಷೇಧವಾದ ಸಂದರ್ಭದಲ್ಲಿ ಜನರು ಪಾನಿಪುರಿ, ಮಸಾಲಾಪುರಿಯಂಥ ಚಾಟ್ಸ್‌ಗೆ ಮೊರೆ ಹೋಗುತ್ತಿದ್ದಾರೆ. ಇವುಗಳಲ್ಲಿ ಬಳಸುವ ಹಸಿರು ಬಟಾಣಿಯಲ್ಲಿ ಮಲಾಚೈಟ್ ಗ್ರೀನ್ ಎನ್ನುವ ಬಣ್ಣ ಬಳಸಲಾಗುತ್ತದೆ. ಸಿಹಿತಿಂಡಿ, ಕಬಾಬ್‌ಗಳಲ್ಲಿ ಬಣ್ಣಕ್ಕಾಗಿ ಬಹಳಷ್ಟು ರಾಸಾಯನಿಕಗಳು ಬಳಕೆ
ಯಾಗುತ್ತವೆ. ಹೊರಗೆ ಆಹಾರ ಸೇವಿಸುವಾಗ ತಯಾರಿಸುವವರ ವೈಯಕ್ತಿಕ ನೈರ್ಮಲ್ಯ, ಆಹಾರ ತಯಾರಿಸುವ, ತಿನ್ನುವ ಪಾತ್ರೆಗಳ ಸ್ವಚ್ಛತೆ, ಶುದ್ಧನೀರಿನ ಲಭ್ಯತೆ, ಸುತ್ತಲ ಪರಿಸರ ಇವೆಲ್ಲವೂ ಗಮನಿಸಬೇಕಾದ ಅಂಶಗಳು.

ಈಗಂತೂ ಮಕ್ಕಳಿಗೆ ರಜೆಯ ಸಮಯ. ‘ಪ್ರವಾಸ ಮಾಡುವಾಗ, ಹೊರಗೆ ತಿನ್ನುವಾಗ ಜಾಗರೂಕರಾಗಿರಿ’ ಎನ್ನುವುದು ತಜ್ಞರ ಅಭಿಪ್ರಾಯ.

ಕಡಿಮೆ ಬೆಲೆಗೆ ಸುಲಭವಾಗಿ ಸಿಗುವ, ಬಾಯಿಗೆ ಹಿತವೆನಿಸುವ ರಸ್ತೆಬದಿಯ ಆಹಾರ ಅನೇಕರ ಹೊಟ್ಟೆ ತುಂಬಿಸುತ್ತಿದೆ. ಮಾತ್ರವಲ್ಲ, ಪ್ರವಾಸಿಗರಿಗೂ ಅಚ್ಚುಮೆಚ್ಚು. ಆದರೆ ರಸ್ತೆಬದಿಯಲ್ಲಿ ಆಹಾರ ಮಾರಾಟ ಮಾಡುವ ಹೆಚ್ಚಿನವರಿಗೆ ಸರಿಯಾದ ಜಾಗವಿಲ್ಲ. ಕಾನೂನಿನ ಮಾನ್ಯತೆ ಸಿಕ್ಕಿಲ್ಲ. ಆಹಾರ ತಯಾರಿಕೆಯಲ್ಲಿ ಬಳಸಬೇಕಾದ ನಿಯಮಗಳ ಬಗ್ಗೆ ಗೊತ್ತಿಲ್ಲ. ಹೀಗಾಗಿ, ಆರೋಗ್ಯದ ದೃಷ್ಟಿಯಿಂದ ನಿಷೇಧ ಸರಿಯಾದರೂ ಈ ಎಲ್ಲ ಅಂಶಗಳ ಬಗ್ಗೆ ಮಾಹಿತಿ ಮತ್ತು ಅಗತ್ಯ ನೆರವು ದೊರೆತು ಸುರಕ್ಷಿತ ಆಹಾರ ಸಿಗುವಂತಾಗಲಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT