ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಫಲಾನುಭವಿಗಳಿಗೆ ಇನ್ನು ಮುಂದೆ 5 ಕೆ.ಜಿ. ಅಕ್ಕಿ ಜೊತೆಗೆ, ‘ಇಂದಿರಾ ಆಹಾರ ಕಿಟ್’ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರಿಂದ 10 ಕೆ.ಜಿ. ಬದಲು ಐದು ಕೆ.ಜಿ. ಅಕ್ಕಿ ಮಾತ್ರ ದೊರಕಲಿದ್ದು, ಅದರೊಂದಿಗೆ ತೊಗರಿ ಬೇಳೆ, ಅಡುಗೆ ಎಣ್ಣೆ, ಸಕ್ಕರೆ ಮತ್ತು ಉಪ್ಪು ಒಳಗೊಂಡ ಕಿಟ್ ಸಿಗಲಿದೆ. ಸರ್ಕಾರ ಯಾಕೆ ಈ ಬದಲಾವಣೆಗೆ ಮುಂದಾಯಿತು?

ಪ್ರಸ್ತುತ ಕೆಲವು ಕುಟುಂಬಗಳು 40ರಿಂದ 50 ಕೆ.ಜಿ. ಅಕ್ಕಿ ಪಡೆಯುತ್ತಿವೆ. ಈ ಪಡಿತರ ಕುಟುಂಬದ ಅಗತ್ಯಕ್ಕಿಂತಲೂ ಹೆಚ್ಚಾಗಿದ್ದು, ಮಿಗುವ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಅಕ್ಕಿ ಹೆಚ್ಚಾಗುವುದರಿಂದ ಸೌಲಭ್ಯ ದುರುಪಯೋಗವಾಗಿರುವುದು ನಿಜ. ಇದಕ್ಕಿಂತ ಮುಖ್ಯವಾಗಿ, ರಾಜ್ಯದಲ್ಲಿ ನಕಲಿ ಬಿಪಿಎಲ್ ಕಾರ್ಡ್ಗಳೂ ದೊಡ್ಡ ಸಂಖ್ಯೆಯಲ್ಲಿವೆ. ಇವುಗಳಿಂದ ಸರ್ಕಾರದ ಖಜಾನೆಗೆ ಅಧಿಕ ಹೊರೆ ಬಿದ್ದಿದೆ. ‘ಇಂದಿರಾ ಕಿಟ್’ ಪರಿಚಯಿಸುತ್ತಿರುವುದು ಹೊರೆ ಇಳಿಸಿಕೊಳ್ಳುವ ಪ್ರಯತ್ನ.

ಕೇಂದ್ರ ಸರ್ಕಾರದ ನೀತಿ ಆಯೋಗದ ಪ್ರಕಾರ, ರಾಜ್ಯದಲ್ಲಿ ಬಡತನ ಪ್ರಮಾಣ ಇಳಿಕೆಯಾಗಿದ್ದು, ಜನಸಂಖ್ಯೆಯ ಶೇ 5.67ರಷ್ಟು ನಾಗರಿಕರು ಮಾತ್ರ ಬಿಪಿಎಲ್ ಕಾರ್ಡ್ಗಳನ್ನು ಹೊಂದಲು ಅರ್ಹರು. ಆದರೆ, ರಾಜ್ಯದಲ್ಲಿ 1.47 ಕೋಟಿ ಬಿಪಿಎಲ್ ಕುಟುಂಬಗಳಿದ್ದು, ಆ ಕುಟುಂಬಗಳು 4.67 ಕೋಟಿ ಜನಸಂಖ್ಯೆಯನ್ನು ಒಳಗೊಂಡಿವೆ. ಅಂದರೆ, ಒಟ್ಟು ಜನಸಂಖ್ಯೆಯ
ಶೇ 80ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದಾಗುತ್ತದೆ.

ಬಿಪಿಎಲ್ ಕಾರ್ಡೆನ್ನುವುದು ಉಚಿತ ಅಕ್ಕಿಗೆ ಸೀಮಿತವಾದುದಲ್ಲ. ಒಂದು ರೀತಿಯಲ್ಲಿ ಈ ಕಾರ್ಡ್, ಸರ್ಕಾರದ ವಿವಿಧ ಯೋಜನೆಯಡಿ ಸವಲತ್ತುಗಳನ್ನು ಪಡೆಯಲು ಪರವಾನಗಿ ಇದ್ದಂತೆ. ಈ ಕಾರ್ಡುದಾರರು ಉಚಿತ ವೈದ್ಯಕೀಯ ಸೌಲಭ್ಯ, ಕುಟುಂಬದ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಹಿತ ಅನೇಕ ಯೋಜನೆಗಳ ಸೌಲಭ್ಯ ಪಡೆಯಬಹುದು. ಹಾಗಾಗಿ, ದೊಡ್ಡ ಸಂಖ್ಯೆಯಲ್ಲಿರುವ ಬೋಗಸ್ ಕಾರ್ಡ್ಗಳಿಂದ ಸರ್ಕಾರಕ್ಕೆ ದೊಡ್ಡ ಪ್ರಮಾಣದ ನಷ್ಟ ಉಂಟಾಗುವುದರಲ್ಲಿ ಸಂದೇಹವಿಲ್ಲ.

ಯಾವುದೋ ಒಂದು ಸೌಲಭ್ಯವನ್ನು ಒಂದು ಬಾರಿ ನೀಡಿ, ಇನ್ನೊಂದು ಹಂತದಲ್ಲಿ ರದ್ದುಗೊಳಿಸುವುದು ಸರ್ಕಾರಕ್ಕೆ ಸವಾಲಿನ ಸಂಗತಿ. ಬಿಪಿಎಲ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಪ್ರಾರಂಭದಲ್ಲಿಯೇ ಎಚ್ಚರವಹಿಸಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ. ಅರ್ಹರ ಜೊತೆಗೆ ಅನರ್ಹರಿಗೂ ಕಾರ್ಡ್ ನೀಡಿರುವುದು ಸರ್ಕಾರದ ಆಡಳಿತಾತ್ಮಕ ವೈಫಲ್ಯ. ಆದರೆ, ಈ ಲೋಪದಲ್ಲಿ ನಾಗರಿಕರ ಪಾತ್ರವೂ ಇದೆಯಲ್ಲವೆ? ಬೋಗಸ್ ಬಿಪಿಎಲ್ ಕಾರ್ಡ್ಗಳು ಒಂದು ರೀತಿಯಲ್ಲಿ ಸಮಾಜದಲ್ಲಿನ ‘ಅಪ್ರಾಮಾಣಿಕತೆಯ ಸೂಚ್ಯಂಕ’ ಎಂದರೆ ತಪ್ಪಾಗಲಾರದು.

ಸಮಾಜದಲ್ಲಿನ ಅಪ್ರಾಮಾಣಿಕತೆ ಹಲವು ರೂಪಗಳದು. ಸರ್ಕಾರಿ ಹುದ್ದೆಗಳನ್ನು ಪಡೆಯಬೇಕೆಂದು ಉದ್ಯೋಗಾಕಾಂಕ್ಷಿಗಳು ಕನಸು ಕಾಣುವುದು ಸಹಜ. ಉದ್ಯೋಗಾವಕಾಶಗಳು ಕಡಿಮೆಯಾಗಿರುವ ಇಂದಿನ ದಿನಗಳಲ್ಲಿ ಸ್ಪರ್ಧೆಯೂ ತೀವ್ರವಾಗಿದೆ. ಇಂಥ ಸಂದರ್ಭದಲ್ಲಿ ಕೆಲವರು ಅಡ್ಡಹಾದಿ ತುಳಿದು ಉದ್ಯೋಗ ಗಿಟ್ಟಿಸಿಕೊಳ್ಳುವ ಮೂಲಕ, ಯೋಗ್ಯರ ಅನ್ನದ ಬಟ್ಟಲಿಗೆ ಕಲ್ಲು ಹಾಕುತ್ತಾರೆ. ಮೀಸಲಾತಿ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಅಥವಾ ಹಿಂದುಳಿದ ವರ್ಗದ ಜಾತಿಗಳ ನಕಲಿ ಪ್ರಮಾಣಪತ್ರ ಸಲ್ಲಿಸುವವರು, ನಕಲಿ ಅಂಕಪಟ್ಟಿ, ಪ್ರಮಾಣಪತ್ರ ಸಲ್ಲಿಸುವವರು ನಮ್ಮ ಸುತ್ತಮುತ್ತಲೇ ಇರುತ್ತಾರೆ. ಕೆಲವರು ನೌಕರಿಗೆ ಸೇರಿ ಎಷ್ಟೋ ಕಾಲದ ನಂತರ ಸಿಕ್ಕಿಬೀಳುತ್ತಾರೆ. ಹಲವರು ಯಶಸ್ವಿಯಾಗಿ ಪೂರ್ತಿ ಸೇವೆ ಮುಗಿಸಿ ನಿವೃತ್ತರಾಗುತ್ತಾರೆ.

ಸ್ವರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷೆಗಿಂತ ಮುಂಚಿತವಾಗಿ ಕಳ್ಳದಾರಿಯಲ್ಲಿ ಪಡೆಯುವುದು, ಪರೀಕ್ಷೆಯಲ್ಲಿ ನಕಲು ಹೊಡೆದು ಹುದ್ದೆ ಗಿಟ್ಟಿಸುವುದು ಕೂಡ ಅಪ್ರಾಮಾಣಿಕತೆಯ ಮಾದರಿಗಳೇ ಆಗಿವೆ. ನಮಗೆ ಅರ್ಹತೆ ಇಲ್ಲದ್ದಕ್ಕೆ ಹಂಬಲಿಸುವುದು, ಯೋಗ್ಯರ ಅವಕಾಶ ಕಸಿದುಕೊಳ್ಳುವುದು ಆತ್ಮವಂಚನೆಯ ನಡೆ ಮಾತ್ರವಲ್ಲ, ಅಪರಾಧವೂ ಹೌದು. ಕೆಲವರು ತಿಳಿದೂ ತಿಳಿದು ಅನ್ಯಾಯದ ದಾರಿಯಲ್ಲಿ ನಡೆಯುವುದು ಆತಂಕದ ವಿಚಾರ.

ಸವಲತ್ತುಗಳನ್ನು ನೀಡುವಾಗ ಸರ್ಕಾರ ಎಚ್ಚರಿಕೆ ವಹಿಸಬೇಕು; ಷರತ್ತುಗಳ ಪಾಲನೆಯಾಗಿದೆಯೇ ಎನ್ನುವುದನ್ನು ಖಾತರಿಪಡಿಸಿಕೊಳ್ಳಬೇಕು. ಇದರ ಜೊತೆಗೆ ಜನರೂ ವಂಚನೆಯ ಹಾದಿ ತುಳಿಯದಿರುವುದು ಅಗತ್ಯ. ಸುಳ್ಳು ಮಾಹಿತಿಗಳನ್ನು ನೀಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವುದು ಜವಾಬ್ದಾರಿಯುತ ನಾಗರಿಕರ ಲಕ್ಷಣವಲ್ಲ. ಯೋಗ್ಯರಿಗೆ ದೊರೆಯಬೇಕಾದ ಸವಲತ್ತು ಅಥವಾ ಅವಕಾಶವನ್ನು ದುರಾಸೆಯಿಂದ ಕಿತ್ತುಕೊಳ್ಳುವುದು ಅನ್ಯಾಯ. ನೈತಿಕ ಪ್ರಶ್ನೆಗಳು ನಮ್ಮನ್ನು ಬಾಧಿಸದೇ ಹೋದರೆ, ಅಂತಿಮವಾಗಿ ನಮ್ಮ ನಾಡು–ದೇಶ ಸೋಲುವುದು ನಿಶ್ಚಿತ.

ಅರಿವಿಲ್ಲದೆ ಅಥವಾ ಮಾಹಿತಿಯ ಕೊರತೆಯಿಂದ ಆಗುವ ತಪ್ಪುಗಳನ್ನು ಕ್ಷಮಿಸಬಹುದು. ಉದ್ದೇಶ ಪೂರ್ವಕವಾಗಿ ಮಾಡುವ ವಂಚನೆ, ತಪ್ಪುಗಳಿಗೆ ಕ್ಷಮೆ ಇದೆಯೇ? ಎಲ್ಲವನ್ನೂ ಸರ್ಕಾರವೇ ಮಾಡಬೇಕು, ತಪ್ಪುಗಳನ್ನೂ ಸರ್ಕಾರವೇ ಕಂಡುಹಿಡಿಯಬೇಕು ಎಂದರೆ, ಪ್ರಜೆಗಳಾಗಿರುವ ನಮ್ಮ ಜವಾಬ್ದಾರಿ ಏನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.