ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕನ್ನಡದಲ್ಲಿ ವೃತ್ತಿಶಿಕ್ಷಣ: ಸಜ್ಜಾಗಲಿ ಭೂಮಿಕೆ

ಎಂಜಿನಿಯರಿಂಗ್‌ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ಬೋಧಿಸುವ ಆಸಕ್ತರನ್ನು ಗುರುತಿಸುವ, ಅವರಿಗೆ ಸೂಕ್ತ ತರಬೇತಿ ನೀಡುವ ಕಾರ್ಯ ಬಹುಮುಖ್ಯವಾದದ್ದು
Last Updated 15 ಜೂನ್ 2021, 19:31 IST
ಅಕ್ಷರ ಗಾತ್ರ

ಈ ಬಾರಿಯ ಬಜೆಟ್‌ ಅಧಿವೇಶನದಲ್ಲಿ ಸಲ್ಲಿಸಲಾದ ಐದನೇ ಹಣಕಾಸು ಆಯೋಗದ ವರದಿಯ ಪ್ರಕಾರ, ದೇಶದ ಪ್ರತಿಶತ 70ರಷ್ಟು ಜನರು ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಶಿಕ್ಷಣ ಪಡೆಯಲಾಗದಂಥ ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಈ ಭಾಗದ ಜನರು ವೃತ್ತಿಪರ ಶಿಕ್ಷಣವನ್ನು ಇಂಗ್ಲಿಷ್ ಮೂಲಕ ಕಲಿಯಲು ಆರಂಭಿಸಿದಾಗ, ಭಾಷೆಯೇ ದೊಡ್ಡ ತೊಡಕಾಗಿ, ಬಹಳಷ್ಟು ಜನರು ತಮ್ಮ ವ್ಯಾಸಂಗವನ್ನು ಅರ್ಧಕ್ಕೇ ಕೈಬಿಡುತ್ತಿದ್ದಾರೆ ಎಂಬುದನ್ನು ಅದು ಗುರುತಿಸಿದೆ.

ಈ ದಿಸೆಯಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ- 2020’ರ ಶಿಫಾರಸಿನಂತೆ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ವೃತ್ತಿಪರ ಶಿಕ್ಷಣವನ್ನು ಸ್ಥಳೀಯ ಭಾಷೆಗಳಲ್ಲಿ ಬೋಧಿಸಲು ಅಗತ್ಯ ಭೂಮಿಕೆಗಳನ್ನು ಸಿದ್ಧಪಡಿಸುತ್ತಿದೆ. ಅದರ ಅನುಸಾರ, ಎಂಜಿನಿಯರಿಂಗ್ ಕಾಲೇಜುಗಳು ಕನ್ನಡವೂ ಸೇರಿದಂತೆ ಎಂಟು ರಾಜ್ಯ ಭಾಷೆಗಳಲ್ಲಿ ಪದವಿ ಶಿಕ್ಷಣವನ್ನು ಈ ವರ್ಷದಿಂದಲೇ ಪ್ರಾರಂಭಿಸಬಹುದು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಪರವಾನಗಿ ನೀಡಿದೆ. ಅದಕ್ಕೆ ಪೂರಕವಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಕನ್ನಡದಲ್ಲಿ ಎಂಜಿನಿಯರಿಂಗ್ ಪಠ್ಯಪುಸ್ತಕಗಳ ಪ್ರಕಟಣೆಗೆ ಸಿದ್ಧತೆ ಗಳನ್ನು ನಡೆಸುತ್ತಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಕಲಿಯುತ್ತಿರುವ, ಇಂಗ್ಲಿಷ್
ಪ್ರಾವೀಣ್ಯವಿಲ್ಲದ ವಿದ್ಯಾರ್ಥಿಗಳಿಗೆ ವಿಷಯ ಅರಿತು ಕೊಳ‍್ಳಲು ಇವು ನೆರವಾಗುತ್ತವೆ.

ಸಮರ್ಥ ಅನುವಾದಕರ ನೆರವಿನಿಂದ ಉತ್ತಮ ದರ್ಜೆಯ ಪಠ್ಯಪುಸ್ತಕಗಳು ಸಿದ್ಧವಾಗಬಹುದು. ಆದರೆ, ಕನ್ನಡ ಭಾಷೆಯಲ್ಲಿಯೇ ಎಂಜಿನಿಯರಿಂಗ್ ವಿಷಯಗಳನ್ನು ಸಮರ್ಥವಾಗಿ ಬೋಧಿಸಬಲ್ಲ ಶಿಕ್ಷಕರು ಸಿಗುವುದು ಅಷ್ಟು ಸುಲಭವಲ್ಲ. ತಾಂತ್ರಿಕ ವಿಷಯಗಳನ್ನು ಇಂಗ್ಲಿಷಿನಲ್ಲಿ ಬೋಧಿಸುವ ಹುದ್ದೆಗಳೇ ಬಹಳಷ್ಟು ಸಂಖ್ಯೆಯಲ್ಲಿ ಈಗ ಖಾಲಿ ಬಿದ್ದಿವೆ. ಕನ್ನಡ ಭಾಷೆಯಲ್ಲಿ ಬೋಧಿಸುವ ಆಸಕ್ತರನ್ನು ಗುರುತಿಸುವ, ಅವರಿಗೆ ಸೂಕ್ತ ತರಬೇತಿ ನೀಡುವ ಕಾರ್ಯವೂ
ಬಹುಮುಖ್ಯವಾದದ್ದು.

ಎಂಜಿನಿಯರಿಂಗ್ ಕ್ಷೇತ್ರದ ವಿಷಯವೈವಿಧ್ಯ ಹೆಚ್ಚಿನದು. ಐದರಿಂದ ಹತ್ತು ಶಿಸ್ತಿನ ಕೋರ್ಸುಗಳು ಈಗಾಗಲೇ ಲಭ್ಯವಿವೆ. ಕನ್ನಡದಲ್ಲಿ ಬೋಧನೆಯಾಗು ತ್ತದೆಂದು ಒಂದೊಂದು ಕೋರ್ಸಿಗೂ ಬೆರಳೆಣಿಕೆಯ ಸಂಖ್ಯೆಯ ವಿದ್ಯಾರ್ಥಿಗಳು ಕಾಲೇಜಿನತ್ತ ಹೊರಟರೆ, ಅವರಿಗಷ್ಟೇ ಪ್ರತ್ಯೇಕ ಸೆಕ್ಷನ್‍ಗಳನ್ನು ಅಲ್ಲಿ ತೆರೆಯಲಾಗುವುದಿಲ್ಲ. ಈ ಹಿಂದೆ ಕೇಂದ್ರ ಸರ್ಕಾರವು ಪ್ರತೀ ರಾಜ್ಯದಲ್ಲೂ ಅಲ್ಲಿನ ಭಾಷೆಗಳಲ್ಲೇ ಬೋಧಿಸುವ ಪ್ರತ್ಯೇಕ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳನ್ನು ತಾನೇ ಸ್ಥಾಪಿಸುವೆನೆಂದು ಘೋಷಿಸಿತ್ತು. ಕೇಂದ್ರದ ಅನುದಾನ ಹಾಗೂ
ಪ್ರೋತ್ಸಾಹದಲ್ಲಿ ಇಂಥ ಕಾಲೇಜುಗಳು ಉತ್ತಮ ಗುಣಮಟ್ಟದ ಮೂಲಸೌಕರ್ಯಗಳನ್ನು ಕಲ್ಪಿಸಬಹುದು.

ಎಂಜಿನಿಯರಿಂಗ್ ಪದವಿ ವ್ಯಾಸಂಗವನ್ನು ಸ್ಥಳೀಯ ಭಾಷೆಯಲ್ಲಿ ಕಲಿಸುವ ಯೋಜನೆ ಸ್ತುತ್ಯರ್ಹ ವಾದುದು, ಒಪ್ಪೋಣ. ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಐ.ಟಿ.ಐ. ಹಾಗೂ ಡಿಪ್ಲೊಮಾ ಹಂತದ ಎಂಜಿನಿಯರಿಂಗ್ ಕಲಿಕೆಯನ್ನು ಕನ್ನಡ ಭಾಷೆಯಲ್ಲಿ ನಡೆಸಲು ನಮಗಿನ್ನೂ ಸಾಧ್ಯವಾಗಿಲ್ಲ. ಇದರ ಬಗ್ಗೆ ರಾಜ್ಯದ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯವು ಹೆಚ್ಚಿನ ಗಮನ ಹರಿಸಬೇಕಿದೆ. ಈ ಕಲಿಕೆಯಲ್ಲಿ ತೊಡಗಿಕೊಂಡಿರುವ ಮಕ್ಕಳಿಗೆ ಅಗತ್ಯವಾದ ಪಠ್ಯಪುಸ್ತಕಗಳು, ಆನ್‌ಲೈನ್ ಸಾಮಗ್ರಿಗಳು ಮೊದಲು ಕನ್ನಡ ಭಾಷೆಯಲ್ಲಿ ಲಭ್ಯವಾಗಬೇಕಿವೆ. ಹಾಗೆಯೇ ಕನ್ನಡ ಭಾಷೆಯಲ್ಲಿಯೇ ಈ ಹಂತದ ಜ್ಞಾನವನ್ನು ಉತ್ತಮವಾಗಿ ಪಡೆದ ವಿದ್ಯಾರ್ಥಿಗಳು ಮುಂದೆ ಪದವಿ ಶಿಕ್ಷಣವನ್ನು ಪಡೆಯಲು ಇಚ್ಛಿಸಿದರೆ, ಅವರಿಗೆ ಕೇಂದ್ರ ಸರ್ಕಾರ ಹೊಸದಾಗಿ ಸ್ಥಾಪಿಸಲಿರುವ ಕಾಲೇಜುಗಳು ನೆರವಾಗಲಿವೆ.

ಕನ್ನಡ ಭಾಷೆಯಲ್ಲಿ ಎಂಜಿನಿಯರಿಂಗ್ ಕಲಿತ ಮಕ್ಕಳ ಪದವಿಯೋತ್ತರ ಭವಿಷ್ಯ ಹೇಗಿರುತ್ತದೆ ಎಂಬುದು ಸದ್ಯಕ್ಕೆ ಉತ್ತರಿಸಲಾಗದ ಪ್ರಶ್ನೆ. ಜಾಗತಿಕ ಮಟ್ಟದಲ್ಲಿ ಕೆಲಸ ಮಾಡಬಹುದಾದ ಅವಕಾಶಗಳನ್ನು ಕಳೆದುಕೊಳ್ಳಬಹುದಾದ ಆತಂಕ ವಿದ್ಯಾರ್ಥಿಗಳಲ್ಲಿ ಇರುವುದು ಸಹಜ. ಸಾಮಾನ್ಯವಾಗಿ ಇಂಥ
ಸಂದರ್ಭಗಳಲ್ಲಿ ಯುರೋಪ್ ದೇಶಗಳ ಉದಾಹರಣೆ ಪ್ರಸ್ತಾಪವಾಗುತ್ತದೆ. ಆದರೆ ಆ ದೇಶಗಳಲ್ಲಿ ಅಲ್ಲಿನ ಭಾಷೆಗಳಲ್ಲೇ ಅತ್ಯುನ್ನತ ಮಟ್ಟದಲ್ಲಿ ವ್ಯಾಸಂಗ ನಡೆಸಬಲ್ಲ ಮೂಲ ಸೌಕರ್ಯಗಳು ಶತಮಾನಗಳಿಂದ ನಿರ್ಮಾಣವಾಗಿವೆ. ಇಡೀ ದೇಶ ಒಂದೇ ಭಾಷೆಯಲ್ಲಿ ವಹಿವಾಟು ನಡೆಸಬಲ್ಲ ಸಾಮರ್ಥ್ಯವನ್ನು ಅವು ಪಡೆದಿವೆ. ಇದರ ಜತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸಬೇಕಾದ ಅಲ್ಲಿನ ತಜ್ಞರು ಇಂಗ್ಲಿಷ್ ಭಾಷೆಯ ಪರಿಣತಿಯನ್ನು ಗಳಿಸಿರುತ್ತಾರೆ. ಇಂಥದ್ದೊಂದು ಭೂಮಿಕೆಯು ಭಾರತದ ಪ್ರತೀ ರಾಜ್ಯದಲ್ಲೂ ನಿರ್ಮಾಣ ವಾಗಬೇಕೆಂದರೆ ಬಹಳಷ್ಟು ಸಮಯ ಬೇಕು.

ಹಾಗೆಂದ ಮಾತ್ರಕ್ಕೆ ನಾವು ನಿರಾಶರಾಗಬೇಕಿಲ್ಲ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿಷಯ ಸಂಬಂಧಿತ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಕನ್ನಡ ಭಾಷೆಯಲ್ಲಿ ಪ್ರಕಟವಾಗಿರುವ ಪಠ್ಯಪುಸ್ತಕಗಳ ನೆರವನ್ನು ಪಡೆಯ ಬಹುದು. ಸಾಧ್ಯವಿರುವೆಡೆ, ಕನ್ನಡ ಭಾಷೆಯಲ್ಲಿ ಬೋಧಿಸುತ್ತಿರುವ ಪ್ರಾಧ್ಯಾಪಕರನ್ನು ಅವರು
ಸಂಪರ್ಕಿಸಲೂಬಹುದು.

ಇನ್ನು ಉದ್ಯೋಗದ ಸಮಸ್ಯೆ. ಕನ್ನಡ ಭಾಷೆಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರಿಗೆ ಸರ್ಕಾರಿ ಕೆಲಸಗಳ ಹೊರತಾಗಿ ಖಾಸಗಿ ಕಂಪನಿಗಳಲ್ಲಿ ಅವಕಾಶ ಗಳಿರಬಹುದೇ ಎಂಬುದು ದೊಡ್ಡ ಪ್ರಶ್ನೆಯಾಗ
ಲಿದೆ. ಕರ್ನಾಟಕ ರಾಜ್ಯ ಸರ್ಕಾರಿ ಕೆಲಸಗಳಲ್ಲಾದರೂ ಇಂಥವರಿಗೆ ಒಂದಷ್ಟು ಮೀಸಲಾತಿ ನೀಡಬೇಕಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT