ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬೆಕ್ಕಣ್ಣ ವಾಂಟ್ಸ್ ಟು ನೋ...

Last Updated 26 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಬೆಕ್ಕಣ್ಣ ಕೈಯಲ್ಲಿ ಮೈಕ್ರೊಫೋನ್ ಹಿಡಿದು ಕೊಂಡು, ‘ಬೆಕ್ಕಣ್ಣ ವಾಂಟ್ಸ್ ಟು ನೋ’ ಎಂದು ಅಗದಿ ಭಯಂಕರ ಘನಗಂಭೀರವಾಗಿ ಹೇಳುತ್ತಿತ್ತು. ‘ಹಂಗೆ ಎಲ್ಲಾರೂ ವಾಂಟ್ಸ್ ಟು ನೋ ಅಂತ ಹೇಳಂಗಿಲ್ಲಲೇ... ಕಾಪಿರೈಟ್ ಐತಿ ಅದಕ್ಕೆ’ ನಾನು ಕಕ್ಕಾಬಿಕ್ಕಿಯಾಗಿ ಹೇಳಿದೆ.

‘ನೇಶನ್ ವಾಂಟ್ಸ್ ಟು ನೋ’ ಟ್ಯಾಗ್ಲೈನ್ ಯಾರಾದ್ರೂ ಬಳಸಬಹುದು ಎಂದು ಕೋರ್ಟು ಆರ್ಡರಾದ ಸುದ್ದಿ ತೋರಿಸಿತು. ‘ವಾಂಟ್ಸ್ ಟು ನೋ ಪದದ ಹಿಂದೆ ಬೇಕಾದ ಪದ ಇಟ್ಟು ಕೊಂಡು ಯಾರಾದ್ರೂ ಬಳಸಬೌದು...’ ಎಂದು ವಾದ ಮಂಡಿಸಿ, ಗಂಟಲು ಸರಿಪಡಿಸಿಕೊಂಡು ವದರಿ ಕೇಳತೊಡಗಿತು.

‘ಇಡೀ ರಾಜ್ಯದಲ್ಲಿ ಅತಿವೃಷ್ಟಿಯಿಂದ ಹೊಲ ಮನೆ ಕೊಚ್ಚಿಕೆಂಡು ಹೋಗ್ಯಾವ, ಬದುಕು ಮೂರಾಬಟ್ಟೆ ಆಗೈತಿ, ಕಾಳಜಿ ಕೇಂದ್ರದಾಗೆ ಬಸಿರು, ಬಾಣಂತಿ, ಮಕ್ಕಳು ಸರಿಯಾದ ಕಾಳಜಿ ಇಲ್ಲದೇ ವದ್ದಾಡತಾರ. ಲಗೂನೆ ಹೋಗಿ ಮೋದಿ ಮಾಮಾನ ಕಡಿಂದ ಕೋಟಿಗಟ್ಟಲೆ ಪರಿಹಾರ ತರೂದು ಬಿಟ್ಟು, ಇಲ್ಲಿ ರಾಜಾಹುಲಿ, ಬಂಡೆ, ಹುಲಿಯಾ ಒಬ್ಬರಿಗೊಬ್ಬರು ಕೆಸರು ಹಾಕ್ಕೋತ ಏನು ಹಕೀಕತ್ ನೆಡಸ್ಯಾರ... ಬೆಕ್ಕಣ್ಣ ವಾಂಟ್ಸ್ ಟು ನೋ’.

‘ಕೊರೊನಾ ಎಲ್ಲಾರನ್ನೂ ಕಂಗಾಲು ಮಾಡೈತಿ, ಕೇಸುಗಳು ಎಂಬತೈದು ಸಾವಿರ ಮುಟ್ಟೈತಿ, ಹನ್ನೊಂದು ಸಾವಿರ ಮಂದಿ ಸತ್ತಾರ... ಹಂತಾದ್ರಾಗ ಸರಳ ದಸರಾ ಅಂತ್ಹೇಳಿ ಸರ್ಕಾರ ಎಷ್ಟ್ ರೊಕ್ಕ ಖರ್ಚು ಮಾಡೈತಿ... ನುಂಗಣ್ಣರು ಅದ್ರೊಳಗೂ ಎಷ್ಟ್ ನುಂಗ್ಯಾರ... ಬೆಕ್ಕಣ್ಣ ವಾಂಟ್ಸ್ ಟು ನೋ’.

‘ಬೆಕ್ಕಣ್ಣ ವಾಂಟ್ಸ್ ಟು ನೋ’ ಪಟ್ಟಿ ಬೆಳೆಯು ತ್ತಲೇ ಇತ್ತು. ಧ್ವನಿ, ಹಾವಭಾವ ಎಲ್ಲ ಥೇಟ್ ಅರ್ನಬ್ ಗೋಸ್ವಾಮಿಯದೇ... ಕರೀಕೋಟು, ಟೈ ಇಲ್ಲ ಅಷ್ಟೆ.

‘ಎಷ್ಟ್ ಶಾಣೇ ಆಗಿಯಲೇ’ ನಾನು ಬೆಕ್ಕಸಬೆರಗಾದೆ.

‘ಹಬ್ಬ ಅಂತ್ಹೇಳಿ ನೀ ಏನೇನೋ ಮಾಡಿ ಕೊಂಡು ತಿಂದೆ, ಬೇಕಾದ್ದೆಲ್ಲ ಆನ್‌ಲೈನಿನಲ್ಲಿ ತರಿಸಿಕೊಂಡೆ... ನನಗೆ ಯಾಕೆ ಏನೂ ವಿಶೇಷ ತರಿಸಿಲ್ಲ... ಬೆಕ್ಕಣ್ಣ ವಾಂಟ್ಸ್ ಟು ನೋ’ ಎಂದು ಕೊನೆಗೆ ನನ್ನತ್ತಲೂ ಒಂದು ಕೂರಂಬು ಎಸೆಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT