ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆ ಆಧಾರದ ಮೀಸಲಾತಿ ಸಾಧ್ಯವೇ?

ಮೀಸಲಾತಿಯ ಉದ್ದೇಶವನ್ನು ಎಲ್ಲಾ ಸರ್ಕಾರಗಳೂ ತಪ್ಪಾಗಿ ಅರ್ಥೈಸಿಕೊಂಡಿವೆ
Last Updated 9 ಜನವರಿ 2019, 20:33 IST
ಅಕ್ಷರ ಗಾತ್ರ

ಮೇಲ್ವರ್ಗಗಳಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ 10ರಷ್ಟು ಮೀಸಲಾತಿ ಕಲ್ಪಿಸಲು ಅನುವಾಗಿಸುವ ಸಂವಿಧಾನದ 124ನೇ ತಿದ್ದುಪಡಿ ಮಸೂದೆ– 2019ಕ್ಕೆ ಲೋಕಸಭೆ ಮಂಗಳವಾರ ಅನುಮೋದನೆ ನೀಡಿದೆ. ಈ ಸಂದರ್ಭದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಈ ಹಿಂದೆ ನಡೆದ ಬೆಳವಣಿಗೆಗಳ ಸಂಕ್ಷಿಪ್ತ ಇತಿಹಾಸವನ್ನು ತಿಳಿದುಕೊಂಡು, ಸರ್ಕಾರದ ನಡೆ ಸರಿಯೇ– ತಪ್ಪೇ ಎಂಬ ಬಗ್ಗೆ ಚರ್ಚಿಸುವುದು ಅಗತ್ಯವೆನಿಸುತ್ತದೆ.

ಮೀಸಲಾತಿಯ ವಿಚಾರದಲ್ಲಿ ಅಧ್ಯಯನ ನಡೆಸಿ ವರದಿ ನೀಡುವ ಸಲುವಾಗಿ 1979ರಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರವು ಮಂಡಲ್ ಆಯೋಗವನ್ನು ರಚಿಸಿತು. ಈ ಆಯೋಗವು 1980ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳವರಿಗೆ ಶೇ 27ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಶಿಫಾರಸು ಮಾಡಿತು. ಆನಂತರ ಬಂದ ಕಾಂಗ್ರೆಸ್ ಸರ್ಕಾರವು ಈ ಶಿಫಾರಸನ್ನು ನಿರ್ಲಕ್ಷಿಸಿತು. ತದನಂತರ ವಿ.ಪಿ. ಸಿಂಗ್ ಅವರು ತಾವು ಅಧಿಕಾರಕ್ಕೆ ಬಂದರೆ ಮಂಡಲ್ ಆಯೋಗದ ವರದಿಯನ್ನು ಅನುಷ್ಠಾನ ಮಾಡುವ ಭರವಸೆ ನೀಡಿದ್ದರು. ಅವರು ಪ್ರಧಾನಿಯಾದಾಗ ವರದಿಯನ್ನು ಅನುಷ್ಠಾನಗೊಳಿಸಿದರು. ಆಗ ದೇಶದಾದ್ಯಂತ ಪ್ರತಿಭಟನೆಗಳು ನಡೆದವು, ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿ ವಿಚಾರಣೆ ನಡೆಯಿತು. ಪ್ರಕರಣ ಇತ್ಯರ್ಥವಾಗುವ ಮೊದಲೇ ವಿ.ಪಿ. ಸಿಂಗ್ ನೇತೃತ್ವದ ಸರ್ಕಾರ ಪತನವಾಗಿ, ಪಿ.ವಿ. ನರಸಿಂಹ ರಾವ್ ಅಧಿಕಾರಕ್ಕೆ ಬಂದರು. ಅವರ ಅವಧಿಯಲ್ಲಿ ಕೋರ್ಟ್‌ ತೀರ್ಪಿನ ಪ್ರಕಾರ ಶೇ 27ರಷ್ಟು ಮೀಸಲಾತಿ ಅನುಷ್ಠಾನಗೊಂಡಿತು.

ಅದೇ ಕಾಲದಲ್ಲಿ, ಮೇಲ್ವರ್ಗದವರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ನೀಡುವ ಪ್ರಸ್ತಾಪವನ್ನು ಅಂದಿನ ಕಾಂಗ್ರೆಸ್‌ ಸರ್ಕಾರ ಅನುಮೋದಿಸಿತ್ತು. ಆದರೆ ಆನಂತರ ಇಂದಿರಾ ಸಾಹ್ನಿ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಮಂಡಲ್ ಆಯೋಗ ಶಿಫಾರಸು ಮಾಡಿದ್ದ ಶೇ 27ರಷ್ಟು ಮೀಸಲಾತಿಯನ್ನು ಎತ್ತಿಹಿಡಿದು, ‘ಮೇಲ್ವರ್ಗಗಳಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ನೀಡುವುದು ಅಸಾಂವಿಧಾನಿಕ’ ಎಂದು 1992ರ ನವೆಂಬರ್‌ನಲ್ಲಿ ತೀರ್ಪು ನೀಡಿತು. ಇದಾಗಿ ಎರಡೂವರೆ ದಶಕಗಳ ನಂತರ ಈಗ ಮೇಲ್ಜಾತಿಯವರಿಗೆ ಮೀಸಲಾತಿ ನೀಡುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

‘ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಇನ್ನೂ ಎಷ್ಟು ವರ್ಷಗಳ ಕಾಲ ಮುಂದುವರಿಸಬೇಕು’ ಎಂಬ ಪ್ರಶ್ನೆ ಏಳುತ್ತಿರುವ ಸಂದರ್ಭದಲ್ಲೇ ಮೇಲ್ವರ್ಗದವರಿಗೆ ಮೀಸಲಾತಿ ನೀಡುವ ನಿರ್ಧಾರ ಹೊರಬಿದ್ದಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ (Vertical reservation); ಮಹಿಳೆಯರು, ಅಂಗವಿಕಲರು, ಗ್ರಾಮೀಣ ಮೀಸಲಾತಿ, ಪ್ರಾದೇಶಿಕ ಭಾಷೆ– ಮಾಧ್ಯಮದಲ್ಲಿ ಓದಿದವರಿಗೆ ಮೀಸಲಾತಿ (Horizontal reservation) ಮುಂತಾದವುಗಳ ಜೊತೆಗೆ ಹೊಸ ಬಗೆಯ ಮೀಸಲಾತಿಯನ್ನು ಸೇರಿಸುತ್ತಾ ಹೋದರೆ ಮೀಸಲಾತಿಗೆ ಅರ್ಥ ಉಳಿಯುತ್ತದೆಯೇ ಎಂಬ ಬಗ್ಗೆ ಚಿಂತನೆ ನಡೆಯಬೇಕಿದೆ.

ಮಂಡಲ್‌ ಆಯೋಗವು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ದೇಶದಲ್ಲಿ 3,745 ಜಾತಿಗಳು ಅತಿ ಹಿಂದುಳಿದವು ಎಂದು ಅಂಕಿಅಂಶಗಳ ಸಹಿತ ವಿವರಿಸಿ, ಈ ಜಾತಿಗಳವರಿಗೆ ಶೇ 27ರಷ್ಟು ಮೀಸಲಾತಿ ನೀಡಬೇಕು ಎಂದು ಸೂಚಿಸಿತ್ತು. ಅದನ್ನು ಪರಿಗಣಿಸಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಆದರೆ ಈಗ ಮೇಲ್ವರ್ಗದವರಿಗೆ ಮೀಸಲಾತಿ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರವು ಇಂಥ ಯಾವುದಾದರೂ ಅಧ್ಯಯನ ನಡೆಸಿತ್ತೇ? ಅಥವಾ ಆಯೋಗವನ್ನು ಏನಾದರೂ ರಚಿಸಿತ್ತೇ? ಇದ್ಯಾವುದನ್ನೂ ಮಾಡದೆ ಏಕಾಏಕಿ ಈ ಮಸೂದೆ ತಂದಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು ಮಾತ್ರವಲ್ಲ ಸುಪ್ರೀಂ ಕೋರ್ಟ್‌ ತೀರ್ಪಿಗೆ ಮಾಡಿದ ಅಗೌರವವೇ ಸರಿ.

ಮೀಸಲಾತಿಯನ್ನು ಕೇವಲ ಜಾತಿ ಆಧಾರದಲ್ಲಾಗಲೀ ಆರ್ಥಿಕವಾಗಿ ಹಿಂದುಳಿಯುವಿಕೆಯ ಕಾರಣಕ್ಕಾಗಲೀ ನೀಡಲಾಗುವುದಿಲ್ಲ. ಎಲ್ಲಾ ಸರ್ಕಾರಗಳೂ ಮೀಸಲಾತಿಯ ಉದ್ದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿವೆ. ಜಾನ್‌ ರಾಲ್ಸ್‌ನ ‘ಥಿಯರಿ ಆಫ್‌ ಜಸ್ಟಿಸ್’ ಹಾಗೂ ಅಮರ್ತ್ಯ ಸೇನ್ ಅವರ ‘ಐಡಿಯಾ ಆಫ್‌ ಜಸ್ಟಿಸ್’ ಕೃತಿಗಳನ್ನು ಓದಿದರೆ ಮೀಸಲಾತಿಯ ಪರಿಕಲ್ಪನೆ ಏನೆಂಬುದು ಅರ್ಥವಾಗುತ್ತದೆ. ವೋಟಿಗಾಗಿಯೇ ಮೀಸಲಾತಿ ಅಸ್ತ್ರವನ್ನು ಬಳಸಿ, ಜನರ ನಡುವೆ ದ್ವೇಷ ಬಿತ್ತುವ ಪ್ರಯತ್ನಕ್ಕೆ ಕಡಿವಾಣ ಹಾಕಬೇಕಾಗಿದೆ. ಕೇಂದ್ರ ಸರ್ಕಾರ ಈ ಹಿಂದೆ ರೂಪಿಸಿದ್ದ ‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆ’ಯನ್ನು (ಎನ್‌ಜೆಎಸಿ ಆ್ಯಕ್ಟ್‌) ಸುಪ್ರೀಂ ಕೋರ್ಟ್‌ ಅಮಾನ್ಯಗೊಳಿಸಿತ್ತು. ಅದೇ ರೀತಿ ಈ ಮೀಸಲಾತಿ ಕ್ರಮವನ್ನು (ಇದು ಕಾಯ್ದೆಯಾಗಿ ಬಂದಲ್ಲಿ) ಸಹ ಅಸಿಂಧುಗೊಳಿಸುವುದರಲ್ಲಿ ಅನುಮಾನವಿಲ್ಲ. ಮೀಸಲಾತಿ ಕಲ್ಪಿಸುವ ಈ ಪ್ರಯತ್ನದಿಂದ ಮೇಲ್ವರ್ಗದವರ ಬೆಂಬಲವನ್ನು ತಾತ್ಕಾಲಿಕವಾಗಿ ಪಡೆಯಬಹುದು ಎಂಬುದನ್ನು ಬಿಟ್ಟರೆ ಬೇರೇನೂ ಪ್ರಯೋಜನ ಆಗಲಾರದು.

ಲೇಖಕ: ಹಿರಿಯ ಸಹಾಯಕ ಪ್ರಾಧ್ಯಾಪಕ, ವಿಶ್ವವಿದ್ಯಾಲಯ ಕಾನೂನು ಕಾಲೇಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT