ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕೇಳಲಿ ಮಕ್ಕಳ ಮನದ ಮಿಡಿತ

ಆರೋಗ್ಯ ಕಾಯ್ದುಕೊಳ್ಳುವಿಕೆಗೆ ಸಂಬಂಧಿಸಿದ ಸರ್ಕಾರಿ ಕಾರ್ಯಕ್ರಮಗಳು ಮಕ್ಕಳ ಮಾನಸಿಕ ಆರೋಗ್ಯದ ಕುರಿತು ಪೋಷಕರಿಗೆ ತಿಳಿವಳಿಕೆ ನೀಡುವ ಉಪಕ್ರಮವನ್ನೂ ಒಳಗೊಂಡಿರಬೇಕು
Published 15 ಡಿಸೆಂಬರ್ 2023, 19:22 IST
Last Updated 15 ಡಿಸೆಂಬರ್ 2023, 19:22 IST
ಅಕ್ಷರ ಗಾತ್ರ

ತುಂಬಾ ಚೆನ್ನಾಗಿ ಓದುತ್ತಿದ್ದ ಜಾಣೆಯೊಬ್ಬಳು ಇದ್ದಕ್ಕಿದ್ದ ಹಾಗೆ ಕಲಿಕೆಯಲ್ಲಿ ಹಿಂದುಳಿದಳು. ಓದು ಕಡಿಮೆಯಾಯಿತು. ಮಾತು ಕಡಿಮೆಯಾಯಿತು. ಅಂಕಗಳು ಕಡಿಮೆಯಾದವು.‌ ಶಿಕ್ಷಕರು ಶಾಲೆಗೆ ಪೋಷಕರನ್ನು ಕರೆಸಿ ಮಾತನಾಡಿದಾಗ, ಪೋಷಕರಿಗೂ ಅದೇ ಬೇಸರ. ಮನೆಯಲ್ಲೂ ತನ್ನ ಪಾಡಿಗೆ ತಾನಿರುತ್ತಾಳೆ ಅಂದರು. ಶಿಕ್ಷಕರು ಖುದ್ದಾಗಿ ಆ ಮಗುವನ್ನು ಕರೆದು ಮಾತನಾಡಿಸಿದಾಗಲೂ ಆಕೆ ಏನೊಂದೂ ಹೇಳಲಿಲ್ಲ. ಕೊನೆಯ ದಾರಿ ಎಂಬಂತೆ ಮನೋವೈದ್ಯರ ಬಳಿ ಕರೆದೊಯ್ದಾಗ ಕೊನೆಗೂ ವಿಷಯ ತಿಳಿಯಿತು. ನಿತ್ಯ ದಾರಿಯಲ್ಲಿ ಸಿಗುವ ಹುಡುಗನೊಬ್ಬನ ಕಿರುಕುಳದಿಂದ ಆಕೆ ನಲುಗಿದ್ದಳು. ಎಲ್ಲವೂ ಸುಖಾಂತ್ಯವಾಯಿತು. ಆ ಸಮಸ್ಯೆ ಹಾಗೇ ಮುಂದುವರಿದಿದ್ದರೆ ಆ ಮಗುವಿನ ಸ್ಥಿತಿ ಏನಾಗುತ್ತಿತ್ತೋ?

ಇನ್ನು ಕೆಲವು ಮಕ್ಕಳಿರುತ್ತಾರೆ. ತಮ್ಮ ಮೇಲಿನ ಒತ್ತಡಕ್ಕೆ ಪ್ರತಿಯಾಗಿ ಸ್ಫೋಟಗೊಳ್ಳುತ್ತಾರೆ. ಮನೆ ಬಿಟ್ಟು ಹೋಗುತ್ತಾರೆ. ದುಶ್ಚಟಗಳ ದಾಸರಾಗುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆಕ್ರಮಣಶೀಲ ಮನಃಸ್ಥಿತಿ ಬೆಳೆಸಿಕೊಳ್ಳುತ್ತಾರೆ.‌ ಈಚೆಗೆ ಶಾಲಾ ಮಕ್ಕಳ ಬ್ಯಾಗಿನಲ್ಲಿ ಬೀಡಿ, ಸಿಗರೇಟ್, ಗುಟ್ಕಾದಂತಹ ವಸ್ತುಗಳು ಸಿಕ್ಕ ಉದಾಹರಣೆಗಳಿವೆ. ಕೆಲವು ಮಕ್ಕಳಂತೂ ಕೆಲವರ ಮೇಲೆ ಅತಿಯಾದ ದೈಹಿಕ ದಾಳಿಗೆ ಮುಂದಾಗುತ್ತಾರೆ.

ಮಕ್ಕಳ ಮನಸ್ಸು ಕದಡುತ್ತಿದೆ. ಅದೀಗ ಆರೋಗ್ಯಕರವಾಗಿಲ್ಲ.‌ ಪರೀಕ್ಷೆ ಭಯ, ಹರೆಯದಲ್ಲಿ ದೈಹಿಕ ಬದಲಾವಣೆಯ ಗೊಂದಲ, ಭೀತಿ, ಆಕರ್ಷಣೆ, ಪೋಷಕರ ಒತ್ತಡ, ಸಮಾಜದ ನಿರೀಕ್ಷೆಗಳು, ಕಂಗೆಡಿಸುವ ಸಾಮಾಜಿಕ ಜಾಲತಾಣಗಳು, ಸಿನಿಮಾಗಳು... ಮಗುವಿನ ಮನಸ್ಸಿನೊಳಗೆ ದ್ವಂದ್ವದ ಬಿರುಗಾಳಿ ಎಬ್ಬಿಸಲು ಇರುವ ಕಾರಣಗಳು ಒಂದೇ ಎರಡೇ!

ಮಗುವಿಗೆ ಜ್ವರ ಬಂದರೆ ಕಾಳಜಿ ಮಾಡುತ್ತೇವೆ. ಗಾಯವಾದರೆ ಆತಂಕಕ್ಕೆ ಒಳಗಾಗುತ್ತೇವೆ. ಆದರೆ ಮನಸ್ಸು ಕೂಡ ಹುಷಾರು ತಪ್ಪುತ್ತದೆ ಎಂಬುದರ ಅರಿವಿರಬೇಕು ನಮಗೆ. ಮನಸ್ಸಿಗೆ ಗಾಯವಾಗುತ್ತದೆ, ಬಳಲುತ್ತದೆ, ಪ್ರಭಾವಕ್ಕೆ ಒಳಗಾಗುತ್ತದೆ, ಸೋಲುತ್ತದೆ, ನೋವು ತಿನ್ನುತ್ತದೆ. ಜ್ವರಕ್ಕೆ ಔಷಧಿ ಕೊಟ್ಟಂತೆ ಮನಸ್ಸಿಗೂ ಮದ್ದು ಅರೆಯಬೇಕಾಗಿದೆ.‌ 

ಮಕ್ಕಳದು ಇರಲಿ, ವಯಸ್ಕರ ಆರೋಗ್ಯದ ಬಗ್ಗೆ ಕೂಡ ನಾವು ನಮ್ಮ ದೇಶದಲ್ಲಿ ಅಷ್ಟಾಗಿ ಕಾಳಜಿ ವಹಿಸುತ್ತಿಲ್ಲ. ಇದು ಸರಿಯಲ್ಲ. ಬೆಳೆದು ನಾಳೆ ಸಮಾಜಕ್ಕೆ ಆಸ್ತಿಯಾಗಬೇಕಾದ ಮಕ್ಕಳು ಅನಾರೋಗ್ಯಪೀಡಿತ ಮನಸ್ಸು ಹೊಂದಿದ್ದರೆ ಹೇಗೆ? 

ಅನೇಕ ಕಾರಣಗಳಿಂದ ಮಗು ಮಾನಸಿಕ ಸಮಸ್ಯೆಗಳಿಂದ ಬಳಲಬಹುದು. ಮಗುವಿಗೆ ಒಳ್ಳೆಯ ಶಾಲೆ, ಬಟ್ಟೆ, ಉತ್ತಮ ಆಹಾರ ಕೊಡುವಂತೆ ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದುವುದೂ ಅದರ ಹಕ್ಕಾಗಬೇಕು. ಒಂದು ತೀವ್ರ ಜ್ವರ ನಮ್ಮನ್ನು ಗಾಬರಿಗೊಳಿಸಿದಷ್ಟೇ ಮಗುವಿನ ಬೇಸರ, ಸಿಟ್ಟು, ಖಿನ್ನತೆ ಆತಂಕಕ್ಕೆ ಈಡು ಮಾಡಬೇಕು.‌ 

ಎಷ್ಟೋ ಪೋಷಕರಿಗೆ ಇದರ ಬಗ್ಗೆ ಅರಿವಿಲ್ಲ. ಆರೋಗ್ಯ ಕಾಯ್ದುಕೊಳ್ಳುವಿಕೆಗೆ ಸಂಬಂಧಿಸಿದಂತೆ ಸರ್ಕಾರಗಳು ರೂಪಿಸುವ ಕಾರ್ಯಕ್ರಮಗಳಲ್ಲಿ ಮಕ್ಕಳ ಮಾನಸಿಕ ಆರೋಗ್ಯದ ಕುರಿತು ಪೋಷಕರಿಗೆ ತಿಳಿವಳಿಕೆ ನೀಡುವ ಉಪಕ್ರಮಗಳೂ ಇರಬೇಕು. ಆಶಾ ಕಾರ್ಯಕರ್ತೆಯರು, ಅಂಗನವಾಡಿಗಳ ಮೂಲಕ ಮನೆಮನೆಯನ್ನೂ ತಲುಪಬೇಕು. ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಮನೋವೈದ್ಯರು ಇರುವಂತೆ ವ್ಯವಸ್ಥೆ ಮಾಡಬೇಕು. 

ಸರ್ಕಾರಿ ಶಾಲೆಯ ಮಕ್ಕಳಿಗೆ ಈಗಾಗಲೇ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯದ ಯೋಜನೆ ಲಭ್ಯವಿದೆ. ಶಾಲೆಗೆ ವರ್ಷಕ್ಕೊಮ್ಮೆ ಬರುವ ವೈದ್ಯರು ಕಣ್ಣು, ಕಿವಿ, ಮೂಗು, ಎದೆಬಡಿತ ನೋಡಿ ಹೋಗುತ್ತಾರೆ.‌ ಆದರೆ ಮಕ್ಕಳ ಮನಸ್ಸಿನ ಮಿಡಿತ ಅವರಿಗೆ ಕೇಳುವುದಿಲ್ಲ. ಹದಿಹರೆಯದ ನಿರ್ವಹಣೆ ಬಗ್ಗೆ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತದಾದರೂ ಎಲ್ಲರನ್ನೂ ಒಂದು ಕಡೆ ಕೂರಿಸಿ, ಪಾಠ ಹೇಳಿದಂತೆ ಹೇಳಿ ಎದ್ದು ಹೋಗಲಾಗುತ್ತದೆ. ಮಗು ಹೇಳಬೇಕು ಅಂದುಕೊಂಡ ಮನಸ್ಸಿನ ದ್ವಂದ್ವ, ತಾಕಲಾಟ ಅದರ ಗಂಟಲಲ್ಲೇ ಉಳಿದುಬಿಡುತ್ತದೆ. 

ಶಾಲೆಗಳಲ್ಲಿ ವರ್ಷಕ್ಕೆ ಒಮ್ಮೆಯಾದರೂ ಮಕ್ಕಳಿಗೆ ಮನೋವೈದ್ಯರಿಂದ ಆಪ್ತ ಸಲಹೆಯಂತಹ ಕಾರ್ಯಕ್ರಮಗಳನ್ನು ಯೋಜಿಸಬೇಕು.‌ ಇದರಿಂದ, ಮಗು ಯಾರ ಬಳಿಯೂ ಹೇಳಿಕೊಳ್ಳದೆ ಸ್ವತಃ ಅನುಭವಿಸುತ್ತಿರಬಹುದಾದ ಮಾನಸಿಕ ಸಂಕಟಗಳನ್ನು ವೈದ್ಯರ ಮುಂದೆ ಹೇಳಿಕೊಳ್ಳಲು ಅನುಕೂಲವಾಗುತ್ತದೆ. ಎಲ್ಲವನ್ನೂ ಗೆಳೆಯರ ಮುಂದೆ, ಶಿಕ್ಷಕರ ಮುಂದೆ ಅಥವಾ ಪೋಷಕರ ಮುಂದೆ ಹೇಳಿಕೊಳ್ಳಲಾಗದು. ಮನೋವೈದ್ಯರು ಅವರದೇ ಆದ ತಂತ್ರದ ಮೂಲಕ ಮಗುವಿನ ಮನಸ್ಸನ್ನು ತಲುಪಬಲ್ಲರು. ಆಗ ಸೂಕ್ತ ಚಿಕಿತ್ಸೆಗೆ ಅನುಕೂಲವಾಗುತ್ತದೆ. ಶಿಕ್ಷಕರೂ ಈ ಕುರಿತು ಗಮನಹರಿಸಬೇಕು. ಮಗುವಿನ ಮಾನಸಿಕ ತೊಳಲಾಟದ ಲಕ್ಷಣಗಳನ್ನು ಗುರುತಿಸಬೇಕು. ಪೋಷಕರ ಗಮನಕ್ಕೆ ತರಬೇಕು. ಮನೋವೈದ್ಯರನ್ನು ಸಂಪರ್ಕಿಸಬೇಕು. ಶಿಕ್ಷಕರನ್ನು ಈ ದಿಸೆಯಲ್ಲಿ ತರಬೇತುಗೊಳಿಸಬೇಕು.

ಆರೋಗ್ಯವಂತ ಮಗು ನಾಳೆಯ ಸಮಾಜದ ಆಸ್ತಿ. ಆರೋಗ್ಯವೆಂದರೆ ಬರೀ ದೈಹಿಕ ಕಾಯಿಲೆಗಳಿಂದ ಮುಕ್ತವಾಗಿರುವುದಲ್ಲ, ಮಾನಸಿಕವಾಗಿ, ಭಾವನಾತ್ಮಕವಾಗಿ ಸದೃಢವಾಗಿರುವುದೂ ಆಗಿರುತ್ತದೆ. ಆರೋಗ್ಯ ಎಂದರೆ ಹೀಗೇ ಅಲ್ಲವೇ ವಿಶ್ವಸಂಸ್ಥೆಯು ವ್ಯಾಖ್ಯಾನಿಸಿರುವುದು! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT