ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಈ ದುರಂತ ತಡೆಯಲಾರೆವೇ?

ಮಕ್ಕಳ ದ್ವಿಚಕ್ರ ವಾಹನದ ಆಸೆಯನ್ನು ಪೂರೈಸುವ ವೇಳೆಯಲ್ಲಿ ಹೆತ್ತವರು ಸಂಚಾರ ಸುರಕ್ಷೆಯ ಪಾಠವನ್ನೂ ಅವರಿಗೆ ಕಲಿಸಬೇಕು
Last Updated 10 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಎಷ್ಟೋ ಪೋಷಕರಿಗೆ ತಮ್ಮ ಮಗನ ಪ್ರತಿಭೆಯ ಬಗೆಗೆ, ಸಾಹಸ, ಧೈರ್ಯದ ಬಗೆಗೆ ಎಲ್ಲಿಲ್ಲದ ಆತ್ಮವಿಶ್ವಾಸವಿರುತ್ತದೆ. ‘ನನ್ನ ಮಗ ಎಷ್ಟು ಬುದ್ಧಿವಂತ ಅಂದರೆ, ಯಾರ ಕೈಯಲ್ಲೂ ಹೇಳಿಸಿಕೊಳ್ಳದೆ ಬೈಕ್ ಕಲಿತುಬಿಟ್ಟ. ಮೊನ್ನೆ ಮನೆಗೆ ನೆಂಟರು ಬಂದಿದ್ರು, ತುರ್ತಾಗಿ ಒಂದಷ್ಟು ದಿನಸಿ ಬೇಕಿತ್ತು. ಪೇಟೆಗೆ ನೂರು ಕಿಲೊಮೀಟರ್ ಸ್ಪೀಡಲ್ಲಿ ಹೋಗಿ ಅರೆಕ್ಷಣದಲ್ಲಿ ತಂದ್ಬಿಟ್ಟ’ ಎಂದು ಹೊಗಳುವ ಹೆತ್ತವರೂ ಇರುತ್ತಾರೆ.

ಹದಿಹರೆಯದ ಸಹಪಾಠಿಗಳು ಬಸ್‌ನಲ್ಲಿ ಕಾಲೇಜಿಗೆ ಹೋಗಿ ಬರುವಾಗ, ಇನ್ನೂ ಚಾಲನಾ ಪರವಾನಗಿಯನ್ನೇ ಪಡೆಯದ ತಮ್ಮ ಮಗ ಬೈಕ್ ಏರಿ ಕಾಲೇಜಿಗೆ ಹೋಗಿಬಂದ ಕತೆಯನ್ನು ಹೇಳಲು ಹೆಮ್ಮೆಪಡುತ್ತಾರೆ. ಆದರೆ ಇನ್ನೊಂದೆಡೆ ಟಿ.ವಿ ಚಾನೆಲ್‌ಗಳತ್ತ, ಪತ್ರಿಕೆಗಳ ಮೇಲೆ ಕಣ್ಣಾಡಿಸಿದರೆ, ದ್ವಿಚಕ್ರ ವಾಹನ ಸವಾರರು ಅಪಘಾತಗಳಿಗೆ ತುತ್ತಾದ ಎದೆ ಹಿಂಡುವ ಸುದ್ದಿಗಳು ಹೆಚ್ಚುಕಡಿಮೆ ದಿನನಿತ್ಯ ಕಣ್ಣಿಗೆ ಬೀಳುತ್ತವೆ.

ಸಾರಿಗೆ ಇಲಾಖೆಯ ಮಾಹಿತಿ ಪ್ರಕಾರ, 2019ರಲ್ಲಿ ರಾಜ್ಯದಲ್ಲಿ ನಡೆದ ವಾಹನ ಅಪಘಾತಗಳಲ್ಲಿ ಶೇ 37ರಷ್ಟು ದ್ವಿಚಕ್ರ ವಾಹನಗಳೇ ಭಾಗಿಯಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಿಂದ ದಿನವೊಂದಕ್ಕೆ ಸರಾಸರಿ ಮೂರು ವಾಹನ ಅಪಘಾತಗಳಾಗುತ್ತಿವೆ, ಇಬ್ಬರ ಸಾವು ಸಂಭವಿಸುತ್ತಿದೆ. 21ರಿಂದ 30ರೊಳಗಿನ ವಯೋಮಾನದವರಲ್ಲೇ ಬೈಕ್ ದುರಂತದ ಸಾವಿನ ಪ್ರಮಾಣ ಹೆಚ್ಚಾಗಿರುವುದನ್ನು ಅಂಕಿ ಅಂಶಗಳು ಎತ್ತಿ ಹಿಡಿದಿವೆ. ಹಾಗಾದರೆ ಈ ಸಾವು ಅನಿವಾರ್ಯವೇ?

ಲಲಾಟ ಲಿಖಿತವನ್ನು ಮೀರಲು ಯಾರಿಂದಲೂ ಆಗದು, ಅಪಘಾತದಲ್ಲಿ ಸಾವು ಬರಬೇಕೆಂದು ಬ್ರಹ್ಮ ಹಣೆಯಲ್ಲಿ ಬರೆದಿದ್ದರೆ ನಿಂತಲ್ಲಿಗೇ ವಾಹನ ಬಂದು ಡಿಕ್ಕಿ ಹೊಡೆಯಬಹುದು ಎಂಬ ಸ್ಮಶಾನ ವೈರಾಗ್ಯದ ವೇದಾಂತ ಹೇಳುವವರಿಗೇನೂ ಬರಗಾಲವಿಲ್ಲ. ಆದರೆ ಸಂಚಾರ ಪೊಲೀಸರ ಪ್ರಕಾರ, ವಾಹನ ದುರಂತಗಳು ಅನಿವಾರ್ಯವಲ್ಲ. ಸಾರ್ವಜನಿಕರು ಮತ್ತು ಚಾಲಕರು ಸಂಚಾರ ನಿಯಮಗಳನ್ನು ಪರಿಪಾಲಿಸಿದರೆ ಶೇ 80ರಷ್ಟು ಅಪಘಾತಗಳು ನಡೆಯುವುದೇ ಇಲ್ಲ.

ಸಿಂಗಪುರದ ರಸ್ತೆಗಳು ವಿಶ್ವಕ್ಕೇ ಮಾದರಿಯಾಗುವಷ್ಟು ಸೊಗಸಾಗಿವೆ. ಅಲ್ಲಿ ನೆಲೆಸಿರುವ ಮಿತ್ರರೊಬ್ಬರು ಹೇಳುತ್ತಾರೆ, ‘ನಮ್ಮಲ್ಲಿ ಹದಿನೆಂಟು ವರ್ಷ ತುಂಬುವ ಮೊದಲು ಹುಡುಗರು ಬೈಕ್ ಚಾಲನೆ ಮಾಡಲು ಬಿಡುವುದಿಲ್ಲ. ಅದೂ ಆ ವಯಸ್ಸಿಗೆ ನೂರು ಸಿ.ಸಿ ಬೈಕ್ ಚಾಲನೆಗೆ ಮಾತ್ರ ಅವಕಾಶ ಕೊಡುತ್ತಾರೆ. ಅದಕ್ಕಿಂತ ಹೆಚ್ಚಿನ ಶಕ್ತಿಯ ಬೈಕ್ ಓಡಿಸಲು ಹತ್ತೊಂಬತ್ತು ತುಂಬಬೇಕು. ಸೂಪರ್ ಬೈಕ್ ಓಡಿಸಲು ಅವನು ಪಡೆದ ತರಬೇತಿ, ಚಾಲನೆಯ ಕೌಶಲ ಗಮನಿಸಿ, ಇಪ್ಪತ್ತನೆಯ ವರ್ಷದ ಬಳಿಕ ಪರವಾನಗಿ ನೀಡುತ್ತಾರೆ’.

ಭಾರತದಲ್ಲಿ ಬೈಕ್ ಓಡಿಸುವುದನ್ನು ಕಲಿತುಕೊಂಡ ಮಗ ಮೊದಲು ಪಡೆಯುವುದೇ ಸೂಪರ್ ಬೈಕ್. ಅದರಲ್ಲಿ ವೇಗದ ಪರಮಾವಧಿಗೆ ತಲುಪುತ್ತಾನೆ. ಕೈಬಿಟ್ಟು ಬೈಕ್ ಓಡಿಸುತ್ತಾನೆ. ಹೆಲ್ಮೆಟ್ ಧರಿಸುವುದಿಲ್ಲ. ಪೊಲೀಸರ ಕಣ್ಣಿಗೆ ಮಣ್ಣೆರಚಲು ಕಳಪೆ ಹೆಲ್ಮೆಟ್ ಇಟ್ಟುಕೊಳ್ಳುತ್ತಾನೆ. ರಣರಂಗಕ್ಕೆ ನುಗ್ಗುವ ಹಾಗೆ ಬೈಕ್ ನುಗ್ಗಿಸುವಾಗ ಸಂಚಾರ ನಿಯಮಗಳನ್ನು ಲೆಕ್ಕಿಸುವುದಿಲ್ಲ. ಹೊಂಡ ಗುಂಡಿಗಳು ತುಂಬಿದ ರಸ್ತೆಯಲ್ಲಿ ಆತ ಶರವೇಗದಿಂದ ಬೈಕ್ ಓಡಿಸುವಾಗ ಧುತ್ತೆಂದು ಎದುರಿನಿಂದ ಬೇರೆ ವಾಹನ ಬರುತ್ತದೆ. ರಸ್ತೆಯ ಗುಂಡಿ ತಪ್ಪಿಸುವ ಯತ್ನ ಸಫಲವಾಗದೆ ಬೈಕ್ ಉರುಳುತ್ತದೆ. ಎದುರಿನ ವಾಹನ ಅವನ ಮೈಮೇಲೆಯೇ ಹಾದುಹೋಗುತ್ತದೆ. ಬಹುತೇಕ ಬೈಕ್ ದುರಂತಗಳಿಗೆ ಬೆಟ್ಟು ತೋರಿಸಿ ಹೇಳುವ ಕಾರಣ ‘ಮಿತಿ ಮೀರಿದ ವೇಗ’.

ಮಗನ ಮೇಲಿನ ಪ್ರೀತಿ ತಪ್ಪಲ್ಲ. ಆದರೆ ಅವನ ಆಸೆಯನ್ನು ಪೂರೈಸಲು ಬೈಕ್ ಕೊಡಿಸುವ ಹೆತ್ತವರು ಅವನ ಬೈಕ್ ಚಾಲನೆಯ ಪರಿಣತಿಯತ್ತ ಗಮನ ಹರಿಸಬೇಕಲ್ಲವೇ? ಚಾಲನೆಯ ಮಧ್ಯೆ ಮೊಬೈಲ್ ಹಿಡಿದು ಮಾತುಕತೆಯಾಡುತ್ತಾನೆ. ಸಂಚಾರ ನಿಯಮ ಗಳನ್ನು ಪಾಲಿಸದೆ ಪೊಲೀಸರಿಗೆ ಮೋಸ ಮಾಡಿ ಬಂದರೂ ಹೀರೊ ಅನಿಸಿಕೊಳ್ಳುತ್ತಾನೆ. ಇಂತಹ ಸಾಹಸ, ಪರಾಕ್ರಮಗಳೇ ಬದುಕಿಗೆ ಮುಳ್ಳಾಗ
ಬಹುದೆಂದು ಯಾರೂ ನಿರೀಕ್ಷಿಸಿರುವುದಿಲ್ಲ. ಆದರೆ ದುರ್ಘಟನೆಯೊಂದು ಸಹಜವಾಗಿ ಪ್ರಾಪ್ತವಾದಾಗ ಕೈಜಾರಿದ ಬದುಕನ್ನು ಮರಳಿ ಆರಿಸಿಕೊಡಲು ಯಾವ ಹೆತ್ತವರಿಂದಲೂ ಸಾಧ್ಯವಿಲ್ಲ. ವಾಹನ ಇರುವುದು ಪ್ರಯಾಣದ ಅನಿವಾರ್ಯಕ್ಕೆ. ಶೋಕಿಯ ಪ್ರದರ್ಶನ
ಕ್ಕಲ್ಲ. ಧೈರ್ಯ, ಸಾಹಸಗಳ ಪ್ರಕಟಣೆಗೂ ಅಲ್ಲ.

ಜೀವನವೆಂಬುದು ನೀರ ಮೇಲಣ ಗುಳ್ಳೆ ಎಂದು ತಿಳಿದು ಇಳಿಹರೆಯದಲ್ಲಿ ದುಃಖವೊಂದನ್ನು ತಾನಾಗಿ ಆಹ್ವಾನಿಸುವಷ್ಟು ಸ್ಥಿತಪ್ರಜ್ಞರೂ ನಾವಲ್ಲ. ಬೆಳೆಯುವ ಮಕ್ಕಳ ಬಗೆಗೆ ಒಂದಷ್ಟು ಕನಸುಗಳನ್ನು ಕಟ್ಟಿಕೊಂಡ ಜನ್ಮದಾತರು ಬದುಕಿಡೀ ಮರುಗುತ್ತ ಕೂಡುವ ಬದಲು, ಮಕ್ಕಳ ದ್ವಿಚಕ್ರ ವಾಹನದ ಆಸೆ, ಆಕಾಂಕ್ಷೆಗಳನ್ನು ಪೂರೈಸುವ ವೇಳೆಯಲ್ಲಿ ಸಂಚಾರ ಸುರಕ್ಷೆಯ ಪಾಠವನ್ನು ಕಲಿಸಬೇಕಲ್ಲವೇ?

ಯುವಕರು ಕೂಡ ‘ಸಂಚಾರದ ನಿಯಮಗಳಿಗೆ ಅನುಗುಣವಾಗಿ ನಾವು ಇರುತ್ತೇವೆ’ ಎನ್ನುವ ಪ್ರತಿಜ್ಞೆಗೆ ಬದ್ಧರಾಗುವುದು ಕೂಡ ರಾಷ್ಟ್ರಭಕ್ತಿಯ ಒಂದು ಕೊಡುಗೆ ಎಂದು ತಿಳಿಯಬೇಕು. ಅಪಘಾತ ಎಂದಿಗೂ ತಪ್ಪಿಸಲಾಗದ ವಿಧಿಲಿಖಿತವಲ್ಲ ಎನ್ನುವ ಪ್ರಜ್ಞೆ
ನಮ್ಮಲ್ಲಿದ್ದರೆ, ಚಾಲನೆಯ ಕಾಲದಲ್ಲಿ ತಾನಾಗಿ ಜಾಗೃತಿ ಮೂಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT