ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಳವು: ಘೋರ ಪಾತಕ

Last Updated 15 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ಪ್ರತಿವರ್ಷ 1.35 ಲಕ್ಷ ಮಕ್ಕಳು ಕಾಣೆಯಾಗುತ್ತಿದ್ದಾರೆ ಎಂದು ಒಂದು ವರದಿ ಹೇಳುತ್ತದೆ. ಮಕ್ಕಳ ಅಪಹರಣ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಇನ್ನೊಂದು ವರದಿ ಹೇಳುತ್ತದೆ. ಇದು, ದೇಶ ನಾಚಿಕೆಪಡಬೇಕಾದ ವಿಷಯವಷ್ಟೇ ಅಲ್ಲ, ಇಡೀ ಸಮಾಜಕ್ಕೆ ಆಗುವ ದೊಡ್ಡ ನಷ್ಟ ಎಂದು ಪ್ರಜೆಗಳು ಮತ್ತು ಸರ್ಕಾರ ಕಂಡುಕೊಂಡಂತೆ ತೋರುವುದಿಲ್ಲ. ಇದು, ಮಗುವನ್ನು ಹೆತ್ತ ತಾಯಿ–ತಂದೆಯರಿಗೆ ಮಾತ್ರವಲ್ಲ, ದೇಶಕ್ಕೆ ಆಗುವ ನಷ್ಟ ಎನ್ನುವುದನ್ನು ಆಕಾಶವಾಣಿ, ಟಿ.ವಿ., ಪತ್ರಿಕೆ ಮುಂತಾದ ಮಾಧ್ಯಮಗಳು ಪ್ರಚುರಪಡಿಸಬೇಕು. ಹೇಗೆ ನಷ್ಟ ಎಂಬುದನ್ನು ಶಾಲೆ– ಕಾಲೇಜುಗಳಲ್ಲಿ ಕಲಿಸುತ್ತಿರುವ ಶಿಕ್ಷಕರು ಮತ್ತು ಓದುತ್ತಿರುವ ಹಿರಿಯ ಮಕ್ಕಳು, ಇತರ ಮಕ್ಕಳಿಗೆ ತಿಳಿಸಬೇಕು.

ಯಾವ್ಯಾವ ಆಮಿಷಗಳನ್ನು ಒಡ್ಡಿ ಮಕ್ಕಳನ್ನು ಅಪಹರಿಸಲಾಗುತ್ತದೆ. ಅಪಹೃತ ಮಕ್ಕಳನ್ನು ಹೇಗೆ ಮತ್ತು ಎಲ್ಲೆಲ್ಲಿ ಯಾವ್ಯಾವ ಉದ್ದೇಶ ಮತ್ತು ಕೆಲಸಗಳಿಗೆ ಬಳಸಲಾಗುತ್ತದೆ, ಚಿಕ್ಕ ಮಕ್ಕಳನ್ನು ಮಾತ್ರವಲ್ಲ, ಎಳೆ ಹರೆಯದ ಬಾಲಕ– ಬಾಲಕಿಯರನ್ನು ಕೂಡ ಬಲವಂತವಾಗಿ ಎತ್ತಿ ತಮ್ಮ ವಾಹನದೊಳಗೆ ಹಾಕಿಕೊಂಡು ಹೋಗುತ್ತಾರೆ. ಈ ಕ್ರಿಮಿನಲ್‌ಗಳು ಮಕ್ಕಳನ್ನು ಏನು ಮಾಡುತ್ತಾರೆ, ಅವರನ್ನು ಯಾವ್ಯಾವ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಅಲ್ಲಿ ಇಲ್ಲಿ, ಕೆಲವೇ ಮಂದಿಗೆ ಚೂರುಪಾರು ತಿಳಿದಿರುತ್ತದೆ.

ಕ್ರಿಮಿನಲ್‌ಗಳು ಮಕ್ಕಳ ಕೈ ಕಾಲು ಕತ್ತರಿಸಿ ಭಿಕ್ಷೆಗೆ ಹಚ್ಚಿ ಆ ಮೂಲಕ ಹಣ ಗಳಿಸುತ್ತಾರೆ. ಬಾಲಕರನ್ನು ಹೋಟೆಲ್‌, ಅಂಗಡಿಯಂಥ ಜಾಗಗಳಲ್ಲಿ ದುಡಿತಕ್ಕೆ ಒಡ್ಡುತ್ತಾರೆ. ಅವರ ದುಡಿತದ ಸಂಪಾದನೆಯನ್ನು ಮಾಲೀಕನಿಂದ ತೆಗೆದುಕೊಳ್ಳುತ್ತಾರೆ. ಮಕ್ಕಳನ್ನು ಬೇರೆ ಊರುಗಳಿಗೆ, ವೇಶ್ಯಾವಾಟಿಕೆಗಳಿಗೆ, ಬೇರೆ ದೇಶಗಳಿಗೆ ಮಾರಾಟ ಮಾಡುವುದೂ ನಡೆಯುತ್ತದೆ. ಈ ಎಲ್ಲ ಪಾತಕಗಳ ಬಗ್ಗೆ ಜನಜಾಗೃತಿ ಉಂಟು ಮಾಡಲು ಸಮಾಜದಲ್ಲಿ ಎಲ್ಲರಿಗೂ ತಿಳಿಸುವುದು ಹೇಗೆ, ಎಲ್ಲರಲ್ಲಿಯೂ ಅರಿವು ಮೂಡಿಸುವುದು ಹೇಗೆ ಎಂಬ ಬಗ್ಗೆ ಲೇಖಕರು, ಪತ್ರಕರ್ತರು, ಶಿಕ್ಷಕರು ಮತ್ತು ವಿದ್ಯಾವಂತರಾದ ಎಲ್ಲಾ ತಾಯಿತಂದೆಯರೂ ಗಂಭೀರವಾಗಿ ವಿಚಾರ ಮಾಡಿ, ಚರ್ಚಿಸಿ ಸಮಾಜದಲ್ಲಿ ಅರಿವು ಮೂಡಿಸಬೇಕು. ಯಾವುದೇ ಹೆತ್ತವರಿಗೆ ಆದ ನೋವು, ಯಾವುದೇ ಮಗುವಿಗೆ ಆದ ಅನ್ಯಾಯ ತನಗೇ ಆದ ಅನ್ಯಾಯ ಎಂದು ಭಾವಿಸುವ ಸಂವೇದನಾಶೀಲತೆ ಎಲ್ಲರಲ್ಲಿಯೂ ಉಂಟಾಗುವಂತೆ ಮಾಡಬೇಕು.

ಇಂಥ ವಿಚಾರಗಳನ್ನು ನೇರ ನುಡಿಯಲ್ಲಿ ಪತ್ರಿಕೆ, ಆಕಾಶವಾಣಿ, ಟಿ.ವಿ. ಮಾಧ್ಯಮಗಳಲ್ಲಿ ಗಂಭೀರವಾಗಿ ಸಾರಬೇಕು. ಇಂಥ ಗಂಭೀರವಾದ ವಿಚಾರವನ್ನು ಜಾಹೀರಾತು ಶೈಲಿಯಲ್ಲಿ ಹಾಡಿನ ಮೂಲಕ ಹೇಳುವುದು ಸರಿಯಲ್ಲ; ಹಾಗೆ ಸಾರುವುದು ಸಂದೇಶದ ತೀವ್ರತೆಯನ್ನು ದುರ್ಬಲಗೊಳಿಸುತ್ತದೆ. ಮಾತ್ರವಲ್ಲ, ‘ಇದು ನಮ್ಮ ಸಮಸ್ಯೆಯಲ್ಲ’ ಎಂದು ಭಾವಿಸಿ ಉಪೇಕ್ಷೆಯಿಂದಿರುವಂತೆ ಮಾಡುತ್ತದೆ.

ಹೆಣ್ಣು ಭ್ರೂಣ ಹತ್ಯೆ ಎಂಬ ದುಷ್ಕೃತ್ಯದ ತಡೆಗೆ ಹೆಚ್ಚು ಒತ್ತು ಕೊಟ್ಟಿರುವ ಸರ್ಕಾರ, ಮಕ್ಕಳ ಕಳವು ತಡೆಗೆ ಅಷ್ಟು ಪ್ರಾಧಾನ್ಯವನ್ನು ನೀಡಿದಂತೆ ತೋರುವುದಿಲ್ಲ. ವಾಸ್ತವದಲ್ಲಿ, ಮಕ್ಕಳ ಕಳವು ಭ್ರೂಣಹತ್ಯೆಗಿಂತಲೂ ಘೋರವಾದ ಅಪರಾಧ. ಭ್ರೂಣಹತ್ಯೆಯಲ್ಲಿ ಮಗುವಿನ ತಾಯಿ– ತಂದೆಯರದೇ ಮುಖ್ಯ ಪಾತ್ರ. ಭಾಗಶಃ ಕುಟುಂಬ ಯೋಜನೆ ಎಂಬ ಪ್ರಕ್ರಿಯೆ ಕೂಡ ಕಾರಣ. ಕೆಲವು ಸಂದರ್ಭಗಳಲ್ಲಿ ಹೆತ್ತ ನಂತರ, ಆ ಮಗು ಆಗಷ್ಟೇ ಹುಟ್ಟಿದ್ದಾಗಿರಲಿ, ಬೆಳೆದು ದೊಡ್ಡದಾಗಿರುವುದೇ ಆಗಿರಲಿ, ಅದನ್ನು ಕಳೆದುಕೊಳ್ಳುವುದು ಹೆತ್ತ ಮಹಿಳೆಯ ಕರುಳನ್ನು ನಿರಂತರವಾಗಿ ಕೊರೆಯುವ ಮತ್ತು ಮಾನಸಿಕ ಕ್ಲೇಶದಿಂದ ಕಾಯಿಲೆಗೆ ಗುರಿಮಾಡುವ ವೇದನೆಯಾಗಿರುತ್ತದೆ.

ಸಾಮಾನ್ಯವಾಗಿ ಮಕ್ಕಳ ಅಪಹರಣವಾಗುವುದು ಆಸ್ಪತ್ರೆಗಳಲ್ಲಿ, ಪಾರ್ಕುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿಯಾದರೂ ಕೆಲವು ಅಪಹರಣಗಳಿಗೆ ಮಕ್ಕಳ ಹೆತ್ತವರ ಬೇಜವಾಬ್ದಾರಿಯೂ ಕಾರಣವಾಗಿರುತ್ತದೆ. ಇಂಥ ಬೇಜವಾಬ್ದಾರಿತನಕ್ಕೆ ಕೂಡ ಯಾವುದಾದರೊಂದು ಶಿಕ್ಷೆ ಅಥವಾ ದಂಡ ವಿಧಿಸಲು ಸಾಧ್ಯವೇ ಎಂದು ಸರ್ಕಾರ ಯೋಚಿಸಬೇಕು. ಮಕ್ಕಳ ಅಪಹರಣವನ್ನು ತಡೆಗಟ್ಟಲು ಮಕ್ಕಳ ಮೇಲೆ ನಿಗಾ ಇರಿಸುವ ವ್ಯವಸ್ಥೆ ಮಾಡಬೇಕಾದ ಅಗತ್ಯ ಇದೆ ಎಂಬ ಅರಿವು ಸಮಾಜದಲ್ಲಿ ಇರಬೇಕು.

ಮಗುವನ್ನು ಅಪಹರಿಸಿ ಅಥವಾ ಎಳೆಹರೆಯದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಶವವನ್ನು ಕತ್ತರಿಸಿ ಎಸೆದು ಹೋದ ಪ್ರಸಂಗ ದೇಶದಲ್ಲಿ ನೂರಾರು ಕಡೆ ನಡೆದಿದೆ. ಇಂಥ ಸಂದರ್ಭದಲ್ಲಿ ಪಾತಕಿಯ ಪತ್ತೆಯಾಗುವುದು ಬಹಳ ಕಡಿಮೆ; ಬಹುತೇಕ ಇಲ್ಲವೆಂದೇ ಹೇಳಬಹುದು.

ಮಕ್ಕಳ ಜೊತೆ ಪ್ರಯಾಣ ಮಾಡುವವರು ಒಂದು ವಿಚಾರವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ‘ಸ್ವಲ್ಪ ನೋಡಿಕೊಳ್ಳಿ’ ಎಂದು ಒಂದೆರಡು ನಿಮಿಷಕ್ಕೆ ಯಾವುದೋ ಹೆಂಗಸಿನ ಕೈಗೆ ಮಗುವನ್ನು ಕೊಟ್ಟು ಹೋಗುವುದು ಅಪಾಯಕಾರಿ. ಬಸ್ ಅಥವಾ ರೈಲಿನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ತಾಯಿಯ ಜೊತೆಯಲ್ಲಿರುವ ಮಗುವಿನ ಕಳವು ಆಗುವುದಕ್ಕೆ ತಾಯಿ ಮಗುವಿನ ಮೇಲೆ ನಿಗಾ ಇಡದಿರುವುದೇ ಕಾರಣವಾಗಿರುತ್ತದೆ. ಪ್ರಯಾಣ ಕಾಲದಲ್ಲಿ ಯಾವುದೇ ಮಹಿಳೆ ಮಗುವನ್ನು ಮಡಿಲಲ್ಲಿಟ್ಟು ಅಥವಾ ಪಕ್ಕದಲ್ಲಿಟ್ಟು ನಿದ್ದೆ ಹೋಗಬಾರದು.

ಆಸ್ಪತ್ರೆಗಳಲ್ಲಿ ಸದ್ದಿಲ್ಲದೆ ಕೋಣೆಯೊಳಗೆ ಬಂದು ತಾಯಿಯ ಪಕ್ಕದಲ್ಲಿರುವ ಮಗುವನ್ನು ಕಳವು ಮಾಡುವುದು ಎಷ್ಟೋ ಕಡೆ ನಡೆದಿದೆ. ಈಗ ಆ ಬಗೆಯ ಕಳವು ನಡೆಯುತ್ತಿಲ್ಲ, ಆಸ್ಪತ್ರೆಯ ಸಿಬ್ಬಂದಿ ಎಚ್ಚರಿಕೆ ವಹಿಸುತ್ತಾರೆ ಎಂದು ಹೇಳಲಾಗುತ್ತದೆ. ಅದೇನಿದ್ದರೂ ಮಗುವಿನ ತಾಯಂದಿರು ಬಾಗಿಲು ಇಲ್ಲದ ಕೋಣೆಯಲ್ಲಿ, ಕಾವಲು ಇಲ್ಲದ ಜಾಗದಲ್ಲಿ ನಿದ್ದೆ ಹೋಗದಿರುವುದೇ ಒಳ್ಳೆಯದು. ಇಂಥ ಹಲವಾರು ವಿಚಾರಗಳನ್ನು ಎಲ್ಲಾ ತಾಯಂದಿರೂ ಮನನ ಮಾಡಿಕೊಳ್ಳಬೇಕು. ‘ನನ್ನ ಮಗು, ನನ್ನ ಜವಾಬ್ದಾರಿ’ ಎಂಬ ಅರಿವು ಮತ್ತು ಎಚ್ಚರ ತಾಯಿಯಾಗಿರುವಾಕೆಗೆ ಇರಲೇಬೇಕು. ಮಗುವಿನ ರಕ್ಷಣೆಯ ಮೇಲೆ ತಾಯಿಗಿರುವಂಥ ಪ್ರೀತಿ ಬೇರೆ ಎಲ್ಲಿಯೂ ಇಲ್ಲ.

ಅಷ್ಟೇ ಮುಖ್ಯವಾದ ಇನ್ನೊಂದು ವಿಚಾರ: ಎಲ್ಲಿ ಮಗುವಿನ ಕಳವಿಗೆ ಆಸ್ಪದ ಇದೆಯೋ ಅಲ್ಲೆಲ್ಲ ತಾಯಿ ಮನಸ್ಸಿನ ಪೊಲೀಸರು ಸದಾ ಜಾಗೃತರಾಗಿರಬೇಕು. ಮಗುವನ್ನು ಕಳವು ಮಾಡಿ ಮಾರಾಟ ಮಾಡಿದ, ಏನೇನೋ ಕೆಲಸಕ್ಕೆ ಬಳಸಿಕೊಂಡ ಅಪರಾಧಕ್ಕೆ ಅಪರಾಧಿಗೆ ಮರಣ ದಂಡನೆಯೇ ಶಿಕ್ಷೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT