ಭಾನುವಾರ, ಆಗಸ್ಟ್ 1, 2021
27 °C

ಚುರುಮುರಿ | ನೊಂದಕಾಳೂರು

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

ಕೊರೊನಾಗೆ ಹೆದರಿ ಬೆಂಗಳೂರಿನ ಮನೆ ಖಾಲಿ ಮಾಡಿಕೊಂಡು, ಹೆಂಡ್ತಿ-ಮಕ್ಕಳ ಜೊತೆ ಲಗೇಜ್ ತುಂಬಿಕೊಂಡು ಶಂಕ್ರಿ ತನ್ನ ಹಳ್ಳಿಗೆ ಹೊರಟಿದ್ದ.

‘ಬಡಪಾಯಿ ಬೆಂಗಳೂರು ನಿಮಗೆ ಬೇಡವಾಯಿತೇ?’

‘ಕೊರೊನಾ ಕಾಟದಲ್ಲಿ ಉದ್ಯೋಗವಿಲ್ಲ, ವ್ಯವಹಾರವಿಲ್ಲ, ದಿನಬೆಳಗಾದರೆ ಏರಿಯಾಏರಿಯಾಗಳು ಸೀಲ್‍ಡೌನ್ ಆಗ್ತಿವೆ. ಇನ್ನೇನು ಮಾಡೋದು, ಕೆಟ್ಟು ಪಟ್ಟಣ ಸೇರಿದ್ದೆ, ಈಗ ಕಂಗೆಟ್ಟು ವಾಪಸ್ ಹಳ್ಳಿ ಸೇರ್ತಿದ್ದೀನಿ’ ನಿಷ್ಠುರವಾಗೇ ಹೇಳಿದ ಶಂಕ್ರಿ.

‘ಬೆಂಗಳೂರು ಮೊದಲಿನಂತಿಲ್ಲ, ಮಾಲು ಮಳಿಗೆಯಲ್ಲಿ ವ್ಯವಹಾರವಿಲ್ಲ, ಸಿನಿಮಾ ಥಿಯೇಟರ್‌ಗಳಿಲ್ಲ, ಯಾವ ಸಡಗರಕ್ಕೆ ಈ ಊರಲ್ಲಿ ಇರಬೇಕು?’ ಶಂಕ್ರಿ ಹೆಂಡ್ತಿ ಸುಮಿಗೂ ಬೇಸರ.

‘ದುಡಿಮೆ ಇಲ್ಲ, ಸಾಲದ್ದಕ್ಕೆ ಮನೆ ಬಾಡಿಗೆ ದುಬಾರಿ, ಮಕ್ಕಳ ಸ್ಕೂಲ್ ಫೀಸು ರಾಬರಿ, ಜೀವನ ಗಾಬರಿ ಅಂತ ಬೆಂಗಳೂರು ಬಿಡ್ತಿದ್ದೀರಾ?’

‘ಹೌದು, ಕೆಂಪೇಗೌಡರು ಕಟ್ಟಿಸಿದ ಬೆಂಗಳೂರಲ್ಲಿ ಕೊರೊನಾ ವಕ್ಕರಿಸಿ ಉಸಿರುಕಟ್ಟಿಸುತ್ತಿದೆ’ ಅಂದ ಶಂಕ್ರಿ.

‘ಇಷ್ಟು ದಿನ ಬದುಕು ಕೊಟ್ಟ ಬೆಂದಕಾಳೂರು ಈಗ ನೊಂದಕಾಳೂರು ಆಗಿಬಿಟ್ಟಿತಲ್ಲಾ ಅಂತ ನಮಗೂ ನೋವಿದೆ’ ಸುಮಿಗೆ ಸಂಕಟ.

‘ಬೆಂಗಳೂರಿನಲ್ಲಿ ಈಗ ಯಾರ ಬೇಳೆಯೂ ಬೇಯುತ್ತಿಲ್ಲ. ಸಿನಿಮಾ ನಟರ ಕಟೌಟ್ ರಾರಾಜಿಸುತ್ತಿಲ್ಲ. ಹೋರಾಟಗಾರರು ಮನೆಯಿಂದ ಹೊರಬರುತ್ತಿಲ್ಲ. ರಾಜಕಾರಣಿಗಳು ಶಕ್ತಿಪ್ರದರ್ಶನದ ಸಮಾವೇಶ ಏರ್ಪಡಿಸಿ ಟ್ರಾಫಿಕ್ ಜಾಮ್ ಮಾಡ್ತಿಲ್ಲ. ಹಿಂದಿನಂತೆ ದುಡ್ಡು-ದೌಲತ್ತು ಇಲ್ಲ. ಈ ಸಮಸ್ಯೆಗಳು ನಿವಾರಣೆಯಾಗುವವರೆಗೂ ಇತ್ತ ತಲೆ ಹಾಕುವುದಿಲ್ಲ’ ಅಂದ ಶಂಕ್ರಿ.

‘ಸರಿ ಹಾಗಾದ್ರೆ... ಬೆಂಗಳೂರಿನಿಂದ ಬರುವವರು ಕೊರೊನಾ ತರ್ತಾರೆ, ಊರಿಗೆ ಬಿಟ್ಟುಕೊಳ್ಳೋದಿಲ್ಲ ಅಂತ ಹಳ್ಳಿ ಹಳ್ಳಿಗಳಲ್ಲಿ ರಸ್ತೆಗೆ ಬೇಲಿ ಹಾಕಿದ್ದಾರಂತೆ... ನಿಮ್ಮನ್ನು ಊರಿಗೆ ಸೇರಿಸ್ತಾರೋ ಇಲ್ವೋ ಯೋಚ್ನೆ ಮಾಡಿದ್ದೀರಾ?’

ಈ ಬಗ್ಗೆ ಯೋಚನೆಯನ್ನೇ ಮಾಡಿರದಿದ್ದ ಶಂಕ್ರಿ– ಸುಮಿ ಮುಖಮುಖ ನೋಡಿಕೊಂಡು ಪೆಚ್ಚಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು