ಆಸೆ, ಆಮಿಷ, ತಾಮಸ, ಹುಸಿ, ವಿಷಯ,

ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ

ಇವನೆನ್ನ ನಾಲಿಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ... ಕೂಡಲಸಂಗಮದೇವಾ

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ನುಡಿ ಮಹೋನ್ನತಿಯ ಕುರಿತು ಹೇಳಿದ ಮಾತಿದು. ಮಾತು ವ್ಯಕ್ತಿತ್ವದ ಪ್ರತಿಬಿಂಬ. ವ್ಯಕ್ತಿ ಬೆಳೆದುಬಂದ ಸಮಾಜೋ-ಆರ್ಥಿಕ ಪರಿಸರ, ನಂಬಿಕೊಂಡು ಬಂದಿರುವ ಸಿದ್ಧಾಂತ ಮತ್ತು ಅವರಿಗೆ ದಕ್ಕಿದ ಸಂಸ್ಕಾರದಿಂದ ಮಾತುಗಳು ಒಡಮೂಡುತ್ತವೆ. ಆದ್ದರಿಂದಲೇ ಅವು ಮನಸ್ಸಿನ ಕನ್ನಡಿಗಳು.

ಬಸವಣ್ಣನವರು ಕೂಡಲಸಂಗಯ್ಯನಲ್ಲಿ ‘ಆಸೆ ಆಮಿಷಾದಿ ನೀಚ ಗುಣಗಳೇ ನಮ್ಮ ನಾಲಿಗೆಯನ್ನು ನಿರ್ವಹಿಸುತ್ತವೆ. ಆದ್ದರಿಂದ ಆ ಎಲ್ಲ ದುಷ್ಟ ಗುಣಗಳನ್ನು ನನ್ನ ಮನಸ್ಸಿನಿಂದ ತೆಗೆದುಹಾಕಬೇಕು’ ಎಂದು ಸಂಗಯ್ಯನಲ್ಲಿ ಅರ್ಥಾತ್ ತಮ್ಮ ಅಂತಃಸಾಕ್ಷಿಗೆ ಮೊರೆ ಹೋಗುತ್ತಾರೆ. ಮನಸ್ಸಿನಲ್ಲಿರುವ ಕುಟಿಲ, ಕುಹಕ ಭಾವನೆಗಳು ಲಯವಾದರೆ ಆಡುವ ಮಾತು ತನ್ನಷ್ಟಕ್ಕೆ ಮೌಲಿಕವಾಗುತ್ತದೆ. ಇಲ್ಲವಾದರೆ ಯಥಾ ಭಾವ ತಥಾ ಭಾಷೆ. ಇದನ್ನು ನಮ್ಮ ರಾಜಕೀಯ ನಾಯಕರು ಸದನಗಳಲ್ಲಿ ತೋರ್ಪಡಿಸುತ್ತಿದ್ದಾರೆ.

ಕರ್ನಾಟಕದ ಮೇಲ್ಮನೆ ಸದಸ್ಯರೊಬ್ಬರು ಸಚಿವೆಯೊಬ್ಬರನ್ನು ಉದ್ದೇಶಿಸಿ ಆಡಿದರು ಎನ್ನಲಾದ ಮಾತುಗಳು ಈಗ ವಿವಾದಕ್ಕೆ ಕಾರಣವಾಗಿವೆ. ಸಾರ್ವಜನಿಕ ಸ್ಥಳದಲ್ಲಿ ಜನಸಾಮಾನ್ಯರು ಸಹ ಆಡಲು ಹಿಂದೆ ಮುಂದೆ ನೋಡುವಂತಹ ಪದಗಳನ್ನು ಶಾಸಕರೊಬ್ಬರು ತಮ್ಮ ಸಹೋದ್ಯೋಗಿಗೆ ಸ್ವಲ್ಪವೂ ಅಳುಕಿಲ್ಲದೆ ಬಳಸುತ್ತಾರೆ, ಅದೂ ಚಿಂತಕರ ಚಾವಡಿ ಎಂದು ಖ್ಯಾತಿವೆತ್ತ ಮೇಲ್ಮನೆಯಲ್ಲಿ ಎನ್ನುವುದು ನಿಜವೇ ಆಗಿದ್ದರೆ, ಸಮಕಾಲೀನ ರಾಜಕಾರಣ ಅದೆಷ್ಟು ಪ್ರಪಾತಕ್ಕೆ ಕುಸಿದಿದೆ ಎಂಬುದನ್ನು ಗಮನಿಸಬೇಕು.

ಮಹಿಳೆಯರು ರಾಜಕೀಯದಲ್ಲಿ ಸ್ವಲ್ಪವೇ ಮೇಲೇರುತ್ತಿದ್ದಾರೆ ಎನಿಸಿದರೆ ಸಾಕು, ಪುರುಷ ಸಂಗಾತಿಗಳು ಮೊದಲು ಆಕೆಯ ಚಾರಿತ್ರ್ಯಹರಣ ಮಾಡಲು ಮುಂದಾಗುತ್ತಾರೆ. ಲಿಂಗಸಂವೇದನೆಯುಳ್ಳ ಕೆಲವು ಪಕ್ಷಗಳ ಸದಸ್ಯರನ್ನು ಹೊರತುಪಡಿಸಿದರೆ ಬಹುತೇಕ ಪಕ್ಷಗಳ ಅನೇಕರು ಮಹಿಳೆಯರ ಕುರಿತು ಅವಾಚ್ಯವಾಗಿ ಮಾತನಾಡುತ್ತಾರೆ.

ನಾವು ಕೆಲವು ಗೆಳತಿಯರು ಒಮ್ಮೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆವು. ನಮ್ಮ ಮಂದೆ ಕುಳಿತಿದ್ದ ಪಡ್ಡೆ ಹುಡುಗರಿಬ್ಬರು ಪರಸ್ಪರ ಬೈದಾಡುತ್ತ, ತಾಯಿ, ಅಕ್ಕ, ತಂಗಿ ಪದಗಳನ್ನು ಬಳಸಿ ತೀರಾ ಅಸಭ್ಯವಾಗಿ ಮಾತನಾಡುತ್ತಿದ್ದರು. ತಕ್ಷಣ ಜಾಗೃತರಾದ ನಾವು ಅವರನ್ನು ಹಿಡಿದು ತರಾಟೆಗೆ ತೆಗೆದುಕೊಂಡೆವು. ಉದ್ಧಟನೊಬ್ಬ ತಿರುಗಿಬಿದ್ದು ‘ನಮ್ಮವ್ವ, ನಮ್ಮ ಅಕ್ಕತಂಗಿಯರಿಗಿ ನಾವು ಬೈತೀವಿ. ನಾವೇನು ನಿಮಗ್ ಬೈದೀವೇನ್ರಿ’ ಎಂದು ಎದೆಸೆಟೆಸಿ ನಿಂತ. ಇದರಿಂದ ಕನಲಿದ ನಾವು ‘ಏ ಮೂರ್ಖ, ಯಾವುದೇ ಮಹಿಳೆಯರಿಗೆ ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಹೀಗೆ ಬೈಯುವಂತಿಲ್ಲ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿ ಒದ್ದು ಒಳಹಾಕಬೇಕಾಗುತ್ತದೆ ನೋಡು’ ಎಂದು ದಬಾಯಿಸಿದೊಡನೆ ಆತ ತಾನು ಬಳಸಿದ ಅಸಭ್ಯ ಪದಗಳಿಗೆ ನಾಚಿಕೆಪಟ್ಟು ಕ್ಷಮೆ ಕೇಳಿದ. ಜೊತೆಗೆ, ಇನ್ನೆಂದೂ ಹೀಗೆ ಮಹಿಳೆಯರನ್ನು ಅವಾಚ್ಯವಾಗಿ ಬೈಯುವುದಿಲ್ಲ ಎಂದು ಭರವಸೆ ನೀಡಿದ. ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರು ಆ ಹುಡುಗರಿಗೆ ಛೀಮಾರಿ ಹಾಕಿದರು. ಅಲ್ಲಿದ್ದ ಎಲ್ಲರಲ್ಲಿಯೂ ನಾಗರಿಕ ಪ್ರಜ್ಞೆಯೊಂದು ಜಾಗೃತವಾಗಿತ್ತು. ಹೀಗೆ ಎಲ್ಲರೂ ನಮ್ಮೊಂದಿಗೆ ಧ್ವನಿ ಗೂಡಿಸಿದ್ದರಿಂದಲೇ ಆ ಹುಡುಗರಿಗೆ ತಾವು ತಪ್ಪು ಮಾಡಿದ್ದೇವೆ ಎನಿಸಿತ್ತು.

ಸಾಮಾಜಿಕ ಜಾಲತಾಣದಲ್ಲಿ ಕೆಲವು ಪಡ್ಡೆ ಹುಡುಗರು ಮಹಿಳೆಯರ ಕುರಿತು ಬಳಸುತ್ತಿರುವ ಭಾಷೆ ಅದೆಷ್ಟು ಅಸಭ್ಯ ಮತ್ತು ಅಪಾಯಕಾರಿಯಾಗಿದೆ ಎಂದರೆ, ಇದೀಗ ಯಾರ ಮನೆಯ ಮಹಿಳೆಯರೂ ಸುರಕ್ಷಿತವಾಗಿಲ್ಲ ಎಂದೇ ಹೇಳಬೇಕಾಗುತ್ತದೆ. ಕೋಮುದ್ವೇಷದ ದಳ್ಳುರಿಯು ದೇಶದ ಆತ್ಮಪ್ರಜ್ಞೆಯನ್ನು ಸರ್ವನಾಶ ಮಾಡಿದೆ. ಅಸಭ್ಯ, ವಿಕೃತ ಭಾಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗುತ್ತಿದೆ. ತಮ್ಮನ್ನು ಹಾಗೂ ತಮ್ಮ ನಾಯಕರನ್ನು ಅತ್ಯಂತ ಸಮರ್ಥರು ಎಂದು ಬಿಂಬಿಸಿಕೊಳ್ಳುತ್ತಿರುವ ಈ ಫೇಸ್ಬುಕ್ ಶೂರರು, ಮಹಿಳೆಯರ ಬಗೆಗಿನ ತಮ್ಮ ವಿಕೃತ ಲೈಂಗಿಕ ಚಟಗಳನ್ನು ತೀರಿಸಿಕೊಳ್ಳುತ್ತಿದ್ದಾರೆ. ಪದೇಪದೇ ನಡೆಯುತ್ತಿರುವ ಇಂತಹ ಪ್ರಕರಣಗಳು ದೇಶದ ಯುವಕರು ವಿಕೃತಿ ಮೆರೆಯಲು ದಾರಿ ಮಾಡಿಕೊಡುತ್ತಿವೆ.

ಸಾಮಾನ್ಯ ಹುಡುಗರನ್ನು ಕಾನೂನಿನ ಭಯದಿಂದ ನಿಯಂತ್ರಿಸಬಹುದು. ಆದರೆ ಶಾಸನಗಳನ್ನು ರೂಪಿಸಬೇಕಾದ ನಾಯಕರೇ ತೋಪೆದ್ದು ಹೋಗಿರುವಾಗ ಇಂಥ ದುಷ್ಟರನ್ನು ಯಾವ ಕಾನೂನು ಏನು ಮಾಡೀತು? ದೇಶ ಈಗ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ. ಜನರ ಸಾಂಸ್ಕೃತಿಕ ಮಟ್ಟ ಪಾತಾಳಕ್ಕೆ ಕುಸಿದಿದೆ. ನಾಗರಿಕ ಪ್ರಜ್ಞೆ ನಿರ್ನಾಮವಾಗಿದೆ. ಜೈಲಿನಲ್ಲಿ ಇರಬೇಕಾದ ಗೂಂಡಾಗಳು, ಅತ್ಯಾಚಾರ ಆರೋಪ ಹೊತ್ತವರು, ರಾಷ್ಟ್ರದ್ರೋಹಿಗಳು ಶಾಸನಸಭೆಗಳಲ್ಲಿ ಕುಳಿತಿದ್ದಾರೆ. ಅವರನ್ನು ನಿಯಂತ್ರಿಸುವುದು ಅಷ್ಟು ಸುಲಭವೇ? ಅನೇಕ ಮೌಲಿಕ ರಾಜಕಾರಣಿಗಳು ಇವರ ನಡುವೆ ಮೂಲೆಗುಂಪಾಗಿದ್ದಾರೆ.

ಭಾಷೆಯು ಸಮಕಾಲೀನ ರಾಜಕಾರಣದಲ್ಲಿ ದುರ್ಬಳಕೆಯಾಗುತ್ತಿರುವಷ್ಟು ಇನ್ನೆಲ್ಲಿಯೂ ಆಗುತ್ತಿಲ್ಲ. ಹೀಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವವರು ಈಗ ಅಪಾಯದ ಹಂತವನ್ನು ಮೀರಿದ್ದಾರೆ. ದೇಶದ ನುಡಿಗೆ ಸೂತಕ ಸುತ್ತುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.