ಮಂಗಳವಾರ, ಆಗಸ್ಟ್ 3, 2021
24 °C
ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳ ಕೆಳ ಹಂತದ ಹುದ್ದೆಗಳನ್ನು ಆಯಾ ಭಾಷಾ ಪ್ರದೇಶದವರಿಗೇ ಮೀಸಲಿರಿಸಿದಾಗ ಮಾತ್ರ ಸ್ಥಳೀಯರಿಗೆ ಉದ್ಯೋಗ ದೊರೆಯಲು ಸಾಧ್ಯ

ಸಂಗತ: ಕನ್ನಡದಲ್ಲಿ ‘ಸ್ಪರ್ಧಾತ್ಮಕ’ ಬೇಡಿಕೆ

ಡಿ.ಎಸ್.ರಾಮಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ರಾಷ್ಟ್ರೀಕೃತ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳಲ್ಲೂ ಕನ್ನಡದಲ್ಲಿ ಪ್ರಶ್ನೋತ್ತರ ಇರಬೇಕೆಂಬ ಕೂಗು ಎದ್ದಿದೆ. ಕನ್ನಡಪರ ಸಂಘಟನೆಗಳೂ ರಾಜಕಾರಣಿಗಳೂ ಇದಕ್ಕೆ ದನಿಗೂಡಿಸಿದ್ದಾರೆ. ಸದ್ಯಕ್ಕೆ ಕೇಂದ್ರ ಸರ್ಕಾರವು ಪರೀಕ್ಷಾ ಪ್ರಕ್ರಿಯೆಗೆ ತಡೆಯೊಡ್ಡಿದ್ದು, ಈ ಸಂಬಂಧ ರಚಿಸಿರುವ ಪರಿಶೀಲನಾ ಸಮಿತಿಗೆ 15 ದಿನಗಳಲ್ಲಿ ವರದಿ ನೀಡುವಂತೆ ತಿಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿರುವುದು ಮಹತ್ವ ಪಡೆದಿದೆ.

ಈ ಮೊದಲು ಬ್ಯಾಂಕಿಂಗ್ ಪರೀಕ್ಷೆಗಳನ್ನು ಎಲ್ಲಿಯವರೆಗೆ ಬಿಎಸ್ಆರ್‌ಬಿ (ಬ್ಯಾಂಕಿಂಗ್ ಸರ್ವಿಸ್ ರೆಕ್ರೂಟ್‌ಮೆಂಟ್‌ ಬೋರ್ಡ್) ನಿರ್ವಹಿಸುತ್ತಿತ್ತೋ ಅಲ್ಲಿಯವರೆಗೂ ಆಯಾ ಪ್ರದೇಶದ ಭಾಷೆಗಳನ್ನು ಅರಿತಿರುವುದೇ ಉದ್ಯೋಗಕ್ಕೆ ಅರ್ಜಿ ಹಾಕುವ ಮೊದಲ ಅರ್ಹತೆ ಆಗಿತ್ತು‌. ತನ್ನ ಆಡಳಿತ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿರುವ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಸಿಬ್ಬಂದಿಯನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಬಿಎಸ್‌ಆರ್‌ಬಿ ಆಯ್ಕೆ ಮಾಡುತ್ತಿತ್ತು. ಈ ಕಾರಣದಿಂದಲೇ ಸೇವಕ ಮತ್ತು ಗುಮಾಸ್ತ ದರ್ಜೆಯ ಹುದ್ದೆಗಳಿಗೆ ಆಯಾ ಭಾಷೆಯ ಪ್ರದೇಶದಲ್ಲಿರುವ ಬ್ಯಾಂಕ್ ಶಾಖೆಗಳಿಗೆ ಆಯಾ ಭಾಷೆ ಬಲ್ಲವರೇ ಆಯ್ಕೆಯಾಗುತ್ತಿದ್ದರು.

ಯಾವಾಗ ಐಬಿಪಿಎಸ್ (ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ) ಜನ್ಮತಾಳಿತೋ ಆಗಿನಿಂದ ಪ್ರಾದೇಶಿಕ ಅಸ್ಮಿತೆಯನ್ನು ಕಸಿದು ಆ ಜಾಗದಲ್ಲಿ ಅರ್ಹತೆ ಅನ್ನುವ ಮಾನದಂಡ ತರಲಾಯಿತು. ಈ ಸಂಸ್ಥೆ ನಡೆಸುವ ಪರೀಕ್ಷೆಗಳು ಅಖಿಲ ಭಾರತ ಮಟ್ಟದಲ್ಲಿ ನಡೆಯುವುದರಿಂದ ಹುದ್ದೆಗೆ ತಕ್ಕ ವಿದ್ಯಾರ್ಹತೆ ಇದ್ದವರೆಲ್ಲ ಅರ್ಜಿ ಹಾಕಬಹುದು. ಈ ಕಾರಣದಿಂದಾಗಿಯೇ, ಹೊರ ರಾಜ್ಯಗಳಲ್ಲಿ ತರಬೇತಿ ಪಡೆದ ಕನ್ನಡೇತರರು ಆಯ್ಕೆಯಾಗಿ ನಮ್ಮ ಹಳ್ಳಿಗಳ ಬ್ಯಾಂಕ್ ಶಾಖೆಗಳಿಗೂ ನೇಮಕವಾಗುತ್ತಿದ್ದಾರೆ.

ಮುಖ್ಯವಾದ ಸಂಗತಿಯೆಂದರೆ, ಬ್ಯಾಂಕಿಂಗ್, ವಿಮೆ, ಸ್ಟ್ಯಾಫ್ ಸೆಲೆಕ್ಷನ್ ಕಮಿಷನ್ ನಡೆಸುವ ಎಲ್.ಡಿ.ಸಿ– ಯು.ಡಿ.ಸಿ ಪರೀಕ್ಷೆಗಳಲ್ಲಿ ಕೇಳುವ ಪ್ರಶ್ನೆ ಯಾವ ಭಾಷೆಯಲ್ಲಿದ್ದರೂ ಉತ್ತರಿಸುವವರಿಗೆ ಮುಖ್ಯವಾಗಿ, ಅತಿ ಜರೂರಾಗಿ ಉತ್ತರಿಸುವ ಸಾಮರ್ಥ್ಯ ಇರಲೇಬೇಕು. ಗಣಿತ (ನ್ಯೂಮರಿಕಲ್ ಎಬಿಲಿಟಿ), ಸಾಮಾನ್ಯ ಜ್ಞಾನ (ಟೆಸ್ಟ್ ಆಫ್ ರೀಸನಿಂಗ್) ಮತ್ತು ವೇಗ ನಿಷ್ಕರ್ಷ (ಆ್ಯಪ್ಟಿಟ್ಯೂಡ್ ಟೆಸ್ಟ್) ಎಂದು ಮೂರು ವಿಭಾಗಗಳಲ್ಲಿ ತಲಾ ಅಂಕಗಳನ್ನು ನಿಗದಿತ ಸಮಯದೊಳಗೇ ಉತ್ತರಿಸಿ, ಕಡೆಯ ಸಾಮಾನ್ಯ ಇಂಗ್ಲಿಷ್ ಪರೀಕ್ಷೆಯಲ್ಲೂ ಕನಿಷ್ಠ ಅಂಕ ಪಡೆಯಬೇಕಾಗುತ್ತದೆ. ಅಂದರೆ ಇಂಗ್ಲಿಷ್ ಗೊತ್ತಿದ್ದು, ಉಳಿದ ಅವಕಾಶಗಳನ್ನು ‘ಬಾಚಿಕೊಳ್ಳುವ ಚಾಕಚಕ್ಯತೆ’ ಅತಿ ಮುಖ್ಯ.

ಕಳೆದ ವರ್ಷದಿಂದ ಸಂದರ್ಶನ ಕೂಡ ರದ್ದಾಗಿರುವುದರಿಂದ ಕನಿಷ್ಠ ವಿದ್ಯಾರ್ಹತೆ ಇರುವ ಯಾರು ಬೇಕಾದರೂ ಭಾರತದ ಯಾವ ಮೂಲೆಗಾದರೂ ಅರ್ಜಿ ಹಾಕಿ ಆಯ್ಕೆ ಆಗಬಹುದು. ಇಲ್ಲಿ ಕೇಳಲಾಗುವ ಪ್ರಶ್ನೆಗಳನ್ನು ಒಂದುವೇಳೆ ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳಲ್ಲಿ ಕೊಟ್ಟರೂ ಉತ್ತರಿಸಲು ಯಾವು‍ದೇ ಭಾಷೆಯ ಅಗತ್ಯವಾಗಲೀ ದೀರ್ಘ ವಿವರಣೆಯಾಗಲೀ ಬೇಡ ಮತ್ತು ಆ ಎಲ್ಲ ಪ್ರಶ್ನೆಗಳೂ ಬಹು ಆಯ್ಕೆಯ ಉತ್ತರದವೇ ಆಗಿರುತ್ತವೆ. ಅಂದರೆ ಆಬ್ಜೆಕ್ಟಿವ್ ಆಗಿರುವುದರಿಂದ ಸರಿ ಉತ್ತರ ಇರುವ ಆಯ್ಕೆಗೆ ಗುಂಡು ಸುತ್ತುವುದಷ್ಟೇ ಆಗಿರುತ್ತದೆ. ಈ ಬಗೆಯ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾದೇಶಿಕ ಭಾಷೆಗಳಿಗಿಂತಲೂ ಇಂಗ್ಲಿಷ್ ಹೆಚ್ಚು ಅನುಕೂಲಕರ.

ಸಾಮಾನ್ಯ ಜ್ಞಾನ ಮತ್ತು ಗಣಿತದ ಚಿಹ್ನೆ ಇತ್ಯಾದಿಯನ್ನೆಲ್ಲ ಕನ್ನಡದಲ್ಲಿ ಅರ್ಥ ಮಾಡಿಕೊಂಡು ಉತ್ತರ ಬರೆಯುತ್ತಾರೆ ಎನ್ನುವುದೇ ಚೋದ್ಯದ ಸಂಗತಿ. ಇಂಥ ಪರೀಕ್ಷೆಗಳಿಗೆ ಉತ್ತರಿಸಲು ನಮ್ಮ ಕನಿಷ್ಠ ವಿದ್ಯಾರ್ಹತೆಯ ಜೊತೆಗೆ ಬಹಳಷ್ಟು ಮಾದರಿ ಪರೀಕ್ಷೆಗಳನ್ನು ಎದುರಿಸಿ ತಯಾರಾಗಿರಬೇಕಾಗುತ್ತದೆ.

ಮಹಾರಾಷ್ಟ್ರ, ಆಂಧ್ರಪ್ರದೇಶ, ಬಿಹಾರ ಮತ್ತು ದೆಹಲಿಯಲ್ಲಿ ಈ ಬಗೆಯ ಪರೀಕ್ಷೆಗಳಿಗೆ ತರಬೇತಿ ಕೊಟ್ಟು, ಮಾದರಿ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಸಜ್ಜುಗೊಳಿಸುವ ಬಹಳಷ್ಟು ಸಂಸ್ಥೆಗಳಿವೆ. ಒಮ್ಮೆ ದಾಖಲಾದರೆ ಸಾಕು, ಅಭ್ಯರ್ಥಿ ಪರೀಕ್ಷೆಯಲ್ಲಿ ಉತ್ತೀರ್ಣ ಆಗುವ ತನಕವೂ ಈ ತರಬೇತಿ ಮುಂದುವರಿಯುತ್ತಿರುತ್ತದೆ.

ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ಕೇಳುವುದು ಸರಿಯಾದರೂ ಅದರಿಂದ ತರಬೇತಿಯಿರದ ಮತ್ತು ಅವಕಾಶವೂ ಇರದ ಅಭ್ಯರ್ಥಿಗಳಿಗೆ ಹೆಚ್ಚಿನ ಉಪಯೋಗವಾಗದು. ಕನ್ನಡಕ್ಕೆ ತರ್ಜುಮೆಯಾದ ಮೂಲ ಇಂಗ್ಲಿಷ್ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಅಪಾಯವೇ ಹೆಚ್ಚು.

ನಿಜಕ್ಕೂ ಆಗಬೇಕಾದದ್ದು ಮತ್ತು ಅಗತ್ಯ ಇರುವುದೆಂದರೆ, ಬ್ಯಾಂಕು, ವಿಮೆ, ಅಂಚೆ, ರೈಲ್ವೆಯಂತಹ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳ ಕೆಳ ಹಂತದ ಹುದ್ದೆಗಳನ್ನು ಆಯಾ ಭಾಷಾ ಪ್ರದೇಶದವರಿಗೇ ಮೀಸಲಿರಿಸುವುದು. ಆಗ ಮಾತ್ರ ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ. ಇಲ್ಲವಾದರೆ ಚಾಕಚಕ್ಯತೆ ಮತ್ತು ಬುದ್ಧಿವಂತಿಕೆಯ ಜೊತೆಗೆ ‘ಜಾಣ’ನಾಗಿರುವ ವ್ಯಕ್ತಿ ಕೆಲಸ ಪಡೆಯುತ್ತಾನೆ. ಸ್ಥಳೀಯವಾಗಿ ಬುದ್ಧಿವಂತ ಅಂತ ಕರೆಸಿಕೊಂಡರೂ ‘ಜಾಣ’ ಅಲ್ಲದವನು ಮತ್ತೆ ಮತ್ತೆ ಪರೀಕ್ಷೆಗೆ ಕೂರುತ್ತ ತನ್ನ ಹಣೆಬರಹವನ್ನು ಹಳಿದುಕೊಳ್ಳುತ್ತಾನೆ.

ಲೇಖಕರು: ಆಡಳಿತಾಧಿಕಾರಿ, ಭಾರತೀಯ ಜೀವ ವಿಮಾ ನಿಗಮ, ಅರಸೀಕೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು