ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನಕ್ಕಿಂತ ಸಂಪ್ರದಾಯ ಹೆಚ್ಚೇ?

Last Updated 22 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಅವಕಾಶವನ್ನು ನೀಡಿದ ಸುಪ್ರೀಂ ಕೋರ್ಟ್ ತೀರ್ಪಿನ ಪರ ಮತ್ತು ವಿರುದ್ಧವಾಗಿ ದೊಡ್ಡ ಚಳವಳಿಯೇ ನಡೆಯುತ್ತಿದೆ. ‘ಕೋರ್ಟ್‌ ತೀರ್ಪು, ಶಬರಿಮಲೆಯ ಸಂಪ್ರದಾಯ, ಆಚರಣೆ ಮತ್ತು ಭಕ್ತರ ನಂಬಿಕೆಗಳಿಗೆ ವಿರುದ್ಧವಾಗಿದೆ’ ಎಂದು ಒಂದು ವರ್ಗ ವಾದಿಸುತ್ತಿದೆ. ಮತ್ತೊಂದು ವರ್ಗವು ‘ಮಹಿಳೆಯರು ದೇವಸ್ಥಾನ ಪ್ರವೇಶಿಸುವುದನ್ನು ತಡೆಯುವುದು ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ’ ಎಂದು ವಾದಿಸುತ್ತಿದೆ. 21ನೇ ಶತಮಾನದ ಈ ಕಾಲದಲ್ಲಿ, ಈ ಎರಡೂ ಗುಂಪುಗಳ ವಾದಗಳನ್ನು ಅರ್ಥಮಾಡಿಕೊಳ್ಳುವ ಬಗೆ ಯಾವುದು?

ನಮ್ಮ ಸಮಾಜದಲ್ಲಿ ಸಂಪ್ರದಾಯಗಳು ಕಾಲಕಾಲಕ್ಕೆ ಮಾರ್ಪಾಡಿಗೆ ಒಳಗಾಗುತ್ತಲೇ ಬಂದಿವೆ. ಹಾಗೆ ನೋಡುವುದಾದರೆ ನಮ್ಮ ಸಮಾಜದಲ್ಲಿನ ಯಾವ ಆಚರಣೆಯೂ ಇಂದು ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿಲ್ಲ. ಮನೆಗಳಲ್ಲಿ ಹತ್ತು ವರ್ಷಗಳ ಹಿಂದೆ ಇದ್ದ ಆಚರಣೆ ಇಂದು ತನ್ನ ಸ್ವರೂಪಬದಲಿಸಿಕೊಂಡಿದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಕಾಲದ ಅಗತ್ಯಕ್ಕೆ ತಕ್ಕಂತೆ ಬದಲಾಗುವುದು ಆಚರಣೆ, ಸಂಪ್ರದಾಯಗಳ ಮೂಲ ಗುಣ ಮತ್ತು ಇದು ಚಲನಶೀಲ ಸಮಾಜದ ಗುಣವೂ ಹೌದು. ಈ ವಾಸ್ತವವನ್ನು ಒಪ್ಪಿ ಬದುಕುತ್ತಿರುವ ಭಾರತೀಯ ಮನಸ್ಸುಗಳಿಗೆ, ಶಬರಿಮಲೆಯಲ್ಲಿನ ಸಂಪ್ರದಾಯವನ್ನು ಕಾಲದ ಬೇಡಿಕೆಗೆ ಅನುಗುಣವಾಗಿ ಬದಲಿಸಿದಂತಹ, ಸುಪ್ರೀಂ ಕೋರ್ಟ್ ತೀರ್ಪು ಏಕೆ ಆಘಾತ ಮತ್ತು ಗಾಬರಿಯನ್ನು ಉಂಟುಮಾಡಬೇಕು?

ವಾಸ್ತವ ಏನೆಂದರೆ, ಸಂಪ್ರದಾಯ ಮತ್ತು ಆಚರಣೆಗಳನ್ನು ಅವುಗಳ ಮೂಲ ಗುಣಗಳಿಗೆ ವಿರುದ್ಧವಾಗಿ ವಿವರಿಸುವ ಮೂಲಕ ಅಸ್ತಿತ್ವ ಉಳಿಸಿಕೊಳ್ಳಲು ಬಯಸುವ ಸಾಂಸ್ಥಿಕ– ಧಾರ್ಮಿಕ ರಚನೆಯೊಂದು ನಮ್ಮಲ್ಲಿ ಸೃಷ್ಟಿಯಾಗಿದೆ. ಈ ವ್ಯವಸ್ಥೆ ಮತ್ತು ಅದರ ಬೆಂಬಲಕ್ಕೆ ನಿಂತಿರುವ ರಾಜಕೀಯ ಹಾಗೂ ಮಾರುಕಟ್ಟೆ ರಚನೆಗಳು ಈ ಎಲ್ಲ ಗೊಂದಲಗಳನ್ನು ಸೃಷ್ಟಿಸುತ್ತಿವೆ.

ಯಾವ ವಿಚಾರವು ವ್ಯಕ್ತಿಯ ವೈಯಕ್ತಿಕ– ದೈನಂದಿನ ಬದುಕಿನಲ್ಲಿ ದೊಡ್ಡ ಸಂಗತಿ ಅಲ್ಲವೋ ಅದನ್ನು ಮಹತ್ವದ ವಿಚಾರವಾಗಿಸುವ, ಅದನ್ನು ರಕ್ಷಿಸಿಕೊಳ್ಳುವುದೇ ಆತನ ನೈತಿಕ ಕರ್ತವ್ಯ ಎಂಬ ಭಾವನೆಯನ್ನು ಅವನಲ್ಲಿ ಮೂಡಿಸುವ ಅಪಾಯಕಾರಿ ಧೋರಣೆಯೊಂದನ್ನು ಈ ಸಾಂಸ್ಥಿಕ ರಚನೆಗಳು ರೂಪಿಸುತ್ತಿವೆ. ಇದರ ಪರಿಣಾಮ, ರಾಮನ ಗುಡಿಯೇ ಇಲ್ಲದ ನಮ್ಮ ಊರಿನ ಜನರಿಗೆ ಅಯೋಧ್ಯೆಯ ರಾಮ ಪರಿಚಿತನಾಗಿಬಿಟ್ಟಿದ್ದಾನೆ. ಹಿಂದೂಯೇತರ ಧರ್ಮಕ್ಕೆ ಸೇರಿದ ಒಂದೇ ಒಂದು ಮನೆಯೂ ಇಲ್ಲದ ನಮ್ಮೂರಿನಲ್ಲಿ ಅನ್ಯಧರ್ಮ ದ್ವೇಷ
ಮನೆಮಾಡುತ್ತಿದೆ. ವ್ಯಕ್ತಿಯ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನ ಈ ದ್ವಂದ್ವವನ್ನು, ಅದರಿಂದ ಹುಟ್ಟುತ್ತಿರುವ ಒತ್ತಡವನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ಶಬರಿಮಲೆಗೆ ಮಹಿಳಾ ಭಕ್ತರ ಭೇಟಿಯನ್ನು ವಿರೋಧಿಸುತ್ತಿರುವವರನ್ನು ಮಾತನಾಡಿಸಿ ನೋಡಿ, ಬಹುತೇಕರು ವೈಯಕ್ತಿಕವಾಗಿ ಅದನ್ನು ವಿರೋಧಿಸುವುದಿಲ್ಲ. ಆದರೆ ಶಬರಿಮಲೆ ಚಳವಳಿಯ ಭಾಗವಾಗಿ ಪ್ರಶ್ನಿಸಿದಾಗ ಅವರು ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸುತ್ತಾರೆ.

ಈ ಹೋರಾಟದ ಮುಂಚೂಣಿಯಲ್ಲಿ ಮಹಿಳೆಯರೇ ಇರುವುದು ಮತ್ತೊಂದು ವಿಪರ್ಯಾಸ. ಸಮಾಜದಲ್ಲಿ ಬೆಳೆಯುತ್ತಿರುವ ಕೋಮು ಸಂರಚನೆಯು ತನ್ನ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಲಿಂಗಭೇದ ತೋರುತ್ತಿಲ್ಲ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಪುರುಷಪ್ರಧಾನ ಮೌಲ್ಯಗಳನ್ನು ಧರ್ಮ, ಸಂಸ್ಕೃತಿಗಳ ಹೆಸರಿನಲ್ಲಿ ಮಹಿಳೆಯರ ಬಾಯಿಂದಲೇ ಹೊರಡಿಸುವ ಕಲೆ ಅದಕ್ಕೆ ಕರಗತವಾಗಿದೆ. ಇಂತಹ ಒಂದು ಸಂಕುಚಿತ ಸಾಮಾಜಿಕತೆಯನ್ನು ಮನಗಂಡಿದ್ದ ಅಂಬೇಡ್ಕರ್ ಅವರು 1918ರಲ್ಲಿ, ‘ಭಾರತೀಯ ಧರ್ಮ ಮತ್ತು ಸಾಂಪ್ರದಾಯಿಕ ಜಾತಿ ವ್ಯವಸ್ಥೆಯು ತನ್ನ ಅಸ್ತಿತ್ವಕ್ಕಾಗಿ ಮಹಿಳೆಯರನ್ನು ಕಾವಲುಗೇಟುಗಳಾಗಿ ಬಳಸಿಕೊಳ್ಳುತ್ತಿವೆ’ ಎಂಬ ಅಭಿಪ್ರಾಯವನ್ನು ಲೇಖನವೊಂದರಲ್ಲಿ ವ್ಯಕ್ತಪಡಿಸಿದ್ದರು. ನೂರು ವರ್ಷಗಳ ತರುವಾಯವೂ ಅದಕ್ಕೆ ನಿದರ್ಶನಗಳು ಕಾಣಿಸುತ್ತಿವೆ. ಶಬರಿಮಲೆ ತಾಜಾ ಉದಾಹರಣೆ ಅಷ್ಟೆ!

ಇಂಥ ಸನ್ನಿವೇಶವನ್ನು ಆಡಳಿತವು ಹೇಗೆ ನಿಭಾಯಿಸಬೇಕು ಎಂಬುದು ಮಹತ್ವದ ಪ್ರಶ್ನೆಯಾಗಿದೆ. ಸಾಂವಿಧಾನಿಕ ಹಕ್ಕಾಗಿ ಮಹಿಳೆಗೆ ಶಬರಿಮಲೆ ಪ್ರವೇಶವನ್ನು ಪ್ರತಿಪಾದಿಸುತ್ತಿರುವ ಗುಂಪಿನ ಬೇಡಿಕೆ ಎಂದರೆ, ‘ಕಾನೂನಿನ ಆಳ್ವಿಕೆಯನ್ನು ಪ್ರತಿಪಾದಿಸುವ ರಾಜ್ಯವು ನಮ್ಮ ಹಕ್ಕುಗಳನ್ನು ರಕ್ಷಿಸಬೇಕು’ ಎಂಬುದಾಗಿದೆ. ಆದರೆ ಅವರ ಪರವಾಗಿ ವಾದಿಸಬೇಕಾದ ರಾಜಕೀಯ ಪಕ್ಷಗಳು ಮೇಲೆ ತಿಳಿಸಿದ ಅತಾರ್ಕಿಕ ಸಾಂಪ್ರದಾಯಿಕ ವಾದಗಳಿಗಿಂತ ಭಿನ್ನವಾಗಿ ಯೋಚಿಸುತ್ತಿಲ್ಲ. ಜೊತೆಗೆ ನಾವು ಒಪ್ಪಿಕೊಂಡಿರುವ ಆಧುನಿಕ ರಾಜ್ಯ ವ್ಯವಸ್ಥೆಯೂ ಭಾರತೀಯ ಸಂಪ್ರದಾಯಗಳ ಸ್ವರೂಪವನ್ನು ಕುರಿತು ಅರ್ಥಪೂರ್ಣವಾದ ವಿವೇಕವನ್ನು ರೂಢಿಸಿಕೊಂಡಿಲ್ಲ. ಇದಕ್ಕೆ ಕಾರಣ ನಮ್ಮ ರಾಜ್ಯವ್ಯವಸ್ಥೆಯ ಮೂಲ ವಿವೇಚನೆ ವಸಾಹತು ಧೋರಣೆಯಿಂದ ಪ್ರಭಾವಿತವಾಗಿರುವುದು. ಇದು ಎರಡನೆಯ ಹಂತದ ಸಮಸ್ಯೆ. ಈ ದ್ವಂದ್ವದ ಕಾರಣಕ್ಕೇ ‘ಸಂಪ್ರದಾಯದ ವಿಷಯದಲ್ಲಿ ಹೆಚ್ಚು ರ‍್ಯಾಡಿಕಲ್ ಆಗಿ ವರ್ತಿಸುವ ಸ್ಥಿತಿಯಲ್ಲಿ (ಎಡಪಕ್ಷವೂ ಸೇರಿ) ಯಾವ ಪಕ್ಷವೂ ಇಲ್ಲ’ ಎಂಬುದನ್ನು ಕೇರಳದ ಅನುಭವ ಕಲಿಸಿಕೊಟ್ಟಿದೆ. ಹಾಗಾಗಿ ಶಬರಿಮಲೆ ವಿಷಯದಲ್ಲಿ ಸಾಂವಿಧಾನಿಕ ಸಮಾನತೆಯ ಕೂಗಿಗಿಂತ, ಸಾಂಪ್ರದಾಯಿಕ ಧೋರಣೆಗಳು ಹೆಚ್ಚು ಸದ್ದು ಮಾಡುತ್ತಿವೆ.

ಶಬರಿಮಲೆ ಪರ– ವಿರುದ್ಧ ಹೋರಾಟಗಳ ಮಧ್ಯದಲ್ಲಿ ಆಡಳಿತವು ಮಾಡಬೇಕಾದ ಕೆಲಸವೆಂದರೆ, ‘ಹಕ್ಕುಗಳಿಗೆ ಅರ್ಥ ಬರುವುದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅವುಗಳನ್ನು ಚಲಾಯಿಸಲು ಬೇಕಾದ ಕಾನೂನಾತ್ಮಕ ಬೆಂಬಲ ಇದ್ದಾಗ ಮಾತ್ರ’ ಎಂಬ ಅಂಬೇಡ್ಕರ್‌ ಅವರ ಮಾತುಗಳನ್ನು ಸಾರ್ವಜನಿಕ ಅಭಿಪ್ರಾಯವಾಗಿ ಮಂಡಿಸುವುದು ಮತ್ತು ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವನ್ನು 18ನೇ ಶತಮಾನದ ಭಕ್ತಿಚಳವಳಿ ಅಥವಾ ಪುನರುಜ್ಜೀವನ ಚಳವಳಿಯಾಗಿ ನೋಡದೆ, ಅದನ್ನು 21ನೇ ಶತಮಾನದಲ್ಲಿ ‘ಲಿಂಗ ಸಮಾನತೆಗಾಗಿ ನಡೆಯುತ್ತಿರುವ ಕಾನೂನಾತ್ಮಕ ಹೋರಾಟ’ ಎಂಬ ನೆಲೆಯಲ್ಲಿ ಚರ್ಚಿಸುವ ಸಾರ್ವಜನಿಕ ವಿವೇಕವನ್ನು ಕಟ್ಟುವುದು.

ಇವುಗಳ ಜೊತೆಯಲ್ಲೇ ಅನ್ಯ ಸಂಪ್ರದಾಯಗಳೊಂದಿಗೆ ಸಹಜವಾಗಿ ಹೊಂದಿಕೊಳ್ಳುವ ಆಚರಣೆ ಮತ್ತು ಸಂಪ್ರದಾಯಗಳ ಲಿಬರಲ್ ಗುಣಲಕ್ಷಣಗಳನ್ನು ಜನರ ಪ್ರಜ್ಞೆಯಲ್ಲಿ ಮರುಸ್ಥಾಪಿಸುವ ದೀರ್ಘಕಾಲೀನ ಬೌದ್ಧಿಕ ಜವಾಬ್ದಾರಿಯನ್ನು ನಾವು ನಿರ್ವಹಿಸಲೇಬೇಕಿದೆ. ಆಗ ಮಾತ್ರ ನಾವು ಆಧುನಿಕ ರಾಜ್ಯವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳಿಗೆ ಉತ್ತರ ಕಂಡುಕೊಂಡು, ಸಂವಿಧಾನ ಬಯಸುವ ಸಮ- ಸಮಾಜವನ್ನು ನಿರ್ಮಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT