ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವದಂತಿಗಳಿಗೆ ಕಿವಿಗೊಡದಿರೋಣ

ಕೊರೊನಾ ವೈರಸ್‌ ಕುರಿತ ವಾಸ್ತವಾಂಶ ಅರಿತು, ಸರ್ಕಾರದ ತಪ್ಪು ನಡೆಗಳನ್ನು ವಿಮರ್ಶಿಸಿ, ಉತ್ತಮ ಕೆಲಸಗಳಿಗೆ ಕೈಜೋಡಿಸಿ ಒಗ್ಗಟ್ಟಾಗಿ ನಡೆಯಬೇಕಾಗಿದೆ
Last Updated 6 ಏಪ್ರಿಲ್ 2020, 2:59 IST
ಅಕ್ಷರ ಗಾತ್ರ

ಜನಸಾಮಾನ್ಯರಲ್ಲಿ ಬೇರೂರಿರುವ ಆತಂಕವನ್ನೇ ಬಂಡವಾಳ ಮಾಡಿಕೊಂಡು ಇಲ್ಲದ್ದನ್ನು ಸೃಷ್ಟಿ ಮಾಡಿ ಹಂಚುವ ವಿಕೃತಿಯೂ ವಿಜೃಂಭಿಸತೊಡಗಿದೆ.

ಜಗತ್ತನ್ನೇ ಭಾಗಶಃ ಸ್ತಬ್ಧಗೊಳಿಸಿರುವ ಕೊರೊನಾ ವೈರಾಣು, ನಾವೆಂದೂ ಊಹಿಸಿರದ ಬಿಕ್ಕಟ್ಟನ್ನು ಸೃಷ್ಟಿಸಿದೆ. ಇದರಿಂದ ಪಾರಾಗಲು ಸಿಗಬಹುದಾದ ದಾರಿಗಳ ಹುಡುಕಾಟದಲ್ಲಿ ವೈದ್ಯಕೀಯ ಲೋಕವಿದೆ. ಇದೇ ವೇಳೆ, ಜನಸಾಮಾನ್ಯರಲ್ಲಿ ಬೇರೂರಿರುವ ಆತಂಕ
ವನ್ನೇ ಬಂಡವಾಳ ಮಾಡಿಕೊಂಡು ಇಲ್ಲದ್ದನ್ನು ಸೃಷ್ಟಿ ಮಾಡಿ ಹಂಚುವ ವಿಕೃತಿಯೂ ವಿಜೃಂಭಿಸತೊಡಗಿದೆ.

ಕೊರೊನಾ– 2 ನಮ್ಮನ್ನು ಬಾಧಿಸತೊಡಗಿದ ಮುನ್ನವೇ ಜಾರಿಯಲ್ಲಿದ್ದ, ಸುಳ್ಳನ್ನು ಸೃಷ್ಟಿಸಿ ಪಸರಿಸುವ ಕಾಯಕಕ್ಕೆ ಇಂದಿಗೂ ಹಲವರು ಅಲ್ಪವಿರಾಮ ಇಡಲು ಕೂಡ ಸಿದ್ಧರಿಲ್ಲ. ಈ ವೈರಾಣುವಿನ ಕುರಿತು ಜಗತ್ತು ಚಿಂತಿತವಾದ ಸಂದರ್ಭದಿಂದ ಇದುವರೆಗೂ ಸೃಷ್ಟಿಯಾಗುತ್ತಲೇ ಇರುವ ಸುಳ್ಳು ಸುದ್ದಿಗಳನ್ನು ಗಮನಿಸಿದರೆ ಬೇಸರವೂ ಆತಂಕವೂ ಮೂಡುತ್ತದೆ. ಮೊದಲೇ ನಾಳೆ ಏನಾಗುವುದೋ ಎನ್ನುವ ಅನಿಶ್ಚಿತತೆಯಲ್ಲಿರುವ ಜನರ ಗೊಂದಲಗಳನ್ನು ನಿವಾರಿಸುವ ಕೆಲಸದಲ್ಲಿ ತೊಡಗುವ ಬದಲಿಗೆ, ತಮ್ಮ ವೈಯಕ್ತಿಕ ಹಿತಾಸಕ್ತಿಗಳ ಪ್ರದರ್ಶನಕ್ಕೆ ಇದು ಸಕಾಲ ಎಂಬಂತೆ ಕೆಲವರು ವರ್ತಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ, ತಜ್ಞ ವೈದ್ಯರು ಹಾಗೂ ವಿಜ್ಞಾನಿಗಳ ಮಾತಿಗೆ ಕಿವಿಗೊಟ್ಟು, ಅವರು ಹೇಳುವುದನ್ನು ಸಾಧ್ಯವಾದಷ್ಟು ಜನರಿಗೆ ಮುಟ್ಟಿಸುವ ಕೆಲಸದಲ್ಲಿ ಕೈಜೋಡಿಸುವ ಬದಲಿಗೆ, ಅವೈಜ್ಞಾನಿಕ ಅಂಶಗಳನ್ನು ಅದು ವೈಜ್ಞಾನಿಕ ಮಾಹಿತಿಯೇನೋ ಎಂಬಂತೆ ಹರಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂಗೆ ಕರೆ ನೀಡಿದ ಸಂದರ್ಭದಲ್ಲಿ ಸೃಷ್ಟಿಯಾದ ‘ಈ ಕರ್ಫ್ಯೂ ಅವಧಿಯ 12ರಿಂದ 14 ಗಂಟೆಯೊಳಗೆ ವೈರಸ್ಸು ಸಾಯುತ್ತದೆ’ ಎಂಬ ತಪ್ಪು ಮಾಹಿತಿ ಹರಡಿದ ವೇಗ ಮತ್ತು ಜನ ಅದು ನಿಜವೇ ಎಂದು ಭಾವಿಸಿ ಗುಂಪುಗೂಡಿ ಸಂಭ್ರಮಾಚರಿಸಿದ ರೀತಿಯನ್ನು ಗಮನಿಸಿದ ಯಾರಿಗೇ ಆದರೂ ಅವಾಸ್ತವಿಕ ಅಂಶಗಳು ನಮ್ಮ ಸಮಾಜವನ್ನು ಯಾವ ಪರಿ ದಾರಿ ತಪ್ಪಿಸಬಲ್ಲವು ಎಂಬುದರ ಅರಿವಾಗಿರುತ್ತದೆ. ಆದರೂ ಇಂತಹ ಅಪಸವ್ಯಗಳಿಗೆ ಸಮಾಜವನ್ನು ದೂಡುವ ಯತ್ನ ಮಾತ್ರ ನಿಂತಿಲ್ಲ.

ಏಪ್ರಿಲ್ 14ರವರೆಗೂ ದೇಶದಾದ್ಯಂತ ಲಾಕ್‍ಡೌನ್ ಜಾರಿಯಲ್ಲಿ ಇರುವುದರಿಂದ ಸಾಮಾಜಿಕ ಮಾಧ್ಯಮಗಳ ಬಳಕೆಯೂ ಸಹಜವಾಗಿಯೇ ಹೆಚ್ಚಾಗಿದೆ. ಇದು ಸುಳ್ಳು ಸುದ್ದಿಗಳು ಮತ್ತಷ್ಟು ವೇಗವಾಗಿ ಹರಡಲು ಅನುವು ಮಾಡಿಕೊಟ್ಟಿದೆ. ‘ತಾವು ಹಂಚಿಕೊಳ್ಳುತ್ತಿರುವ ಮಾಹಿತಿ ವಾಸ್ತವಾಂಶದಿಂದ ಕೂಡಿಲ್ಲ. ಈ ಸುಳ್ಳು ಸುದ್ದಿಯ ಮೂಲ ಇಲ್ಲಿದೆ ಗಮನಿಸಿ’ ಎಂದು ಹೇಳುವ ಪ್ರಯತ್ನ ಮಾಡುವವರ ಕುರಿತೇ ಅಪಹಾಸ್ಯ ಮಾಡುವ ವಿಷಮ ಪರಿಸ್ಥಿತಿಯೂ ಸೃಷ್ಟಿಯಾಗಿದೆ. ‘ಇದು ಸುಳ್ಳೇ ಆಗಿದ್ದರೂ ಸಮಸ್ಯೆ ಏನು’ ಎಂದು
ಪ್ರಶ್ನಿಸುವವರೂ ಇದ್ದಾರೆ. ಬದುಕಿರುವ ವ್ಯಕ್ತಿಯೊಬ್ಬರಫೋಟೊವನ್ನು ಸಾವನ್ನಪ್ಪಿರುವ ವ್ಯಕ್ತಿಯದೆಂದುಬಿಂಬಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎನ್ನುವ ನಿಲುವಿಗೆ ಅಂಟಿಕೊಳ್ಳುವಷ್ಟು ಅಸೂಕ್ಷ್ಮತೆಯು ಕೊರೊನಾ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಸೆಣಸಬೇಕಿರುವ ಈ ಕಾಲಘಟ್ಟದಲ್ಲೂ ಹಾಗೆಯೇ ಮುಂದುವರಿಯಬೇಕೇ? ಸುಳ್ಳು ಸುದ್ದಿ ಸೃಷ್ಟಿಸುವ ಹಾಗೂ ಹರಡುವ ಕಾಯಕದಲ್ಲಿ ತೊಡಗಿಕೊಂಡಿರುವವರು ಈ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

ಒಬ್ಬರಿಂದ ಮತ್ತೊಬ್ಬರಿಗೆ ಕ್ಷಿಪ್ರಗತಿಯಲ್ಲಿ ಹರಡುವ ವೈರಾಣುವಿನ ಕುರಿತು ಸೃಷ್ಟಿಯಾಗುವ ಪ್ರತೀ ತಪ್ಪು ಮಾಹಿತಿಯೂ ಮತ್ತಷ್ಟು ಜನರಿಗೆ ರೋಗ ಹರಡಲು ನೆರವಾಗುವ ಅಂಶವನ್ನಾದರೂ ಗಮನದಲ್ಲಿ ಇಟ್ಟುಕೊಂಡು ಜವಾಬ್ದಾರಿಯುತವಾಗಿ ವರ್ತಿಸಬೇಕಿದೆ.

ಆಳುವವರು ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕಿರುವ ಈ ಬಿಕ್ಕಟ್ಟಿನ ಸಮಯದಲ್ಲಿ, ಜನಸಾಮಾನ್ಯರಲ್ಲಿ ಮೌಢ್ಯ ಬಿತ್ತುವ ಕೆಲಸವನ್ನು ಯಾವ ರಾಜಕಾರಣಿಯೂ ಮಾಡಬಾರದು. ಚಿಕಿತ್ಸೆಯ ವಿಚಾರದಲ್ಲಿ ಕೆಲವು ಮೌಢ್ಯಗಳ ಬಗೆಗೆ ತಮಗಿರುವ ಒಲವನ್ನು ಈ ನಿರ್ಣಾಯಕ ಸಂದರ್ಭದಲ್ಲಾದರೂ ಬದಿಗೆ ಸರಿಸಿ, ವೈಜ್ಞಾನಿಕ ಮಾಹಿತಿ ಪಸರಿಸುವ ಕಾಯಕದಲ್ಲಿ ಆಳುವ ಪಕ್ಷದ ಕಾಲಾಳುಗಳು ತಮ್ಮನ್ನು ತೊಡಗಿಸಿಕೊಳ್ಳಬೇಕಿದೆ.

ತಪ್ಪು ಮಾಹಿತಿಯು ಜನರ ಜೀವಕ್ಕೇ ಎರವಾಗುವ ಕಾಲದಲ್ಲೂ ಸುಳ್ಳು ಸೃಷ್ಟಿಸುವ ವಿಕೃತರ ಬೆನ್ನಿಗೆ ನಿಲ್ಲುವುದು ಹೊಣೆಗೇಡಿತನವಲ್ಲದೆ ಮತ್ತೇನೂ ಅಲ್ಲ.ಪರಸ್ಪರ ಸಹಕಾರ ಮತ್ತು ಸಹಬಾಳ್ವೆಯ ಅಗತ್ಯ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಸೃಷ್ಟಿಯಾಗುತ್ತಿರುವ ಅಪನಂಬಿಕೆಯನ್ನು ತೊಡೆದುಹಾಕಬೇಕಿದೆ.

ಕೊರೊನಾ– 2 ಪರೀಕ್ಷೆಗೆ ಒಳಗಾದವರು, ಬೇರೆಡೆಗಳಿಂದ ತಮ್ಮ ಊರಿಗೆ ಮರಳುತ್ತಿರುವವರ ಕುರಿತು ಜನರು ತೋರತೊಡಗಿರುವ ಅಸಹನೆಯನ್ನು ಶಮನಗೊಳಿಸುವ ಕೆಲಸ ನಡೆಯಬೇಕಿದೆ. ತಪ್ಪು ತಿಳಿವಳಿಕೆಯಿಂದ ಮತ್ತೊಬ್ಬರನ್ನು ನಿಕೃಷ್ಟವಾಗಿ ನಡೆಸಿಕೊಳ್ಳಲು ಕೊರೊನಾ ವೈರಸ್‌ ಒಂದು ನೆಪವಾಗಬಾರದು. ಸೋಂಕಿತರನ್ನು ಮಾನವೀಯ ನೆಲೆಗಟ್ಟಿನಲ್ಲಿ ನಡೆಸಿಕೊಳ್ಳುವ ಸಂಯಮ ಮೈಗೂಡದೇ ಹೋದಲ್ಲಿ ಮುಂಬರುವ ದಿನಗಳು ನಮ್ಮೆಲ್ಲರ ಪಾಲಿಗೆ ಮತ್ತಷ್ಟು ದುಗುಡವನ್ನೇ ಹೊತ್ತು ತರಲಿವೆ ಎನ್ನುವ ವಾಸ್ತವದತ್ತಲೂ ದೃಷ್ಟಿ ಹಾಯಿಸಬೇಕಿದೆ.

ಕೊರೊನಾ ವೈರಸ್‌ ಕುರಿತ ವಾಸ್ತವಾಂಶಗಳನ್ನು ಅರಿತು ಸರ್ಕಾರದ ತಪ್ಪು ನಡೆಗಳನ್ನು ವಿಮರ್ಶಿಸಿ, ಉತ್ತಮ ಕೆಲಸಗಳಿಗೆ ಕೈಜೋಡಿಸಿ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕಾದ ಅಗತ್ಯವಿದೆ. ಈ ಸಂದರ್ಭದಲ್ಲಿ, ಕೋಮು ಭಾವನೆಗಳನ್ನು ಉದ್ದೀಪಿಸಿ ಪರಸ್ಪರ ದೂಷಿಸುತ್ತ ಸಾಧಿಸುವುದು ಏನೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT