ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಶಿಕ್ಷಣ ಸೊರಗಿದೆ, ಅಂತಃಸತ್ವವಲ್ಲ

ಶಾಲಾ ಶುಲ್ಕ ನೀಡುವ ಸಾಮರ್ಥ್ಯ ಉಳ್ಳವರೂ ಕಡಿಮೆಯಾದರೆ ಆಗಲಿ ಎನ್ನುವ ಮನೋಭಾವ ಹೊಂದುವುದು ಸರಿಯಲ್ಲ
Last Updated 28 ಜೂನ್ 2020, 19:30 IST
ಅಕ್ಷರ ಗಾತ್ರ

ಮೂರು ತಿಂಗಳುಗಳಿಂದ ಶಿಕ್ಷಣ ನಿಂತ ನೀರಾಗಿದೆ. ಬೇರೆಲ್ಲಾ ಚಟುವಟಿಕೆಗಳು ಪುನಶ್ಚೇತನದ ಹಾದಿಯಲ್ಲಿ ದ್ದರೆ, ಶಿಕ್ಷಣ ರಂಗದಲ್ಲಿ ಬೇಕುಗಳಿಗಿಂತ ಬೇಡಗಳೇ ಜಾಸ್ತಿಯಾಗುತ್ತಿವೆ. ಮುಂದಿನ ಮೂರ್ನಾಲ್ಕು ತಿಂಗಳು ಅನಿಶ್ಚಿತತೆ ಮುಂದುವರಿಯುವ ಲಕ್ಷಣ ಗೋಚರಿಸುತ್ತಿದೆ.

ಲಾಕ್‌ಡೌನ್‌ನಿಂದ ಹೊರಬಂದಿರುವ ಅನೇಕ ಪ್ರಗತಿಶೀಲ ರಾಷ್ಟ್ರಗಳು, ಆರ್ಥಿಕ ಚಟುವಟಿಕೆಗಳ ಜೊತೆಗೆ ಆದ್ಯತೆ ನೀಡುತ್ತಿರುವುದು ಆರೋಗ್ಯ ಮತ್ತು ಶಿಕ್ಷಣಕ್ಕೆ. ‘ಮಕ್ಕಳನ್ನು ಅಪಾಯಕ್ಕೆ ಒಡ್ಡುವುದು ಬೇಡ. ಒಂದು ವರ್ಷ ಪರೀಕ್ಷೆ ಹೋದ್ರೆ ಹೋಗಲಿ ಬಿಡಿ’ ಎಂದು ನಮ್ಮಲ್ಲಿ ಕೆಲವರು ಭಾವುಕತೆಯಿಂದ ಕಾಳಜಿಯನ್ನು ತೋರಿದರು. ‘ಎಲ್ಲರನ್ನೂ ಪ್ರೊಮೋಟ್‌ ಮಾಡಿದರಾಯಿತು. ಅದಕ್ಯಾಕೆ ಅಷ್ಟು ಚಿಂತೆ’ ಎನ್ನುವ ಅಭಿಪ್ರಾಯವೂ ಕೇಳಿಬಂತು.

ಶಿಕ್ಷಣ ಎನ್ನುವುದು ಚಿಂತನಶೀಲ ಕುಲುಮೆ. ಮನಸ್ಸು, ಬುದ್ಧಿ ಮಂಕಾಗದಂತೆ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಚಟುವಟಿಕೆಗಳು ಮಕ್ಕಳಿಗೆ ಬೇಕೇ ಬೇಕು. ಯಾವುದೇ ವಯಸ್ಸಿನ ಮಕ್ಕಳಾಗಿರಲಿ ಮೊಬೈಲ್‌, ಟಿ.ವಿ ಇಲ್ಲದೆ ಮನೆಯಲ್ಲಿ ಸುಮ್ಮನೆ ಕುಳಿತಿದ್ದಾರೆಯೇ? 6-8 ತಿಂಗಳುಗಳು ಇದೇ ಸ್ಥಿತಿಯಲ್ಲಿರಿಸಿದರೆ ಅವರ ಮನಃಸ್ಥಿತಿ ಹೇಗಿರಬಹುದು?

ತರಗತಿಗಳ ಆರಂಭಕ್ಕೆ ಇನ್ನೊಂದಷ್ಟು ದಿನ ಕಾಯಲೇಬೇಕಾದುದು ಅನಿವಾರ್ಯ. ಪರೀಕ್ಷೆಗಳು ಬೇಡ ಎಂದಾಗ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೆಲ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕೇರಳವು 10ನೇ ತರಗತಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಮುಗಿಸಿದೆ. ಕರ್ನಾಟಕ ಸಹ ಅದೇ ಹಾದಿಯಲ್ಲಿದೆ. ಅದಕ್ಕೆ ಎಲ್ಲರೂ ಸಹಕರಿಸಲೇಬೇಕು.

ಆನ್‌ಲೈನ್‌ ಶಿಕ್ಷಣ ಬೇಡ ಎನ್ನುವ ಅಭಿಪ್ರಾಯಗಳನ್ನು ಹಲವರು ಸರಿಯಾಗಿ ಅರ್ಥೈಸಿಲ್ಲ. ಅದು ಶಿಕ್ಷಕ– ವಿದ್ಯಾರ್ಥಿ ಅನುಬಂಧಕ್ಕೆ, ಚಟುವಟಿಕೆಗಳ ಶಿಕ್ಷಣಕ್ಕೆ ಪರ್ಯಾಯ ವ್ಯವಸ್ಥೆಯಾಗದೆ ಪೂರಕವಾಗಿರಬೇಕು, ಆದರೆ ಸಂಕಷ್ಟದ ಸಮಯದಲ್ಲಿ ಸಾಧ್ಯವಾದಷ್ಟೂ ಅದನ್ನು ಬಳಸಿಕೊಳ್ಳಬೇಕು ಎನ್ನುವುದು ಆಶಯ. ಹೊರಗೆ ಹೋದರೆ ಮಕ್ಕಳ ಆರೋಗ್ಯ ಹಾಳಾಗುತ್ತದೆ, ಆನ್‌ಲೈನ್‌ ಶಿಕ್ಷಣದಿಂದ ಕಣ್ಣು ಹಾಳಾಗುತ್ತದೆ ಎನ್ನುವವರಿದ್ದಾರೆ. ಆದರೆ ಸುಮ್ಮನೆ ಮನೆಯಲ್ಲಿದ್ದರೆ ಮೊಬೈಲ್‌, ಟಿ.ವಿ.ಯ ಅತಿಯಾದ ಬಳಕೆಯಿಂದ ಬುದ್ಧಿಯೇ ಹಾಳಾಗುವ ಅಪಾಯವೂ ಇದೆ.

ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಾಲ ಅವ್ಯವಸ್ಥೆ, ವಿದ್ಯುತ್‌ ಕೊರತೆಯಂತಹ ಅನೇಕ ಸಮಸ್ಯೆಗಳ ನಡುವೆಯೂ ಮನಸ್ಸು ಮಾಡಿದಲ್ಲಿ ಮಕ್ಕಳನ್ನು ನಿರ್ದಿಷ್ಟ, ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಬಹುದು. ಪ್ರತಿಯೊಂದು ಶಾಲೆಯೂ ಶಿಕ್ಷಕರನ್ನು ಬಳಸಿಕೊಂಡು ತನ್ನ ವ್ಯಾಪ್ತಿಯ ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಬಹುದು. ಎಲ್ಲವನ್ನೂ ನಿಷೇಧಿಸುವ ಬದಲು ಸರ್ಕಾರ ಕೂಡ ಅಗತ್ಯಕ್ಕೆ ತಕ್ಕಂತೆ ಸ್ಪಂದಿಸುವ ಔದಾರ್ಯ ತೋರಬೇಕು.

ಉದ್ಯೋಗಸ್ಥರು ಮನೆಯಲ್ಲಿ ಮಕ್ಕಳನ್ನು ಬಿಟ್ಟು ಹೋಗುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ. ಮಕ್ಕಳಿಗೆ ಮೂರು ವರ್ಷವಾದ ನಂತರ ಪ್ಲೇ ಹೋಮ್‌ನಿಂದ ವಿವಿಧ ಹಂತದ ಶಾಲೆಗಳಿಗೆ ಕಳುಹಿಸಿ ಗಂಡ-ಹೆಂಡತಿ ಇಬ್ಬರೂ ಉದ್ಯೋಗಕ್ಕೆ ತೆರಳುವ ವ್ಯವಸ್ಥೆಗೆ ಹೊಂದಿಕೊಂಡಿದ್ದರು. ಮನೆಯಲ್ಲಿ ಹಿರಿಯರಿದ್ದರೂ ಮಕ್ಕಳನ್ನು ನಿಯಂತ್ರಿಸುವ ಕೆಲಸ ಅವರಿಂದ ಸಾಧ್ಯವಿಲ್ಲ. ಇದೇ ಸ್ಥಿತಿ ಮುಂದುವರಿದರೆ, ಅನೇಕ ದಂಪತಿಗಳಲ್ಲಿ ಒಬ್ಬರು ನೌಕರಿ ತೊರೆಯುವ ಅನಿವಾರ್ಯವೂ ಉಂಟಾಗಬಹುದು.

ಇನ್ನು, ಶಾಲಾ ಶಿಕ್ಷಣ ಶುಲ್ಕ ಇಳಿಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಾಗ ಇಂತಹ ಯಾವ ಅಭಿಯಾನವೂ ಇರಲಿಲ್ಲ. ಇಂದು ಇದೊಂದು ಬೃಹತ್‌ ಪರ್ಯಾಯ ವ್ಯವಸ್ಥೆಯಾಗಿ ಬೆಳೆದಿದೆ. ಖಾಸಗೀಕರಣ ಎಂದರೆ, ಬೆಳವಣಿಗೆಗೆ ಪೂರಕವಾಗಿ ಸರ್ಕಾರದ ಕನಿಷ್ಠ ನಿಯಂತ್ರಣ ಇರಬೇಕು. ಆದರೆ ವೃತ್ತಿ ಶಿಕ್ಷಣದಲ್ಲಿ ಸರ್ಕಾರ ಯಾವ ಪ್ರಮಾಣದ ನಿಯಂತ್ರಣ ಮಾಡಲು ಸಾಧ್ಯವಾಗಿದೆ? ಇಂತಹ ಸಂಕಷ್ಟದಲ್ಲಿಯೂ ಅಲ್ಲಿ ಶುಲ್ಕ ಏರಿಕೆಗೆ ಅನುಮತಿ ಸಿಕ್ಕಿದೆ.

ಸಮಾನಾಂತರ ಸರ್ಕಾರಿ ಶಿಕ್ಷಣ ವ್ಯವಸ್ಥೆಯಿದ್ದರೂ ಬಹುತೇಕ ಪೋಷಕರು ಖಾಸಗಿ ಶಾಲೆಗಳಿಗೆ ಮೊರೆ ಹೋಗುತ್ತಾರೆ. ಶುಲ್ಕ ನೀಡುವ ಸಾಮರ್ಥ್ಯ ಇದ್ದವರೂ ಕಡಿಮೆಯಾದರೆ ಆಗಲಿ ಎನ್ನುವ ಮನೋಭಾವ ಹೊಂದುವುದು ಸರಿಯಲ್ಲ. ಈ ಪ್ರವೃತ್ತಿಯು ಸಾಲ ಮನ್ನಾ, ಸರ್ಕಾರದ ಆರ್ಥಿಕ ಸಹಾಯ, ಸಬ್ಸಿಡಿ ಎಲ್ಲ ವಿಷಯಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಅರ್ಹರಿಗೆ ಸಿಗಬೇಕಾದ ಸಹಾಯ ಅನರ್ಹರಿಗೂ ದಕ್ಕುತ್ತಿದೆ.

ಖಾಸಗಿ ಶಾಲೆಗಳು ಇದನ್ನೇ ನೆಪ ಮಾಡಿಕೊಂಡು, ಶಿಕ್ಷಕರು- ಶಿಕ್ಷಕೇತರರಿಗೆ ವೇತನ ನೀಡದಿರುವುದೂ ನಡೆಯುತ್ತಿದೆ. ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಾತ್ರ ಸರ್ಕಾರ ವೇತನ ನೀಡುತ್ತದೆ. ಅನುದಾನ ವ್ಯವಸ್ಥೆ ಕಡಿಮೆಯಾಗುತ್ತಾ ಬಂದಿದ್ದು, ಪೋಷಕರು ನೀಡುವ ಶುಲ್ಕದ ಆಧಾರದ ಮೇಲೇ ಲಕ್ಷಾಂತರ ಶಿಕ್ಷಕರು ಬದುಕುತ್ತಿದ್ದಾರೆ. ಅವರು ಅಸಂಘಟಿತರಾಗಿದ್ದು, ಧ್ವನಿಯೇ ಇಲ್ಲದಂತಾಗಿದೆ.

ಗುರು ಬ್ರಹ್ಮ ಎನ್ನುವ ಸಮಾಜ, ತಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಕರನ್ನು ಬಯಸುತ್ತದೆ. ಪ್ರತಿಭಾವಂತರನ್ನು ಆಕರ್ಷಿಸಿ ಈಗ ನಡುನೀರಿನಲ್ಲಿ ಕೈಬಿಟ್ಟರೆ ಹೇಗೆ? ಶಾಲಾ ಶುಲ್ಕ ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದರೆ, ಶಿಕ್ಷಕರ ವೇತನ ಸೌಲಭ್ಯದ ಜವಾಬ್ದಾರಿ ತೆಗೆದುಕೊಳ್ಳ ಬೇಕು. ಕೊರೊನಾ ನಮ್ಮ ವ್ಯವಸ್ಥೆಯನ್ನು ಹಾಳು ಮಾಡಿರಬಹುದು. ಆದರೆ ಅಂತಃಸತ್ವವನ್ನು ನಾಶ ಮಾಡಲು ಬಿಡಬಾರದು.

ಲೇಖಕ: ನಿವೃತ್ತ ಪ್ರಾಧ್ಯಾಪಕ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT