ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ತಂಬಾಕು ರಹಿತ ದಿನ: ಕೋವಿಡ್‌.. ತಂಬಾಕಿನ ಕಣ್ಣಲ್ಲಿ..

ಕೋವಿಡ್‌ ಮತ್ತು ತಂಬಾಕು ನಂಟಿನ ಬಗ್ಗೆ ಅವೈಜ್ಞಾನಿಕ ಪ್ರಚಾರ ಜೋರಾಗಿದೆ
Last Updated 31 ಮೇ 2021, 1:26 IST
ಅಕ್ಷರ ಗಾತ್ರ

ಜನರು ವಿವಿಧ ಬಗೆಯ ಮೌಢ್ಯಗಳಿಗೆ ಮೊರೆ ಹೋಗುತ್ತಿರುವಾಗಲೇ ಮತ್ತೊಂದು ಸವಾಲು! ಮೊನ್ನೆ ರೋಗಿ ಯೊಬ್ಬರು ಬಂದು ಕೇಳಿದರು ‘ಡಾಕ್ಟ್ರೇ, ತಂಬಾಕು ತಿನ್ನಬೇಡಿ, ಸಿಗರೇಟು ಸೇದಬೇಡಿ ಒಳ್ಳೆಯದಲ್ಲ ಅಂತ ನೀವು ಹೇಳ್ತೀರ. ಆದರೆ ಟಿ.ವಿ.ಯಲ್ಲಿ ತೋರಿಸ್ತಿದಾರೆ ಸಿಗರೇಟು ಸೇದುವವರಲ್ಲಿ ಕೋವಿಡ್ ಸಾಧ್ಯತೆ ಕಡಿಮೆಯಂತೆ’!

ಪುಣ್ಯಕ್ಕೆ ಈ ಅಧ್ಯಯನದ ಬಗ್ಗೆ, ಅದರ ನಂತರ ನಡೆದ ವಿದ್ಯಮಾನಗಳ ಬಗ್ಗೆ ನನಗೆ ಮಾಹಿತಿ ಇತ್ತು. ರೋಗಿಯ ಅನುಮಾನ ಪರಿಹರಿಸಿ, ವಿವರಿಸಿ ‘ತಂಬಾಕು, ಸಿಗರೇಟು ಅನಾರೋಗ್ಯಕ್ಕೆ ದಾರಿ’ ಎಂಬುದನ್ನು ಮತ್ತೆ ಖಚಿತಪಡಿಸಿ ಕಳಿಸಿದೆ. ವಿಶ್ವ ತಂಬಾಕು ರಹಿತ ದಿನದಂದು (ಮೇ 31) ‘ತಂಬಾಕಿ ನಿಂದ ಕೋವಿಡ್ ತಡೆಗಟ್ಟಲು ಸಾಧ್ಯವೇ’ ಎಂಬ ಗೊಂದಲ ಉಂಟಾಗಿರುವುದು ಎಂಥ ವಿಪರ್ಯಾಸ ಎನಿಸಿಬಿಟ್ಟಿತು!

‘ಯುರೋಪಿಯನ್ ರೆಸ್ಪಿರೇಟರಿ ಜರ್ನಲ್’ ಎಂಬ ವೈಜ್ಞಾನಿಕ ನಿಯತಕಾಲಿಕ 2020ರ ಜುಲೈನಲ್ಲಿ ಜಗತ್ತಿನ ಗಮನ ಸೆಳೆಯುವಂತಹ ಒಂದು ಅಧ್ಯಯನ ವನ್ನು ಪ್ರಕಟಿಸಿತು. ಅಲ್ಲಿಯವರೆಗೆ, ಶ್ವಾಸಕೋಶಗಳ ಮೇಲೆ ದಾಳಿ ಮಾಡುವ ಕೋವಿಡ್‍ನಿಂದ ಧೂಮಪಾನಿಗಳಲ್ಲಿ ತೀವ್ರ ಕಾಯಿಲೆ ಮತ್ತು ಸಾವಿನ ಪ್ರಮಾಣ ಹೆಚ್ಚು ಎಂಬುದು ವಿಶ್ವ ಆರೋಗ್ಯ ಸಂಸ್ಥೆಯೂ ಒಳಗೊಂಡಂತೆ ವೈದ್ಯಕೀಯ ಜಗತ್ತು ಹೊಂದಿದ್ದ ಸಾಮಾನ್ಯ ಗ್ರಹಿಕೆ. ಆದರೆ ಈ ಅಧ್ಯಯನ ಹೇಳಿದ್ದು ‘ಧೂಮಪಾನಿಗಳು ಕೋವಿಡ್– 19 ಸೋಂಕಿಗೆ ಒಳಗಾಗುವ ಸಾಧ್ಯತೆಯೇ ಕಡಿಮೆ. ಒಂದೊಮ್ಮೆ ಸೋಂಕು ತಗುಲಿದರೂ ಐಸಿಯು ಸೇರುವುದು, ವೆಂಟಿಲೇಟರ್ ಬೇಕಾಗುವುದು, ಸಾವು ಇವು ವಿರಳ’.

ಈ ಅಧ್ಯಯನವು ಮಾಧ್ಯಮಗಳು ಹಾಗೂ ಜನರ ಗಮನ ಸೆಳೆದಷ್ಟು, ವೈದ್ಯ ಜಗತ್ತನ್ನು ‘ಅರೆ!’ ಎಂದು ಆಘಾತಕಾರಿ ಅಚ್ಚರಿ ಪಡಿಸಿದಷ್ಟು, ಅದರ ನಂತರ ಅದೇ ನಿಯತಕಾಲಿಕ ಪ್ರಕಟಿಸಿದ ‘ತಪ್ಪೊಪ್ಪಿಗೆ’ ಗಮನ ಸೆಳೆಯಲಿಲ್ಲ. ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಐವರು ಲೇಖಕರಲ್ಲಿ ಇಬ್ಬರು ತಂಬಾಕು ಉದ್ಯಮದೊಂದಿಗೆ ನಂಟು ಹೊಂದಿದ್ದರು, ಈ ಉದ್ಯಮದಿಂದ ಧನಸಹಾಯ ಪಡೆದಿದ್ದರು ಎಂಬುದು ಕಂಡುಬಂದಿತು.

ಕೋವಿಡ್‌ ಮತ್ತು ತಂಬಾಕು ನಂಟಿನ ಬಗ್ಗೆ ಹಲವು ಅಧ್ಯಯನಗಳು ಅಲ್ಲಲ್ಲಿ, ಸರಿಯಾಗಿ ಸಂಶೋಧನಾ ವಿಧಾನಗಳನ್ನು ಅನುಸರಿಸದೆ ಪ್ರಕಟವಾಗಿವೆ. ವೈಜ್ಞಾನಿಕವಾಗಿ ಅವುಗಳನ್ನು ಪರಿಶೀಲಿಸದೆ ಕೆಲವು ಮಾಧ್ಯಮಗಳು ಜಗತ್ತಿನಾದ್ಯಂತ ‘ಧೂಮಪಾನಿಗಳು ಕೋವಿಡ್‍ಗೆ ಒಳಗಾಗುವುದಿಲ್ಲ’ ಎಂದು ಪ್ರಚಾರವನ್ನೂ ಆರಂಭಿಸಿಬಿಟ್ಟಿವೆ. ಧೂಮಪಾನದ ವ್ಯಸನಿಗಳು ‘ವೈದ್ಯ ಹೇಳಿದ್ದೂ ತಂಬಾಕು, ರೋಗಿ ಬಯಸಿದ್ದೂ ತಂಬಾಕು’ ಎಂದು ತಮ್ಮ ವ್ಯಸನ ಮುಂದುವರಿಸಲು ಹೊಸ ಕಾರಣ ಹುಡುಕಿಕೊಂಡಿದ್ದಾರೆ.

ಮಾಧ್ಯಮಗಳು ಪ್ರಸಾರ ಮಾಡದ, ಜನರು ಗಮನಿಸದ, ವೈದ್ಯಕೀಯ ಜಗತ್ತಿನಲ್ಲಿ ಮಾತ್ರ ಮತ್ತೆ ಮತ್ತೆ ಎತ್ತಿ ತೋರಿಸುವ ಸತ್ಯಗಳು ಕೆಲವಿವೆ. ಅಂತಹ ಒಂದು ಸತ್ಯ, ‘2020ರಲ್ಲಿ ಕೋವಿಡ್‍ನಿಂದ ಸತ್ತಷ್ಟೇ ಜನ, ಅಂದರೆ 5 ಲಕ್ಷ ಜನ ಅಮೆರಿಕವೊಂದರಲ್ಲೇ ತಂಬಾಕಿನಿಂದಲೂ ಸತ್ತಿದ್ದಾರೆ’. ಇನ್ನು ಜನಸಂಖ್ಯೆ ಹೆಚ್ಚಿರುವ, ಅಂಕಿ-ಅಂಶಗಳು ನಿಖರವಾಗಿ ಲಭ್ಯವಾಗದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ?

ಜನರ ಮಾನಸಿಕ ನೆಲೆಗಟ್ಟೂ ಈ ದಿಕ್ಕಿನಲ್ಲಿ ಮುಖ್ಯವಾಗುತ್ತದೆ. ನಮ್ಮ ಮನಸ್ಸು ಯಾವಾಗಲೂ ನಮಗೆ ‘ಬೇಕು’ ಎನಿಸುವ ಅಭ್ಯಾಸಗಳನ್ನು ಸಮರ್ಥಿಸಿಕೊಳ್ಳುವ ಕಾರಣಗಳನ್ನು ಹುಡುಕುತ್ತಲೇ ಇರುತ್ತದೆ. ಅಂದರೆ ಮದ್ಯವ್ಯಸನಕ್ಕೆ ಜನರು ಕೊಡುವ ‘ಹಾರ್ಟ್‌ಗೆ ಒಳ್ಳೇದು ಅಂತ ಕುಡಿತೀವಿ’, ‘ಅಸ್ತಮಾಕ್ಕೆ ಸ್ವಲ್ಪ ಕುಡಿದರೆ ನಿಯಂತ್ರಣದಲ್ಲಿರುತ್ತೆ ಅಂತ ಯಾರೋ ಹೇಳಿದ್ರು’ ಇಂಥ ಅಂಶಗಳನ್ನು ಮುಂದಿಟ್ಟುಕೊಂಡು ಅದ ರಿಂದಾಗುವ ಅಪಾಯವನ್ನು ಗಣನೆಗೇ ತೆಗೆದುಕೊಳ್ಳದೆ ವ್ಯಸನವನ್ನು ಬಹುಜನ ಮುಂದುವರಿಸುತ್ತಾರೆ. ಅದೇ ರೀತಿ ತಂಬಾಕು- ಧೂಮಪಾನದ ಪ್ಯಾಕೆಟ್‍ಗಳ ಮೇಲೆ ಮುದ್ರಿಸಲಾಗಿರುವ ‘ಧೂಮಪಾನ/ ತಂಬಾಕು ಆರೋಗ್ಯಕ್ಕೆ ಹಾನಿಕರ ಎಂಬ ಹೇಳಿಕೆಯನ್ನೋ ಅಥವಾ ತಂಬಾಕಿನಿಂದ ಉಂಟಾದ ಕ್ಯಾನ್ಸರ್ ಗಡ್ಡೆಯಿಂದ ಜೀವಕ್ಕೆ ಅಪಾಯ ತಂದುಕೊಂಡ ಜಾಹೀರಾತನ್ನೋ ಜನರು ಗಮನಿಸುವುದೂ ಇಲ್ಲ, ಈ ರೀತಿ ನಮಗಾದೀತು ಎಂದರೆ ಹೆದರುವುದೂ ಇಲ್ಲ. ಆದರೆ ವಾರ್ತೆಯ ಮಧ್ಯೆ ಒಂದು ಸಣ್ಣ ಸುದ್ದಿಯಾಗಿ ಬರುವ ‘ಸಿಗರೇಟು ಸೇದುವವರಲ್ಲಿ ಕೋವಿಡ್ ಕಡಿಮೆ’ ಎಂಬ ದೃಢಪಡದ ಸಂಶೋಧನೆಯನ್ನು ಗಮನಿಸುವುದಷ್ಟೇ ಅಲ್ಲ, ನೆನಪಿಟ್ಟುಕೊಂಡು ತಮ್ಮ ವ್ಯಸನಕ್ಕೆ ಸಮರ್ಥನೆಯಾಗಿ ಉಪಯೋಗಿಸತೊಡಗುತ್ತಾರೆ. ವೈದ್ಯರಿಗೇ ಸವಾಲೆಸೆಯುತ್ತಾರೆ!

ವೈದ್ಯಕೀಯ ಜಗತ್ತು ಹಾಗೆಂದು ಕೈಕಟ್ಟಿ ಕುಳಿತಿಲ್ಲ. ಈ ದಿಸೆಯಲ್ಲಿ ಈಗಾಗಲೇ ಅಧ್ಯಯನಗಳು ಆರಂಭ ವಾಗಿವೆ. ಕೋವಿಡ್– 19 ಮತ್ತು ಧೂಮಪಾನದ ಬಗ್ಗೆ ಆತಂಕಕಾರಿ ಸತ್ಯಗಳೂ ಪ್ರಾಥಮಿಕ ಸಂಶೋಧನೆಗಳಲ್ಲಿ ಹೊರಬೀಳುತ್ತಿವೆ. ಕೋವಿಡ್- 19ರಿಂದ ಉಂಟಾಗುವ ಮಿದುಳಿನ ಸೋಂಕು ರೋಗಗಳು ಧೂಮಪಾನಿಗಳಲ್ಲಿ ಹೆಚ್ಚು ಎಂಬುದು ಕಂಡುಬಂದಿದೆ.

ಕೋವಿಡ್‍ನಿಂದ ನರಳದಿರಲು, ಸೋಂಕಿನಿಂದ ಹೊರಬರಲು, ವಿವಿಧ ರೀತಿಯ ಕಾಯಿಲೆಗಳಿಂದ ದೂರವಿರಲು, ಶ್ವಾಸಕೋಶವನ್ನು ಆರೋಗ್ಯವಾಗಿ ಡಲು ಧೂಮಪಾನ-ತಂಬಾಕುಗಳನ್ನು ತ್ಯಜಿಸಬೇಕು ಎಂಬ ಬಗ್ಗೆ ಜನರು ಕೇವಲ ಇತರರ ಮನವಿ- ಸಲಹೆಗಳಿಂದ, ಮಾಧ್ಯಮ- ಅಧ್ಯಯನಗಳಿಂದಷ್ಟೇ ಅಲ್ಲ ಸ್ವಾನುಭವದಿಂದ ಅರಿಯಬೇಕಾದ ಹೊತ್ತೂ ಇದಾಗಿದೆ. ಕೇಳಿದ್ದನ್ನು, ಕಂಡದ್ದನ್ನು ವಿವೇಚಿಸದೆ ನಂಬಿ, ಇನ್ನೊಬ್ಬರಿಗೆ ಹೇಳಿ ಬೇರೆಯವರನ್ನು ವಂಚಿಸ ದಿರೋಣ. ನಮಗೆ ನಾವೇ ಮೋಸ ಮಾಡಿಕೊಳ್ಳದಿರೋಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT