ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಈ ಹೊತ್ತಿನ ತುರ್ತು ಇ–ಹೊತ್ತಿಗೆ

ನಾನಾ ಅನುಕೂಲಗಳ ಕಾರಣದಿಂದ ಪ್ರಕಾಶಕರ ಚಿತ್ತ ಇ–ಪುಸ್ತಕದತ್ತ ಹೊರಳುತ್ತಿದೆ. ಆದರೆ ಓದುಗರಿಗೆ ಈ ವ್ಯವಸ್ಥೆಯಿಂದ ಓದಿನ ಅನುಭೂತಿ ಸಿಗುವುದೇ?
Last Updated 11 ಆಗಸ್ಟ್ 2020, 20:37 IST
ಅಕ್ಷರ ಗಾತ್ರ

ಕೊರೊನಾ ವೈರಾಣು ಸೃಷ್ಟಿಸಿರುವ ಬಿಕ್ಕಟ್ಟಿನ ಈ ಸನ್ನಿವೇಶದಲ್ಲಿ, ಹಲವು ಉದ್ಯಮಗಳಂತೆ ಪುಸ್ತಕೋದ್ಯಮ ಕೂಡ ತನ್ನ ಮಗ್ಗುಲು ಬದಲಿಸಿದೆ. ಈ ಮೊದಲು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗಷ್ಟೇ ಸೀಮಿತವಾಗಿದ್ದ ಇ-ಪುಸ್ತಕ ಎನ್ನುವ ಪರಿಕಲ್ಪನೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟಿದೆ.

ಲಾಕ್‍ಡೌನ್ ಅವಧಿಯಲ್ಲಿ ಪುಸ್ತಕ ಪ್ರಕಟಣೆಯ ಕೆಲಸ ಸ್ಥಗಿತಗೊಂಡಿದ್ದರಿಂದ ಕೆಲವು ಪ್ರಕಾಶಕರು ಇ-ಪುಸ್ತಕದ ಮೊರೆ ಹೋದರು. ಕನ್ನಡದ ಬಹುತೇಕ ಪ್ರಕಾಶಕರು ಈಗ ಇ-ಪುಸ್ತಕದ ಕುರಿತು ಆಸ್ಥೆ ತಳೆಯಲು ಕಾರಣಗಳಿಲ್ಲದಿಲ್ಲ. ಪುಸ್ತಕ ಪ್ರಕಟಣೆಗಾಗಿ ಬಳಸುವ ಕಚ್ಚಾ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಪುಸ್ತಕ ಪ್ರಕಟಣೆ ಎನ್ನುವುದು ಪ್ರಕಾಶಕರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಲೇಖಕರಿಗೆ ಗೌರವಧನ, ಪುಸ್ತಕಗಳ ಸಾಗಣೆ ವೆಚ್ಚ ಇದನ್ನೆಲ್ಲ ಪ್ರಕಾಶಕರು ಭರಿಸಬೇಕಾಗಿದೆ. ಈ ನಡುವೆ, ಪ್ರಕಟವಾದ ಪುಸ್ತಕಗಳನ್ನು ಅದ್ಧೂರಿ ವೇದಿಕೆಯ ಮೇಲೆ ಬಿಡುಗಡೆ ಮಾಡಬೇಕಾದ ಅನಿವಾರ್ಯ. ಆಹ್ವಾನ ಪತ್ರಿಕೆ, ಗಣ್ಯರ ಅಧ್ಯಕ್ಷತೆ, ಆಹ್ವಾನಿತರಿಗೆ ಉಪಾಹಾರದ ವ್ಯವಸ್ಥೆ, ಮಾಧ್ಯಮದವರಿಗೆ ಗೌರವಪ್ರತಿ ಹೀಗೆ ಅನೇಕ ಗಿಮಿಕ್‍ಗಳನ್ನು ಪುಸ್ತಕ ಬಿಡುಗಡೆಗಾಗಿ ಅನುಸರಿಸಬೇಕು. ನಂತರವೂ ಚರ್ಚೆ, ಸಂವಾದಗಳ ಮೂಲಕ ವ್ಯಾಪಕ ಪ್ರಚಾರ ಒದಗಿಸಬೇಕು. ಈ ಎಲ್ಲ ತಂತ್ರಗಳನ್ನು ಅನುಸರಿಸಿದಾಗ ಮಾತ್ರ ಪುಸ್ತಕೋದ್ಯಮದಲ್ಲಿ ಪ್ರಕಾಶಕ ತಳವೂರಲು ಸಾಧ್ಯ ಎನ್ನುವಂಥ ವಾತಾವರಣ ನಿರ್ಮಾಣವಾಗಿದೆ.

ಕನ್ನಡ ಪುಸ್ತಕೋದ್ಯಮದಲ್ಲಿ ಪ್ರಕಾಶಕರು ಎದುರಿಸುತ್ತಿರುವ ಇನ್ನೊಂದು ಮುಖ್ಯ ಸಮಸ್ಯೆ, ಓದುಗರು ಪುಸ್ತಕಗಳ ಖರೀದಿಯಲ್ಲಿ ಅಪೇಕ್ಷಿಸು
ತ್ತಿರುವ ಅಧಿಕ ಪ್ರಮಾಣದ ರಿಯಾಯಿತಿ. ಇಂಗ್ಲಿಷ್ ಭಾಷೆಯಲ್ಲಿನ ಪುಸ್ತಕಗಳ ಮಾರಾಟಕ್ಕಾಗಿ ರಿಯಾಯಿತಿಯಲ್ಲಿ ತೋರಿಸುತ್ತಿರುವ ಧಾರಾಳತನವು ಕನ್ನಡ ಪುಸ್ತಕಗಳ ಮಾರಾಟಕ್ಕೆ ತೊಡಕಾಗಿ ಪರಿಣಮಿಸಿದೆ. ಇಂಗ್ಲಿಷ್ ಪುಸ್ತಕಗಳ ಮಾರಾಟಕ್ಕೆ ವಿಸ್ತೃತ ಮಾರುಕಟ್ಟೆ ಇರುವುದರಿಂದ ಅದೇ ಧಾರಾಳತನವನ್ನು ಸೀಮಿತ ಮಾರುಕಟ್ಟೆ ಹೊಂದಿರುವ ಕನ್ನಡ ಪುಸ್ತಕಗಳ ಖರೀದಿಯಲ್ಲಿ ಅಪೇಕ್ಷಿಸುವುದು ತಪ್ಪು. ಇಂಥ ತಪ್ಪುಗಳು ಓದುಗರಿಗೆ ಮನವರಿಕೆಯಾಗಬೇಕು.

ಮಧ್ಯವರ್ತಿಗಳು, ಅಂದರೆ ಮಾರಾಟಗಾರರು ವಸ್ತುಗಳ ಖರೀದಿಯಲ್ಲಿ ಉತ್ಪಾದಕರಿಗೆ ಮುಂಗಡ ಹಣ ಪಾವತಿಸಿದ ಉದಾಹರಣೆಯೇ ಇಲ್ಲ. ಮಾರಾಟವಾದ ಪುಸ್ತಕಗಳ ಹಣ ಪಡೆಯುವುದಕ್ಕಾಗಿ ಪ್ರಕಾಶಕರು ಹಲವು ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ಹಣ ಪಡೆಯುವುದಕ್ಕಾಗಿ ಪ್ರಕಾಶಕರು ನ್ಯಾಯಾಲಯದ ಮೊರೆ ಹೋಗಿರುವಂತಹ ಸಂದರ್ಭಗಳೂ ಉಂಟು.

ಪ್ರಕಾಶಕರಿಗೆ ಆರ್ಥಿಕವಾಗಿ ಅನುಕೂಲವಾಗಲೆಂದು ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಮಾರಾಟ ಮಾಡುವ ಯೋಜನೆ ಚಾಲ್ತಿಯಲ್ಲಿದೆ. ಇಲ್ಲಿಯೂ ಅನೇಕ ಸಮಸ್ಯೆಗಳಿವೆ. ಸಾರ್ವಜನಿಕ ಗ್ರಂಥಾಲಯಕ್ಕೆ ಪುಸ್ತಕ ಖರೀದಿಸುವಾಗ ಪುಸ್ತಕದ ಮುಖಬೆಲೆಯ ಬದಲಾಗಿ ಪ್ರತಿಪುಟಕ್ಕೆ ಇಂತಿಷ್ಟು ಪೈಸೆಗಳೆಂದು ಸರ್ಕಾರ ನಿಗದಿಪಡಿಸಿದೆ. ಜೊತೆಗೆ, ಖರೀದಿಸುವ ಪುಸ್ತಕದ ಪ್ರತಿಗಳ ಸಂಖ್ಯೆಯನ್ನು ಕೂಡ ನಿಗದಿಪಡಿಸಲಾಗಿದೆ. ಈ ಎಲ್ಲ ನಿರ್ಬಂಧಗಳಿಗೆ ಒಳಗಾಗಿಯೂ ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಮಾರಾಟ ಮಾಡುವುದೇ ದೊಡ್ಡ ಸಾಹಸವಾಗಿ ಪರಿಣಮಿಸಿದೆ. ಲಾಬಿ, ಶಿಫಾರಸು, ಅಧಿಕಾರಿಗಳ ಓಲೈಕೆಯಂಥ ತಂತ್ರಗಳ ಮೊರೆ
ಹೋಗಬೇಕಾಗುತ್ತದೆ.

ಕನ್ನಡ ಪುಸ್ತಕೋದ್ಯಮ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಇ-ಪುಸ್ತಕ ಪ್ರಕಟಣೆಯು ಪ್ರಕಾಶಕರಿಗೆ ಪರಿಹಾರ ಮಾರ್ಗವಾಗಿ ಕಾಣಿಸುತ್ತಿದೆ. ಹಲವು ಬಗೆಯ ಖರ್ಚುಗಳನ್ನು ಉಳಿಸುವ ‘ಇ-ಪುಸ್ತಕ’ದ ಪರಿಕಲ್ಪನೆಯೇ ಪ್ರಕಾಶಕರನ್ನು ಈ ಯೋಜನೆಯತ್ತ ಉತ್ತೇಜಿಸುತ್ತಿದೆ. ಇಂತಹ ಸಂದರ್ಭದಲ್ಲಿ, ಈ ಯೋಜನೆಯ ಅಂತಿಮ ಫಲಾನುಭವಿಗಳ, ಅಂದರೆ ಓದುಗರ ಕುರಿತು ವಿವೇಚಿಸುವುದು ಒಳಿತು. ಆನ್‍ಲೈನ್ ಮೂಲಕ ಪುಸ್ತಕಗಳನ್ನು ಖರೀದಿಸುವವರ ಸಂಖ್ಯೆಯೇ ವಿರಳವಾಗಿರುವಾಗ ಇನ್ನು ಇ-ಪುಸ್ತಕಗಳಿಗೆ ಓದುಗರನ್ನು ಲಭ್ಯವಾಗಿಸುವುದೊಂದು ದೊಡ್ಡ ಸಾಹಸವೇ ಸರಿ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇ-ಪುಸ್ತಕವನ್ನು ಅಸಂಖ್ಯಾತ ಓದುಗರಿಗೆ ಸುಲಭವಾಗಿ ತಲುಪಿಸಬಹುದು. ಆದರೆ ಇದೇ ಮಾತನ್ನು ಕನ್ನಡ ಸಾಹಿತ್ಯ ಕೃತಿಗಳ ಓದುಗರಿಗೆ ಅನ್ವಯಿಸಿ ಹೇಳುವುದು ತಪ್ಪು ನಿರ್ಧಾರವಾಗುತ್ತದೆ.

ಕನ್ನಡ ಸಾಹಿತ್ಯ ಕೃತಿಗಳನ್ನು ಪ್ರಕಟಿತ ಪುಸ್ತಕ ರೂಪದಲ್ಲಿ ಓದುವುದೇ ಚೆಂದದ ಸಂಗತಿ ಎನ್ನುವವರಿದ್ದಾರೆ. ಜೊತೆಗೆ ಕನ್ನಡ ಪುಸ್ತಕಗಳನ್ನು ಓದುವವರಲ್ಲಿ ವೃದ್ಧರು ಮತ್ತು ಮಧ್ಯವಯಸ್ಕರ ಸಂಖ್ಯೆಯೇ ಹೆಚ್ಚು. ಈ ವಯೋಮಾನದ ಓದುಗರನ್ನು ಇ-ಪುಸ್ತಕದ ಓದಿಗೆ ಹೊಂದಿಕೊಳ್ಳುವಂತೆ ಮಾಡುವುದು ಸವಾಲಿನ ಕೆಲಸ. ಆದರೆ, ಪುಸ್ತಕ ಖರೀದಿಸುವವರಲ್ಲಿ ಯುವಕರೇ ಜಾಸ್ತಿ ಎಂಬ ವರದಿಯೂ ಇದೆ.

ಪ್ರಕಾಶಕರು ಇ-ಪುಸ್ತಕ ಯೋಜನೆಯನ್ನು ಕಾರ್ಯರೂಪಕ್ಕೆ ತಂದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರ ಅಸಂಖ್ಯಾತ ಓದುಗರನ್ನು ಕಳೆದುಕೊಳ್ಳಬಹುದು ಎನ್ನುವ ಆತಂಕ ಸೃಷ್ಟಿಯಾಗಿದೆ. ಇದರ ನಡುವೆಯೂ ಪುಸ್ತಕ ತನ್ನ ಮೊದಲಿನ ರೂಪದಲ್ಲೇ ಓದುಗರಿಗೆ ಲಭ್ಯವಾಗಲಿದೆ ಎನ್ನುವ ಭರವಸೆಯ ಮಾತುಗಳನ್ನೂ ಕೆಲವು ಪ್ರಕಾಶಕರು ಆಡಿದ್ದಾರೆ. ಅವರ ಪ್ರಕಾರ, ಇ-ಪುಸ್ತಕವು ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಒಂದು ಪರ್ಯಾಯವೇ ವಿನಾ ಅದೇ ಪರಿಹಾರವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT