ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಯಜ್ಞದಲ್ಲೊಂದು ಸಂಗೀತ ಲೋಕ

ಮಕ್ಕಳಲ್ಲಿ ಸಂಗೀತ ಸಾಕ್ಷರತೆ ಅಂಕುರಿಸುವುದು ಮೆದುಳಿನ ಬೆಳವಣಿಗೆಗೆ ಪೂರಕ
Last Updated 20 ಜೂನ್ 2021, 20:58 IST
ಅಕ್ಷರ ಗಾತ್ರ

ಮಗು ಶಾಲೆಯಿಂದ ಮನೆಗೆ ಮರಳುವಾಗ ಪೋಷಕರು ನಿರೀಕ್ಷಿಸುವುದು ಅದರ ಮುಖದಲ್ಲಿನ ಮಂದಹಾಸವನ್ನು, ಇಂದೇನೊ ಹೊಸದು ಕಲಿತೆ ಎನ್ನುವ ಸಂತೃಪ್ತ ಭಾವವನ್ನು. ಆದರೆ ಆ ಹಿಗ್ಗು ಎಷ್ಟರಮಟ್ಟಿಗೆ ಮೂಡಿರುತ್ತದೆ? ಇವೊತ್ತು ಇಷ್ಟು ಅರಿತೆ, ಕಲಿತೆ ಎನ್ನುವುದು ಗೌಣವಾಗಿರುತ್ತದೆ. ಮಗು ಮರುದಿನ ಪೂರೈಸಿಕೊಂಡು ಹೋಗಬೇಕಾದ ಲೆಕ್ಕಗಳ ಯಾದಿಯನ್ನೋ ಕಂಠಪಾಠ ಮಾಡಬೇಕಾದ ಪದ್ಯವನ್ನೋ ಇಲ್ಲವೆ ಸಿದ್ಧಪಡಿಸಬೇಕಾದ ಮಾಡೆಲ್ಲಿನ ವಿವರವನ್ನೋ ಪೋಷಕರಿಗೆ ಒಡ್ಡಿರುತ್ತದೆ.

ಶಿಕ್ಷಣದ ಉದ್ದೇಶ ಮಾಹಿತಿಯ ಪರಿಚಾರಿಕೆಅಲ್ಲ. ಅದು ಮಕ್ಕಳ ಒಳನೋಟಗಳ ಸಮೃದ್ಧಿಯನ್ನು ಲಕ್ಷ್ಯದಲ್ಲಿ ಇರಿಸಿಕೊಳ್ಳುವುದು ಮುಖ್ಯವಾಗುತ್ತದೆ. ಜಗತ್ತಿನ ಪ್ರತೀ ಶಾಲೆಯ, ಪ್ರತೀ ತರಗತಿಯ ಪ್ರತೀ ವಿದ್ಯಾರ್ಥಿಗೂ ಪ್ರಿಯವಾಗುವ ಪಾಠವೊಂದಿದ್ದರೆ ಅದುವೆ ಸಂಗೀತ.

ಅರವತ್ತು- ಎಪ್ಪತ್ತರ ದಶಕಗಳ ಮಾತು. ಯಾರಾದರೂ ಬೋಧಕರು ರಜೆಯಲ್ಲಿದ್ದರೆ ಅವರ ತರಗತಿಗಳನ್ನು ಬಿಡುವಿರುವ ಬೋಧಕರು ತೆಗೆದುಕೊಳ್ಳುತ್ತಿದ್ದರು. ಮಕ್ಕಳಿಗೆ ನೀತಿ ಕಥೆ, ಉಪಯುಕ್ತ ಮಾಹಿತಿ ಅವರಿಂದ ಸಲ್ಲುತ್ತಿತ್ತು. ಮಾತ್ರವಲ್ಲ, ಮಕ್ಕಳಿಂದಲೂ ಹಾಡು, ಪಾಡು ಹೇಳಿಸಲಾಗುತ್ತಿತ್ತು. ಇದರಿಂದಾಗಿ ಅವರಲ್ಲಿ ಸಂಗೀತ ಸಾಕ್ಷರತೆ ಅಂಕುರಿ ಸುತ್ತಿತ್ತು. ಶಿಕ್ಷಣವೆಂದರೆ ಪರೀಕ್ಷೆ, ಪರೀಕ್ಷೆಯೆಂದರೆ ಅಂಕಗಳು ತುಂಬಿತುಳುಕುವ ಪಟ್ಟಿ ಎಂಬ ಅಂಬೋಣವೆ ಪಠ್ಯೇತರ ಚಟುವಟಿಕೆಗಳ ನಿರ್ಲಕ್ಷ್ಯಕ್ಕೆ ಮೂಲ.

ನಮ್ಮ ಶಾಲೆಗಳಲ್ಲಿ ಶಾಸ್ತ್ರೀಯ ಸಂಗೀತ ಕಡ್ಡಾಯ ಗೊಳಿಸಬೇಕಿಲ್ಲ. ಅದನ್ನು ಕ್ರೀಡೆಯಂತೆ ಪಠ್ಯೇತರ ಚಟುವಟಿಕೆಯಾಗಿಸಿದರೆ ಸಾಕು, ಮಕ್ಕಳಿಗೆ ಸಲ್ಲುವ ಉಪಯೋಗಗಳು ಒಂದೆರಡಲ್ಲ. ಮೊದಲಿಗೆ ಶಾಲೆಯಲ್ಲಿರುವುದೇ ಅವರಿಗೆ ಖುಷಿಯೆನ್ನಿಸುತ್ತದೆ. ಸ್ವರ ಸಂಯೋಜನೆ ಪಾಠಗಳ ಆಕರ್ಷಣೆ ಹೆಚ್ಚಿಸ
ಬಲ್ಲದು. ಕಬ್ಬಿಣದ ಕಡಲೆ ಎನ್ನಿಸಬಹುದಾದ ಗಣಿತ ಕೂಡ ಅವರಿಗೆ ಸರಾಗವೆನ್ನಿಸುವುದು. ‘ಒಂದು ಎರಡು ಬಾಳೆಲೆ ಹರಡು, ಮೂರು ನಾಲ್ಕು ಅನ್ನ ಹಾಕು...’ ಎಳೆಯರನ್ನು ಗಣಿತಕ್ಕೆ ಪರಿಚಯಿಸುವ ಪರಿ ಮನೆಮಾತು.

ಮೆದುಳಿನ ಬೆಳವಣಿಗೆಗೆ ಪೂರಕವಾದ ಭಾವನೆ ಗಳ ಭಾಷೆ ಸಂಗೀತ- ಯಾವುದೇ ಪದ್ಧತಿಯದ್ದಿರಲಿ, ಆ ವಿಶೇಷವನ್ನು ಕಟ್ಟಿಕೊಡುತ್ತದೆ. ಸಂಗೀತಾಭ್ಯಾಸ ದಿಂದ ಪದಸಂಪತ್ತು ಹಾಗೂ ಸ್ಮರಣಶಕ್ತಿ ವೃದ್ಧಿ, ಸಾವಧಾನ ಭಾವ. ಉಚ್ಚಾರಣೆಯೂ ಸ್ಪಷ್ಟವಾಗಿರುತ್ತದೆ. ಸಂಗೀತವು ಮಕ್ಕಳಲ್ಲಿ ಸ್ವಯಂ ಶಿಸ್ತು ಮತ್ತು ನಿರ್ವಹಣಾ ಕೌಶಲ ಕಲಿಸುತ್ತದೆ. ಬಹುಭಾಷಿಕತೆಗೆ ಕೈಮರವಾಗುತ್ತದೆ. ಆಲಿಸುವ ಕೌಶಲ ರೂಪುಗೊಂಡು ಮಕ್ಕಳು ಭವಿಷ್ಯದಲ್ಲಿ ಆತ್ಮವಿಶ್ವಾಸಿಗಳಾದಾರು.

ವಿಶ್ವವಿಖ್ಯಾತ ವಿಜ್ಞಾನಿ ಐನ್‍ಸ್ಟೀನ್ ಬಾಲ್ಯದಲ್ಲೇ ಪಿಟೀಲು, ಪಿಯಾನೊ ಕಲಿತರು. ತಮ್ಮ ಕೊನೆಯ ದಿನಗಳಲ್ಲೂ ಅವರು ಅವನ್ನು ಬಿಡಲಿಲ್ಲ. ಅವರ ಉಲ್ಲಾಸದ ರಹಸ್ಯ ಸಂಗೀತವಾಗಿತ್ತು. ಪ್ರತಿವರ್ಷ ಜೂನ್ 21 ‘ವಿಶ್ವ ಸಂಗೀತ ದಿನ’. ನಾದದ ಮೂಲಕ ಜಗತ್ತೆಲ್ಲ ಒಂದು, ಅಭಿನ್ನ ಎಂದು ಜಾಗತಿಕ ಸೌಹಾರ್ದ ಎತ್ತಿಹಿಡಿಯುವ ಸಂದರ್ಭ.

ವಿಶ್ವದ ಹವ್ಯಾಸಿ ಹಾಗೂ ವೃತ್ತಿಪರ ಸಂಗೀತ ಗಾರರನ್ನೆಲ್ಲ ಗೌರವಿಸುವ ಈ ಅರ್ಥವತ್ತಾದ ಅಭಿಯಾನದ ರೂವಾರಿ ಫ್ರಾನ್ಸಿನ ರೇಡಿಯೊ ಕೇಂದ್ರಕ್ಕೆ ಕಾರ್ಯ ನಿರ್ವಹಿಸುತ್ತಿದ್ದ ಅಮೆರಿಕದ ಜೋಲ್ ಕೊಹನ್. ಅವರು 1970ರ ಜೂನ್‍ನಲ್ಲಿ ಬೇಸಿಗೆಯ ಮೊದಲ ದಿನವನ್ನು ಸ್ವಾಗತಿಸುವ ಸಲುವಾಗಿ ಹೊಸ ಹಾಡುಗಳನ್ನು ರಚಿಸಿ ಪ್ರಸಾರ ಮಾಡಿದ್ದೆ ಬಂತು. 1982ರಲ್ಲಿ ಫ್ರಾನ್ಸಿನ ಸರ್ಕಾರ ಅವರ ಉತ್ಸಾಹಕ್ಕೆ ಅಧಿಕೃತ ಮನ್ನಣೆ ನೀಡಿತು.

ಮಕ್ಕಳು ವಿದ್ಯಾರ್ಜನೆಗೆ ಬೆನ್ನು ತೋರಿಸುತ್ತಾರೆ, ಪಾಠ ಪ್ರವಚನಗಳು ಅವರಿಗೆ ಅಪಥ್ಯ ಮುಂತಾಗಿ ನಮ್ಮ ದೂರುಗಳ ಸರಮಾಲೆ. ಶೈಕ್ಷಣಿಕ ವಿಷಯಗಳು ಅವರಿಗೆ ಏಕೆ ಹಿಡಿಸವು, ಪರಿಹಾರವೇನು ಎಂಬ ಬಗ್ಗೆ ಅಷ್ಟಾಗಿ ಅವಲೋಕನ ನಡೆದಿಲ್ಲ. ಹಾಗಾಗಿ ಮಕ್ಕಳ ಮನಸ್ಸನ್ನು ಚೇತೋಹಾರಿಯಾಗಿಸುವ ಒಂದು ಘಟಕವನ್ನು ಶಾಲೆಯಲ್ಲೇ ಸ್ಥಾಪಿಸಬೇಕು. ಅದುವೇ ಸಂಗೀತ.

ಇಲ್ಲೊಂದು ಸೂಕ್ಷ್ಮವೂ ನಿಷ್ಠುರವೂ ಆದ ಕಿವಿಮಾತಿದೆ. ಪೋಷಕರೇ, ನೀವು ನಿಮ್ಮ ಮಕ್ಕಳನ್ನು ಕಳಿಸುವ ಶಾಲೆಯಲ್ಲಿ ಸಂಗೀತ ಪಾಠದ ವ್ಯವಸ್ಥೆಯಿಲ್ಲವಾದರೆ, ಖಾಸಗಿಯಾಗಿಯಾದರೂ ಸಂಗೀತ ಹೇಳಿಸುವ ಮನಸ್ಸು ಮಾಡಿ. ಮೈ, ಮನಸ್ಸನ್ನು ಒಂದುಗೂಡಿಸುವ ಶಕ್ತಿ ಸಂಗೀತಕ್ಕಿದೆ. ಸಮೂಹಪ್ರಜ್ಞೆ ಮತ್ತು ಸೃಜನಶೀಲತೆ ಯನ್ನು ಅದು ಉದ್ದೀಪನಗೊಳಿಸುತ್ತದೆ. ವಿಪರ್ಯಾಸ ವೆಂದರೆ ಆಧುನಿಕ ತಂತ್ರಜ್ಞಾನವು ಸಂಯೋಜಕರ ಪಾತ್ರ ಕುಗ್ಗಿಸಿ ಹಾಡುಗಾರರ ಪಾತ್ರ ಹಿಗ್ಗಿಸಿದೆ! ಸಂಯೋಜಕರು ಮತ್ತು ಹಾಡುಗಾರರ ನಡುವೆ ಪರಿಚಯವಿಲ್ಲದಿದ್ದರೂ ಹಾಡು ಹೊಮ್ಮುವುದೂ ಉಂಟೆನ್ನಿ! ಇದರಿಂದಾಗಿ ಸಂಗೀತ ಸಾಕ್ಷರತೆ ಕ್ರಮೇಣ ಕಡಿಮೆಯಾಗುತ್ತಿದೆ.

ಕ್ರಿ.ಪೂ. 350ರ ಸುಮಾರಿನಲ್ಲೇ ಅರಿಸ್ಟಾಟಲ್ ‘ಚಾರಿತ್ರ್ಯ ನಿರ್ಮಿಸುವ ಶಕ್ತಿಯಿರುವ ಕಾರಣ ಯುವಕರ ಶಿಕ್ಷಣ ಪ್ರಕ್ರಿಯೆಯಲ್ಲಿ ಸಂಗೀತಕ್ಕೆ ಅಗ್ರ ಮಾನ್ಯತೆಇರಬೇಕು’ ಎಂದಿದ್ದ. ಕನ್‍ಫ್ಯೂಷಿಯಸ್ ಹೇಳುವಂತೆ, ಸಂಗೀತ ಮನುಷ್ಯನ ಸ್ವಭಾವಕ್ಕೆ ಅತೀತವಾದ ಆನಂದ ಒದಗಿಸುತ್ತದೆ.

ಸಂಗೀತ ಸರ್ವರಿಗೂ ಒಲಿಯುವ ಸ್ವತ್ತು. ಒಟ್ಟಿಗೆ ಹಾಡುವುದರಿಂದ ಅಥವಾ ವಾದ್ಯ ನುಡಿಸುವುದ ರಿಂದ ಮಕ್ಕಳಲ್ಲಿ ಪರಸ್ಪರ ಸ್ನೇಹಪರತೆ, ಸಹಕಾರ ತತ್ವ ಮೈದಳೆಯುತ್ತದೆ. ಮೂಲತಃ ತರಗತಿಯಲ್ಲಿ ಬೋಧಕರ ಪಾಠ ಇಂಪು ಧ್ವನಿಯಲ್ಲಿದ್ದರೆ ಮಕ್ಕಳ ಮನಸೆಳೆಯುತ್ತದೆ. ಶಾಲೆಯು ಮನೆಯ
ವಿಸ್ತರಣೆಯೆನ್ನಿಸಿ ಸುರಕ್ಷಿತ ತಾಣವಾದೀತು. ಒತ್ತಡ, ಜಂಜಡವೇ ಮೇಲಾಗುತ್ತಿರುವ ಈ ದಿನಮಾನ
ಗಳಲ್ಲಿ ದೂರದರ್ಶಿತ್ವದ ಶಿಕ್ಷಣಯಜ್ಞವು ಸಂಗೀತವನ್ನು ಒಳಗೊಳ್ಳುವ ಜರೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT