ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಪುಸ್ತಕ ‘ಕಾಣೆ’ ಆಗಬೇಕಿದೆ!

Published 22 ಏಪ್ರಿಲ್ 2024, 19:19 IST
Last Updated 22 ಏಪ್ರಿಲ್ 2024, 19:19 IST
ಅಕ್ಷರ ಗಾತ್ರ

ಬಸ್ಸಿಗಾಗಿ ಕಾಯುತ್ತಾ ನಿಲ್ದಾಣದಲ್ಲಿ ಗೆಳೆಯನೊಂದಿಗಿದ್ದೆ. ಅವನ ಕೈಯಲ್ಲಿ ಐದಾರು ಪುಸ್ತಕಗಳಿದ್ದವು. ಇಬ್ಬರೂ ಶೌಚಕ್ಕೆ ಹೋಗಬೇಕಾಯಿತು. ಅವನು ಪುಸ್ತಕಗಳನ್ನು ಬೆಂಚ್ ಮೇಲೆ ಇಟ್ಟು ಬಂದ. ‘ಯಾರಾದರೂ ಕದ್ದುಬಿಟ್ಟರೆ?’ ಆಶ್ಚರ್ಯದಿಂದ ಕೇಳಿದೆ. ‘ಪುಸ್ತಕಗಳು ಯಾರಿಗೆ ಬೇಕಿದೆ? ಓದಲು ಬರುವವರೇ ಓದ್ತಿಲ್ಲ ಅಂದ್ಮೇಲೆ ಈ ಪುಸ್ತಕಗಳನ್ನು ಯಾರು ಎತ್ತಿಕೊಂಡು ಹೋಗ್ತಾರೆ’ ಅಂದ.‌ ನಾವು ಹೋಗಿ ತಿರುಗಿ ಬಂದಮೇಲೂ ಅಲ್ಲಿ ಆ ಪುಸ್ತಕಗಳು ಹಾಗೇ ಇದ್ದವು. ಪುಸ್ತಕಗಳು ಕದಿಯಲು ಕೂಡ ಯೋಗ್ಯವಲ್ಲದ ವಸ್ತುಗಳಾಗಿ ಹೋದವೇ ಅನಿಸಿತು.

ನನ್ನ ಪ್ರೌಢಶಾಲೆಯ ಗುರುಗಳು ಶಾಲಾ ಲೈಬ್ರರಿಯಲ್ಲಿ ಪುಸ್ತಕ ಕಾಣೆಯಾದರೆ ಖುಷಿಪಡುತ್ತಿದ್ದರು. ಪುಸ್ತಕವನ್ನು ಯಾರಾದರೂ ಕದ್ದಿದ್ದಾರೆ ಅಂದರೆ ಅದನ್ನು ಓದುವವರೇ ಕದ್ದಿದ್ದಾರೆ ಅನ್ನುತ್ತಿದ್ದರು. ಒಂದು ಪುಸ್ತಕದ ಆಸೆ ಕೂಡ ಅದೇ ಆಗಿರುತ್ತದೆ, ತನ್ನನ್ನು ಯಾರಾದರೂ ಓದಲಿ ಎಂಬುದು.‌ ಈಗೀಗ ಪುಸ್ತಕಗಳು ಕಾಣೆ ಕೂಡ ಆಗುತ್ತಿಲ್ಲ. ಮುದ್ರಣದ ಘಮ ವರ್ಷಗಳಾದರೂ ಪುಸ್ತಕದೊಳಗೆ ಹಾಗೇ ಉಳಿದುಬಿಟ್ಟಿರುತ್ತದೆ. 

ನಮ್ಮ ಈ ಕಾಲದ ಓದು ಅಂದರೆ ಅದು ಪರೀಕ್ಷೆಗೆ ಓದುವುದೇ ಆಗಿದೆ‌. ಹತ್ತನೇ ತರಗತಿಯ ಹುಡುಗನೊಬ್ಬನಿಗೆ ಶಾಲಾ ಆರಂಭದಲ್ಲಿ ಒಂದು ಕತೆ‌ ಪುಸ್ತಕವನ್ನು ಓದಲು ಕೊಟ್ಟಿದ್ದೆ. ಎರಡನೇ ದಿನಕ್ಕೆ ಅವನ ಪೋಷಕರು ಬಂದರು. ‘ನನ್ನ ಮಗ ಬರೀ ಇದೇ ಪುಸ್ತಕ ಹಿಡಿದು ಕೂತಿದ್ದಾನೆ. ಇದರಿಂದ ಏನು ಮಾರ್ಕ್ಸ್ ಬರ್ತಾವಾ?’ ಎಂದು ಕೇಳಿದರು. ಓದುಗವರ್ಗವೊಂದು ಸೃಷ್ಟಿಯಾಗುವ ಮೊದಲೇ ಹೀಗೆ ಬಾಡಿ ಹೋಗುತ್ತದೆ. 

ಈಗಿನ ಕಾಲದ ಆದ್ಯತೆಗಳು ಬೇರೆ. ಓದು ಒಂದು ಆದ್ಯತೆ ಆಗಿರುವುದು ಬರೀ ಲೇಖಕನಿಗೆ ಮತ್ತು ಒಂದಷ್ಟು ಸಾಹಿತ್ಯದ ಅಭಿರುಚಿ ಇರುವವರಿಗೆ ಮಾತ್ರ. ನಾನು ಒಮ್ಮೆ ಒಂದು ಬಂಡಲ್ ಪುಸ್ತಕ ಖರೀದಿ ಮಾಡಿ ತರುವಾಗ ಕೆಲವರು ನನ್ನನ್ನು ಪಾಪ ಅನ್ನುವಂತೆ ನೋಡುತ್ತಿದ್ದರು.‌ ಎಷ್ಟೊಂದು ಹಣ ವ್ಯರ್ಥ ಮಾಡುತ್ತಿದ್ದಾನೆ ಅನ್ನುವಂತಿತ್ತು ಅವರ ಭಾವ. ಅದಕ್ಕಿಂತ ಒಂದು ಮಸಾಲೆದೋಸೆ ತಿನ್ನುವುದು ಮೇಲು, ಹೊಟ್ಟೆಯಾದರೂ ತುಂಬುತ್ತದೆ ಎಂಬುದು ಅವರ ಅಭಿಪ್ರಾಯ ಆಗಿದ್ದಿರಬಹುದು.

ಓದು ಅಂದರೆ ಅಂಕ, ಓದು ಅಂದರೆ ನೌಕರಿ, ಓದು ಅಂದರೆ‌ ದುಡ್ಡು ಎಂದಾಗಿರುವಾಗ, ಓದು ಅಂದರೆ ನಮ್ಮನ್ನು ನಾವು ಕಂಡುಕೊಳ್ಳುವ ಬಗೆ ಅಂತ ಹೇಳಿದರೆ ಹಾಗೆ ಹೇಳಿದವನನ್ನು ನೋಡಿ ನಕ್ಕಾರು! ಸಮಾಜ ಈಗೀಗ ನೈತಿಕ ಅಧಃಪತನಕ್ಕೆ, ಮೌಲ್ಯಗಳ ಅಧೋಗತಿಗೆ ತಲುಪಿರುವುದಕ್ಕೆ ನಾವು ಪುಸ್ತಕಗಳಿಂದ ವಿಮುಖವಾಗಿರುವ ಕಾರಣವೂ ಒಂದು. ಓದು ತೊರೆದ ನಾಡಿಗೆ ನಿಜಕ್ಕೂ ಭವಿಷ್ಯ ಇದೆಯೇ?

ಪುಸ್ತಕ ಓದುವುದರಿಂದ ಏನು ದಕ್ಕುತ್ತದೆ ಎಂಬುದು ಈಗಿನ ಪೀಳಿಗೆಗೆ ಗೊತ್ತಿಲ್ಲ. ಓದು ಕೊಡುವ ಸುಖದ ಪರಿಚಯ ಇಲ್ಲ. ಅದು ದಯಪಾಲಿಸುವ ಹಲವು ಜಗತ್ತುಗಳ ದರ್ಶನದ ಅರಿವಿಲ್ಲ. ತಮ್ಮೊಳಗೆ ತಮಗೆ ಗೊತ್ತಿಲ್ಲದೇ ಆಗುವ ಬದಲಾವಣೆಯ ಸಾಧ್ಯತೆಯ ಬಗ್ಗೆ ಗೊತ್ತಿಲ್ಲ.‌ ಸಾಧನೆ ಎಂಬುದನ್ನು ಹಣದಲ್ಲಿ ವ್ಯಾಖ್ಯಾನಿಸುವ ಕಾಲದಲ್ಲಿ ಪುಸ್ತಕ ಒದಗಿಸುವ ಜ್ಞಾನ, ಅದು ಕೊಡುವ ನಮ್ಮ ವರ್ತನೆಯಲ್ಲಿನ ಒಂದು ಧನ್ಯತೆ ನಮಗೆ ಬೇಕಾಗಿಲ್ಲ.

ಪುಸ್ತಕ ಓದುವಿಕೆಗೆ ಸಂಬಂಧಿಸಿದಂತೆ ಇನ್ನೊಂದು ಮುಖವಿದೆ. ಪುಸ್ತಕಗಳು ಸರಿಯಾಗಿ ಮಾರಾಟ ಆಗುತ್ತಿಲ್ಲ, ಓದುವವರ ಸಂಖ್ಯೆ ತೀರಾ ಕಮ್ಮಿ ಆಗಿದೆ ಎಂಬ ಮಾತು ಪೂರ್ಣ ಸರಿಯೂ ಅಲ್ಲ ಮತ್ತು ತಪ್ಪು ಕೂಡ ಅಲ್ಲ. ನಮ್ಮಲ್ಲಿ ಉತ್ತಮ ಪುಸ್ತಕಗಳೂ ಇವೆ, ಉತ್ತಮ ಓದುಗರೂ ಇದ್ದಾರೆ (ಅವರ ಸಂಖ್ಯೆ ಕಡಿಮೆ ಇರಬಹುದು). ಆ ಓದುಗನ ಕೈಗೆ ಆ ಪುಸ್ತಕಗಳು ಸರಿಯಾಗಿ ಸಿಗುತ್ತಿಲ್ಲ. ಅದಕ್ಕೆ ಅದರದೇ ಆದ ಕಾರಣಗಳೂ ಇರಬಹುದು. 

ಗೋವಾದಿಂದ ಪ್ರಕಾಶನಗೊಂಡ ಕನ್ನಡದ ಒಂದು ಕವನ ಸಂಕಲನ ತರಿಸಿಕೊಳ್ಳಲು ಐದಾರು ತಿಂಗಳು ಕಷ್ಟಪಟ್ಟೆ. ಬರಹಗಾರ ಮತ್ತು ಓದುಗ ಹಾಗೂ ಪುಸ್ತಕ ಮಾರುವವ ಮತ್ತು ಕೊಳ್ಳುವವನ ನಡುವೆ ಸರಿಯಾದ ಸಂಪರ್ಕ ಸಾಧ್ಯವಾಗುತ್ತಿಲ್ಲ. ಎಷ್ಟೋ ಜನ ‘ಪುಸ್ತಕವನ್ನು ಆನ್‌ಲೈನ್‌ನಲ್ಲಿ ತರಿಸಿಕೊಳ್ಳುವುದು ಹೇಗೆ?’ ಎಂದು ಕೇಳುತ್ತಾರೆ. ಅವರಿಗೆ ಓದುವ ಹಂಬಲವಿದೆ. ತಮಗೆ ಬೇಕಾದ ಪುಸ್ತಕಗಳು ಎಲ್ಲಿ ಸಿಗುತ್ತವೆ ಎಂಬುದು ಗೊತ್ತಾಗುವುದಿಲ್ಲ.‌

ವರ್ಷಕ್ಕೆ ಲಕ್ಷಾಂತರ ಪುಸ್ತಕಗಳು ಬಿಡುಗಡೆಆಗುತ್ತವೆ‌. ಓದುಗರ ಗಮನಕ್ಕೆ ಬರುವುದು ಬರೀ ನೂರಾರು ಪುಸ್ತಕಗಳಷ್ಟೇ. ಯಾಕೆ ಹೀಗೆ ಆಗುತ್ತದೆ? ಯೋಚಿಸಬೇಕಾಗಿದೆ. ಓದುಗ ಇತ್ತೀಚೆಗೆ ಕನ್ನಡದಲ್ಲಿ ಒಳ್ಳೆಯ ಪುಸ್ತಕಗಳು ಬರುತ್ತಿಲ್ಲ ಎಂದು ದೂರುತ್ತಿದ್ದಾನೆ. ಇದಕ್ಕೆ ಒಳ್ಳೆಯ ಪುಸ್ತಕಗಳು ಅವನ ಗಮನಕ್ಕೆ ಬರದೇಹೋದುದು ಕಾರಣ ಆಗಿರಬಹುದು.‌

ಪುಸ್ತಕ ಖರೀದಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗುತ್ತದೆ. ಜನರು ಅದರಿಂದ ತಮಗೇನೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ. ಪ್ರಕಾಶಕ ತನಗೆ ನಷ್ಟವಾಯಿತು ಎನ್ನುತ್ತಾನೆ. ಲೇಖಕನೂ ತನಗೆ ಸಿಕ್ಕಿದ್ದು ಪುಡಿಗಾಸು ಅನ್ನುತ್ತಾನೆ‌. ಯಾಕೆ ಹೀಗಾಗುತ್ತಿದೆ? ಈ ಪುಸ್ತಕ ದಿನದ (ಏ. 23) ನೆವದಲ್ಲಾದರೂ ಇದರ ಬಗ್ಗೆ ಗಂಭೀರ ಚರ್ಚೆಯಾಗಬೇಕು.

ಒಂದು ನೆನಪಿರಲಿ, ಜನ ಪುಸ್ತಕ ಓದಿಲ್ಲ ಎಂದರೆ ಅದರ ನಷ್ಟ ಪ್ರಕಾಶಕನಿಗೆ, ಲೇಖಕನಿಗೆ ಅನ್ನುವುದಕ್ಕಿಂತ ಸಮಾಜಕ್ಕೆ ಅನ್ನುವುದು ಹೆಚ್ಚು ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT