ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮಕ್ಕಳಿಂದ ತಪ್ಪು; ಪರಿವರ್ತನೆಯೇ ಪರಿಹಾರ

ಮಕ್ಕಳಸ್ನೇಹಿ ಕ್ರಮಗಳ ಮೂಲಕ ಸರಿ–ತಪ್ಪುಗಳ ಕುರಿತು ಮನವರಿಕೆ ಮಾಡಬೇಕು
–ಎಚ್.ಬಿ.ಚಂದ್ರಶೇಖರ್‌
Published 29 ಮಾರ್ಚ್ 2024, 23:27 IST
Last Updated 29 ಮಾರ್ಚ್ 2024, 23:27 IST
ಅಕ್ಷರ ಗಾತ್ರ

ಬಾಗಲಕೋಟೆ ಜಿಲ್ಲೆಯ ಶಾಲೆಯೊಂದರ ವಿದ್ಯಾರ್ಥಿನಿಯು ಕಳ್ಳತನದ ಆರೋಪದಿಂದ ಮನ ನೊಂದು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಆಘಾತಕಾರಿಯಾದುದು. ಇದನ್ನು ನೆಪ ವಾಗಿ ಇರಿಸಿಕೊಂಡು, ಶಾಲೆ ಹಾಗೂ ಕೌಟುಂಬಿಕ ವಲಯದಲ್ಲಿ ಮಕ್ಕಳು ತಪ್ಪೆಸಗಿದಾಗ ನಾವು ಯಾವ ರೀತಿ ವರ್ತಿಸಬೇಕು ಎಂಬುದರ ಬಗ್ಗೆ ಅವಲೋಕಿಸ ಬೇಕಾಗಿದೆ. ಬೆಳವಣಿಗೆಯ ಹಾದಿಯಲ್ಲಿ ಮಕ್ಕಳು ತಪ್ಪು ಮಾಡುವುದು ಸಹಜ. ಆಗ ಅವರನ್ನು ತಿದ್ದಲು, ಸರಿದಾರಿಗೆ ತರಲು ಅನುಸರಿಸಬೇಕಾದ ಕ್ರಮಗಳು ಮಾನವೀಯ ನೆಲೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಮಕ್ಕಳ ಸೂಕ್ಷ್ಮ ಮನಸ್ಸಿಗೆ ಗಾಸಿಯಾಗದಂತೆ ಸ್ಪಂದಿಸಬೇಕು.

ಮಕ್ಕಳ ಹಕ್ಕುಗಳ ಜಾಗತಿಕ ಒಡಂಬಡಿಕೆಯ ಮೂಲಕ ಪ್ರಾಪ್ತವಾಗಿರುವ ಮಕ್ಕಳ ಹಕ್ಕುಗಳ ಅನುಚ್ಛೇದ 40ರ ಪ್ರಕಾರ, ಮಕ್ಕಳು ಕಾನೂನನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಸಂದರ್ಭ ಗಳಲ್ಲಿ ಅವರನ್ನು ಘನತೆ ಮತ್ತು ಗೌರವದಿಂದ
ನಡೆಸಿಕೊಳ್ಳಬೇಕು. ಮಕ್ಕಳ ಹಕ್ಕುಗಳ ಅನುಚ್ಛೇದ 3ರ ಪ್ರಕಾರ, ಮಕ್ಕಳನ್ನು ಬಾಧಿಸುವ ವಿಷಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರಿಗೆ ಇರಬಹುದಾದ ಅತ್ಯುತ್ತಮ ಆಸಕ್ತಿಯು ನಮ್ಮ ಪ್ರಥಮ ಆದ್ಯತೆಯಾಗಬೇಕು. ಹೀಗಾಗಿ, ಯಾವುದೇ ಮಗು ತಪ್ಪೆಸಗಿದಾಗ ಅಥವಾ ಕಾನೂನಿನೊಂದಿಗೆ ಸಂಘರ್ಷದಲ್ಲಿದ್ದಾಗ (ಕಳ್ಳತನ, ಸುಲಿಗೆ ಎಂಬ ಪದಗಳನ್ನು ಬಳಸುವಂತಿಲ್ಲ) ಸೂಕ್ಷ್ಮ ಸಂವೇದನೆ ತೋರಬೇಕಿದೆ. ಜೊತೆಗೆ ಈ ಸಮಯದಲ್ಲಿ ಅವರಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗೆಗೆ ವಯಸ್ಕರು ಕಾನೂನಿನ ಅರಿವು ಹೊಂದಬೇಕು.

ಮಕ್ಕಳು ಎಸಗುವ ಸರಳ ಅಥವಾ ಗಂಭೀರವಾದ ತಪ್ಪುಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ಬಾಲ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ– 2015ರಲ್ಲಿ (ತಿದ್ದುಪಡಿ, 2021) ಇರುವಂತೆ ಮಕ್ಕಳಸ್ನೇಹಿ ಕ್ರಮಗಳನ್ನು ಅನುಸರಿಸಿ ಕೈಗೊಳ್ಳಲಾಗು ತ್ತದೆ. ಶಾಲೆ, ವಸತಿನಿಲಯಗಳಲ್ಲಿ ಮಕ್ಕಳೆಸಗುವ ತಪ್ಪುಗಳನ್ನು ಅಪರಾಧ ಎಂದು ಪರಿಗಣಿಸಿ, ಶಿಕ್ಷಕರು ಅಥವಾ ವಸತಿನಿಲಯದ ಪಾಲಕರು ಸ್ವತಃ ಪೊಲೀಸ್‌ ಅಧಿಕಾರಿ, ವಿಚಾರಣಾಧಿಕಾರಿ ಅಥವಾ ನ್ಯಾಯಾಧೀಶರ ಪಾತ್ರವನ್ನು ವಹಿಸಿ ವಿಚಾರಣೆ ಮಾಡುವಂತಿಲ್ಲ. ಈ ಅಂಶಗಳ ಅರಿವಿರದ ಕೆಲವು ಶಿಕ್ಷಕರು ಮಕ್ಕಳನ್ನು ಸರಿ ದಾರಿಗೆ ತರುವ ಅಧಿಕಾರದ ಸ್ಥಾನದಲ್ಲಿ ತಾವಿದ್ದೇವೆಂದು ಭಾವಿಸಿ, ಕೆಲವೊಮ್ಮೆ ವಿಪರೀತದ ಕ್ರಮಗಳನ್ನು ತೆಗೆದು ಕೊಳ್ಳುತ್ತಾರೆ. ಈ ಮೂಲಕ ಅವರ ಸೂಕ್ಷ್ಮ ಮನಸ್ಸಿಗೆ ಅಳಿಸಲಾಗದ ಗಾಯವುಂಟು ಮಾಡಿಬಿಡುತ್ತಾರೆ. ಮಕ್ಕಳು ಎಸಗುವ ಗಂಭೀರ ಕೃತ್ಯಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಕಾನೂನಿಗೆ ವಿರುದ್ಧವಾಗಿ ಮಾಡಿ, ಅವರ ಹಿತಾಸಕ್ತಿಗಳಿಗೆ ಧಕ್ಕೆ ತರುವವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಇರುವುದನ್ನು ಗಮನಿಸ
ಬೇಕಾಗಿದೆ.

ಕೆಲವು ಮಕ್ಕಳು ಸುಳ್ಳು ಹೇಳುತ್ತಾರೆ ಮತ್ತು ಕದಿಯುತ್ತಾರೆ. ಅಂತಹ ಸಂದರ್ಭಗಳಲ್ಲಿ ಅವರನ್ನು ಶಿಕ್ಷಿಸಿ, ಸರಿದಾರಿಗೆ ತರುತ್ತೇವೆ ಎಂಬ ಮನೋಭಾವಕ್ಕೆ ಬದಲಾಗಿ, ಅವರ ಮನಃಪರಿವರ್ತನೆ ಮಾಡುವ ದೂರದೃಷ್ಟಿಯ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಬೇಕು. ಮಕ್ಕಳ ಕುರಿತಾದ ನಂಬಿಕೆ ಹಾಗೂ ವಿಶ್ವಾಸ ಮಾತ್ರ ಅವರನ್ನು ಸರಿದಾರಿಗೆ ತರಬಲ್ಲದೇ ವಿನಾ ಅವರಾಡುವ ಸುಳ್ಳು ಹಾಗೂ ಕದಿಯುವ ಗುಣಕ್ಕೆ ತಕ್ಕಂತೆ ಅವರಿಗೆ ಸುಳ್ಳ, ಕಳ್ಳ ಎಂಬ ಹಣೆಪಟ್ಟಿ ಕಟ್ಟುವುದರಿಂದ ಪ್ರಯೋಜನವಾಗದು. ಆತುರದಲ್ಲಿ ಕಟ್ಟುವ ಇಂತಹ ಹಣೆಪಟ್ಟಿಗಳು ಅವರನ್ನು ಸಮಾಜದಲ್ಲಿ ಶಾಶ್ವತವಾಗಿ ಕೆಟ್ಟ ಸ್ಥಾನದಲ್ಲಿ ಇರುವಂತೆ ಮಾಡಿಬಿಡುವ ಅಪಾಯ ಇರುತ್ತದೆ.

ಮಕ್ಕಳಸ್ನೇಹಿ ಕ್ರಮಗಳನ್ನು ಅನುಸರಿಸಿ, ಅವರಲ್ಲಿ ಪರಿವರ್ತನೆ ತರುವುದು ಹೊಸ ವಿಷಯವಲ್ಲ. ಸುಮಾರು ನೂರು ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ಎ.ಎಸ್.ನೀಲ್‌ ಅವರು ‘ಸಮ್ಮರ್‌ ಹಿಲ್‌’ ಎಂಬ ಶಾಲೆ ಯನ್ನು ತೆರೆದು, ಸವಾಲೆನಿಸುವ ಮಕ್ಕಳನ್ನು ಪ್ರೀತಿ, ಆತ್ಮೀಯತೆಯಿಂದ ಪರಿವರ್ತಿಸಿದರು. ಈ ಕಥನಗಳನ್ನು ಎ.ಎಸ್.ನೀಲ್‌ ಅವರ ಪುಸ್ತಕ ‘ಸಮ್ಮರ್‌ ಹಿಲ್‌’ನಲ್ಲಿ (ಅನುವಾದ: ಎಸ್.ಸುಕುಮಾರ್, ಪ್ರಕಟಣೆ: ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, 2016) ಗಮನಿಸಬಹುದು. 

ಮಕ್ಕಳಸ್ನೇಹಿ ಕ್ರಮಗಳ ಕುರಿತು ಗಟ್ಟಿ ಚಿಂತನೆ ಗಳನ್ನು ಹೊಂದಿರುವ ಅನೇಕ ಶಿಕ್ಷಕರನ್ನು ನಾವೆಲ್ಲರೂ ಗಮನಿಸಿಯೇ ಇರುತ್ತೇವೆ. ಅವರು ಅನುಸರಿಸುವ ಅಂತಹ ವಿಧಾನಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕಿದೆ. ಕೆಲ ತಿಂಗಳುಗಳ ಹಿಂದೆ ಶಿಕ್ಷಕಿ
ಯೊಬ್ಬರೊಂದಿಗೆ ಸಂವಾದ ಮಾಡುವಾಗ ಅವರು ತಿಳಿಸಿದ ಸಂಗತಿಯೊಂದು ಹೀಗಿತ್ತು: ಒಮ್ಮೆ ತರಗತಿ ಯಲ್ಲಿದ್ದ ಅವರ ಬ್ಯಾಗ್‌ನಿಂದ ಸಾವಿರಾರು ರೂಪಾಯಿ ಕಳವಾಯಿತು. ಈ ಸಂದರ್ಭದಲ್ಲಿ ಅವರು ತಮ್ಮ ವಿದ್ಯಾರ್ಥಿಗಳಿಗೆ ‘ನಮ್ಮ ಮಕ್ಕಳು ಕಳ್ಳರು ಎನಿಸಿ ಕೊಳ್ಳುವುದು ನನಗಿಷ್ಟವಿಲ್ಲ. ನಾನು ಈ ಬ್ಯಾಗ್‌ನಲ್ಲಿ ಮುಂಚಿನಂತೆ ಹಣವಿಟ್ಟು, ನಿಮ್ಮೆದುರಿಗೆ ಇಲ್ಲಿಯೇ ಇರಿಸುತ್ತೇನೆ. ನಿಮಗೆ ಹಣ ಬೇಕಾದರೆ ನನ್ನನ್ನು ಕೇಳಿ ತೆಗೆದುಕೊಳ್ಳಿ. ಆದರೆ ಯಾರೂ ನನಗೆ ತಿಳಿಯದಂತೆ ಹಣ ತೆಗೆದುಕೊಳ್ಳಬಾರದು’ ಎಂದು ಪ್ರೀತಿಯಿಂದ ತಿಳಿಸಿದರಂತೆ. ಆನಂತರ ಅವರ ತರಗತಿಯಲ್ಲಿ ಕಳ್ಳತನ
ಆಗಲಿಲ್ಲ.

ಮಕ್ಕಳಿಗೆ ‘ನೀವು ಮಾಡಿದ ತಪ್ಪನ್ನು ಕ್ಷಮಿಸಿದ್ದೇನೆ, ನೀವು ಒಳ್ಳೆಯವರು’ ಎಂಬ ಮಾತನ್ನು ಪದೇಪದೇ ಹೇಳುತ್ತಾ ಇದ್ದಲ್ಲಿ, ಅವರಲ್ಲಿರುವ ಎಂತಹುದೇ ಮಿತಿಯಿಂದ ಅವರು ಹೊರಬರುವಂತೆ ನಾವು ಸಹಾಯ ಮಾಡಲು ಸಾಧ್ಯವಿದೆ.

ಲೇಖಕ: ಹಿರಿಯ ಉಪನ್ಯಾಸಕ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)‌, ಬೆಂಗಳೂರು ನಗರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT