ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸವದ ಸಡಗರ, ನೆನಪಿನ ಹಂದರ

ಮಕ್ಕಳು, ಶಿಕ್ಷಕರೆಲ್ಲರನ್ನೂ ಹಲವು ಬಗೆಯ ಒತ್ತಡಗಳಿಂದ ಮುಕ್ತರನ್ನಾಗಿಸುತ್ತಿದ್ದ ಶಾಲಾ ಕಾಲೇಜು ವಾರ್ಷಿಕೋತ್ಸವಗಳಿಲ್ಲದೆ, ಎಲ್ಲರಲ್ಲೂ ಏನೋ ಖಾಲಿತನದ ಭಾವ
Last Updated 12 ಜನವರಿ 2021, 19:31 IST
ಅಕ್ಷರ ಗಾತ್ರ

ಡಿಸೆಂಬರ್- ಜನವರಿ ತಿಂಗಳುಗಳು ಬಂದವೆಂದರೆ ಶಾಲಾ ಕಾಲೇಜುಗಳಲ್ಲಿ ಹೇಳತೀರದ ಸಂಭ್ರಮ. ಎಲ್‍ಕೆಜಿಯ ಪುಟಾಣಿಗಳಿಂದ ತೊಡಗಿ ಪದವಿ ಓದುವವರವರೆಗೂ ವಾರ್ಷಿಕೋತ್ಸವವೆಂದರೆ ಅದೇನೋ ಹಿಗ್ಗು. ಬಣ್ಣ-ಗೆಜ್ಜೆಗಳ ಸಡಗರ.

ಈ ಅವಧಿಗೂ ಶಾಲಾ ವಾರ್ಷಿಕೋತ್ಸವಗಳಿಗೂ ಅವಿನಾಭಾವ ಸಂಬಂಧ. ಬೋಧಿಸಬೇಕಾದ ಪಠ್ಯವೆಲ್ಲ ಪೂರ್ಣಗೊಂಡು ಪುನರ್ಮನನ ಮತ್ತು ಪರೀಕ್ಷಾ ಸರಣಿ ಮಾತ್ರವೇ ಬಾಕಿ ಉಳಿಯುವುದರಿಂದ ಶಿಕ್ಷಕರಿಗೂ ಒಂದು ಬಗೆಯಲ್ಲಿ ನಿರಾಳ. ಹಾಗೆಂದು ವಾರ್ಷಿಕೋತ್ಸವವೆಂದರೆ ಸಾಮಾನ್ಯವೇನಲ್ಲವಲ್ಲ! ಒಂದೊಂದು ತರಗತಿಯಿಂದಲೂ ಒಂದೊಂದು ಪ್ರದರ್ಶನ ಕಡ್ಡಾಯ. ಎಲ್ಲ ಮಕ್ಕಳೂ ವೇದಿಕೆಯಲ್ಲಿ ಒಂದಿಲ್ಲೊಂದು ಕಾರಣಕ್ಕಾಗಿ ಕಾಣಿಸಿಕೊಳ್ಳುವುದೂ ಅಗತ್ಯ. ಹಾಗಾಗಿ ನೃತ್ಯಕ್ಕೆ ಬೇಕಾದ ಪದ್ಯಗಳೋ ರೂಪಕವೋ ನಾಟಕವೋ ಎಲ್ಲ ಜವಾಬ್ದಾರಿಯನ್ನೂ ಹೊತ್ತ ಶಿಕ್ಷಕರಿಗೆ ಬಹುದೊಡ್ಡ ಭಾರ. ಪ್ರತೀ ಶಾಲಾ ಕಾಲೇಜೂ ಸಿಂಗರಿಸಿಕೊಳ್ಳುವ ಸಂತಸದ ವಿಸ್ಮಯ!

ವಾರ್ಷಿಕೋತ್ಸವದ ನೆಪದಲ್ಲಿ ಹಲವು ಸ್ಪರ್ಧೆಗಳು ಇರುವಂಥದ್ದೇ. ಭಾಷಣ, ಪ್ರಬಂಧಗಳೋ ರಂಗೋಲಿ, ಚಿತ್ರಗಳೋ ಗೀತೆ, ಸಂಗೀತಗಳೋ ಅಂತೆಯೇ ನೆನಪಿನ ಶಕ್ತಿ ಕೂಡಾ. ಚಿಕ್ಕ ಮಕ್ಕಳಿಗೆ ಹೆಚ್ಚುವರಿಯಾಗಿ ಉತ್ತಮ ಕೈಬರಹಕ್ಕಾಗಿ ಬಹುಮಾನ. ಆಟದ ಅಂಗಳದಲ್ಲಂತೂ ಛೋಟಾ ಕ್ರೀಡಾಳುಗಳದ್ದೇ ಅಬ್ಬರ. ಒಟ್ಟಿನಲ್ಲಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಎಲ್ಲರಿಗೂ ಬಹುಮಾನದ ಗೌಜಿ. ತರಗತಿಯೊಳಗೆ ಗಣಿತ- ಇಂಗ್ಲಿಷ್‌ ಶಿಕ್ಷಕರು ಕೇಳಿದ ಪ್ರಶ್ನೆಗೆ ಉತ್ತರ ಗೊತ್ತಾಗದೇ ತಳಮಳಿಸಿದ ಹುಡುಗನಿಗೆ, ನೂರು ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗೆದ್ದು ಪದಕ ಎದೆಗೇರಿಸಿಕೊಳ್ಳುವ ಹಿಗ್ಗು. ಇದನ್ನು, ಗಣಿತದಲ್ಲಿ ನೂರಕ್ಕೆ ನೂರು ತೆಗೆದ ಮಗು ನೋಡಿ ಚಪ್ಪಾಳೆ ತಟ್ಟುವುದರಲ್ಲಿ ಇರುವ ಸಂದೇಶ ಬಹು ದೊಡ್ಡದು.

ಈ ಎಲ್ಲ ಕಾರಣಗಳಿಗಾಗಿಯಾದರೂ ಶಾಲೆಗಳಲ್ಲಿ ಸ್ಪರ್ಧೆಗಳು ಬೇಕು. ಬಹುಮಾನ ಸ್ವೀಕರಿಸುವುದಕ್ಕೆ ವಾರ್ಷಿಕೋತ್ಸವ ಬೇಕು. ಗಿಜಿಗುಡಬೇಕಿದ್ದ ಈ ಸಮಯ ಈ ಬಾರಿ ಮಾತ್ರ ಮಹಾನ್ ಮೌನ- ವೃಕ್ಷದಡಿಯಲ್ಲಿ ತಪಸ್ಸಿಗೆ ಕುಳಿತ ಸನ್ಯಾಸಿಯಂತೆ!

ಶಾಲೆಗಳನ್ನಷ್ಟೇ ಗಮನದಲ್ಲಿರಿಸಿಕೊಂಡು ನೋಡಿದರೂ ಹಲವು ಬಗೆಯ ಒತ್ತಡಗಳಿಂದ ಮುಕ್ತರನ್ನಾಗಿಸಿ, ಮನಸ್ಸು ಮೆಚ್ಚುವ ಒತ್ತಡವನ್ನಷ್ಟೇ ಉಂಟು ಮಾಡುವ ವಾರ್ಷಿಕೋತ್ಸವಗಳು ಇಲ್ಲದೆ ಏನೋ ಖಾಲಿ ಖಾಲಿ ಎನಿಸಿದರೆ, ಮಕ್ಕಳಿಗಾದರೋ ತಮ್ಮ ಪ್ರತಿಭೆಯೆಲ್ಲ ಇದ್ದಲ್ಲೇ ಮುರುಟಿದ ಅನುಭವ! ಹೊಸ ಪದ್ಯ, ನಾಟ್ಯ, ನಾಟಕ ಯಾವುದರ ಕಲಿಕೆಯೂ ಇಲ್ಲ. ಹಾಗೆಂದು ಮನೆಯೊಳಗೇ ಕಲಿಸಬಲ್ಲ ಯುಟ್ಯೂಬ್ ಶಿಕ್ಷಕರು ಶಾಲಾ ಶಿಕ್ಷಕರಂತೆ ಪ್ರಭಾವಿಸುವುದೂ ಇಲ್ಲ. ಇತರ ಪಠ್ಯಗಳ ಬೋಧನೆಯನ್ನು ಕಲಿತಂತೆ, ಇಷ್ಟಪಟ್ಟಂತೆ ಸಾಂಸ್ಕೃತಿಕ ಅಭಿವ್ಯಕ್ತಿಯ ಕಲಿಕೆ ಅಲ್ಲವಲ್ಲ. ಹೆಚ್ಚೆಂದರೆ ಈಗಿನ ಕೆಲವು ಸಿನಿಮಾ ಪದ್ಯಗಳನ್ನು ಕಲಿತಾರು. ಅದು ಕನ್ನಡವೋ ಇಂಗ್ಲಿಷೋ ಒಂದೂ ಅರ್ಥವಾಗದ ಅಜ್ಜ ಅಜ್ಜಿ ಈ ಮಕ್ಕಳನ್ನೇ ಮಿಕಮಿಕ ನೋಡಿಯಾರು ಹೊರತು ಮತ್ತೇನಿಲ್ಲ. ಶಾಲೆಯ ಸಂಭ್ರಮವಿದ್ದರೆ ಹಾಗಲ್ಲವಲ್ಲ.

ವಾರ್ಷಿಕೋತ್ಸವದ ಮುನ್ನಾದಿನ ದೊರೆಯುವ ಹೊಸವಸ್ತ್ರವನ್ನೂ ಮನೆಯಲ್ಲೊಮ್ಮೆ ಧರಿಸಿ ಖುಷಿಪಡುವ ಮಕ್ಕಳ ಹಿಗ್ಗೆಲ್ಲ ಕೊರೊನಾ ಅಲೆಯಲ್ಲಿ ಅದೆಲ್ಲಿ ತೇಲಿ ಹೋಯಿತೋ...

ಅಂದಹಾಗೆ ಮಕ್ಕಳಿಗೆ ಅವರವರ ನಾಟ್ಯಕ್ಕೆ ಬೇಕಾದಂತೆ ಒಂದೇ ಬಗೆಯ ಫ್ರಾಕ್‌ಗಳನ್ನೋ ಅಂಗಿಚಡ್ಡಿಗಳನ್ನೋ ಶಿಕ್ಷಕಿಯರಿಗೆ ಬೇಕಾದ ಒಂದೇ ಮಾದರಿಯ ಸೀರೆಗಳನ್ನೋ ಒದಗಿಸುತ್ತಿದ್ದ ವಸ್ತ್ರದಂಗಡಿಯ ಮಾಲೀಕರೂ ಈಗ ದಣಿದು ಕುಳಿತಿದ್ದಾರೆ. ‘ನಮ್ಮ ಅಂಗಡಿಗೆ ಸುಮಾರು ಇಪ್ಪತ್ತಮೂರು ಶಾಲೆಗಳಿಂದ ಬೇಡಿಕೆ ಇರುತ್ತಿತ್ತು. ಈ ವರ್ಷ ಅದೇನೂ ಇಲ್ಲ. ಕೆಲವು ಶಾಲೆಗಳ ಸಮವಸ್ತ್ರದ ಹೊಣೆಯೂ ನಮ್ಮದೇ ಆಗಿತ್ತು. ನಮ್ಮ ಅಂಗಡಿಯ ದರ್ಜಿಗಳಿಗೆ ಈ ವರ್ಷ ಅದಾವ ಕೆಲಸವೂ ಇಲ್ಲ. ಒಟ್ಟಿನಲ್ಲಿ ನಮಗಾದ ಹೊಡೆತ ಅಷ್ಟಿಷ್ಟಲ್ಲ’ ಎಂಬುದು ಮಳಿಗೆಯೊಂದರ ಮಾಲೀಕನ ಅಳಲು.

ಯಾವ ಕ್ಷೇತ್ರದವರನ್ನು ಮಾತಾಡಿಸಿದರೂ ಇದೇ ಬಗೆಯ ಉತ್ತರವೇ ದೊರಕೀತು. ವಾರ್ಷಿಕೋತ್ಸವ ಇದ್ದಾಗ ಇಡೀ ಊರನ್ನೇ ಅಲ್ಲಾಡಿಸುವಂತೆ ಧ್ವನಿವರ್ಧಕದ ವ್ಯವಸ್ಥೆ ಮಾಡಿಕೊಡುವವರೂ ಸ್ವತಃ ಮೂಕರಾಗಿದ್ದಾರೆ. ದಾರಿಯುದ್ದಕ್ಕೂ ಟ್ಯೂಬ್‌ಲೈಟು, ರಂಗಕ್ಕೆ ಹಲವು ಬಣ್ಣದ, ಹಲವು ವಿನ್ಯಾಸದ ಬೆಳಕು ಹರಿಸುವ ಮಂದಿ ತಮ್ಮ ಬದುಕಿನ ಕತ್ತಲೆ ನೀಗಿಸುವ ಅನಿವಾರ್ಯದಲ್ಲಿದ್ದಾರೆ. ಆಯಾ ಶಾಲಾ ಕಾಲೇಜುಗಳ ಬಳಿ ನಿಂತು ಚುರುಮುರಿ, ಐಸ್‌ಕ್ರೀಮ್ ವಗೈರೆಗಳನ್ನು ತಂದು ಮಕ್ಕಳನ್ನು ಆಕರ್ಷಿಸುವವರು ತಮ್ಮ ಕೈಗಾಡಿಗಳನ್ನು ಬದಿಯಲ್ಲಿಟ್ಟು, ಕೊರೊನಾ ಒಂದು ದಿನ ಇದ್ದಕ್ಕಿದ್ದಂತೆ ಮಾಯವಾಗಿ ತಮ್ಮ ದಿನಗಳು ಸುಧಾರಿಸುವ ಕ್ಷಣಗಳನ್ನು ಎದುರು ನೋಡುತ್ತಿದ್ದಾರೆ.

ಮೌನವನ್ನು ದಾಟಿ ಮಾತಾಡಹೊರಟವರಂತೆ ಇದೀಗ ಶಾಲಾ ಕಾಲೇಜುಗಳು ಮೆಲ್ಲಮೆಲ್ಲನೆ ತೆರೆಯುತ್ತಿವೆ. ಮನೆಯೊಳಗೆ ಕುಳಿತು ಪಾಠ ಕೇಳಿದ ಮಕ್ಕಳು ಕುಪ್ಪಳಿಸಹೊರಟಿದ್ದಾರೆ. ಗುಂಯ್‌ಗುಡುತ್ತಿದ್ದ ಶಾಲಾ ಆವರಣಗಳೆಲ್ಲ ಜೀವಕಳೆ ಪಡೆದುಕೊಳ್ಳುತ್ತಿವೆ. ಮಕ್ಕಳ ನಡುವೆ ಅಂತರ ಕಾಪಾಡುವ ಬಗೆಯನ್ನರಿ
ಯದ ಮನಸ್ಸುಗಳು ಕಳವಳಿಸುತ್ತಿವೆ. ಭಯವನ್ನು ಮೀರಿ ಮುನ್ನಡೆದರೆ ಕೊರೊನಾ ತೊಲಗೀತೇನೋ ಎಂಬುದೊಂದು ಸಣ್ಣ ನಿರೀಕ್ಷೆ. ಸದ್ಯಕ್ಕೆ ಅದಷ್ಟೇ ನಿಜವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT