ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | 5 ರಾಜ್ಯಗಳ ಚುನಾವಣಾ ಫಲಿತಾಂಶ; ಸಂಘಟನಾ ಜಾಲದ ಮೇಲುಗೈ

ಎಎಪಿಯು ಮತದಾರರನ್ನು ಮುಟ್ಟಿದ ರೀತಿಗೂ ಕಾಂಗ್ರೆಸ್ ತರಹದ ಪಕ್ಷಗಳು ಮತದಾರರನ್ನು ಮುಟ್ಟುವ ರೀತಿಗೂ ಅಜಗಜಾಂತರವಿದೆ
Last Updated 13 ಮಾರ್ಚ್ 2022, 20:00 IST
ಅಕ್ಷರ ಗಾತ್ರ

ಐದು ರಾಜ್ಯಗಳ ಚುನಾವಣಾ ಫಲಿತಾಂಶ ಬಹುಮುಖ್ಯವಾದ ಪಾಠಗಳನ್ನು ಪ್ರಮುಖ ಪಕ್ಷಗಳಿಗೆ ಎದೆಗಿರಿಯುವಂತೆ ಕೊಟ್ಟು ಹೋಗಿದೆ. ಅದರಲ್ಲೂ ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳಿಗೆ ‘ನೀವು ಸ್ಥಾಪಿತ ಸೂತ್ರಗಳಿಂದ ಹೊರಬರಲೇಬೇಕು’ ಎಂಬ ಸಂದೇಶ ಕೊಟ್ಟಿದೆ.

ವಂಶಾಡಳಿತ, ಜಾತಿ ಸಮೀಕರಣಗಳಿಗೆ ಸರಿಯಾದ ಪೆಟ್ಟು ನೀಡಿದ್ದೇನೆಂದು ಹೇಳಿದ್ದು ಮಾತ್ರವಲ್ಲ, ಮಾಡಿದ್ದನ್ನು, ಮಾಡಬೇಕಾದ್ದನ್ನು ಸಕಾಲದಲ್ಲಿ ಮತದಾರರಿಗೆ ತಲುಪಿಸಿದರೆ ಫಲಿತಾಂಶ ಸಕಾರಾತ್ಮಕವಾಗಿ ಇರುತ್ತದೆ ಎಂಬುದನ್ನೂ ಪಂಜಾಬ್‌ನ ಚುನಾವಣೆ ಸಾರಿದೆ.

ಟಿಕೆಟ್ ಪಡೆದ ಪಂಜಾಬ್‌ನ ಕಾಂಗ್ರೆಸ್ ಮತ್ತು ಅಕಾಲಿದಳದ ಹದಿನೈದು ಅಭ್ಯರ್ಥಿಗಳಲ್ಲಿ ಒಬ್ಬರ ತಂದೆ ಅಥವಾ ತಾಯಿ ಈ ಹಿಂದೆ ಶಾಸಕರೋ ಮಂತ್ರಿಯೋ ಆಗಿದ್ದರೆಂದು ವರದಿಯೊಂದು ತಿಳಿಸುತ್ತದೆ. ಮಣಿಪುರ, ಗೋವಾ, ಉತ್ತರಾಖಂಡದ ಸ್ಥಿತಿಯೂ ಇದಕ್ಕಿಂತ ಹೊರತಲ್ಲ. ಮಂತ್ರಿಯೋ ಶಾಸಕರೋ ಆಗಿದ್ದವರ ಬೆಳೆಯುತ್ತಿರುವ ಕುಡಿಗಳು ಕಾಂಗ್ರೆಸ್‌ನ ಟಿಕೆಟ್ ಪಡೆಯುತ್ತಿರುವುದು ಗೊತ್ತಾದರೂ, ನಿಯಂತ್ರಿಸುವ ಗೋಜಿಗೆ ಹೋದರೆ ಜೇನುನೊಣಗಳಿಂದ ಕಚ್ಚಿಸಿಕೊಳ್ಳುವ ಭಯದಲ್ಲಿ ಹೈಕಮಾಂಡ್ ಸುಮ್ಮನಾಗಬೇಕಾದ ಸ್ಥಿತಿ.

ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಟಿಕೆಟ್ ನೀಡುವ ವಿಷಯದಲ್ಲಿ ವಂಶಾಡಳಿತದ ನೆರಳು ಕೂಡಾ ಸೋಕದಂತೆ ನೋಡಿಕೊಂಡದ್ದಷ್ಟೇ ಅದರ ಗೆಲುವನ್ನು ನಿರ್ಧರಿಸಲಿಲ್ಲ. ಅದು ಕಾರ್ಯಕರ್ತರ ಪಡೆಯನ್ನು ಅದೆಷ್ಟು ಸುಭದ್ರವಾಗಿ ಕಟ್ಟಿತ್ತೆಂದರೆ, ಬಾಲಿವುಡ್ ಮತ್ತು ಹಾಲಿವುಡ್ಡಿನ ಅಷ್ಟೂ ಸ್ಟಾರ್ ನಟ ನಟಿಯರು ಹಾಗೂ ಕ್ರಿಕೆಟ್ ಕಲಿಗಳು ಬಂದು ಅಕಾಲಿ ದಳ ಅಥವಾ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ನಡೆಸಿದ್ದರೂ ಎಎಪಿಯ ಓಟಕ್ಕೆ ಕಿಂಚಿತ್ತೂ ತಡೆಯೊಡ್ಡಲು ಆಗುತ್ತಿರಲಿಲ್ಲ ಎಂದು ಹೇಳಲಾಗುತ್ತದೆ.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಎಎಪಿಯು ಲಾಗಾಯ್ತಿನ ಪರಂಪರೆ, ಸಂಪ್ರದಾಯಗಳನ್ನು ಮುರಿದು ಮತದಾರರನ್ನು ಮುಟ್ಟಿದ ರೀತಿಗೂ ಕಾಂಗ್ರೆಸ್ ತರಹದ ಸಾಂಪ್ರದಾಯಿಕ ಶೈಲಿಯ ಪಕ್ಷಗಳು ಮತದಾರರನ್ನು ಮುಟ್ಟುವ ರೀತಿಗೂ ಅಜಗಜಾಂತರವಿದೆ.

ಉತ್ತರಪ್ರದೇಶದಲ್ಲಿ ಜಾತಿ, ಧರ್ಮದ ಸಮೀಕರಣ ಪದೇಪದೇ ಮೇಲುಗೈ ಸಾಧಿಸುತ್ತಿದೆ. ಬಿಜೆಪಿಯೇತರ ಪಕ್ಷಗಳು ಸಹ ಇದೇ ಸಮೀಕರಣ ಅನುಸರಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಈ ವಿಷಯದಲ್ಲಿ ಬಿಜೆಪಿಯ ತರಹ ಪಳಗಿಲ್ಲದ ಇವುಗಳಿಗೆ ಸೋಲು ಅನಿವಾರ್ಯವಾಯಿತು.

ಉತ್ತರಾಖಂಡ, ಗೋವಾ, ಪಂಜಾಬ್, ಮಣಿಪುರದಲ್ಲಿ ಜಾತ್ಯತೀತತೆ, ಸಾಮಾಜಿಕ ನ್ಯಾಯ, ಸಮಾಜವಾದಿ ನೆಲೆಯ ಮೇಲೆ ಚುನಾವಣೆ ನಡೆಸುವ ಅವಕಾಶವಿತ್ತು. ಏಕೆಂದರೆ ಇಲ್ಲಿಯವರೆಗಿನ ಚುನಾವಣೆಗಳಲ್ಲಿ ಇಲ್ಲಿ ಕೋಮು ಧ್ರುವೀಕರಣ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡಿಲ್ಲ. ಆದರಿಲ್ಲಿ ಸಂಘಟನಾ ಜಾಲದ ಬಗ್ಗೆ ನಿಸ್ಸೀಮ ನಿರ್ಲಕ್ಷ್ಯ ತೋರುತ್ತ ಬಂದಿದ್ದರಿಂದ ಕಾಂಗ್ರೆಸ್ ಅನಾಯಾಸವಾಗಿ ಬಿಜೆಪಿಗೆ ಇವುಗಳನ್ನು ಬಿಟ್ಟುಕೊಡಬೇಕಾಯಿತು.

ಮಣಿಪುರ, ಗೋವಾದಲ್ಲಿ ಜಾತಿ, ಧರ್ಮದ ವಿಷಯಗಳು ಮುಖ್ಯವೇ ಅಲ್ಲ. ಅಲ್ಲದೆ ಅಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಬಿಜೆಪಿ ಗೆಲ್ಲುತ್ತದೆ. ಇದಕ್ಕೆ ಕಾರಣ ಅದು ಹೆಣೆದ ಚುನಾವಣಾ ಜಾಲ ಮತ್ತು ತರಬೇತುಗೊಂಡ ಕಾರ್ಯಕರ್ತರ ಪಡೆ!

ಬೂತ್ ಮಟ್ಟದ ಸಭೆ ನಡೆಸಿ ‘ಪೇಜ್ ಪ್ರಮುಖ್’ ಎಂಬ ಹೊಸ ವಿಧಾನದಲ್ಲಿ ಬಿಜೆಪಿಯು ಮತದಾರರನ್ನು ಮುಟ್ಟುತ್ತಿದ್ದಾಗ ಅದೇ ಸವಕಲು ರೋಡ್ ಷೋ, ಬಹಿರಂಗ ಸಭೆಗಳಿಗಷ್ಟೇ ಇತರ ಪಕ್ಷಗಳು ಸೀಮಿತವಾಗಿದ್ದವು. ಬಿಎಸ್‌ಪಿ 2007ರವರೆಗೆ ನಡೆಸುತ್ತಿದ್ದ ಚುನಾವಣಾ ತಂತ್ರಗಳನ್ನು ಇಡೀ ದೇಶವೇ ಬೆರಗುಗಣ್ಣಿನಿಂದ ನೋಡುವಂತಾಗಿತ್ತು. ಪತ್ರಿಕಾಗೋಷ್ಠಿ ನಡೆಸದೆ, ಮಾಧ್ಯಮಗಳಿಗೆ ಸಂದರ್ಶನಗಳನ್ನೂ ನೀಡದೆ ಉತ್ತರಪ್ರದೇಶದ ಪ್ರತೀ ಕಾಲೊನಿ, ಕೇರಿಯಲ್ಲಿ ಸಿದ್ಧಪಡಿಸಿದ ಕಾರ್ಯಕರ್ತರ ಮೂಲಕ ಚುನಾವಣೆ ಎದುರಿಸಿದ್ದ ಮಾಯಾವತಿ ಅವರು ಅಧಿಕಾರದಲ್ಲಿದ್ದಾಗ ಕಾರ್ಯಕರ್ತರನ್ನು ಮರೆತರು. ಪಕ್ಷದ ಸಂಘಟನೆ ಅಪ್‌ಡೇಟ್ ಆಗಲೇ ಇಲ್ಲ. ಆದರೆ ಬಿಜೆಪಿಯು ನವೀನ ಕಾರ್ಯತಂತ್ರಗಳ ಮೂಲಕ ದೇಶದಾದ್ಯಂತ ದಲಿತ ಸಮುದಾಯದ ಮತದಾರರನ್ನು ಸೆಳೆದುಕೊಂಡಿದೆ.

ದೆಹಲಿಯನ್ನು ಸಂಪರ್ಕಿಸುವ ಗಡಿಗಳಲ್ಲಿ ಪಂಜಾಬ್‌ನ ರೈತರು ಸುದೀರ್ಘ ಅವಧಿಯ ಪ್ರತಿಭಟನೆಗಿಳಿದಾಗ ಅವರ ನೆರವಿಗೆ ಬಂದದ್ದು ಇದೇ ಎಎಪಿ ನೇತೃತ್ವದ ದೆಹಲಿ ಸರ್ಕಾರ. ವಿದ್ಯುತ್‌, ನೀರು, ಆಹಾರ ಪೂರೈಕೆ, ಆರೋಗ್ಯ ತಪಾಸಣೆಯಂತಹ ಬಹುಮುಖ್ಯ ಸಂಗತಿಗಳಲ್ಲಿ ನೆರವಾದ ಎಎಪಿ ಕಾರ್ಯಕರ್ತರು, ಕ್ಷಣಮಾತ್ರದಲ್ಲಿ ಇದು ಪಂಜಾಬಿನ ಪ್ರತೀ ಮನೆಮನಗಳಿಗೆ ತಲುಪುವಂತೆ ನೋಡಿಕೊಂಡರು.

ಇಂದಿನ ಬದಲಾದ ಸನ್ನಿವೇಶಗಳನ್ನು ಗಮನಿಸಿದಾಗ ಸ್ಪಷ್ಟವಾಗಿ ಗೋಚರಿಸುವ ಅಂಶಗಳೆಂದರೆ, ಜನರ ಮನೆಮನ ಮುಟ್ಟುವುದಕ್ಕೆ ಸಿಗುತ್ತಿರುವ ಮನ್ನಣೆ ಕಿಕ್ಕಿರಿದ ಸಮಾವೇಶಗಳಿಗೆ ದೊರೆಯುವುದಿಲ್ಲ. ಸಂಘಟನೆಯ ಅಸ್ತ್ರಗಳು ಫಲಿತಾಂಶವನ್ನು ನಿರ್ಧರಿಸುತ್ತವೆ. ಸಂಘಟನೆಯ ಎದುರು ಧರ್ಮ, ಜಾತಿಯ ಅಸ್ತ್ರಗಳು ಪುಡಿಪುಡಿಯಾಗುವುದೂ ಉಂಟು. ಈ ಸತ್ಯವನ್ನು ಅರಿತಿರುವ ಎಎಪಿ ತನ್ನ ನೆಲೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ಮುನ್ಸೂಚನೆ ನೀಡಿದೆ.

ಬಿಜೆಪಿಯು ಭಾವನಾತ್ಮಕ ವಿಷಯಗಳ ಜೊತೆ ಸಂಘಟನೆಯಲ್ಲೂ ಹೊಸ ವಿಧಾನಗಳನ್ನು ಅನುಸರಿಸುತ್ತಿರುವುದರಿಂದ ಯಶಸ್ಸಿನ ನಾಗಾಲೋಟದಲ್ಲಿದೆ. ಬಿಜೆಪಿಯೇತರ ಪಕ್ಷಗಳು ಆಡಳಿತ ವಿರೋಧಿ ಅಲೆಯನ್ನು ನಂಬಿಕೊಂಡು ರೋಡ್ ಷೋ, ಭಾರಿ ಜನಸ್ತೋಮವನ್ನು ಸೇರಿಸುವ ಹಳೆಕಾಲದ ಸೂತ್ರವನ್ನು ಪರಿಪಾಲಿಸುವುದರಲ್ಲಿ ಕಾಲ ನೂಕುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT