ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಒಳವಂಶವರ್ಧನೆ: ಅಪಾಯದಲ್ಲಿ ಹುಲಿ

ಹುಲಿ ಸಂತತಿಯ ಸಶಕ್ತ ಮುಂದುವರಿಕೆಗೆ ಇರುವ ಅಡ್ಡಿ– ಆತಂಕ ನಿವಾರಿಸಬೇಕು
Last Updated 26 ಜುಲೈ 2022, 19:31 IST
ಅಕ್ಷರ ಗಾತ್ರ

ವಿಶ್ವದ ಅರಣ್ಯ ಪ್ರದೇಶಗಳಲ್ಲಿ ಅತಿ ಹೆಚ್ಚು ಹುಲಿಗಳಿರುವ ದೇಶ ನಮ್ಮದು ಎಂಬ ಹೆಗ್ಗಳಿಕೆಯ ಜೊತೆಗೆ ಅವುಗಳ ಸಂತತಿಯನ್ನು ರಕ್ಷಿಸಿ, ಮುಂದುವರಿಸಿಕೊಂಡು ಹೋಗಬೇಕಾದ ಗುರುತರ ಜವಾಬ್ದಾರಿಯೂ ನಮ್ಮ ಮೇಲಿದೆ. ಈಗ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಹುಲಿ ಪ್ರಭೇದಗಳ ಪೈಕಿ ಭಾರತದ ಹುಲಿಯ ತಳಿಗುಣ ಇತರ ಭಾಗದ ಹುಲಿಗಳಿಗಿಂತ ಭಿನ್ನವಾಗಿದೆ. ಆವಾಸ ನಾಶ, ಕಳ್ಳ ಬೇಟೆಗಳಿಂದಾಗಿ ಕಳೆದ ಐದು ದಶಕಗಳಲ್ಲಿ ಸಹಸ್ರಾರು ಹುಲಿಗಳು ನಾಶವಾಗಿವೆ. ಈಗ ಒಳವಂಶವರ್ಧನೆಯಿಂದಾಗಿ (In breeding) ತಳಿ ವೈವಿಧ್ಯವು ಕಣ್ಮರೆಯಾಗುತ್ತಿದೆ. ಇದು ಹುಲಿ ಸಂತತಿಯ ಸಶಕ್ತ ಮುಂದುವರಿಕೆಗೆ ದೊಡ್ಡ ಅಡ್ಡಿ ಎಂಬುದು ತಜ್ಞರ ವಾದ.

ಮಾನವ ಬಾಹುಳ್ಯ ಹೆಚ್ಚಾದಂತೆ ಹುಲಿಯ ವಾಸದ ಕಾಡು ಕಡಿಮೆಯಾಗಿದೆ. ಇರುವಷ್ಟೇ ಜಾಗ ದಲ್ಲಿ ಜೀವಿಸುವ ಮತ್ತು ವಂಶ ಮುಂದುವರಿಸಿಕೊಳ್ಳುವ ಇಕ್ಕಟ್ಟಿಗೆ ಸಿಲುಕಿರುವ ಹುಲಿಗಳು ಕಳೆದ ಶತಮಾನದ ಹುಲಿಗಳಿಗಿಂತ ಕಡಿಮೆ ದೈಹಿಕ ಆರೋಗ್ಯ ಮತ್ತು ಕ್ಷಮತೆಯ ಅಪಾಯ ಎದುರಿಸುತ್ತಿವೆ ಎಂಬ ಅನುಮಾನಗಳಿವೆ. ಹದಿನೈದು ವರ್ಷಗಳಿಂದ ಭಾರತದ ವನ್ಯ ಹುಲಿಗಳ ಸಂಖ್ಯೆ ಆರೋಗ್ಯಕರ ರೀತಿಯಲ್ಲಿ ಏರುತ್ತಲೇ ಇದೆ ಎಂಬ ಸಮಾಧಾನ ಇದೆ ಯಾದರೂ ಅವುಗಳ ಆವಾಸ ಸ್ಥಾನಗಳು ನಾಶವಾಗು ತ್ತಿರುವುದರಿಂದ ಪ್ರತ್ಯೇಕವಾಗಿ ಮತ್ತು ಸಣ್ಣಸಣ್ಣ ಜಾಗಗಳಲ್ಲಿ ಜೀವಿಸುವ ಒತ್ತಡ ಸೃಷ್ಟಿಯಾಗಿದೆ. ಕುಟುಂಬವರ್ಧನೆ ಸಹ ಅದೇ ಗುಂಪಿನ ಹುಲಿಗಳ ನಡುವೆ ಆಗುವುದರಿಂದ ಜನಿಸುವ ಹುಲಿಗಳಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂಬುದು
ಅಧ್ಯಯನಗಳಿಂದ ತಿಳಿದುಬಂದಿದೆ.

ರಾಜಸ್ಥಾನದ ರಣಥಂಬೋರ್ ಹುಲಿ ಸಂರಕ್ಷಿತಾರಣ್ಯದಲ್ಲಿ ಈ ಕುರಿತು ಮೂರು ವರ್ಷಗಳ ವಿಸ್ತೃತ ಅಧ್ಯಯನ ಮಾಡಿರುವ ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸ್‌ನ ಪ್ರಾಧ್ಯಾಪಕಿ ಉಮಾ ರಾಮಕೃಷ್ಣನ್ ‘ಆವಾಸ ಸಂಕುಚಿತವಾದಷ್ಟೂ ಹುಲಿ ಗಳ ದೂರ ಓಡಾಟ ಕಡಿಮೆಯಾಗುತ್ತದೆ, ತಾವಿರುವ ಜಾಗದಲ್ಲೇ ಸಂಗಾತಿಗಳೊಂದಿಗೆ ವಂಶವರ್ಧನೆ ಮಾಡಿಕೊಳ್ಳುವ ಅನಿವಾರ್ಯಕ್ಕೆ ಹುಲಿ ಸಂತತಿ ಸಿಲುಕಿ ಕೊಂಡಿದೆ, ಇದು ಸರಿಯಾದ ಬೆಳವಣಿಗೆಯಲ್ಲ’ ಎನ್ನುತ್ತಾರೆ.

ರಣಥಂಬೋರ್ ಕಾಡಿನ ಸಣ್ಣ ಗುಂಪಿನ ಹದಿನೈದು, ಇನ್ನೊಂದು ಗುಂಪಿನ ನೂರು ಮತ್ತು ದಕ್ಷಿಣ ಹಾಗೂ ಮಧ್ಯಭಾರತದ ಕಾಡುಗಳ ನಡುವೆ ದೂರ ಓಡಾಟವಿಟ್ಟುಕೊಂಡಿರುವ 250ಕ್ಕೂ ಹೆಚ್ಚು ಹುಲಿಗಳಿರುವ ಗುಂಪಿನ ಸದಸ್ಯ ಹುಲಿಗಳ ಪೈಕಿ ಒಟ್ಟು 57 ಹುಲಿಗಳ ಡಿಎನ್‍ಎ ಅಧ್ಯಯನ ಕೈಗೊಂಡಾಗ ರಣಥಂಬೋರ್ ಕಾಡಿನ ಹುಲಿಗಳಲ್ಲಿ ಒಳವಂಶ
ವರ್ಧನೆ ಹೆಚ್ಚು ಎಂಬ ಅಂಶ ಬೆಳಕಿಗೆ ಬಂದಿದೆ. ಉಳಿದೆ ರಡು ಗುಂಪುಗಳಲ್ಲೂ ಇನ್‍ಬ್ರೀಡಿಂಗ್ ಇದೆಯಾದರೂ ರಣಥಂಬೋರ್‌ನ ಹುಲಿಗಳಲ್ಲಿ ಅದು ದುಪ್ಪಟ್ಟು ಎಂಬ ಅಂಶ ಹುಲಿ ತಜ್ಞರ ನಿದ್ದೆಕೆಡಿಸಿದೆ. ಹೆಚ್ಚಿನ ಪ್ರಮಾಣದ ಮ್ಯುಟೇಶನ್ (ರೂಪಾಂತರ), ಬೇಡದ ಅಶಕ್ತ ಅಥವಾ ರೋಗಯುಕ್ತ ಪ್ರಭೇದಗಳ ನೈಸರ್ಗಿಕ ನಾಶ ಮತ್ತು ಒಳ ಸಂತಾನೋತ್ಪತ್ತಿ ಖಿನ್ನತೆಗಳು ಒತ್ತೊತ್ತಾಗಿ ವಾಸಿಸುವ ಹುಲಿಗಳಲ್ಲಿ ಪತ್ತೆಯಾಗಿವೆ. ಒಳ ಸಂತಾನೋತ್ಪತ್ತಿ ಖಿನ್ನತೆಯಿಂದಾಗಿ ಉದ್ಭವಿಸುವ ಹಾನಿಕಾರಕ ‘ಅಲೆಲ್‌’ ಗಳು (ರೂಪಾಂತರದಿಂದ ಒಂದೇ ಜಾಗದಲ್ಲಿ ಕಂಡು ಬರುವ ಜೀನ್‍ನ ಎರಡು ಅಥವಾ ಹೆಚ್ಚಿನ ಪರ್ಯಾಯ ರೂಪಗಳು) ಸಂತತಿ ನಾಶದ ಮುನ್ನುಡಿ ಬರೆಯುತ್ತವೆ.

ಜೀವಿ ಪರಿಸರ ವ್ಯವಸ್ಥೆಯಲ್ಲಿ ಹೀಗೆ ಆಗುತ್ತಿರು ವುದು ಇದೇ ಮೊದಲೇನಲ್ಲ, ಹಿಂದೆಯೂ ಆಗಿತ್ತು ಮತ್ತು ಮುಂದೆಯೂ ಆಗಲಿದೆ. ಆದರೆ ಒಳ ಸಂತಾನೋತ್ಪತ್ತಿಯು ಮರಣ ಪ್ರಮಾಣವನ್ನು ಹೆಚ್ಚಿಸ ಬಹುದು ಇಲ್ಲವೆ ಸಂತಾನೋತ್ಪತ್ತಿ ಕ್ಷಮತೆಯನ್ನು ಕಡಿಮೆ ಮಾಡಬಹುದು, ಆಗ ಹುಟ್ಟುವ ಹುಲಿಗಳು ಕುಂದಿದ ರೋಗನಿರೋಧಕ ಶಕ್ತಿ ಪಡೆದಿರುತ್ತವೆ ಮತ್ತು ಸುಲಭವಾಗಿ ರೋಗಕ್ಕೆ ಬಲಿಯಾಗಬಹುದು.

ಮಾನವರಲ್ಲಿ ಒಂದೇ ಕುಟುಂಬದ ಸದಸ್ಯರಲ್ಲಿ ನಡೆಯುವ ಮದುವೆಗಳಿಂದ ಜನಿಸುವ ಶಿಶುಗಳು ಹೇಗೆ ಶಕ್ತಿಹೀನವಾಗಿ ಸಣ್ಣಪುಟ್ಟ ಕಾಯಿಲೆಗಳನ್ನೂ ತಡೆದು ಕೊಳ್ಳದೆ ರೋಗರುಜಿನಗಳಿಗೆ ಬಲಿಯಾಗುತ್ತವೋ ಅದೇ ರೀತಿಯಲ್ಲೇ ಹುಲಿಗಳೂ ಅಳಿಯುತ್ತವೆ. ಒಳ ಸಂತಾನೋತ್ಪತ್ತಿಯಿಂದಾಗಿ ಈಗಾಗಲೇ 13 ಬಗೆಯ ಬೆಕ್ಕಿನ ಸಂತತಿಯು ಗಣನೀಯ ಪ್ರಮಾಣದಲ್ಲಿ ಕುಸಿದಿದೆ ಎಂದಿರುವ ಬ್ರಿಟನ್‌ನ ನಾರ್‌ವಿಚ್ ಸಂಶೋಧನಾ ವಿಶ್ವವಿದ್ಯಾಲಯದ ಪ್ರಭೇದ ತಜ್ಞ ಸಿ.ವಾನ್ ಓಸ್ಟರ್‍ಹಾಟ್, ಅಪರೂಪದ ಹುಲಿಗಳನ್ನು ಇನ್‍ಬ್ರೀಡಿಂಗ್‍ನ ಸಮಸ್ಯೆಯಿಂದ ರಕ್ಷಿಸಲೇಬೇಕು ಎಂದು ಒತ್ತಾಯಿಸಿದ್ದಾರೆ.

ಭಾರತದ ಹುಲಿಗಳಿಗೆ ಹೆಚ್ಚಿನ ಸಂರಕ್ಷಣೆ ದೊರೆತಿದೆ ಯಾದರೂ ಅವುಗಳ ವಿಕಾಸದ ಚರಿತ್ರೆಯ ಕುರಿತು ನಮಗೆ ಹೆಚ್ಚು ತಿಳಿದಿಲ್ಲ. ಇಲ್ಲಿನ ಹುಲಿಗಳ ವರ್ಣತಂತು ವ್ಯವಸ್ಥೆಯ ವಿಭಿನ್ನತೆಗಳೂ ನಮಗೆ ಪೂರ್ಣವಾಗಿ ಮನದಟ್ಟಾಗಿಲ್ಲ. ವಿಶ್ವದ ಒಟ್ಟು ಹುಲಿಗಳ ಪೈಕಿ
ಶೇ 70ರಷ್ಟು ನಮ್ಮಲ್ಲೇ ಇವೆ. ಇವುಗಳ ವರ್ಣತಂತು ವೈವಿಧ್ಯವನ್ನು ಅರ್ಥ ಮಾಡಿಕೊಂಡರೆ, ವಿಶ್ವದಾದ್ಯಂತ ಇರುವ ಬೆಕ್ಕುಗಳ ಸಂತತಿ ರಕ್ಷಣೆ ಸುಲಭವಾಗಲಿದೆ. ಮೂರು ವರ್ಷಗಳ ನಿರಂತರ ಅಧ್ಯಯನದ ಫಲವಾಗಿ ಲಭ್ಯವಾಗಿರುವ ಮಾಹಿತಿಯಂತೆ ಇತ್ತೀಚಿನ ವರ್ಷಗಳಲ್ಲಿ ಹುಲಿಗಳ ಆನುವಂಶಿಕ ರಚನೆಯಲ್ಲಿ ಮಾರ್ಪಾಟುಗಳಾಗಿವೆ. ಇದನ್ನು ಮೀರಲು ಹುಲಿಗಳ ಆವಾಸ ವಿಸ್ತಾರಗೊಳ್ಳ ಬೇಕು ಮತ್ತು ಸ್ವಚ್ಛಂದ ಓಡಾಟಕ್ಕೆ ಅವಕಾಶವಿರಬೇಕು. ಭಾರತದ ಹುಲಿಗಳ ಆನುವಂಶಿಕ ರಚನೆ ಇತರ ದೇಶದ ಹುಲಿಗಳದ್ದಕ್ಕಿಂತ ಮಾರ್ಪಾಟುಗಳಿಂದ ಕೂಡಿದೆ ಎಂಬದೂ ಅಧ್ಯಯನ ದಿಂದ ಸಾಬೀತಾಗಿದೆ. ಅಂದಹಾಗೆ, ಜುಲೈ 29, ವಿಶ್ವ ಹುಲಿಗಳ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT