ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ವೈಜ್ಞಾನಿಕ ಮನೋವೃತ್ತಿ: ಸಿಗಲಿ ಒತ್ತು

ಮೌಢ್ಯಾಚರಣೆಗೆ ಬಲಿಯಾಗದೆ ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳಬೇಕಿದೆ
Last Updated 17 ಆಗಸ್ಟ್ 2022, 21:47 IST
ಅಕ್ಷರ ಗಾತ್ರ

ವೈಜ್ಞಾನಿಕ ಮನೋವೃತ್ತಿಗೆ ಒತ್ತು ನೀಡುವ ಕಾರ್ಯಕ್ರಮಗಳು, ಪ್ರದರ್ಶನಗಳು ಸೇರಿದಂತೆ ವೈವಿಧ್ಯಮಯ ಚಟುವಟಿಕೆಗಳನ್ನು ರೂಪಿಸಲು ಉದ್ದೇಶಿಸಿ, ಅದಕ್ಕಾಗಿ ಒಂದು ದಿನವನ್ನು ನಿಗದಿಪಡಿಸಲು 2017ರಲ್ಲಿ ಒಡಿಶಾದ ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ನೈಸರ್) ನಡೆದ 16ನೇ ಅಖಿಲ ಭಾರತ ಜನ ವಿಜ್ಞಾನ ಅಧಿವೇಶನದಲ್ಲಿ ಚರ್ಚಿಸಲಾಯಿತು. ಬಹಳಷ್ಟು ಚರ್ಚೆಯ ನಂತರ ಪ್ರತಿವರ್ಷ ಆಗಸ್ಟ್ 20ರಂದು ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.

ಅಖಿಲ ಭಾರತ ಜನವಿಜ್ಞಾನ ಸಂಘಟನೆಗಳ ಜಾಲ (ಎಐಪಿಎಸ್‌ಎನ್‌) ಮತ್ತು ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಂಸ್ಥೆಗಳ (ಎಂಎಎನ್‌ಎಸ್‌) ಸಂಯುಕ್ತ ಆಶ್ರಯದಲ್ಲಿ ದೇಶದಾದ್ಯಂತ ಈ ದಿನಾಚರಣೆಯನ್ನು ಸಂಘಟಿಸಲು ತೀರ್ಮಾನಿಸಲಾಯಿತು.

ವೈಜ್ಞಾನಿಕ ಮನೋವೃತ್ತಿ ಬೆಳೆಸುವುದಕ್ಕಾಗಿಯೇ ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಂಸ್ಥೆಯನ್ನು ಸ್ಥಾಪಿಸಿ ತಮ್ಮ ಜೀವನಪರ್ಯಂತ ದುಡಿದವರು ಡಾ. ನರೇಂದ್ರ ದಾಭೋಲ್ಕರ್‌. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು, ಪುಣೆ ಮೂಲದವರು. ಮಹಾರಾಷ್ಟ್ರದ ಗ್ರಾಮ ಗ್ರಾಮಗಳಲ್ಲಿ ಸಂಚರಿಸುತ್ತಾ ಜನರಲ್ಲಿ ವೈಜ್ಞಾನಿಕ ಜಾಗೃತಿ ಮೂಡಿಸಲು ಶ್ರಮಿಸಿದವರು. ಇದಕ್ಕೆ ಪೂರಕವಾಗಿ ಅನೇಕ ಕಿರುಪುಸ್ತಕಗಳು, ಕಿರುಚಿತ್ರಗಳು, ನಾಟಕಗಳನ್ನು ರಚಿಸಿ, ಜನಜಾಗೃತಿಗಾಗಿ ಅದನ್ನು ಬಳಕೆ ಮಾಡಿದರು. ಹಂತ ಹಂತವಾಗಿ ಜನರಲ್ಲಿ ಜಾಗೃತಿ ಮೂಡಲಾರಂಭಿಸಿತು.

ಮಹಾರಾಷ್ಟ್ರ ಸರ್ಕಾರವು ಮೌಢ್ಯಾಚರಣೆ ಪ್ರತಿಬಂಧಕ ಕಾನೂನು ತರುವಂತೆ ದಾಭೋಲ್ಕರ್‌ ಒತ್ತಾಯಿಸಿದರು. ಈ ಕಾರ್ಯ ಪ್ರಗತಿಯಲ್ಲಿರುವಾಗಲೇ 2013ರ ಆಗಸ್ಟ್ 20ರ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದಾಗ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಅದಾದ ಕೆಲವೇ ದಿನಗಳಲ್ಲಿ ಮಹಾರಾಷ್ಟ್ರ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಮೌಢ್ಯಾಚರಣೆ ಪ್ರತಿಬಂಧಕ ಕಾನೂನನ್ನು ಜಾರಿಗೆ ತಂದಿತು. ಪ್ರಸ್ತುತ ಅದರ ಅಡಿಯಲ್ಲಿ ನೂರಾರು ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರ ಮಾದರಿಯಲ್ಲಿ ಕಾಯ್ದೆ ತರುವಂತೆ ಕರ್ನಾಟಕದಲ್ಲಿಯೂ ಆಗ್ರಹ– ಒತ್ತಾಯ ಕೇಳಿಬಂತು. ಈ ಸಂಬಂಧ ದೊಡ್ಡ ಮಟ್ಟದಲ್ಲಿ ವಾದ–ವಿವಾದಗಳೂ ನಡೆದವು. ಮೌಢ್ಯ ನಿಷೇಧ ಕಾಯ್ದೆಯು ಈಗ ಇಲ್ಲೂ ಜಾರಿಗೆ ಬಂದಿದೆ. ಆದರೆ ಅನುಷ್ಠಾನ ಮಾತ್ರಪರಿಣಾಮಕಾರಿಯಾಗಿ ಆಗುತ್ತಿಲ್ಲ.

ಇದೇನೇ ಇರಲಿ, ಮೌಢ್ಯ ನಿಷೇಧಕ್ಕೆ ಸಂಬಂಧಿಸಿ ದೇಶದಾದ್ಯಂತ ಕಾನೂನು ಜಾರಿಯಾಗಬೇಕು ಎಂದು ಒತ್ತಾಯಿಸುತ್ತಲೇ ಮತ್ತೊಂದೆಡೆ, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಪ್ರಸ್ತುತ ಈ ದಿನಾಚರಣೆ ಐದನೇ ವರ್ಷಕ್ಕೆ ಕಾಲಿಟ್ಟಿರುವುದು ಗಮನಿಸಬೇಕಾದ ಅಂಶ.

ಈ ದಿನಾಚರಣೆಯ ಭಾಗವಾಗಿ, ಪವಾಡಗಳ ರಹಸ್ಯ ಬಯಲು ಪ್ರದರ್ಶನ, ನಾಟಕಗಳ ಪ್ರದರ್ಶನ, ಪೋಸ್ಟರ್‌ಗಳ ಪ್ರದರ್ಶನ, ಪಾದಯಾತ್ರೆ, ಚರ್ಚೆ, ಸಂವಾದ, ಉಪನ್ಯಾಸದಂತಹ ಕಾರ್ಯಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ.

ಪರಿಶಿಷ್ಟ ಸಮುದಾಯದ ಬಾಲಕನೊಬ್ಬ, ಶಾಲೆಯಲ್ಲಿ ಕುಡಿಯುವ ನೀರಿನ ಮಡಕೆಯನ್ನು ಮುಟ್ಟಿದ ಕಾರಣಕ್ಕಾಗಿ ಅವನನ್ನು ಹೊಡೆದು ಕೊಂದ ಹೃದಯ ವಿದ್ರಾವಕ ಘಟನೆಯು ರಾಜಸ್ಥಾನದಲ್ಲಿ ಜರುಗಿದೆ. ಇಂಥ ಅನೇಕ ಅಮಾನವೀಯ ಆಚರಣೆಗಳು, ಪ್ರಕರಣಗಳು ಬೇರೆ ಬೇರೆ ರಾಜ್ಯಗಳಲ್ಲೂ ನಡೆದಿವೆ. ತಮ್ಮ ಮಕ್ಕಳು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕಲಿಯಬೇಕು ಎಂದು ಪೋಷಕರೆಲ್ಲರೂ ಬಯಸುತ್ತಾರೆ. ಆದರೆ, ವೈಜ್ಞಾನಿಕ ಮನೋಭಾವದ ವಿಚಾರಕ್ಕೆ ಬಂದಾಗ ಮಾತ್ರ ಮೌನ ವಹಿಸುತ್ತಾರೆ.

ಅನಾರೋಗ್ಯದಿಂದ ಬಳಲುತ್ತಿರುವವರಿಗೆ ವಾಸ್ತು ದೋಷ ಪರಿಹಾರವನ್ನು ಸೂಚಿಸುವುದು, ಪರೀಕ್ಷೆಯಲ್ಲಿ ವಿದ್ಯಾರ್ಥಿ ಅನುತ್ತೀರ್ಣನಾದರೆ, ಸಕಾಲದಲ್ಲಿ ಮದುವೆಯಾಗದಿದ್ದರೆ, ಆ ಮನೆಯ ವಾಸ್ತು ಬದಲಿಸಲು ಸೂಚಿಸುವುದು, ಮಕ್ಕಳಾಗುತ್ತವೆ ಎಂದು ಹೇಳಿ ಮಹಿಳೆಯರನ್ನು ಶೋಷಣೆ ಮಾಡುವುದು, ಪರಿಶಿಷ್ಟರ ಪ್ರವೇಶ ನಿರ್ಬಂಧ, ಚಿನ್ನದ ಲೇಹ್ಯದ ಮೂಲಕ ಕ್ಯಾನ್ಸರ್‌ ಗುಣಪಡಿಸುತ್ತೇವೆ ಎಂದು ಹೇಳಿ ಮೋಸ ಮಾಡುವುದು, ಒಡವೆಯನ್ನು ದ್ವಿಗುಣ ಮಾಡುತ್ತೇವೆ, ಹಣವನ್ನು ದ್ವಿಗುಣ ಮಾಡುತ್ತೇವೆ ಎಂದೆಲ್ಲ ವಂಚಿಸಿ ಹಣ ಕೀಳುವಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ.

ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ ಎಂಬ ಮಾತಿದೆ. ಒಂದು ಮೌಢ್ಯಾಚರಣೆಯನ್ನು ಬಯಲು ಮಾಡಿದರೆ ಮತ್ತೊಂದನ್ನು ಸೃಷ್ಟಿಸಿ ಜನರನ್ನು ಸುಲಿಗೆ ಮಾಡುವುದು, ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವುದು, ನಿಧಿಯ ಆಸೆಗಾಗಿ ಮಕ್ಕಳನ್ನು ಬಲಿ ಕೊಡುವುದು, ಬಾನಾಮತಿ ಮಾಡುತ್ತಾರೆಂದು ಆರೋಪಿಸಿ ಮಹಿಳೆ ಯರ ಶೋಷಣೆ ಮಾಡುವಂತಹ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇವೆ. ಪುನರ್ಜನ್ಮದ ನಂಬಿಕೆ ಯಿಂದ ಸಹೋದರಿಯನ್ನೇ ಕೊಂದಿರುವ ಉದಾಹರಣೆ ಇದೆ. ಅವಿದ್ಯಾವಂತರಷ್ಟೇ ಮೌಢ್ಯಕ್ಕೆ ಬಲಿಯಾಗುವು ದಿಲ್ಲ, ಕಲಿತವರೂ ಇದರಲ್ಲಿ ಹಿಂದೆ ಬಿದ್ದಿಲ್ಲ.

‘ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?...’, ‘ಹಳೆ ಮತದ ಕೊಳೆಯೆಲ್ಲ ಹೊಸ ಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಲಿ, ಬರಲಿ ವಿಜ್ಞಾನ ಬುದ್ಧಿ...’ ಎಂದು ಹೇಳಿದ ಕುವೆಂಪು ಅವರ ಮಾತುಗಳು ಜನರನ್ನು ಎಚ್ಚರಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT