ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸರ್ಕಾರಿ ಸವಲತ್ತು: ಏನೀ ಮಸಲತ್ತು?

ಸರ್ಕಾರಿ ಕಚೇರಿಗಳಲ್ಲಿ ಕೆಲಸವಾಗಬೇಕೆಂದರೆ ಲಂಚ ಕೊಡಬೇಕು ಎಂದು ಜನ ಭಾವಿಸುವುದಕ್ಕೆ ಅವರು ಎದುರಿಸುವ ಪರಿಸ್ಥಿತಿಯೇ ಕಾರಣವಿರಬೇಕು
Last Updated 17 ಆಗಸ್ಟ್ 2020, 2:12 IST
ಅಕ್ಷರ ಗಾತ್ರ

ಪದವಿ ತರಗತಿಗಳ ಪ್ರವೇಶ ಪ್ರಕ್ರಿಯೆ ನಡೆಯುತ್ತಿತ್ತು. ಅಭ್ಯರ್ಥಿಯೊಬ್ಬ ತನ್ನ ತಂದೆಯೊಂದಿಗೆ ಬಂದಿದ್ದ. ಆತ ಒದಗಿಸಿದ್ದ ಆದಾಯ ಪ್ರಮಾಣಪತ್ರದಲ್ಲಿ, ವಾರ್ಷಿಕ ಆದಾಯ ₹ 11 ಸಾವಿರ ಎಂದಿತ್ತು. ಸರ್ಕಾರಿ ನಿಯಮಗಳ ಪ್ರಕಾರ ಆತನಿಗೆ ಶುಲ್ಕದಲ್ಲಿ ವಿಶೇಷ ವಿನಾಯಿತಿ ಇತ್ತು.

ಶುಲ್ಕವನ್ನು ಒಮ್ಮೆಲೇ ಕಟ್ಟಬಹುದು, ಕಷ್ಟವಾದರೆ ಎರಡು ಕಂತುಗಳಲ್ಲಿಯೂ ಕಟ್ಟಬಹುದು ಎಂಬ ಅವಕಾಶವನ್ನು ತಿಳಿಸಿದೆ. ‘ನಾವು ಒಮ್ಮೆಲೇ ಪೂರ್ತಿ ಶುಲ್ಕ ಪಾವತಿಸುತ್ತೇವೆ’ ಎಂದ ತಂದೆ-ಮಗ, ಪ್ರವೇಶ ಪ್ರಕ್ರಿಯೆಯನ್ನು ಪೂರೈಸಿ ಹೊರಡುವ ವೇಳೆಗೆ ಮತ್ತೆ ನನ್ನ ಬಳಿ ಬಂದರು. ಜೇಬಿನಿಂದ ಇನ್ನೂರು ರೂಪಾಯಿಯ ನೋಟೊಂದನ್ನು ತೆಗೆದ ತಂದೆ ‘ಊಟ-ಗೀಟ ಮಾಡ್ತಿರೇನೋ ಸಾರ್’ ಎಂದು ಸಣ್ಣಧ್ವನಿಯಲ್ಲಿ ಹೇಳಿದರು. ಅಂಥದ್ದನ್ನು ನಿರೀಕ್ಷಿಸಿರದ ನಾನು ಬೇಸ್ತುಬಿದ್ದು ‘ಅಯ್ಯೋ ಇಂಥದ್ದೆಲ್ಲ ಇಲ್ಲ. ನಾವೆಲ್ಲ ಮೇಷ್ಟ್ರುಗಳು. ಚೆನ್ನಾಗಿ ಸಂಬಳ ಬರುತ್ತೆ. ನೀವು ಹೀಗೆಲ್ಲ ಕೊಡೋದು ತಪ್ಪಾಗುತ್ತೆ, ಇಟ್ಕೊಳ್ಳಿ’ ಎಂದು ನಯವಾಗಿಯೇ ಹೇಳಿದೆ. ಅವರು ಎರಡೆರಡು ಸಲ ಒತ್ತಾಯಿಸಿ ಆಮೇಲೆ ನೋಟನ್ನು ಪುನಃ ಜೇಬಿನಲ್ಲಿ ಇರಿಸಿಕೊಂಡರು. ನಾನು ನೋಡುತ್ತಿದ್ದ ಹಾಗೆ, ತಾವು ಬಂದಿದ್ದ ಕಾರು ಏರಿ ಹೊರಟುಹೋದರು. ವಿದ್ಯಾರ್ಥಿಯೇ ಕಾರು ಚಲಾಯಿಸುತ್ತಿದ್ದ. ಏನಿಲ್ಲವೆಂದರೂ ಆ ಕಾರು ಎಂಟು ಲಕ್ಷ ರೂಪಾಯಿ ಬೆಲೆಬಾಳುವಂಥದ್ದು. ಈಗ ಇನ್ನಷ್ಟು ಬೇಸ್ತುಬೀಳುವ ಸರದಿ ನನ್ನದಾಗಿತ್ತು.

ಈ ಪ್ರಸಂಗವು ಎರಡು ಪ್ರಮುಖ ವಿಚಾರಗಳಿಗೆ ಪುರಾವೆ ಒದಗಿಸಿತು: ಒಂದು, ಸರ್ಕಾರದ ಸವಲತ್ತುಗಳೆಲ್ಲ ಅರ್ಹರಿಗೆ ವಿನಿಯೋಗವಾಗುತ್ತಿಲ್ಲ. ಇನ್ನೊಂದು, ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸವಾಗಬೇಕೆಂದರೆ ಏನಾದರೂ ‘ಮಾಮೂಲು’ ಕೊಡಲೇಬೇಕು ಎಂಬ ಮನಃಸ್ಥಿತಿಯಿಂದ ನಮ್ಮ ಜನ ಹೊರಬಂದಿಲ್ಲ.

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ವಿದ್ಯಾಭ್ಯಾಸ ಮುಂದುವರಿಸಲು ನೆರವಾಗಲೆಂದೇ ಶುಲ್ಕ ವಿನಾಯಿತಿ, ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೌಲಭ್ಯ, ಬಸ್‍ಪಾಸ್‌ನಂತಹ ವ್ಯವಸ್ಥೆಗಳಿವೆ. ಇವೆಲ್ಲವೂ ನಿಜವಾಗಿಯೂ ಅರ್ಹರನ್ನು ತಲುಪುತ್ತಿವೆಯೇ ಎಂದರೆ ಮೇಲಿನ ಪ್ರಸಂಗದತ್ತ ನೋಡಬೇಕಾಗುತ್ತದೆ. ಈ ₹ 11 ಸಾವಿರ ಆದಾಯ ಮಿತಿಯ ಕಾಲ ಹೋಗಿ ದಶಕಗಳೇ ಸಂದಿವೆ.
ಸೌಲಭ್ಯಗಳನ್ನು ಪಡೆಯುವ ಆದಾಯಮಿತಿಯನ್ನು ಸರ್ಕಾರ ಹೆಚ್ಚಿಸಿದೆ. ಆದರೆ ಇಂದಿಗೂ ಶುಲ್ಕ ವಿನಾಯಿತಿ ಬಯಸುವ ಬಹುಪಾಲು ವಿದ್ಯಾರ್ಥಿಗಳು ಸಲ್ಲಿಸುವ ಆದಾಯ ಪ್ರಮಾಣಪತ್ರದಲ್ಲಿ ವಾರ್ಷಿಕ ₹ 11 ಸಾವಿರ ಎಂದೇ ತಹಶೀಲ್ದಾರರಿಂದ ಬರೆಸಿಕೊಂಡು ಬರುತ್ತಾರೆ. ಜನ ಮತ್ತು ವ್ಯವಸ್ಥೆ ಹಿಂದಿನ ಮನಃಸ್ಥಿತಿಯಿಂದ ಈಚೆ ಬಂದಿಲ್ಲ. ಈ ಆದಾಯದಲ್ಲಿ ಒಂದು ಕುಟುಂಬವು ಜೀವನ ನಡೆಸುವುದು ವಾಸ್ತವದಲ್ಲಿ ಸಾಧ್ಯವೇ? ಜನ ಇಷ್ಟೇ ಇರಲಿ ಎಂದು ಒತ್ತಾಯಪೂರ್ವಕ ನಮೂದಿಸಿಕೊಂಡು ಬರುತ್ತಾರೋ ಅಧಿಕಾರಿಗಳ ಮನಃಸ್ಥಿತಿ ಬದಲಾಗುವುದಿಲ್ಲವೋ ಅರ್ಥವಾಗದು.

ಮೇಲಿನ ಪ್ರಸಂಗ ನಡೆಯುವುದಕ್ಕೆ ಎರಡು– ಮೂರು ದಿನಗಳ ಹಿಂದೆ ನನ್ನ ಹಳೆ ವಿದ್ಯಾರ್ಥಿನಿಯೊಬ್ಬಳು ಫೋನ್ ಮಾಡಿ, ಹಿಂದುಳಿದ ವರ್ಗಕ್ಕೆ ಸೇರಿದ ತನ್ನ ಪಕ್ಕದ ಮನೆಯ ಹುಡುಗಿಯೊಬ್ಬಳು ಪದವಿ ಓದಲು ಬಯಸಿದ್ದಾಳೆಂದೂ ಆಕೆಗೆ ಶುಲ್ಕ ಪಾವತಿಸುವ ಶಕ್ತಿ ಇಲ್ಲವಾದ್ದರಿಂದ ಮನೆಯಲ್ಲಿ ಓದು ಬೇಡ ಎಂದು ನಿರ್ಧರಿಸಿದ್ದಾರೆಂದೂ ಹೇಳಿ, ಆ ಹುಡುಗಿಗೆ ಯಾವ ರೀತಿ ನಾವು ಸಹಾಯ ಮಾಡಬಹುದೆಂದು ವಿಚಾರಿಸಿದಳು. ಓದುವ ಆಸೆಯಿರುವ ಹುಡುಗಿ ಮನೆಯಲ್ಲಿ ಕೂರುವಂತೆ ಆಗುವುದು ಬೇಡ, ಏನಾದರೂ ಮಾಡೋಣ ಎಂದು ಕೆಲವು ಸಾಧ್ಯತೆಗಳ ಬಗ್ಗೆ ಸಲಹೆ ನೀಡಿದೆ.

ಈ ಹುಡುಗಿಗೂ ಶುಲ್ಕ ವಿನಾಯಿತಿಯ ಅವಕಾಶ ಇತ್ತು. ಆದರೆ ವಿನಾಯಿತಿಗೊಳಪಡುವ ಭಾಗ ಮುಂದೆ ವಿದ್ಯಾರ್ಥಿವೇತನದ ರೂಪದಲ್ಲಿ ಸರ್ಕಾರದಿಂದ ಬರುವುದಿತ್ತು. ಒಂದು ಸಲಕ್ಕಾದರೂ ಪೂರ್ತಿ ಶುಲ್ಕವನ್ನು ಪಾವತಿಸುವುದು ಅನಿವಾರ್ಯ. ಎರಡು ಕಂತುಗಳಲ್ಲಿ ಪಾವತಿಸುವ ಅವಕಾಶ ನೀಡಿದರೂ ಮೊದಲನೇ ಕಂತಿನಲ್ಲಿ ₹ 5 ಸಾವಿರ ಪಾವತಿಸಲೇಬೇಕು. ವಿದ್ಯಾರ್ಥಿವೇತನ ಬರುವುದು ವರ್ಷದ ಕೊನೆಗಾದರೂ ಆಯಿತು.

ಸರ್ಕಾರದ ಸವಲತ್ತುಗಳ ಅವಶ್ಯಕತೆ ಇರುವವರು ನಮ್ಮ ನಡುವೆ ಬೇಕಾದಷ್ಟು ಮಂದಿ ಇದ್ದಾರೆ. ಇವೇ ಸವಲತ್ತುಗಳು ಅನೇಕ ಸಲ ಅನರ್ಹರನ್ನು ಕೂಡ ಧಾರಾಳವಾಗಿ ತಲುಪುತ್ತವೆ. ಬೇರೆಬೇರೆ ಹಂತಗಳಲ್ಲಿ ಇದನ್ನು ತಡೆಯುವ ವ್ಯವಸ್ಥೆಯನ್ನು ಸರ್ಕಾರ ಮಾಡಿದರೂ ಅವುಗಳಿಂದ ತಪ್ಪಿಸಿಕೊಳ್ಳುವ ಚಾಣಾಕ್ಷ ಜನರೂ ಅವರಿಗೆ ನೆರವಾಗುವ ಅಧಿಕಾರಿಗಳೂ ಇದ್ದೇ ಇರುತ್ತಾರೆ. ಅನೇಕ ಮಂದಿಗೆ ತಾವು ಸರ್ಕಾರದ ಸವಲತ್ತನ್ನು ಹೇಗಾದರೂ ದಕ್ಕಿಸಿಕೊಂಡೆವು ಎನ್ನುವುದೇ ಹೆಮ್ಮೆಯ ವಿಷಯ.

ಸರ್ಕಾರಿ ವ್ಯವಸ್ಥೆಯಲ್ಲಿ ಯಾವ ಕೆಲಸ ಆಗಬೇಕೆಂದರೂ ದುಡ್ಡು ಕೊಡಬೇಕು ಎಂಬುದು ಮನಃಸ್ಥಿತಿಯ ವಿಷಯ ಎಂಬುದಕ್ಕಿಂತಲೂ ವಾಸ್ತವ ಎನ್ನಬೇಕೇನೋ? ನೋಟು ತೋರಿಸದೆ ಕೆಲಸ ಆಗದು ಎಂಬುದಕ್ಕೆ ನೂರೆಂಟು ನಿದರ್ಶನಗಳನ್ನು ನೋಡುತ್ತೇವೆ. ಕೋಟ್ಯಂತರ ರೂಪಾಯಿ ಲಂಚ ರುಷುವತ್ತುಗಳ ಕಥೆಯನ್ನು ಪ್ರತಿದಿನ ಕೇಳುತ್ತೇವೆ. ಕಾಲೇಜು ಪ್ರವೇಶಕ್ಕೆ ಬಂದರೂ ಅಲ್ಲಿನವರು ಏನಾದರೂ ನಿರೀಕ್ಷಿಸುತ್ತಾರೇನೋ ಎಂದು ಯೋಚಿಸುವ ಮನಃಸ್ಥಿತಿ ಜನರಿಗೆ ತೀರಾ ಸಹಜವಾಗಿ ಬಂದುಬಿಟ್ಟಿದೆ. ಇದನ್ನು ನಮ್ಮ ಸಮಾಜದ ದುರಂತ ಎನ್ನದೆ ಬೇರೆ ವಿಧಿಯಿಲ್ಲ.

(ಲೇಖಕ: ಸಹಾಯಕ ಪ್ರಾಧ್ಯಾಪಕ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ತುಮಕೂರು ವಿಶ್ವವಿದ್ಯಾಲಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT